ನಿಮ್ಮ ಕೂದಲು ಉದ್ದಗೆ, ದಪ್ಪಗೆ ಮತ್ತು ಬಲವಾಗಿರಬೇಕೆಂದರೆ ಏನ್ ಮಾಡ್ತೀರಿ?. ಜಾಹೀರಾತುಗಳಲ್ಲಿ ತೋರಿಸುವ ಶಾಂಪೂ ಮತ್ತು ಕಂಡಿಷನರ್ ಮೊರೆ ಹೋಗ್ತೀರಿ ಅಲ್ಲವೇ?, ಆದರೆ ನೀವು ಹಾಗೆ ಮಾಡಿದ ತಕ್ಷಣ ಕೂದಲು ಬೆಳೆದಿದೆ ಎಂದು ಯಾರಾದರೂ ಹೇಳಿರುವುದನ್ನ ನೀವು ನೋಡಿದ್ದೀರಾ?. ಅದೆಲ್ಲ ಬಿಡಿ, ಯಾರೂ ಕೂಡ ಕೂದಲು ಬೆಳೆಯುವುದಕ್ಕಾಗಲೀ, ಉದುರುವುದಕ್ಕಾಗಲೀ ಕಾರಣವೇನೆಂದು ತಿಳಿಯುವುದಿಲ್ಲ. ಇದೇ ಕಾರಣಕ್ಕಾಗಿಯೇ ಅವರು ಕೂದಲಿನ ಮೇಲಿನ ಬಳಸುವ ಯಾವುದೇ ಟೆಕ್ನಿಕ್ ವರ್ಕ್‌ಔಟ್ ಆಗಲ್ಲ. ನಾವು ಮಾಡುತ್ತಿರುವ ತಪ್ಪೆಲ್ಲಿ ಎಂದು ನಿಮಗೆ ತಿಳಿದರೆ ಕೂದಲು ನೀವಂದುಕೊಂಡ ರೀತಿಯಲ್ಲಿ ಬೆಳೆಯುತ್ತದೆ.
ಒಂದು ವೇಳೆ ನೀವು ಸಮಯಕ್ಕೆ ಸರಿಯಾಗಿ ಮಲಗುತ್ತಿದ್ದದೂ, ವ್ಯಾಯಾಮ ಮಾಡುತ್ತಿದ್ದರೂ, ಪೌಷ್ಠಿಕಾಂಶ ಆಹಾರ ಸೇವಿಸಿಯೂ ನಿಮ್ಮ ಕೂದಲು ಉದುರುವುದು ನಿಲ್ಲದಿದ್ದರೆ ಅದು ನೀವು ಬಳಸುವ ಉತ್ಪನ್ನಗಳ ರಾಸಾಯನಿಕಗಳಿಂದಾಗಿರಬಹುದು. ಒಂದು ವೇಳೆ ನಿಮ್ಮ ಕೂದಲು ಉದುರುವಿಕೆ ಮತ್ತು ಹೊಸ ಕೂದಲು ಬೆಳವಣಿಗೆಯ ಕೊರತೆಯು ನೀವು ಬಳಸುವ ಉತ್ಪನ್ನಗಳಿಂದ ಆಗುತ್ತಿದ್ದರೆ ನೀವು ಶಾಂಪೂವನ್ನು ಬದಲಾಯಿಸಬಹುದು. ಯಾವ ಶಾಂಪೂ ಅಂತೀರಾ?. ಇಲ್ಲಿ ತಜ್ಞರೊಬ್ಬರು ಅತ್ಯುತ್ತಮ ರೀತಿಯಲ್ಲಿ ಆಯುರ್ವೇದ ಶಾಂಪೂ ತಯಾರಿಸುವ ವಿಧಾನವನ್ನು ತಿಳಿಸಿದ್ದು, ಈ ವಿಧಾನವು ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿದೆ.
ಹೌದು, ವಿಡಿಯೋವನ್ನು @masalakitchenbypoonam ಎಂಬ ಪೇಜ್‌ನಿಂದ ಹಂಚಿಕೊಳ್ಳಲಾಗಿದೆ. ಹಲವಾರು ಗಿಡಮೂಲಿಕೆಗಳನ್ನು ಬೆರೆಸಿ ಮನೆಯಲ್ಲಿ ಶಾಂಪೂ ತಯಾರಿಸುವುದು ಹೇಗೆ ಎಂಬುದನ್ನು ಇಲ್ಲಿ ವಿವರಿಸಲಾಗಿದ್ದು, ಅದನ್ನು ಮಾಡುವುದು ಹೇಗೆಂದು ನೋಡೋಣ ಬನ್ನಿ..
ಶಾಂಪೂ ತಯಾರಿಸಲು ಬೇಕಾಗುವ ಪದಾರ್ಥಗಳು
ಮೆಂತ್ಯ ಬೀಜಗಳು
ಬೇವು
ಕರಿಬೇವು
ದಾಸವಾಳ ಹೂವು
ಅಲೋ ವೆರಾ
ಶಾಂಪೂ
ಅಗಸೆ ಬೀಜಗಳು
(ಗಮನಿಸಿ: ನಿಮ್ಮ ಅವಶ್ಯಕತೆಗೆ ಅನುಗುಣವಾಗಿ ಪದಾರ್ಥಗಳ ಪ್ರಮಾಣವನ್ನು ಹೊಂದಿಸಿ)
ಇದನ್ನು ತಯಾರಿಸಲು ನೀವು ಮೆಂತ್ಯ ಬೀಜಗಳನ್ನು ರಾತ್ರಿಯಿಡೀ ನೆನೆಸಬೇಕು. ಈಗ ನೀವು ಈ ನೆನೆಸಿದ ಮೆಂತ್ಯ ಬೀಜಗಳು, ಅಗಸೆ ಬೀಜಗಳು, ದಾಸವಾಳದ ಹೂವುಗಳು, ಬೇವು, ಅಲೋವೆರಾ ಮತ್ತು ಕರಿಬೇವಿನ ಎಲೆಗಳನ್ನು ಒಂದು ಪ್ಯಾನ್‌ನಲ್ಲಿ ಕುದಿಸಬೇಕು. ಈಗ ಈ ಬೇಯಿಸಿದ ನೀರನ್ನು ಬೇರ್ಪಡಿಸಿ. ಎಲ್ಲಾ ಪದಾರ್ಥಗಳನ್ನು ಜಾಲರಿಯಲ್ಲಿ ಒತ್ತಿ ಹಿಂಡಿ. ಈಗ ಆ ನೀರಿಗೆ ನಿಮ್ಮ ಆಯ್ಕೆಯ ಗುಣಮಟ್ಟದ ಯಾವುದೇ ಶಾಂಪೂ ಸೇರಿಸಿ. ಅವುಗಳನ್ನು ಮಿಶ್ರಣ ಮಾಡಿದ ನಂತರ, ನೀವು ಅದನ್ನು ಗಾಜಿನ ಬಾಟಲಿಯಲ್ಲಿ ತುಂಬಿಸಬೇಕು. ನಿಮ್ಮ ಶಾಂಪೂ ಸಿದ್ಧವಾಗಿದೆ. ಈಗ ಪದಾರ್ಥಗಳ ಪ್ರಯೋಜನಗಳನ್ನು ತಿಳಿದುಕೊಳ್ಳೋಣ. ನಿಮಗೆ ಇದು ಇನ್ನು ಸ್ಪಷ್ಟವಾಗಿ ಗೊತ್ತಾಗಬೇಕಾದರೆ ಇಲ್ಲಿ ಕೊಟ್ಟಿರುವ ವಿಡಿಯೋವನ್ನ ಒಮ್ಮೆ ವೀಕ್ಷಿಸಬಹುದು.
ಮೆಂತ್ಯ ಬೀಜಗಳು ಕೂದಲನ್ನು ಬೇರುಗಳಿಂದ ಬಲಪಡಿಸುತ್ತವೆ ಮತ್ತು ತಲೆಹೊಟ್ಟು ಬರದಂತೆ ರಕ್ಷಿಸುತ್ತವೆ. ಇದು ಕೂದಲು ಉದುರುವಿಕೆಯ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಅವುಗಳಲ್ಲಿರುವ ಪ್ರೋಟೀನ್ ಮತ್ತು ನಿಕೋಟಿನಿಕ್ ಆಮ್ಲವು ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ . ಮತ್ತೊಂದೆಡೆ ಬೇವು ಬ್ಯಾಕ್ಟೀರಿಯಾ ವಿರೋಧಿ ಮತ್ತು ಶಿಲೀಂಧ್ರನಾಶಕ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ. ಇದು ನೆತ್ತಿಯ ಸೋಂಕನ್ನು ತಡೆಯುತ್ತದೆ.
ಕರಿಬೇವು ಕೂದಲನ್ನು ಒಳಗಿನಿಂದ ಪೋಷಿಸುತ್ತದೆ. ಅಷ್ಟೇ ಅಲ್ಲ, ಇದು ಕೂದಲು ಅಕಾಲಿಕವಾಗಿ ಬೂದು ಬಣ್ಣಕ್ಕೆ ತಿರುಗುವುದನ್ನು ತಡೆಯುತ್ತದೆ. ಇದು ಕೂದಲನ್ನು ಬಲವಾಗಿ ಮತ್ತು ದಪ್ಪವಾಗಿಸುತ್ತದೆ. ಮತ್ತೊಂದೆಡೆ, ದಾಸವಾಳದ ಹೂವುಗಳು ಕೂದಲನ್ನು ಬೇರುಗಳಿಂದ ಬಲಪಡಿಸುತ್ತವೆ ಮತ್ತು ಬೆಳವಣಿಗೆಯನ್ನು ಹೆಚ್ಚಿಸುತ್ತವೆ. ಇದು ಮುರಿದ ಮತ್ತು ನಿರ್ಜೀವ ಕೂದಲನ್ನು ಮೃದು ಮತ್ತು ರೇಷ್ಮೆಯಂತೆ ಮಾಡುತ್ತದೆ.
ಅಲೋವೆರಾ ಕೂದಲನ್ನು ತಂಪಾಗಿಸಲು ಮತ್ತು ತೇವಗೊಳಿಸಲು ಕೆಲಸ ಮಾಡುತ್ತದೆ. ಇದು ತಲೆಹೊಟ್ಟು, ಕೂದಲು ಒಡೆಯುವಿಕೆ ಮತ್ತು ನೆತ್ತಿಯ ಆರೋಗ್ಯವನ್ನು ಕಾಪಾಡುತ್ತದೆ. ಮತ್ತೊಂದೆಡೆ, ಅಗಸೆ ಬೀಜಗಳು ಒಮೆಗಾ-3 ಕೊಬ್ಬಿನಾಮ್ಲಗಳನ್ನು ಹೊಂದಿರುತ್ತವೆ. ಇದು ಕೂದಲನ್ನು ಒಳಗಿನಿಂದ ಪೋಷಿಸುತ್ತದೆ ಮತ್ತು ಕೂದಲನ್ನು ಬಲವಾಗಿ ಮತ್ತು ಹೊಳೆಯುವಂತೆ ಮಾಡುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.