ನಾಗರ ಪಂಚಮಿ ಹೇಗೆ ಶುರು ಆಯ್ತು? ಅರ್ಥಪೂರ್ಣವಾಗಿ ನಾಗದೇವರ ಪೂಜೆ ಹೀಗೆ ಮಾಡಿ

By Suvarna News  |  First Published Aug 12, 2021, 2:11 PM IST

ನಾಗರ ಪಂಚಮಿಯ ಶುಭದಿನವಿಂದು. ಇಲ್ಲಿಂದ ಹಬ್ಬಗಳ ಆರಂಭ. ಈ ಶುಭ ದಿನ ನಾಗರ ಪಂಚಮಿಯ ಹಿನ್ನೆಲೆ, ನಾಗ ದೇವರ ಮಹಿಮೆ ತಿಳಿದುಕೊಂಡು ಹಬ್ಬದ ಆಚರಣೆ ಮಾಡಿದರೆ ನಿಮ್ಮ ಆಚರಣೆ ಅರ್ಥಪೂರ್ಣವಾಗಿರುತ್ತೆ. ಹೆಚ್ಚಿನ ಫಲಪ್ರಾಪ್ತಿಯಾಗುತ್ತದೆ.


ಇಂದು ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ದಿನ. ಅಂದರೆ ನಮಗೆಲ್ಲ ನಾಗರ ಪಂಚಮಿಯ ಸಂಭ್ರಮದ ದಿನ. ನಮ್ಮ ಭೂಮಿಯಲ್ಲಿ ಹಾವುಗಳ ಪರಂಪರೆ ಕುರಿತು ಅನೇಕ ಪುರಾಣದ ಉಲ್ಲೇಖಗಳಿವೆ. ಆ ಹಿನ್ನೆಲೆಯಿಂದ ಬಂದ ಅನೇಕ ಆಚರಣೆಗಳೂ ಜಾರಿಯಲ್ಲಿವೆ. ಆದರೆ ನಾಗ, ಫಲವನ್ನು ನೀಡುವ ದೇವರು ಎಂಬುದು ಬಹಳ ಹಿಂದಿನಿಂದ ನಡೆದುಕೊಂಡು ಬಂದ ನಂಬಿಕೆ. ಸಂತಾನ ಪ್ರಾಪ್ತಿಗಾಗಿ ನಾಗ ದೇವರ ಆರಾಧನೆ ನಮ್ಮಲ್ಲಿ ಬಹಳ ಜನಪ್ರಿಯ. ನಮ್ಮ ಭೂಮಿಯನ್ನು ಆದಿಶೇಷ ತನ್ನ ಹೆಡೆಯಲ್ಲಿ ಧರಿಸಿದ್ದಾನೆ ಎಂದು ಪುರಾಣಗಳು ಹೇಳುತ್ತವೆ.

ಅದಕ್ಕೆ ತಕ್ಕಂತೆ ನಮ್ಮ ಭೂಮಿಯನ್ನು ಈ ಹಾವುಗಳು ಬಹುಕಾಲದಿಂದ ರಕ್ಷಿಸುತ್ತಾ ಬಂದಿವೆ. ಹಾವುಗಳೇ ಇಲ್ಲದೇ ಹೋಗಿದ್ದರೆ ನಮ್ಮ ಭೂಮಿಯ ಸ್ಥಿತಿ ಹೇಗಿದ್ದಿರಬಹುದು ಊಹಿಸಿ. ಇಲಿಹೆಗ್ಗಣಗಳು ನಮ್ಮ ಫಲವನ್ನೆಲ್ಲ ಸ್ವಾಹಾ ಮಾಡಿ ನಮಗೆ ಆಹಾರವಿಲ್ಲದ ಹಾಗೆ ಮಾಡಿ ಬಿಡುತ್ತಿದ್ದವು. ತುತ್ತು ಆಹಾರಕ್ಕಾಗಿ ನಾವು ಬಹಳ ಕಷ್ಟಪಡಬೇಕಿತ್ತು. ಈಗೇನೋ ಕ್ರಿಮಿನಾಶಕಗಳು ಬಂದಿವೆ. ಆದರೆ ಅದರೊಳಗಿರುವ ವಿಷ ನಮ್ಮ ದೇಹವನ್ನೂ ಹೊಕ್ಕು ಇನ್ನಿಲ್ಲದ ಸಮಸ್ಯೆ ಉಂಟು ಮಾಡುತ್ತಿವೆ. ಅದರ ಬದಲಿಗೆ ಹಾವುಗಳಿದ್ದರೆ ಬೆಳಗೆ ಹಾನಿ ಮಾಡುವ ಇಲಿ ಹೆಗ್ಗಣಗಳೆಲ್ಲ ಅವುಗಳಿಗೆ ಆಹಾರವಾಗುತ್ತವೆ. ನಮ್ಮ ಬೆಳೆ ನಮ್ಮ ಕೈ ಸೇರುತ್ತದೆ. ಫಲವತ್ತಾದ ಅನ್ನವನ್ನು ಉಂಡು ಸುಖವಾಗಿ ಜೀವಿಸುವ ಸೌಭಾಗ್ಯ ಹಾವುಗಳ ದೆಸೆಯಿಂದ ನಮಗೆ ಒದಗಿ ಬರುತ್ತವೆ. 

Tap to resize

Latest Videos

ನಾಗರ ಪಂಚಮಿಯಂದು ಈ ರೀತಿ ಮಾಡಿದ್ರೆ ಕನಸಿನಲ್ಲಿ ಹಾವು ಕಾಣಲ್ಲ

ಪುರಾಣದಲ್ಲಿ ನಾಗರಪಂಚಮಿಯ ಬಗ್ಗೆ ಅನೇಕ ಉಲ್ಲೇಖಗಳಿವೆ. ಪರೀಕ್ಷಿತ ರಾಜ ಬೇಟೆಗೆಂದು ಕಾಡಿಗೆ ಹೋದವನು ಹಸಿವಿನಿಂದ ಬಳಲುತ್ತಾನೆ. ಸಮೀಪದಲ್ಲೇ ಋಷಿಯ ಆಶ್ರಮ ಕಂಡು ಅಲ್ಲಿಗೆ ಭೇಟಿ ನೀಡಿ ಆಹಾರದ ನಿರೀಕ್ಷೆಯಲ್ಲಿರುತ್ತಾನೆ. ಆದರೆ ಕಠಿಣ ತಪಸ್ಸಿನಲ್ಲಿರುವ ಋಷಿಗಳಿಗೆ ಇದರ ಅರಿವಿರುವುದಿಲ್ಲ, ಬಹಳ ಹೊತ್ತು ಕಾದರೂ ತಪಸ್ಸಿನಿಂದೇಳದ ಮುನಿಗಳನ್ನು ಕಂಡ ರಾಜ ಹಾವನ್ನು ಮುನಿಗಳ ಮೇಲೆ ಹಾಕಿ ಅಲ್ಲಿಂದ ಹೊರನಡೆಯುತ್ತಾನೆ. ತಪಸ್ಸಿಂದ ಎಚ್ಚರಾದ ಋಷಿಗಳು ತನ್ನ ಮೇಲಿರುವ ಹಾವನ್ನು ಕಂಡು, ದಿವ್ಯ ದೃಷ್ಟಿಯಿಂದ ಇದನ್ನು ತನ್ನ ಮೇಲೆ ಹಾಕಿರುವವನು ಪರೀಕ್ಷಿತನೇ ಎಂದು ತಿಳಿದುಕೊಂಡು, ನಿನಗೆ ಹಾವಿನಿಂದಲೇ ಮರಣ ಬರಲಿ ಎಂದು ಶಪಿಸುತ್ತಾನೆ.

undefined

ಈ ಸುದ್ದಿ ತಿಳಿದ ಪರೀಕ್ಷಿತ ಎಷ್ಟೇ ಸುರಕ್ಷಿತವಾಗಿರಲು ಪ್ರಯತ್ನಿಸಿದರೂ, ಸಾಧ್ಯವಾಗದೇ ಆತ ಮಾಯಾ ಹಾವಿನ ಕಡಿತದಿಂದ ಸಾವನ್ನಪ್ಪುತ್ತಾನೆ. ಇವನ ಮಗ ಜನಮೇಜಯನಿಗೆ ವಿಷಯ ತಿಳಿಯುತ್ತದೆ. ತನ್ನ ತಂದೆಯ ಸಾವಿಗೆ ಕಾರಣವಾದ ಸರ್ಪಗಳನ್ನೇ ನಾಶ ಮಾಡುತ್ತೇನೆ ಸರ್ಪಯಜ್ಞ ಮಾಡುತ್ತಾನೆ. ಭೂಮಿಯ ಎಲ್ಲ ಸರ್ಪಗಳೂ ಹೋಮಕುಂಡಕ್ಕೆ ಬಲಿಯಾಗುತ್ತವೆ. ಎಂಥಾ ಸಮಯದಲ್ಲಿ ಆಸ್ತಿಕ ಮುನಿಯ ಕೃಪೆಯಿಂದ ಜನಮೇಜಯನ ಸರ್ಪಯಜ್ಞ ಕೊನೆಯಾಗುತ್ತದೆ. ಭೂಮಿಯ ಫಲವತ್ತತೆಗೆ ಕಾರಣವಾದ ನಾಗ ಸಂತತಿಯ ಜೀವ ಮರಳಿದ ದಿನ 'ನಾಗರ ಪಂಚಮಿ' ಹಬ್ಬವಾಗಿ ಆಚರಣೆಗೊಳ್ಳುತ್ತಿದೆ. 

ನಾಗದೇವರ ಆರಾಧನೆ ಹಲವು ಭಾಗಗಳಲ್ಲಿ ಹಲವು ವಿಧಗಳಲ್ಲಿ ನಡೆಯುತ್ತದೆ. ದಕ್ಷಿಣ ಕನ್ನಡದ ಹೆಚ್ಚಿನ ಮನೆಗಳಲ್ಲಿ ನಾಗಬನವಿರುತ್ತದೆ. ಈ ದಿನ ನಾಗನಿಗೆ ತಂಬಿಲ, ನಾಗನ ಕಲ್ಲಿಗೆ ಹಾಲೆರೆಯುವ ಸಂಪ್ರದಾಯವಿದೆ. ಆದರೆ ಕೆಲವೊಮ್ಮೆ ನಮ್ಮ ತಪ್ಪು ಕಲ್ಪನೆ ನಾಗಗಳ ಪ್ರಾಣಕ್ಕೇ ಎರವಾಗುವುದುಂಟು. ಕಳೆದ ವರ್ಷ ನಾಗರ ಪಂಚಮಿ ಹಬ್ಬದಂದು ಕಾಣಿಸಿಕೊಂಡ ಜೀವಂತ ನಾಗರಹಾವಿಗೆ ಜನ ಹಾಲು ಎರೆದು ಅರಶಿನ ಚೆಲ್ಲಿದ್ದರು. ಪರಿಣಾಮ ನಾಗರಹಾವು ಸಾವನ್ನಪ್ಪಿತ್ತು.

ಮನೆಯ ಮುಖ್ಯ ದ್ವಾರದ ಮೇಲೆ ಸಿಂಧೂರ ಹಚ್ಚೋದು ಮಂಗಳಕರ

ಹೀಗೆ ಜೀವಂತ ನಾಗರಹಾವನ್ನು ನಮ್ಮ ತಪ್ಪು ನಂಬಿಕೆಗಳಿಂದ ಕೊಲ್ಲುವುದು ಶಾಸ್ತ್ರ ಪ್ರಕಾರ ಪಾಪ, ಜೀವಶಾಸ್ತ್ರ ಪ್ರಕಾರವೂ ಕೆಡುಕು. ಹೀಗಾಗಿ ಜೀವಂತ ನಾಗರ ಕಂಡರೆ ದೂರ ನಿಂತು ಕೈ ಮುಗಿದು ಅದರ ಪಾಡಿಗೆ ಅದನ್ನ ಬದುಕಲು ಬಿಡಿ. ಬದಲಿಗೆ ಹಾಲು, ಅರಶಿನ ಹಾಕಿ ಅದರ ಸಾವಿಗೆ ಕಾರಣವಾಗಬೇಡಿ. ನಾಗರ ಹಾವಿಗೆ ಕಾಂಕ್ರೀಟ್‌ ಕಟ್ಟೆ ಕಟ್ಟಿ ಪೂಜಿಸುವುದಕ್ಕಿಂತಲೂ ಮರದಡಿ ನಾಗರ ಕಲ್ಲನ್ನಿಟ್ಟು ಪೂಜಿಸುವುದು ಹೆಚ್ಚು ಅರ್ಥಪೂರ್ಣ. ತಂಪಿರುವ ಜಾಗಗಳು ನಾಗನಿಗಿಷ್ಟ. ನಾಗದೇವರ ಸಂಪ್ರೀತಿಗೆ ಭೂಮಿಯನ್ನ ತಂಪಾಗಿಸುವತ್ತ ನಾವು ಗಮನಹರಿಸಬೇಕು. ನಮ್ಮಿಂದಾದಷ್ಟು ಪರಿಸರ ರಕ್ಷಣೆಗೆ ಮುಂದಾಗಬೇಕು.

click me!