ಉ.ಪ್ರ. ಹಿಂದೂ ಮುಖಂಡನ ಹತ್ಯೆ : ಭಿಕ್ಷುಕನ ರೀತಿಯಲ್ಲಿದ್ದವ ಅರೆಸ್ಟ್

By Kannadaprabha NewsFirst Published Oct 23, 2019, 7:25 AM IST
Highlights

ಉತ್ತರ ಪ್ರದೇಶದ ಹಿಂದೂ ಮುಖಂಡ ಕಮಲೇಶ್‌ ತಿವಾರಿ ಹತ್ಯೆ ಪ್ರಕರಣದಲ್ಲಿ ಭಾಗಿಯಾದ ಆರೋಪದಡಿ ನಗರದ ರೈಲ್ವೆ ಇಲಾಖೆ ನೌಕರನೊಬ್ಬನನ್ನು ಐಎಸ್‌ಡಿ  ಬಂಧಿಸಿದೆ. 

ಹುಬ್ಬಳ್ಳಿ [ಅ.23]: ಹುಬ್ಬಳ್ಳಿ ರೈಲ್ವೆ ನಿಲ್ದಾಣ ಸ್ಫೋಟದ ಬೆನ್ನಲ್ಲೇ ಉತ್ತರ ಪ್ರದೇಶದ ಹಿಂದೂ ಮುಖಂಡ ಕಮಲೇಶ್‌ ತಿವಾರಿ ಹತ್ಯೆ ಪ್ರಕರಣದಲ್ಲಿ ಭಾಗಿಯಾದ ಆರೋಪದಡಿ ನಗರದ ರೈಲ್ವೆ ಇಲಾಖೆ ನೌಕರನೊಬ್ಬನನ್ನು ಐಎಸ್‌ಡಿ (ಆಂತರಿಕ ಭದ್ರತಾ ಪಡೆ)  ಬಂಧಿಸಿದೆ. ಬಂಧಿತ ಆರೋಪಿ ನಿಷೇಧಿತ ಉಗ್ರ ಸಂಘಟನೆಯಾದ ‘ಸಿಮಿ’ ಜತೆಗೂ ಗುರುತಿಸಿಕೊಂಡಿದ್ದ ಎನ್ನಲಾಗಿದೆ.

ನೈಋುತ್ಯ ರೈಲ್ವೆಯಲ್ಲಿ ಉದ್ಯೋಗಿಯಾಗಿರುವ ಹುಬ್ಬಳ್ಳಿಯ ಮೊಹಮ್ಮದ್‌ ಸಾದಿಕ್‌ ಜಾಫರ್‌ ಬಂಧಿತ ಆರೋಪಿ. ಈತ ‘ಸುನ್ನಿ ಯೂಥ್‌ ಫೋರ್ಸ್‌’ ಹಾಗೂ ‘ಸಿಮಿ’ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಎಂದು ಹೇಳಲಾಗಿದೆ. ಉತ್ತರ ಪ್ರದೇಶದ ಹಿಂದೂ ಮಹಾಸಭಾ ನಾಯಕ ಕಮಲೇಶ್‌ ತಿವಾರಿ ಅವರನ್ನು ಇತ್ತೀಚೆಗೆ ಗುಂಡಿಟ್ಟು ಹತ್ಯೆ ಮಾಡಲಾಗಿತ್ತು. ಈ ಸಂಬಂಧ ತನಿಖೆ ನಡೆಸುತ್ತಿರುವ ಐಎಸ್‌ಡಿ ಒಟ್ಟು ಐವರನ್ನು ಬಂಧಿಸಿದ್ದು, ಇವರಲ್ಲಿ ಮೊಹಮ್ಮದ್‌ ಸಾದಿಕ್‌ ಜಾಫರ್‌ ಕೂಡ ಒಬ್ಬ. ಸಾದಿಕ್‌ನನ್ನು ಹುಬ್ಬಳ್ಳಿಯ ದರ್ಗಾವೊಂದರಲ್ಲಿ ಸ್ಥಳೀಯ ಪೊಲೀಸರ ನೆರವಿನೊಂದಿಗೆ ಐಎಸ್‌ಡಿ ಪಡೆ ಬಂಧಿಸಿದೆ. ನಂತರ ಹೆಚ್ಚಿನ ವಿಚಾರಣೆಗೆ ಬೆಂಗಳೂರಿಗೆ ಕರೆದೊಯ್ದಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ರೈಲ್ವೆ ನೌಕರ: ಬಿಎ ಪದವೀಧರನಾಗಿರುವ ಸಾದಿಕ್‌ 16 ವರ್ಷಗಳಿಂದ ರೈಲ್ವೆ ವರ್ಕ್ಶಾಪ್‌ನ ಎಲೆಕ್ಟ್ರಿಕಲ್‌ ವಿಭಾಗದಲ್ಲಿ ಟೆಕ್ನಿಶಿಯನ್‌ ಆಗಿ ಕೆಲಸ ಮಾಡುತ್ತಿದ್ದು, ತನ್ನ ಪತ್ನಿ, ಮೂವರು ಮಕ್ಕಳು, ತಾಯಿಯೊಂದಿಗೆ ನಗರದಲ್ಲೇ ವಾಸವಾಗಿದ್ದ. ಈತನಿಗೆ ಇಬ್ಬರು ಸಹೋದರರಿದ್ದಾರೆ. ಈತನೇ ಹಿರಿಯ ಮಗ. ಈತನ 2ನೇ ಸೋದರ ಸ್ಕ್ರ್ಯಾಪ್‌ ಅಡ್ಡೆ ಹೊಂದಿದ್ದರೆ, ಕೊನೆಯಾತ ಶೂ ಅಂಗಡಿ ಇಟ್ಟುಕೊಂಡಿದ್ದಾನೆ.

ಮೂರು ವರ್ಷಗಳಿಂದ ಸುನ್ನಿ ಯೂಥ್‌ ಫೋರ್ಸ್‌ ಎಂಬ ಮುಸ್ಲಿಂ ಸಂಘಟನೆ ಜತೆ ಗುರುತಿಸಿಕೊಂಡಿದ್ದ. ‘ಆ್ಯಂಟಿ ಟೆರೆರಿಸಂ ಆರ್ಗನೈಜೇಷನ್‌’ ಎಂಬುದು ಈ ಸಂಘಟನೆಯ ಟ್ಯಾಗ್‌ ಲೈನ್‌. ಈತ ಈ ಸಂಘಟನೆಯ ಧಾರವಾಡ ಜಿಲ್ಲಾಧ್ಯಕ್ಷನಾಗಿದ್ದ. ತಿವಾರಿ ಹತ್ಯೆ ಪ್ರಕರಣದಲ್ಲಿ ಇದೇ ಸಂಘಟನೆಯ ರಾಷ್ಟ್ರೀಯ ಉಪಾಧ್ಯಕ್ಷ ಸೈಯದ್‌ ಆಸೀಂ ಎಂಬಾತನನ್ನು ಐಎಸ್‌ಡಿ ನಾಗಪುರದಲ್ಲಿ ಈ ಹಿಂದೆಯೇ ಬಂಧಿಸಿದೆ.

ದರ್ಗಾದ ಹೊರಗೆ ಭಿಕ್ಷುಕರಂತೆ ಮಲಗಿದ್ದ

ಸೈಯದ್‌ ಆಸೀಂ ಜತೆ ನಿರಂತರ ಸಂಪರ್ಕದಲ್ಲಿದ್ದ ಕಾರಣ ಮೊಬೈಲ್‌ ಕರೆ ಆಧಾರದ ಮೇಲೆ ಐಎಸ್‌ಡಿ ಸಾದಿಕ್‌ ಬೆನ್ನು ಬಿದ್ದಿತ್ತು. ಆದರೆ, ತಿವಾರಿ ಹತ್ಯೆ ಪ್ರಕರಣದಲ್ಲಿ ಆಸೀಂ ಬಂಧನದ ಸುದ್ದಿ ತಿಳಿಯುತ್ತಿದ್ದಂತೆ ಸಾದಿಕ್‌ ದಿಢೀರ್‌ ನಾಪತ್ತೆಯಾಗಿದ್ದ. 24ಗಂಟೆ ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ನಂತರ ನಿರಾಶ್ರಿತರಂತೆ ದರ್ಗಾದಲ್ಲಿ ಮಲಗಿದ್ದ ಈತನನ್ನು ಸೋಮವಾರ ರಾತ್ರಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆರೋಪಿ ವಿರುದ್ಧ 2010ರ ಹೋಳಿ ಹುಣ್ಣಿಮೆ ಸಂದರ್ಭದಲ್ಲಿ ಕಲ್ಲುತೂರಾಟದ ಆರೋಪದ ಮೇರೆಗೆ ರೌಡಿಶೀಟರ್‌ ತೆರೆಯಲಾಗಿತ್ತು. ಸದ್ಯ ಆಂತರಿಕ ಭದ್ರತಾ ಸಿಬ್ಬಂದಿ ವಿಚಾರಣೆ ನಡೆಸುತ್ತಿದ್ದು, ಬಳಿಕ ರಾಷ್ಟ್ರೀಯ ಭದ್ರತಾ ದಳದ ವಶಕ್ಕೆ ಒಪ್ಪಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

click me!