ಚಿತ್ರ ವಿಮರ್ಶೆ: ದಿ ವಿಲನ್

By Web DeskFirst Published Oct 20, 2018, 9:59 AM IST
Highlights

ರಾವಣ ಅನಿಸಿಕೊಂಡರೂ ಪರ್ವಾಗಿಲ್ಲ ರಾಮನ ಕೆಲಸ ಮಾಡಬಹುದು ಅಂತ ತೋರಿಸಿದ್ದು ‘ದಿ ಗಾಡ್ ಫಾದರ್’. ಇದೇ ಚಿತ್ರದ ನೆರಳಿನಲ್ಲಿ ಬಂದು ಕೆಟ್ಟವನಾದ್ರು ಸರಿ, ಒಳ್ಳೆಯ ಕೆಲಸ ಮಾಡೋಣ ಅಂದಿದ್ದು ‘ನಾಯಗನ್’. 

ರಾಮ ಮತ್ತು ರಾವಣ ಇವರಿಬ್ಬರಲ್ಲಿ ಯಾರು ಕೆಟ್ಟವರು, ಯಾರು ಒಳ್ಳೆಯವರು ಅನ್ನುವುದಕ್ಕಿಂತ ರಾವಣ ಕೂಡ ಅದ್ಭುತ ಜೀವನ ಪ್ರೇಮಿ ಅನ್ನುವ ಮೂಲಕ ಹತ್ತು ತಲೆಯ ರಾವಣನನ್ನು ಕ್ಲಾಸಿಕ್ ಮ್ಯಾನ್ ಆಗಿಸಿದ್ದು ‘ರಾವಣ್’. ಒಡ ಹುಟ್ಟಿದವರಿಂದಲೋ, ಸಮಾಜದಿಂದಲೂ ತಿರಸ್ಕೃತಕ್ಕೊಳಗಾದರೆ ಒಳ್ಳೆಯವನು ಕೂಡ ರಾವಣನಾಗುತ್ತಾನೆಂದು ತೋರಿಸಿದ್ದು ‘ಜೈ ಲವಕುಶ’. ರಾವಣ ರೂಪದ ವಿಲನ್‌ಗೂ ಸ್ಟಾರ್ ಡಮ್ ಕೊಟ್ಟ ಕ್ರೆಡಿಟ್ಟು ‘ಶೋಲೆ’ಯ ಗಬ್ಬರ್‌ಸಿಂಗ್‌ಗೆ ಸೇರಬೇಕು. ಪ್ರತಿಯಬ್ಬರಲ್ಲೂ ರಾಮ ಮತ್ತು ರಾವಣ ಇರುತ್ತಾನೆ. ಆದರೆ, ಯಾರು ಯಾವಾಗ ಆಚೆ ಬರುತ್ತಾರೆ ಎಂದು ಮನುಷ್ಯನ ಎರಡೂ ಮುಖಗಳನ್ನು ಕ್ಲಾಸಿಕ್ ಆಗಿ ಚಿತ್ರಿಸಿದ್ದು ‘ಇದೊಳ್ಳೆ ರಾಮಾಯಣ’. ಹೀಗೆ ರಾಮ ಮತ್ತು ರಾವಣ ಸಿನಿಮಾ ಪರದೆಯನ್ನು ಬಿಟ್ಟು ಬಿಡದಂತೆ ತುಂಬಾ ಹಿಂದಿನಿಂದಲೂ ಜತೆಯಾಗಿದ್ದಾರೆ. ಹಾಗೆ ಈ ಇಬ್ಬರು ವ್ಯಕ್ತಿಗಳ ವ್ಯಕ್ತಿತ್ವವನ್ನು ತಮ್ಮದೇ ಆದ ಸ್ಟೈಲಿನಲ್ಲಿ ತೋರುತ್ತದೆ. ಹಾಗಂತ ‘ವಿ ದಿಲನ್’, ಈ ಮೇಲಿನ ಚಿತ್ರಗಳ ಸಾಲಿಗೆ ಸೇರುತ್ತದೆಯೇ ಎಂದರೆ ಇದು ಪ್ರೇಮ್ ನಿರ್ದೇಶನದ ಚಿತ್ರವೆಂದು ನೆನಪಿಸಿಕೊಳ್ಳಿ. 

ಪ್ರೀಮ್ ನಿರ್ದೇಶನದ ಚಿತ್ರವೆಂದು ನೆನಪಿಸಿಕೊಳ್ಳಿ. ಹಾಗಾದರೆ ಚಿತ್ರದ ಕತೆ ಏನು, ಯಾರು ವಿಲನ್ ಎನ್ನುವ ಕುತೂಹಲಿಗಳ ಪೈಕಿ ಕತೆ ಕೇಳದಿರುವುದೇ ಉತ್ತಮ. ಇನ್ನು ವಿಲನ್ ಯಾರೆಂಬ ಸಮಾಚಾರಕ್ಕೆ ಬಂದರೆ ಒಬ್ಬರು ರಾವಣ. ಮತ್ತೊಬ್ಬರು ವಿಲನ್. ಎರಡು ಕ್ಯಾರೆಕ್ಟರ್‌ಗಳು ಒಂದೇ ಅಲ್ವಾ ಎಂದು ಕೇಳಿದರೆ ಮತ್ತೆ ನಿಮಗೆ ನೆನಪಿಸಬೇಕು ಇದು ಪ್ರೇಮ್ ಚಿತ್ರವೆಂದು. ಆದ್ರೂ ಕತೆ ಒಂದು ಸಾಲು ಬೇಕಲ್ಲ ಅಂದ್ರೆ ಇಲ್ಲಿ ಕೇಳಿ... ಊರಿಗೆ ತಮ್ಮ ತಾತ ದಾನ ಮಾಡಿ ಹೋದ ಅಸ್ತಿಯನ್ನು ಮತ್ತೆ ಪಡೆಯಲಿಕ್ಕೆ ಸಾಹಸ ಮಾಡುವ ಮಗನಿಗೆ ಎಂದೋ ಬಿಟ್ಟು ಹೋದ ತಾಯಿಯನ್ನು ಮತ್ತೆ ಪಡೆಯುವ ಚಿಂತೆ. ಚಿಕ್ಕಂದಿನಲ್ಲೇ ಮಗನನ್ನು ತೊರೆದು ಹೋದ ತಾಯಿಗೆ ಮತ್ತೆ ಮಗನನ್ನು ಸೇರುವ ಆಸೆ. ಇನ್ನೇನು ಮಗ ಸಿಕ್ಕ ಬಿಟ್ಟ ಎಂದಾಗ ನೀನು ನನ್ನ ಮಗನೇ ಅಲ್ಲ ಎನ್ನುವುದರೊಂದಿಗೆ ಅಸಲಿ ಕತೆ ಶುರುವಾಗುತ್ತದೆ. ಇಲ್ಲಿ ತಾಯಿಯನ್ನು ಹುಡುಕುತ್ತಿರುವ ಮಗ, ಮಗನನ್ನು ಹುಡುಕುತ್ತಿರುವ ತಾಯಿ ಒಬ್ಬರೇನಾ ಎಂದರೆ ಇದು ತ್ರಿಕೋನ ಫ್ಯಾಮಿಲಿ ಕತೆ. ಅವ್ವನ ಸೆಂಟಿಮೆಂಟು, ಮಗನ ಅಂತರಾತ್ಮ ಚಿತ್ರದ ಮುಖ್ಯ ಪಿಲ್ಲರ್‌ಗಳು. ಈ ನಡುವೆ ತನ್ನ ಮಗ ರಾಮನಾಗಿರುತ್ತಾನೆಂದು ಭಾವಿಸಿರುವ ತಾಯಿಯಿಂದ ದೂರವಾದ ಮಗನನ್ನು ಸೇರಿಸುವ ಮತ್ತೊಬ್ಬ. ದಾರಿ ತಪ್ಪಿದ ಮಗ ಮತ್ತು ದಾರಿ ಕಾಯುವ ತಾಯಿಯ ಒಟ್ಟು ಸಾರಾಂಶ ‘ದಿ ವಿಲನ್’.

ಮಗನಲ್ಲದ ಮಗ ಒಬ್ಬ ತಾಯಿ ಕಳೆದುಕೊಂಡ ಸ್ವಂತ ಮಗನನ್ನು ಹುಡುಕಿಕೊಂಡು ಹೋಗುವುದು, ಇತ್ತ ಮಗನಿಗಾಗಿ ಕಾಯುವ ತಾಯಿ ಪಾತ್ರಗಳು ರಾಮ, ರಾವಣ, ಶಬರಿಯ ಪಾತ್ರಗಳನ್ನು ನೆನಪಿಸುತ್ತದೆ. ಹೀಗಾಗಿ ಒಂದು ಸಾಲಿನ ಕತೆಯಾಗಿ ಕೇಳಿದರೆ ‘ದಿ ವಿಲನ್’ ಚೆನ್ನಾಗಿದೆ ಅನಿಸುತ್ತದೆ. ಆದರೆ, ಅದು ಸಿನಿಮಾ ಆಗುವ ಹೊತ್ತಿಗೆ ಸಾಕಷ್ಟು ಗೊಂದಲಗಳ ಮೂಟೆ ಹೊತ್ತುಕೊಂಡು ಆ ಭಾರ ಸಿನಿಮಾ ನೋಡುವ ಪ್ರೇಕ್ಷಕನಿಗೂ ವರ್ಗಾವಣೆ ಆಗುತ್ತದೆ. 

ಬಿಡಿ ಬಿಡಿ ದೃಶ್ಯಗಳಾಗಿ ನೋಡಿದಾಗ ಮಜಾ ಕೊಡುತ್ತದೆ. ಆದರೆ, ಆ ದೃಶ್ಯಗಳ ಜೋಡಣೆಗೆ ಬೇಕಾದ ಚಿತ್ರಕತೆಯ ದಾರಿ ಅಂಕುಡೊಂಕುಗಳಿಂದ ಕೂಡಿದೆ. ಅನಗತ್ಯ ಬಿಲ್ಡಪ್‌ಗಳಿಗೆ ಕತ್ತರಿ ಹಾಕುವ ಜತೆಗೆ ಕತೆಯಲ್ಲಿ ಬಿಗಿತನ ಬೇಕಿತ್ತು. ಕಾಮಿಡಿಯ ನೆರಳಿನಲ್ಲಿ ಭಿನ್ನ ಮ್ಯಾನರಿಸಂನಲ್ಲಿ ಸುದೀಪ್, ವಿರಾಮದ ನಂತರ ಶಿವಣ್ಣ ಪಾತ್ರ ಪ್ರಬುದ್ಧವಾಗುತ್ತದೆ. ಇವರಿಬ್ಬರ ಪಾತ್ರಗಳ ಜೂಜಾಟದಂತೆ ಸಿನಿಮಾ ಸಾಗುವುದರಿಂದ ಬೇರೆ ಕಲಾವಿದರು ಬಂದು ಹೋಗುವುದು ಕೂಡ ಗೊತ್ತಾಗಲ್ಲ. ಯಾವ ದೃಶ್ಯಕ್ಕೆ ಹೇಗೆ ರಿಯಾಕ್ಟ್ ಮಾಡಬೇಕು ಎನ್ನುವಷ್ಟು ಕೂಡ ಭಾಷೆ ಗೊತ್ತಿರದ ನಟಿಯರನ್ನು ಈ ಚಿತ್ರದ ನಂತರವಾದರೂ ಪ್ರೇಮ್, ನಾಯಕಿಗಾಗಿ ಪಕ್ಕದ ಊರುಗಳಿಗೆ ಹೋಗದಿರಲಿ. ಇನ್ನೂ ತಾಯಿ ಮತ್ತು ಮಗ ಒಂದಾಗುವುದು ನಿರ್ದೇಶಕ ಪ್ರೇಮ್ ಚಿತ್ರಗಳ ಟ್ರಂಪ್ ಕಾರ್ಡ್. ಹಾಗೆ ಮಗನನ್ನು ಹುಡುಕುವ ತಾಯಿ ಕೈಗೆ ಟೀ, ಬನ್ನು ಕೊಡುವುದು ಕೂಡ ಅವರ ಚಿತ್ರಗಳ ಸ್ಪೆಷಲ್! ಹಾಗೆ ಪ್ರೇಮ್ ಚಿತ್ರಗಳಲ್ಲಿ ಹಾಡುಗಳು ಕೇಳುವಂತಿರುತ್ತವೆ. ಅದು ಇಲ್ಲೂ ಮುಂದುವರಿದಿದೆ. ನಾವು ಒಂದೇ ಹೊಟ್ಟೆಯಲ್ಲಿ ಹುಟ್ಟದಿರಬಹುದು, ಆದ್ರೆ ಅವ್ನ ನನ್ ತಮ್ಮ, ನಾನ್ ಅವ್ನ ಅಣ್ಣ ಅನ್ನೋ ಡೈಲಾಗ್ ಸದ್ಯದ ಪರಿಸ್ಥಿತಿಯಲ್ಲಿ ಸಿನಿಮಾ ಆಚೆಗೆ ಚಿತ್ರರಂಗಕ್ಕೂ ಅನ್ವಯಿಸಬೇಕಾದ ಮಾತು. ಮಳವಳ್ಳಿ ಸಾಯಿಕೃಷ್ಣ ಅಲ್ಲಿಲ್ಲಿ ಇಂಥ ಡೈಲಾಗ್‌ಗಳಿಂದ ತಮ್ಮ ಲೇಖನಿಯ ಹಳೆಯ ಖದರ್ ತೋರುತ್ತಾರೆ. 

ಚಿತ್ರ: ದಿ ವಿಲನ್
ತಾರಾಗಣ: ಶಿವರಾಜ್‌ಕುಮಾರ್, ಸುದೀಪ್, ಆ್ಯಮಿಜಾಕ್ಸನ್, ಶರತ್ ಲೋಹಿತಾಶ್ವ, ಶರಣ್ಯ, ತಿಲಕ್, ಮಂಡ್ಯ ರಮೇಶ್.
ನಿರ್ದೇಶನ: ಪ್ರೇಮ್
ನಿರ್ಮಾಣ: ಸಿ ಆರ್ ಮನೋಹರ್
ಸಂಗೀತ: ಅರ್ಜುನ್ ಜನ್ಯ
ಛಾಯಾಗ್ರಾಹಣ: ಗಿರಿಶ್ ಆರ್ ಗೌಡ
ರೇಟಿಂಗ್: ***

click me!