ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸದ್ಯ ದೇಶದ ಅತ್ಯಾಧುನಿಕ ಸೌಲಭ್ಯ ಹೊಂದಿರುವ ಹಾಗೂ ಅತಿ ವೇಗದ ಭಾರತೀಯ ರೈಲುಗಳಲ್ಲಿ ಒಂದಾಗಿದೆ. ಆದರೆ ಇದರಲ್ಲಿ ಸದ್ಯ ವಿತರಿಸ್ತಿರೋ ಆಹಾರದ ಬಗ್ಗೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಂಥಹದ್ದೇ ಒಂದು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಭಾರತದ ಮಹಾನಗರಗಳಲ್ಲಿ ವಂದೇ ಭಾರತ್ ರೈಲುಗಳು ಸಂಚಾರ ಆರಂಭಿಸಿವೆ. ಪ್ರಧಾನಿ ಮೋದಿ ಅವರಿಂದ ಉದ್ಘಾಟನೆಗೊಂಡಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಬೇಡಿಕೆ ಹೆಚ್ಚಿದೆ. ಸುಲಭವಾಗಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ತಲುಪಬಹುದು ಅನ್ನೋ ಕಾರಣಕ್ಕೆ ಹೆಚ್ಚಿನವರು ಇದರಲ್ಲಿ ಪ್ರಯಾಣಿಸಲು ಆಸಕ್ತಿ ತೋರಿಸುತ್ತಿದ್ದಾರೆ. ಆದರೆ ಉದ್ಘಾಟನೆಯಾದ ನಂತರದಿಂದಲೂ ವಂದೇ ಭಾರತ್ ಎಕ್ಸ್‌ಪ್ರೆಸ್ ನೆಗೆಟಿವ್ ವಿಚಾರಗಳಿಂದಲೇ ಹೆಚ್ಚು ಸುದ್ದಿಯಲ್ಲಿದೆ. ರೈಲಿಗೆ ಕಲ್ಲೆಸೆತದ ಪ್ರಕರಣಗಳು ವರದಿಯಾಗುತ್ತಿವೆ. ಇದೆಲ್ಲದರ ಮಧ್ಯೆ ವಂದೇ ಭಾರತ್‌ನಲ್ಲಿ ವಿತರಿಸ್ತಿರೋ ಆಹಾರದ ಗುಣಮಟ್ಟ ಸಹ ಕೆಟ್ಟದಾಗಿದೆ ಅನ್ನೋ ದೂರು ಕೇಳಿ ಬರ್ತಿದೆ.
ರೈಲು, ವಿಮಾನದಲ್ಲಿ ವಿತರಿಸೋ ಆಹಾರದ (Food) ಬಗ್ಗೆ ಜನರು ಆಗಿಂದಾಗೆ ದೂರು ಕೊಡ್ತಿರ್ತಾರೆ. ಕಳಪೆ ಗುಣಮಟ್ಟದ ಫುಡ್ ವಿತರಿಸ್ತಿರೋ ಬಗ್ಗೆ ಗ್ರಾಹಕರು (Customers) ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡ್ತಿರ್ತಾರೆ. ಆಹಾರದಲ್ಲಿ ಜಿರಳೆ, ಕೂದಲು, ಮತ್ತಿನ್ನೇನೋ ಸಿಕ್ಕ ಬಗ್ಗೆ ಹೇಳ್ತಿರ್ತಾರೆ. ರೈಲು, ವಿಮಾನ ಪ್ರಯಾಣದಲ್ಲಿ ಇಂಥಾ ಆಹಾರದ ವಿತರಣೆ ಸಾಮಾನ್ಯ ಎಂಬಂತಾಗಿದೆ. ಸದ್ಯ, ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಸಹ ಇಂಥಹದ್ದೇ ಎಡವಟ್ಟಾಗಿದೆ.
ಸಂಜೀವ್ ಕಪೂರ್‌ಗೆ ಕೆಟ್ಟ ಆಹಾರ ನೀಡಿ ಇಕ್ಕಟ್ಟಿಗೆ ಸಿಲುಕಿದ ಏರ್ ಇಂಡಿಯಾ
ಪ್ರಯಾಣಿಕರೊಬ್ಬರ ಆಹಾರದಲ್ಲಿ ಉಗುರು ಪತ್ತೆ
ಮುಂಬೈ-ಗೋವಾ ರೈಲು ಪ್ರಯಾಣದ ವೇಳೆ ಪ್ರಯಾಣಿಕರೊಬ್ಬರ ಆಹಾರದಲ್ಲಿ ಉಗುರು ಸಿಕ್ಕಿದೆ. ನೊಂದ ಪ್ರಯಾಣಿಕರು ಘಟನೆಯ ವಿಡಿಯೋ ರೆಕಾರ್ಡ್ ಮಾಡಿ ಆನ್‌ಲೈನ್‌ನಲ್ಲಿ ಹಂಚಿಕೊಂಡಿದ್ದಾರೆ. ಪ್ರತಿಕ್ರಿಯೆಯಾಗಿ, ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ಕಾರ್ಪೊರೇಷನ್ (IRCTC) ಆಹಾರದ ಗುಣಮಟ್ಟದಲ್ಲಿ ಲೋಪಕ್ಕಾಗಿ ಅಡುಗೆ ಮಾಡಿದ ವ್ಯಕ್ತಿಗೆ 25,000 ರೂ. ದಂಡ ವಿಧಿಸಿದೆ. ಅಡುಗೆ ಗುತ್ತಿಗೆದಾರರ ಮೇಲಿನ ದಂಡದ ಜೊತೆಗೆ, ಇಂತಹ ಘಟನೆಗಳನ್ನು ತಡೆಯಲು ಕೆಲವು ಪ್ರೋಟೋಕಾಲ್‌ಗಳನ್ನು ಜಾರಿಗೆ ತರಲಾಗಿದೆ ಎಂದು IRCTC ಮೂಲಗಳು ತಿಳಿಸಿವೆ.
ಕಾರ್ಯನಿರ್ವಾಹಕ ಮಟ್ಟದ ಅಧಿಕಾರಿಯೊಬ್ಬರು ಈಗ ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಸೇವೆಗಳ ಆನ್-ಬೋರ್ಡ್ ಮೇಲ್ವಿಚಾರಣೆಗಾಗಿ ಪ್ರಯಾಣಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಐಆರ್‌ಸಿಟಿಸಿ ರತ್ನಗಿರಿಯ ರೈಲು ನಿಲ್ದಾಣದ ಮೂಲ ಅಡುಗೆಮನೆಯಲ್ಲಿ ಜಾಗರೂಕತೆಯನ್ನು ಹೆಚ್ಚಿಸಿದೆ. ಅಲ್ಲಿಂದ ಈ ಮಾರ್ಗದಲ್ಲಿ ಪ್ರಯಾಣಿಸುವ ವಂದೇ ಭಾರತ್ ರೈಲಿಗೆ ಆಹಾರವನ್ನು ಲೋಡ್ ಮಾಡಲಾಗುತ್ತದೆ.
ವಂದೇ ಭಾರತ್ ರೈಲಿನಲ್ಲಿ ಕಳಪೆ ಆಹಾರ ಪೂರೈಕೆ ಬಗ್ಗೆ ದೂರು: ನೆಟ್ಟಿಗರ ಆಕ್ರೋಶ; IRCTC ಪ್ರತಿಕ್ರಿಯೆ
ಈ ಹಿಂದೆಯೂ ಆಹಾರದ ಗುಣಮಟ್ಟದ ಬಗ್ಗೆ ದೂರು
ಜೂನ್ 27 ರಂದು ಸಿಎಸ್‌ಎಂಟಿ-ಮಡ್ಗಾಂವ್ ವಂದೇ ಭಾರತ್ ರೈಲನ್ನು ಆರಂಭಿಸಲಾಗಿದೆ. ಇದಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಿದ್ದರು. ಕೆಲವು ದಿನಗಳ ನಂತರ CSMT-ಮಡ್ಗಾಂವ್ ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸಿದ ಹಿಮಾಂಶು ಮುಖರ್ಜಿ ಎಂಬವರು ಆಹಾರದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ದಾಲ್ ಮತ್ತು ಪನೀರ್ ಕರಿ ತುಂಬಾ ಕೆಟ್ಟದಾಗಿತ್ತು ಎಂದು ತಿಳಿಸಿದ್ದರು. ಮುಂಬೈ-ಮಡ್ಗಾಂವ್ ವಂದೇ ಭಾರತ್ ಎಕ್ಸ್‌ಪ್ರೆಸ್, ಮುಂಬೈನ ಛತ್ರಪತಿ ಶಿವಾಜಿ ಟರ್ಮಿನಸ್‌ನಿಂದ ಗೋವಾದ ಮಡಗಾಂವ್ ಜಂಕ್ಷನ್ ವರೆಗೆ ಚಲಿಸುತ್ತದೆ. ಈ ರೈಲನ್ನು ಜೂನ್ 27,2023 ರಂದು ಪ್ರಾರಂಭಿಸಲಾಯಿತು. ಇದು ದೇಶದ 19ನೇ ವಂದೇ ಭಾರತ್ ರೈಲಾಗಿದೆ.
ಸದ್ಯ ವೈರಲ್ ಆಗಿರೋ ವಿಡಿಯೋ ರೈಲುಗಳಲ್ಲಿ ಆಹಾರ ಸುರಕ್ಷತೆ ಮತ್ತು ನೈರ್ಮಲ್ಯದ ಬಗ್ಗೆ ಕಳವಳವನ್ನು ಉಂಟುಮಾಡುತ್ತದೆ. ಮಾತ್ರವಲ್ಲದೆ ಕಠಿಣ ಗುಣಮಟ್ಟದ ನಿಯಂತ್ರಣ ಕ್ರಮಗಳ ಅಗತ್ಯವನ್ನು ಎತ್ತಿ ತೋರಿಸುತ್ತದೆ. ಆಹಾರದ ಪ್ಯಾಕೆಟ್‌ನಲ್ಲಿ ಉಗುರು ಸಿಕ್ಕ ಬಳಿಕ ಪ್ರತಿಕ್ರಿಯಿಸಿದ ಪ್ರಯಾಣಿಕ ಮಚಿಂದ್ರ ಪವಾರ್, 'ಐಆರ್‌ಸಿಟಿಸಿ ಸೇವೆಗಳು ಸುಧಾರಿಸುತ್ತವೆ ಎಂದು ನಾನು ಭಾವಿಸುತ್ತೇನೆ' ಎಂದು ಹೇಳಿದರು. ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಪ್ಪಿಸುವುದನ್ನು ಖಚಿತಪಡಿಸಿಕೊಳ್ಳಲು ಪ್ರಯಾಣಿಕರು ಸುಧಾರಿತ ನಿಯಮಗಳು ಮತ್ತು ತಪಾಸಣೆಗಳನ್ನು ಬಯಸುತ್ತಾರೆ.