ಫಿಸಿಯೋಥೆರಪಿಸ್ಟ್‌ಗಳು ಇನ್ಮುಂದೆ ತಮ್ಮ ಹೆಸರಿನ ಹಿಂದೆ 'ಡಾಕ್ಟರ್' ಎಂದು ಬಳಸುವಂತಿಲ್ಲ!

Published : Sep 11, 2025, 03:44 PM IST
physiotherapist Dr prefix

ಸಾರಾಂಶ

Physiotherapist Dr prefix: ಸಾಮಾನ್ಯವಾಗಿ ಫಿಸಿಯೋಥೆರಪಿಸ್ಟ್ ತಮ್ಮ ಹೆಸರಿನ ಹಿಂದೆ ಡಾಕ್ಟರ್ (Dr.)ಎಂದು ಸೇರಿಸುವುದನ್ನು ನೋಡಿರಬಹುದು. ಆದರೆ ಇನ್ನು ಮುಂದೆ ಹಾಗೆ ಮಾಡುವುದನ್ನು ಕಾನೂನು ಅಪರಾಧವೆಂದು ಪರಿಗಣಿಸಲಾಗುತ್ತದೆ.  

ಭಾರತದಲ್ಲಿ ಫಿಸಿಯೋಥೆರಪಿಸ್ಟ್ (Physiotherapists) ಟ್ರೆಂಡಿಂಗ್ ನಿರಂತರವಾಗಿ ಹೆಚ್ಚುತ್ತಿದ್ದು, ಕೆಲವು ಕಾಯಿಲೆಗೆ ಚಿಕಿತ್ಸೆ ಕೊಟ್ಟ ನಂತರ ಚೇತರಿಕೆ ಕಾಣುವುದರಲ್ಲಿ ಈ ಚಿಕಿತ್ಸೆಯು ಸಹ ಪ್ರಮುಖ ಪಾತ್ರ ವಹಿಸುತ್ತದೆ. ನಿಜ ಹೇಳಬೇಕೆಂದರೆ ಈ ಚಿಕಿತ್ಸೆಗೆ ಅರ್ಹ ಫಿಸಿಯೋಥೆರಪಿಸ್ಟ್‌ಗಳ ಅಗತ್ಯವೂ ಇದೆ. ಇದಕ್ಕೆ ಕೋರ್ಸ್ ಕೂಡ ಇದೆ. ಅದನ್ನು ಪೂರ್ಣಗೊಳಿಸಿದ ನಂತರವೇ ಜನರು ಫಿಸಿಯೋಥೆರಪಿಸ್ಟ್‌ಗಳಾಗಬಹುದು. ಸಾಮಾನ್ಯವಾಗಿ ಫಿಸಿಯೋಥೆರಪಿಸ್ಟ್ ತಮ್ಮ ಹೆಸರಿನ ಹಿಂದೆ ಡಾಕ್ಟರ್ (Dr.)ಎಂದು ಸೇರಿಸುವುದನ್ನು ನೋಡಿರಬಹುದು. ಆದರೆ ಇನ್ನು ಮುಂದೆ ಹಾಗೆ ಮಾಡುವುದನ್ನು ಕಾನೂನು ಅಪರಾಧವೆಂದು ಪರಿಗಣಿಸಲಾಗುತ್ತದೆ. ಹೌದು. ಇತ್ತೀಚೆಗೆ ಕೇಂದ್ರ ಸರ್ಕಾರವು ಪತ್ರವೊಂದನ್ನು ಹೊರಡಿಸಿ, ಭಾರತದಲ್ಲಿ ಫಿಸಿಯೋಥೆರಪಿಸ್ಟ್ ಡಾ. ಎಂಬ ಪ್ರಿಫಿಕ್ಸ್ ಬಳಸುವಂತಿಲ್ಲ ಎಂದು ಸೂಚನೆ ನೀಡಿದೆ. ಈ ಸೂಚನೆಯನ್ನು ಸೆಪ್ಟೆಂಬರ್ 9 ರಂದು ಆರೋಗ್ಯ ಸೇವೆಗಳ ಮಹಾನಿರ್ದೇಶನಾಲಯ (DGHS) ಹೊರಡಿಸಿದೆ.

ಭಾರತೀಯ ವೈದ್ಯಕೀಯ ಸಂಘ ಹೇಳಿದ್ದೇನು?
ಏಪ್ರಿಲ್ 2025 ರಲ್ಲಿ ಎನ್‌ಸಿಎಎಚ್‌ಪಿ (National Commission for Allied and Healthcare Professions) ಹೊಸ ಪಠ್ಯಕ್ರಮವನ್ನು ಜಾರಿಗೆ ತಂದಿತು. ಇದು ಫಿಸಿಯೋಥೆರಪಿಸ್ಟ್‌ಗಳು Dr ಎಂದು ಪ್ರಿಫಿಕ್ಸ್ ಮತ್ತು PT ಎಂದು ಸಫಿಕ್ಸ್ ಬಳಸಲು ಅವಕಾಶ ಮಾಡಿಕೊಟ್ಟಿತು. ಈ ಮಾನ್ಯತೆ ವೃತ್ತಿಪರರ ಘನತೆಯನ್ನು ಹೆಚ್ಚಿಸುತ್ತದೆ ಮತ್ತು ಇತರ ಆರೋಗ್ಯ ವೃತ್ತಿಗಳಂತೆ ವೈದ್ಯಕೀಯ ಮಾನ್ಯತೆ ಮತ್ತು ತರಬೇತಿಯನ್ನು ಖಚಿತಪಡಿಸುತ್ತದೆ ಎಂದು NCAHP ವಾದಿಸಿತು. ಆದರೆ ಇದನ್ನು ಭಾರತೀಯ ವೈದ್ಯಕೀಯ ಸಂಘ (IMA) ಸೇರಿದಂತೆ ಇತರ ವೈದ್ಯಕೀಯ ಸಂಸ್ಥೆಗಳು ಬಲವಾಗಿ ವಿರೋಧಿಸಿದವು. ಅದರ ನಂತರ ಕೇಂದ್ರ ಸರ್ಕಾರವು ಫಿಸಿಯೋಥೆರಪಿಸ್ಟ್‌ಗಳು ಹೆಸರಿನ ಮೊದಲು Dr ಬಳಕೆಯನ್ನು ನಿಷೇಧಿಸುವ ಪತ್ರವನ್ನು ಹೊರಡಿಸಿತು. ಹೆಸರಿನ ಮೊದಲು Doctor ಅನ್ನು ಸೇರಿಸುವುದರಿಂದ ಸಾಮಾನ್ಯ ಜನರು ಗೊಂದಲಕ್ಕೊಳಗಾಗಬಹುದು ಎಂದು IMA ಹೇಳುತ್ತದೆ. Dr ಎಂಬ ಪ್ರಿಫಿಕ್ಸ್ MBBS ಅಥವಾ ಇತರ ಮಾನ್ಯತೆ ಪಡೆದ ವೈದ್ಯಕೀಯ ಪದವಿ ಪಡೆದವರು ಮಾತ್ರ ಬಳಸಬೇಕು. ಇಲ್ಲದಿದ್ದರೆ ಅದು ಸಾಮಾನ್ಯ ಜನರಿಗೆ ಫಿಸಿಯೋಥೆರಪಿಸ್ಟ್‌ಗಳೂ ವೈದ್ಯರು ಎಂಬ ತಪ್ಪು ಅಭಿಪ್ರಾಯವನ್ನು ನೀಡುತ್ತದೆ ಎಂದು ಹೇಳಿದೆ.

ಡಾಕ್ಟರ್ ಪದ ಬಳಕೆ ನಿಷೇಧ ಮಾಡಿದ ಹೈಕೋರ್ಟ್
ಡಿಜಿಎಚ್‌ಎಸ್ (Directorate General of Health Services) ಪರವಾಗಿ ಡಾ. ಸುನೀತಾ ಶರ್ಮಾ ಪತ್ರವೊಂದನ್ನು ಹೊರಡಿಸಿದ್ದು, ಭಾರತೀಯ ವೈದ್ಯಕೀಯ ಪದವಿ ಕಾಯ್ದೆ 1916 ರ ಪ್ರಕಾರ, ವೈದ್ಯಕೀಯ ಪದವಿ ಪಡೆದವರು ಮಾತ್ರ ಡಾ. ಎಂಬ ಪ್ರಿಫಿಕ್ಸ್ ಬಳಸಬಹುದು ಎಂದು ಹೇಳಿದ್ದಾರೆ. ಫಿಸಿಯೋಥೆರಪಿಸ್ಟ್‌ ಒಂದು ವೇಳೆ ಇದನ್ನು ಬಳಸಿದರೆ ಕಾನೂನುಬದ್ಧವಾಗಿ ಕಾಯ್ದೆಯ ಉಲ್ಲಂಘನೆಯಾಗುತ್ತದೆ. ಈ ಹಿಂದೆಯೂ ಸಹ ವಿವಿಧ ರಾಜ್ಯಗಳು ಮತ್ತು ನ್ಯಾಯಾಲಯಗಳು ಈ ವಿಷಯದ ಬಗ್ಗೆ ತೀರ್ಪುಗಳನ್ನು ನೀಡಿವೆ. ರಾಜ್ಯ ವೈದ್ಯಕೀಯ ನೋಂದಣಿಯಲ್ಲಿ ಒಬ್ಬ ವ್ಯಕ್ತಿಯ ಹೆಸರು ದಾಖಲಾಗದಿದ್ದರೆ, ಅವನು ತನ್ನ ಹೆಸರಿನ ಮುಂದೆ ಡಾ. ಅನ್ನು ಹಾಕುವಂತಿಲ್ಲ ಎಂದು ಪಾಟ್ನಾ ಹೈಕೋರ್ಟ್ ಹೇಳಿತ್ತು. ಮದ್ರಾಸ್ ಹೈಕೋರ್ಟ್ ಫಿಸಿಯೋಥೆರಪಿಸ್ಟ್‌ ಡಾ. ಅನ್ನು ಬಳಸುವುದನ್ನು ನಿಷೇಧಿಸಿತ್ತು.

ಫಿಸಿಯೋಥೆರಪಿಸ್ಟ್‌  ಡಾ. ಪದ ಬಳಸಿದರೆ ಗೊಂದಲ 
ಈ ಹಿಂದೆ ಪ್ಯಾರಾಮೆಡಿಕಲ್ ಅಥವಾ ಟೆಕ್ನಿಶಿಯನ್‌ಗಳನ್ನು ವೈದ್ಯರೆಂದು ಪರಿಗಣಿಸಲಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿತ್ತು. ಅಂತೆಯೇ ಈಗ ಫಿಸಿಯೋಥೆರಪಿಸ್ಟ್‌ ಹೆಸರಿನ ಮೊದಲು ಡಾ ಎಂದು ಬರೆಯುವುದರಿಂದ ಅವರು ವೈದ್ಯರು ಎಂಬ ಗೊಂದಲ ಉಂಟಾಗಬಹುದು ಮತ್ತು ಅವರಿಗೆ ವೈದ್ಯಕೀಯ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಥವಾ ಔಷಧಿಗಳನ್ನು ಶಿಫಾರಸು ಮಾಡುವ ಹಕ್ಕಿದೆ ಎಂದು ನಿರೀಕ್ಷಿಸಲಾಗುತ್ತದೆ. ಆದರೆ ತಪ್ಪು ಮಾಹಿತಿ ಅಥವಾ ನಿರೀಕ್ಷೆಗಳು ಜನರಿಗೆ ಅಪಾಯಕಾರಿ ಎಂದು ವೈದ್ಯಕೀಯ ವೃತ್ತಿಪರರು ವಾದಿಸುತ್ತಾರೆ. ಆದ್ದರಿಂದ ಈ ವಿಷಯದಲ್ಲಿ ಜಾಗರೂಕರಾಗಿರುವುದು ಮುಖ್ಯ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Hair Oil Routine: ಕೂದಲು ಚೆನ್ನಾಗಿ ಬೆಳೆಯಲು ಎಷ್ಟು ದಿನಕ್ಕೊಮ್ಮೆ ಎಣ್ಣೆ ಹಚ್ಚಬೇಕು?.
ಆ 'ಕರಾಳ ಮುಖ'ದ ವಿರುದ್ಧ ಸಿಡಿದೆದ್ದ ರಶ್ಮಿಕಾ ಮಂದಣ್ಣ; 'ಕಣ್ಣಿಗೆ ಕಂಡಿದ್ದೆಲ್ಲವೂ ಸತ್ಯವಲ್ಲ' ಅಂದಿದ್ಯಾಕೆ?