ಎಂಟಿಆರ್ ಮಸಾಲೆ ದೋಸೆ ಅಂದ್ರೆ ಸಾಕು ಬಾಯಲ್ಲಿ ನೀರೂರುತ್ತೆ. ಬಿಸಿಬಿಸಿ ಮಸಾಲೆ ದೋಸೆಯನ್ನು ಚಟ್ನಿಯಲ್ಲಿ ಅದ್ದಿಕೊಂಡು ಬಾಯಿಗಿಟ್ರೆ ಸ್ವರ್ಗಕ್ಕೆ ಮೂರೇಗೇಣು. ಬೆಂಗಳೂರಿಗೆ ಪ್ರಿಯವಾಗಿರುವ ಈ ಸ್ಪೆಷಲ್ ದೋಸೆಯನ್ನು ಜರ್ಮನಿಗರು ಸಹ ಸವಿದು ಸಖತ್ತಾಗಿದೆ ಅಂದಿದ್ದಾರೆ. ಆ ಬಗ್ಗೆ ಮಾಹಿತಿ ಇಲ್ಲಿದೆ.
ಬೆಂಗಳೂರಿನ ಮಾವಳ್ಳಿ ಟಿಫನ್ ರೂಮ್ ಅಥವಾ ಎಂಟಿಆರ್‌ಗೆ 95 ವರ್ಷದ ಪರಂಪರೆಯಿದೆ. ಇಲ್ಲಿನ ರುಚಿಕರ ಆಹಾರಕ್ಕಾಗಿ ಜನರು ಗಂಟೆಗಟ್ಟಲೆ ಕ್ಯೂನಲ್ಲಿ ಕಾಯುತ್ತಾರೆ. ಇಡ್ಲಿ, ದೋಸೆ, ಕಾಫಿ ಮತ್ತು ಇತರ ದೈನಂದಿನ ಆಹಾರಗಳು ಇಲ್ಲಿ ಹೆಚ್ಚು ಹೆಸರುವಾಸಿಯಾಗಿವೆ. ಬೆಳಗ್ಗೆ 5.50ರಿಂದಲೇ ಮಾವಳ್ಳಿ ಟಿಫನ್ ರೂಮ್ ಕಾರ್ಯಾಚರಿಸಿ ಜನರಿಗೆ ಆಹಾರ ಉಣಬಡಿಸುತ್ತದೆ. ಸಿಲಿಕಾನ್ ಸಿಟಿಯಲ್ಲಿ ಇಂಥಾ ಫೇಮಸ್ ಹೊಟೇಲ್ ಬಗ್ಗೆ ವಿದೇಶಿಗರು ಸಹ ಮೆಚ್ಚುಗೆ ಸೂಚಿಸುತ್ತಾರೆ. ಇಲ್ಲಿನ ತಿನಿಸುಗಳನ್ನು ಬಾಯಿ ಚಪ್ಪರಿಸಿಕೊಂಡು ತಿನ್ತಾರೆ. ಹಾಗೆಯೇ ಜರ್ಮನಿಯ ಪ್ರವಾಸಿಗರು ಬೆಂಗಳೂರಿನಲ್ಲಿ ಮಾವಳ್ಳಿ ಟಿಫಿನ್ ರೂಮ್‌ನಲ್ಲಿ ಮಸಾಲೆ ದೋಸೆ ಸವಿದಿದ್ದಾರೆ. ಕನ್ನಡದಲ್ಲೇ ಮಸಾಲೆ ದೋಸೆ ಆರ್ಡರ್ ಮಾಡಿ ದೋಸೆ ಸಖತ್ತಾಗಿದೆ ಎಂದಿದ್ದಾರೆ.
ಬೆಂಗಳೂರು ಮಸಾಲೆ ದೋಸೆಗೆ ವಿದೇಶಿಗರು ಫಿದಾ
ಜರ್ಮನಿಗರು ಬೆಂಗಳೂರಿನ ಹೆಮ್ಮೆ ಎಂಟಿಆರ್‌ನಲ್ಲಿ ಆಹಾರ (Food)ವನ್ನು ಸವಿದಿರುವುದು ಮಾತ್ರವಲ್ಲ, ಕನ್ನಡದಲ್ಲೇ ಮಾತನಾಡಿ ಎಲ್ಲರಲ್ಲಿ ಅಚ್ಚರಿ ಮೂಡಿಸಿದ್ದಾರೆ. ಹೊಟೇಲ್‌ಗೆ ಆಗಮಿಸಿದ ಪ್ರವಾಸಿಗರು, 'ನಮಸ್ಕಾರ, ಎಂಟಿಆರ್ ಸ್ಪೆಷಲ್ ಏನು' ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಹೊಟೇಲ್‌ನವರು ಎಂಟಿಆರ್ ರವೆ ಇಡ್ಲಿ ಮತ್ತು ಮಸಾಲೆ ದೋಸೆ ಎಂದಿದ್ದಾರೆ. ಆಗ ಜರ್ಮನಿಯ ವ್ಯಕ್ತಿ ನನಗೆ ಒಂದು ಮಸಾಲೆ ದೋಸೆ ಕೊಡಿ, ಆಮೇಲೆ ಒಂದು ಬಾಟಲ್ ನೀರು ಎಂದು ಕೇಳಿದ್ದಾರೆ. ನಂತರ ದಟ್ಸ್ ಆಲ್ ಕನ್ನಡ ವಿ ನೋ ಎಂದು ಜೋರಾಗಿ ನಗುತ್ತಾರೆ. ಆ ಬಳಿಕ ಜರ್ಮನಿಯ ಪ್ರವಾಸಿಗರಿಬ್ಬರು ಮಸಾಲೆ ದೋಸೆಯನ್ನು ಚಟ್ನಿಯಲ್ಲಿ ಅದ್ದಿ ತಿನ್ನೋದನ್ನು ನೋಡಬಹುದು. ಬಳಿಕ ಸಖತ್ತಾಗಿದೆ ಎಂದು ಹೇಳುತ್ತಾರೆ. ಸದ್ಯ ಈ ವೀಡಿಯೋ ಎಲ್ಲೆಡೆ ವೈರಲ್ ಆಗ್ತಿದೆ.
Two of my colleagues trying to order food in How do you think they did? 😂 pic.twitter.com/hRnyufjDOa
— Achim Burkart (@GermanCG_BLR)ದೋಸೆ ಟೇಸ್ಟಿ ಮಾತ್ರ ಅಲ್ಲ, ಸಿಕ್ಕಾಪಟ್ಟೆ ಹೆಲ್ತಿ ಕೂಡಾ: ಪ್ರಯೋಜನ ಏನೇನು ತಿಳ್ಕೊಳ್ಳಿ
ಜನಮೆಚ್ಚಿದ ಎಂಟಿಆರ್ ಪರಂಪರೆ
ಮುಂಜಾನೆ 3 ಗಂಟೆಯಿಂದ ಎಂಟಿಆರ್‌ನಲ್ಲಿ ಅಡುಗೆ ಮನೆ (Kitchen) ಹತ್ತಾರು ಜನರಿಂದ ಗಿಜಿಗುಡುತ್ತದೆ. ಇಡ್ಲಿ ಮತ್ತು ದೋಸೆ ಹಿಟ್ಟನ್ನು ಹುದುಗಿಸಲು ಒಂದು ದಿನ ಮುಂಚಿತವಾಗಿ ತಯಾರಿಸಲಾಗುತ್ತದೆ. ಬೆಳಿಗ್ಗೆ ಮತ್ತು ಮಧ್ಯಾಹ್ನ ತರಕಾರಿಗಳನ್ನು ಕತ್ತರಿಸಲಾಗುತ್ತದೆ, ದಿನಕ್ಕೆ ಮೂರು ಬಾರಿ ಹಾಲು ಕುದಿಸಲಾಗುತ್ತದೆ, ವಡಾ ಹಿಟ್ಟನ್ನು ಮಾತ್ರ ತಾಜಾವಾಗಿ ತಯಾರಿಸಲಾಗುತ್ತದೆ, ಹೀಗಾಗಿ ಎಣ್ಣೆಯಿಂದ ಗರಿಗರಿಯಾದ ಚಿನ್ನದ ಕಂದು ಬಣ್ಣದ ವಡೆ ಹೊರ ಬರುತ್ತದೆ.
ಪರಮೇಶ್ವರ ಮೈಯ್ಯ ಮತ್ತು ಗಣಪ್ಪಯ್ಯ ಮತ್ತು ಯಜ್ಞನಾರಾಯಣ ಅವರು ಬೆಂಗಳೂರು ತಲುಪಲು ಉಡುಪಿ ಸಮೀಪದ ಕೋಟಾ ಎಂಬ ಕುಗ್ರಾಮವನ್ನು ತೊರೆದರು, ಅಲ್ಲಿ ಅವರ ಉದ್ಯೋಗದಾತರೊಬ್ಬರು 1924 ರಲ್ಲಿ ಕಾಫಿ ಮತ್ತು ಇಡ್ಲಿ ನೀಡಲು ಪರಮೇಶ್ವರ ಅವರನ್ನು ಸಣ್ಣ ಹೋಟೆಲ್ ಪ್ರಾರಂಭಿಸಲು ಪ್ರೋತ್ಸಾಹಿಸಿದರು. ಅದು ಬ್ರಾಹ್ಮಣ ಕಾಫಿ ಕ್ಲಬ್‌ನ ಆರಂಭ. ನಂತರ ಯಜ್ಞನಾರಾಯಣ ಅವರು 'ಕ್ಲಬ್' ಎಂಬ ಪದವು ಗಣ್ಯತೆಯನ್ನು ತೋರುತ್ತದೆ ಎಂದು ಭಾವಿಸಿದರು, ಆದ್ದರಿಂದ ಹೆಸರನ್ನು ಮಾವಳ್ಳಿ ಟಿಫಿನ್ ರೂಮ್ ಎಂದು ಬದಲಾಯಿಸಿದರು. ಅದು ನೆಲೆಗೊಂಡಿರುವ ಪ್ರದೇಶದ ಹೆಸರನ್ನು ಇಡಲಾಗಿದೆ.
ಕನ್ನಡ ಸ್ವಲ್ಪ ಬರುತ್ತೆ, ಮಲ್ಲೇಶ್ವರಂ ಮಸಾಲ ದೋಸೆ ಬೇಕು; ನಟಿ ಅನುಷ್ಕಾ ಶರ್ಮಾ ಬಯಕೆ!
MTR ಸುಮಾರು ಎರಡು ಡಜನ್ ಸಹಾಯಕರು ಒಂದೆರಡು ಮುಖ್ಯ ಅಡುಗೆಯವರನ್ನು ಹೊಂದಿದೆ. ಪ್ರತಿಯೊಬ್ಬರೂ ನಿರ್ಧಿಷ್ಟ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಪ್ರಸಿದ್ಧ ಎಂಟಿಆರ್ ಚಟ್ನಿಗಾಗಿ ತೆಂಗಿನಕಾಯಿ (coconut), ಮೆಣಸಿನಕಾಯಿ ಮತ್ತು ಕೊತ್ತಂಬರಿ ಸೇರಿಸಲಾಗುತ್ತದೆ. ಅದೇನೆ ಇರ್ಲಿ, ಬೆಂಗಳೂರಿಗರ ನೆಚ್ಚಿನ ಎಂಟಿಆರ್ ವಿದೇಶಿಗರ ಮನಗೆದ್ದಿರುವುದು ನಿಜಕ್ಕೂ ಖುಷಿಯ ವಿಚಾರ.