ಶಂಕರ ಶಶಿಧರ ಗಜ ಚರ್ಮಾಂಭರ ಗಂಗಾಧರ ಹರನೇ..

By Web DeskFirst Published Mar 4, 2019, 10:19 AM IST
Highlights

ಶಿವನು ಅಜನ್ಮ,ಅಯೋನಿಜ,ಅವ್ಯಕ್ತ ,ಅಮರ,ಅವಿನಾಶಿ,ಅಭೋಕ್ತ,ಅಶರೀರಿ, ಸರ್ವಶಕ್ತಿವಂತನಾಗಿದ್ದಾನೆ. ಶಿವನ ಮಹಿಮೆಯನ್ನು ಶಿವಪುರಾಣ, ಸ್ಕಂದಪುರಾಣ, ಶಿವಸ್ತುತಿ, ದಾಸಸಾಹಿತ್ಯ,ಶರಣರ ಸಾಹಿತ್ಯಗಳು ಸಾರಿ ಹೇಳುತ್ತವೆ.

ವಿಶ್ವಾಸ ಸೋಹೋನಿ

ಶಿವರಾತ್ರಿ ಹಬ್ಬದ ವಿಶೇಷ ದಿನವಿಂದು. ಶಿವರಾತ್ರಿಯಂದು ಪತಿತಪಾವನ ಜ್ಞಾನೇಶ್ವರನಾದ ಸದಾಶಿವನು ಭಕ್ತರನ್ನು ಉದ್ಧರಿಸುವನೆಂಬ ನಂಬಿಕೆ ಇದೆ. ಶಿವನು ಅಜನ್ಮ, ಅಯೋನಿಜ, ಅವ್ಯಕ್ತ ,ಅಮರ, ಅವಿನಾಶಿ, ಅಭೋಕ್ತ, ಅಶರೀರಿ, ಸರ್ವಶಕ್ತಿವಂತನಾಗಿದ್ದಾನೆ. ಶಿವನ ಮಹಿಮೆಯನ್ನು ಶಿವಪುರಾಣ, ಸ್ಕಂದಪುರಾಣ, ಶಿವಸ್ತುತಿ, ದಾಸಸಾಹಿತ್ಯ, ಶರಣರ ಸಾಹಿತ್ಯದಲ್ಲಿ ವಿಸ್ತಾರವಾಗಿ ಮಾಡಲಾಗಿದೆ. ಅದರಲ್ಲೂ ಶರಣರ ವಚನ ಸಾಹಿತ್ಯದ ಕೊಡುಗೆ ಅಪಾರವಾಗಿದೆ. ಶಿವಶರಣರು ಬರೆದಿರುವ ವಚನಗಳಲ್ಲಿ ಆಯ್ದ ಕೆಲವು ವಚನಗಳನ್ನು ಈ ಕೆಳಗಿನಂತೆ ನೀಡಲಾಗಿದೆ:

ಶಿವಪರಮಾತ್ಮನು ಜ್ಯೋತಿರ್ಲಿಂಗ ಸ್ವರೂಪಿ, ಅಕಾಯ,ಅಶರೀರಿ, ಅಜಾತ ಪರಮ ಪವಿತ್ರನಾಗಿದ್ದಾನೆ. ಅವನು ದೇವ-ದಾನವ-ಮಾನವರಂತೆ ಹೆಂಡತಿ ಮಕ್ಕಳನ್ನು ಪಡೆದವನಲ್ಲ, ಗೃಹಸ್ಥನಲ್ಲ ಎಂದು ಶರಣ ಬಸವಣ್ಣನವರು ಈ ಕೆಳಗಿನ ವಚನಗಳಲ್ಲಿ ಸಾರಿದ್ದಾರೆ.
ಬೆನಕನು ಹರನ(ಶಿವನ) ಮಗನೆಂಬ
ಪಾತಕರೆ ನೀವೂ ಕೇಳಿರೋ
ಪಾರ್ವತಿಯು ಹರನ(ಶಿವನ) ಸತಿಯೆಂಬ
ಶಿವದ್ರೋಹಿಗಳೆ ನೀವೂ ಕೇಳಿರೋ
ಲಿಂಗದ್ರೋಹಿಗಳೇ ನೀವೂ ಕೇಳಿರೋ
ಅಜಾತ-ಪರಮಪವಿತ್ರನೊಬ್ಬನೇ
ಕೂಡಲ ಸಂಗಮದೇವ ಕಾಣಿರೋ.

ಶಿವಶರಣೆ ಅಕ್ಕಮಹಾದೇವಿ ತನ್ನ ವಚನದಲ್ಲಿ ಪರಮಾತ್ಮನ ಸತ್ಯ ಕುರುಹನ್ನು ಬಹಳ ಸುಂದರವಾಗಿ ವಿವರಿಸಿದ್ದಾಳೆ. ಜ್ಯೋತಿಸ್ವರೂಪಿ ಆತ್ಮಳಾದ ತನಗೆ ಜ್ಯೋತಿರ್ಲಿಂಗ ಸ್ವರೂಪಿ ಪರಮಾತ್ಮನಾದ ಶಿವನೇ ಪತಿ ಎಂದು ಸಾರಿದ್ದಾಳೆ. ದೇಹಧಾರಿಗಳು ತನಗೆ ಪತಿಯಲ್ಲವೆಂದೂ ಹೇಳಿದ್ದಾಳೆ. ಅಕ್ಕಮಹಾದೇವಿಯ ಪತಿ ತಾನೆಂದು ಎಂದಾದರೂ, ಯಾರಾದರೂ ಹೇಳಿದರೆ ಅಂತಹವರನ್ನು ಒಲೆಯಲ್ಲಿನ ಬೆಂಕಿಯಲ್ಲಿ ಬಿಸಾಡಿ ಎನ್ನುತ್ತಾಳೆ. ಹೀಗೆ ಶಿವನಿಷ್ಠೆ, ಈಶ್ವರನ ನಿಷ್ಠೆಯನ್ನು ಅಕ್ಕಮಹಾದೇವಿಯು ಪ್ರತಿಪಾದಿಸಿದ್ದಾಳೆ ಅವುಗಳನಿಲ್ಲಿ ಅವಲೋಕಿಸೋಣ.

ನೀರ ಕಂಡಲ್ಲಿ ಮುಳುಗುವರಯ್ಯ
ಮರನ ಕಂಡಲ್ಲಿ ಸುತ್ತುವರಯ್ಯ
ಬತ್ತುವ ಜಲವ, ಒಣಗುವ ಮರವ ಬಲ್ಲವರು ನಿಮ್ಮನೆತ್ತ ಬಲ್ಲರು ಕೂಡಲಸಂಗಮದೇವ ಎಂದು ಶಿವಯೋಗಿ ಬಸವಣ್ಣನವರು ಹೇಳಿದ್ದಾರೆ

ಪ್ರತಿದಿನ ಸೂರ್ಯನಿಲ್ಲದ ಸಮಯಕ್ಕೆ ರಾತ್ರಿ ಎನ್ನಲಾಗುತ್ತದೆ. ಆದರೆ ಶಿವರಾತ್ರಿಯ ರಾತ್ರಿಯೇ ಬೇರೆ. ಸೂರ್ಯಸ್ತವಾದ ನಂತರದ ಕತ್ತಲಿನ ರಾತ್ರಿ ಇದಾಗಿರದೇ ಆಧ್ಯಾತ್ಮಿಕ ದೃಷ್ಟಿಕೋನದಿಂದ ನೋಡಿದಾಗ ಬೇರೆಯೇ ಅರ್ಥವಿದೆ. ಸೂರ್ಯನ ಬೆಳಕಿನಲ್ಲೂ ಅಜ್ಞಾನವೆಂಬ ಕತ್ತಲು ಕವಿದಿರುವ ರಾತ್ರಿ ಇದು. ಯಾವಾಗ ಪರಮಾತ್ಮನೇ ಈ ಎಲ್ಲ ಸಂಕಷ್ಟಗಳಿಂದ ನಮ್ಮನ್ನು ಪಾರು ಮಾಡು ತಂದೇ ಎಂದು ಜನಸಾಮಾನ್ಯರು, ಸಾಧು ಸಜ್ಜನರು ಭಗವಂತನಿಗೆ
ಮೊರೆ ಇಡುತ್ತಿರುವರೋ, ಅದೇ ರಾತ್ರಿಯಲ್ಲಿ ಶಿವ ಪರಮಾತ್ಮನ ಅವತರಣೆ ಆಗುತ್ತದೆ

ಕರ್ನಾಟಕದ ಪ್ರಸಿದ್ಧ ಶಿವ ದೇವಾಲಯಗಳು!

ಭಾರತದ ಹಾಗೂ ವಿಶ್ವದಾದ್ಯಂತ ಮೂಲೆ ಮೂಲೆಗಳಲ್ಲೂ ಶಿವನ ಮಂದಿರಗಳು ಇವೆ. ಪೂರ್ವದಲ್ಲಿ ಕಾಶಿಯ ವಿಶ್ವನಾಥ, ಉತ್ತರದಲ್ಲಿ ಅಮರನಾಥ, ದಕ್ಷಿಣದಲ್ಲಿ ರಾಮೇಶ್ವರ, ಪಶ್ಚಿಮದಲ್ಲಿ ಸೋಮನಾಥ, ಉಜ್ಜಯಿನಿಯಲ್ಲಿ ಮಹಾಕಾಲೇಶ್ವರ, ಹಿಮಾಲಯದಲ್ಲಿ ಕೇದಾರನಾಥ, ಹಿಸಾರದಲ್ಲಿ ವೈದ್ಯನಾಥ, ಮಧ್ಯ ಪ್ರದೇಶದಲ್ಲಿ ಓಂಕಾರನಾಥ, ದ್ವಾರಕಾದಲ್ಲಿ ಭುವನೇಶ್ವರ ಮುಂತಾದ ಕ್ಷೇತ್ರಗಳಲ್ಲಿ ಶಿವನ ಮಂದಿರಗಳನ್ನು ಕಾಣಬಹುದು. ಕೇವಲ ಭಾರತದಲ್ಲಿ ಮಾತ್ರವಲ್ಲದೇ ಹೊರರಾಷ್ಟ್ರಗಳ ಸಂಸ್ಕೃತಿಗಳಲ್ಲಿಯೂ ಸಹ ಶಿವನನ್ನು ಕಾಣಬಹುದು. ಉದಾಹರಣೆಗೆ ನೇಪಾಳದಲ್ಲಿ ಪಶುಪತಿನಾಥ, ಬ್ಯಾಬಿಲೋನಿಯಾದಲ್ಲಿ ಶಿವನಿಗೆ ‘ಶಿವೂನ’ ಎಂದು ಹೇಳಲಾಗುತ್ತದೆ. ಈಜಿಪ್ಟ್‌ನಲ್ಲಿ ‘ಸೇವಾ’ ನಾಮದಿಂದ ಪೂಜೆಯು ನಡೆಯುತ್ತದೆ. ರೋಮ್‌ನಲ್ಲಿ ‘ಪ್ರಿಯಪ್ಸ್’ ಎಂದು ಹೇಳಲಾಗುತ್ತದೆ. ಇಟಲಿಯ ಚರ್ಚ್‌ಗಳಲ್ಲಿ ಇಂದಿಗೂ ಶಿವನ ಪ್ರತಿಮೆಗಳನ್ನು ಕಾಣಬಹುದು. ಚೀನಾದಲ್ಲಿ ಶಿವಲಿಂಗಕ್ಕೆ ‘ಹೂವೆಡ್ ಹಿಪೂಹ’ ಎಂದು ಕರೆಯಲಾಗುತ್ತದೆ. ಗ್ರೀಕ್‌ನಲ್ಲಿ ‘ಫಲ್ಲೂಸ’, ಅಮೇರಿಕಾದ ಪುರುವಿಯಾ ಎಂಬ ಸ್ಥಳದಲ್ಲಿ ಈಶ್ವರನಿಗೆ ‘ಶಿವೂ’ ಎಂದು ಹೇಳುತ್ತಾರೆ. ಕಾಬಾದಲ್ಲಿಯೂ ಸಹ ಶಿವಲಿಂಗಾಕಾರದ ಪ್ರತಿಮೆ ಇದೆ ಎಂದು ಸಂಶೋಧಕರು ನಂಬುತ್ತಾರೆ. ಶಿವಪರಮಾತ್ಮನು ಅವತರಿಸಿ ವಿಶ್ವ ಪರಿವರ್ತನೆಯ ಕಲ್ಯಾಣಕಾರಿ ಕರ್ತವ್ಯ ಮಾಡಿದ್ದಾನೆ ಎಂಬುದು ಇದರಿಂದ ನಮಗೆ ಸ್ಪಷ್ಟವಾಗುತ್ತದೆ. 

ಶಿವರಾತ್ರಿಯಲ್ಲಿ ಉಪವಾಸವನ್ನು ಮಾಡುತ್ತಾರೆ. ಇದರ ಆಧ್ಯಾತ್ಮಿಕ ಅರ್ಥವಾಗಿದೆ: ‘ಉಪ’ ಎಂದರೆ ‘ಸಮೀಪ’ ವಾಸ ಎಂದರೆ ‘ಇರುವುದು’. ವಾಸ್ತವಿಕವಾಗಿ ಬುದ್ಧಿಯೋಗವನ್ನು ನಿರಾಕಾರ ಪರಮಪಿತ ಪರಮಾತ್ಮನ ಜೊತೆ ಜೋಡಿಸುವುದೇ ಸತ್ಯ ಉಪವಾಸವಾಗಿದೆ. ಶಿವರಾತ್ರಿಯಂದು ಸಾಮಾನ್ಯವಾಗಿ ಭಕ್ತರು ದೇವರ ಚಿಂತನೆ ಮಾಡುತ್ತಾ ಸ್ಥೂಲ ಜಾಗರಣೆ ಮಾಡುತ್ತಾರೆ.ವಾಸ್ತವಿಕವಾಗಿ ಜಾಗರಣೆ ಎಂದರೆ ಜಾಗೃತಿಯಾಗಿದೆ. ಅಜ್ಞಾನದಿಂದ ಹೊರಬರುವುದೇ ಅಥವಾ ಜಾಗೃತರಾಗುವುದೇ ಸತ್ಯ ಜಾಗರಣೆಯಾಗಿದೆ. ಈ ಅಜ್ಞಾನದ ಅಂಧಕಾರದ ರಾತ್ರಿಯಲ್ಲಿ ಸದಾಕಾಲ ಜಾಗೃತವಾಗಿದ್ದುಕೊಂಡು ಮಾಯೆಯ ರೂಪವಾದ ಕಾಮ, ಕ್ರೋಧ, ಲೋಭ, ಮೋಹ, ಅಹಂಕಾರಗಳ ಮೇಲೆ ವಿಜಯಗಳಿಸಬೇಕೆಂಬುದು ಇದರ ಅರ್ಥವಾಗಿದೆ.


 

click me!