ಕೊಡಗು: ಹೆಣ್ಣು ಭ್ರೂಣ ಹತ್ಯೆ ಕೇಸ್‌ನಲ್ಲಿ ಹೆಸರು ಕೇಳಿ ಬಂದಿದ್ದ ಡಾಕ್ಟರ್‌ ಆತ್ಮಹತ್ಯೆ?

By Girish GoudarFirst Published Dec 1, 2023, 9:27 PM IST
Highlights

ರಾಷ್ಟ್ರೀಯ ಹೆದ್ದಾರಿ 275 ಮಡಿಕೇರಿ ಮೈಸೂರು ರಸ್ತೆಯ ಆನೆಕಾಡಿನಲ್ಲಿ ತನ್ನ ಕಾರಿನೊಳಗೆ ಕುಳಿತು ವಿಷದ ಇಂಜೆಕ್ಷನ್ ಪಡೆದು ಡಾ.ಸತೀಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಕಾರಿನಲ್ಲಿ ಸಿರೆಂಜ್ ಹಾಗೂ ವಿಷದ ಬಾಟೆಲ್ಗಳು ಪತ್ತೆಯಾಗಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. 

ಕೊಡಗು(ಡಿ.01): ಮಂಡ್ಯ ಹಾಗೂ ಮೈಸೂರು ಜಿಲ್ಲೆಯಲ್ಲಿ 900 ಕ್ಕೂ ಹೆಚ್ಚು ಹೆಣ್ಣು ಭ್ರೂಣ ಹತ್ಯೆ ಕೇಸಿನಲ್ಲಿ ಹೆಸರು ಕೇಳಿ ಬಂದಿತ್ತು ಎನ್ನಲಾದ ಡಾ.ಸತೀಶ್ ಎಂಬುವರು ವಿಷದ ಇಂಜೆಕ್ಷನ್ ಪಡೆದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ ಆನೆ ಕಾಡು ಸಮೀಪ ಇಂದು(ಶುಕ್ರವಾರ) ನಡೆದಿದೆ. 

ರಾಷ್ಟ್ರೀಯ ಹೆದ್ದಾರಿ 275 ಮಡಿಕೇರಿ ಮೈಸೂರು ರಸ್ತೆಯ ಆನೆಕಾಡಿನಲ್ಲಿ ತನ್ನ ಕಾರಿನೊಳಗೆ ಕುಳಿತು ವಿಷದ ಇಂಜೆಕ್ಷನ್ ಪಡೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಕಾರಿನಲ್ಲಿ ಸಿರೆಂಜ್ ಹಾಗೂ ವಿಷದ ಬಾಟೆಲ್ಗಳು ಪತ್ತೆಯಾಗಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. 

ಅಧಿಕಾರಿಗಳ ಬೇಜವಾಬ್ದಾರಿತನವೇ ಹೆಣ್ಣು ಭ್ರೂಣ ಹತ್ಯೆಗೆ ಕಾರಣ: ಸಚಿವ ದಿನೇಶ್‌ ಗುಂಡೂರಾವ್

ಶುಕ್ರವಾರ ಸಂಜೆ ರಸ್ತೆ ಬದಿಯಲ್ಲೇ ಕಾರಿನಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿರುವುದನ್ನು ಗಮನಿಸಿರುವ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಮಡಿಕೇರಿ ಮತ್ತು ಕುಶಾಲನಗರ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜೊತೆಗೆ ವಿಧಿವಿಜ್ನಾನ ವೈದ್ಯರು ಆಗಮಿಸಿದ್ದು ಪರಿಶೀಲಿಸಿದ್ದಾರೆ. 

ಇಂದು ಬೆಳಿಗ್ಗೆ ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಿದ್ದ ಡಾ. ಸತೀಸ್ ಕೊಣಸೂರು ಆಸ್ಪತ್ರೆಗೆ ಭೇಟಿ ನೀಡಿ ಸಹಿ ಮಾಡಿದ್ದರಂತೆ. ನಂತರ ಪಿರಿಯಾಪಟ್ಟಣ ಆಸ್ಪತ್ರೆಗೆ ಹೋಗಿದ್ದರಂತೆ. ಅಲ್ಲಿಯೂ ಆರೋಗ್ಯ ಸರಿಯಿಲ್ಲದೆ ಇರುವುದರಿಂದ ತಾನು ರೆಸ್ಟ್ ಮಾಡುವುದಾಗಿ ಅಲ್ಲಿನ ಸಿಬ್ಬಂದಿಗೆ ತಿಳಿಸಿ ಹೋಗಿದ್ದರಂತೆ. ಆದರೆ ವೈದ್ಯ ಸತೀಶ್ ಮೈಸೂರು ಮತ್ತು ಮಡಿಕೇರಿ ನಡುವಿನ ರಾಷ್ಟ್ರೀಯ ಹೆದ್ದಾರಿ 275 ರ ಆನೆಕಾಡಿನಲ್ಲಿ ತಮ್ಮ ಕಾರಿನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಳಿಕ ಪರಿಶೀಲನೆ ಮಾಡಿದಾಗ ಮೃತಪಟ್ಟಿರುವುದು ಡಾ. ಸತೀಶ್ ಎನ್ನುವುದು ಗೊತ್ತಾಗಿದೆ. 

ಬೆಂಗಳೂರು, ಮಂಡ್ಯ, ಮೈಸೂರಿನ 900 ಭ್ರೂಣ ಹತ್ಯೆ ಕೇಸನ್ನು ಸಿಐಡಿ ತನಿಖೆಗೆ ವಹಿಸಿದ ಸರ್ಕಾರ!

ಮೃತದೇಹವನ್ನು ಸಾಗಿಸಲು 108 ಸಿಬ್ಬಂದಿ ಸ್ಥಳಕ್ಕೆ ಬಂದು ವೈದ್ಯರ ಫೋನಿನಲ್ಲಿ ಇದ್ದ ನಂಬರ್‌ಗೆ ಕರೆ ಮಾಡಿ ಡಾ. ಸತೀಶ್ ಅವರೊಂದಿಗೆ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಅಶ್ವತ್ಥಿ ಎಂಬುವರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಪಿರಿಯಾಪಟ್ಟಣ ಮತ್ತು ಕೊಣಸೂರು ಆಸ್ಪತ್ರೆಯ ಸಿಬ್ಬಂದಿ ಸ್ಥಳಕ್ಕೆ ಬಂದಿದ್ದಾರೆ. 

ಮಂಡ್ಯದಲ್ಲಿ ನಡೆದ ಹೆಣ್ಣು ಭ್ರೂಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಒಂದಷ್ಟು ಜನರನ್ನು ಬಂಧಿಸಲಾಗಿದ್ದು ಅವರ ವಿಚಾರಣೆ ವೇಳೆ ಡಾ. ಸತೀಶ್ ಅವರ ಹೆಸರು ಕೇಳಿ ಬಂದಿತ್ತು. ರಾಜ್ಯ ಸರ್ಕಾರ ಇಂದು ಈ ಪ್ರಕರಣವನ್ನು ಸಿಐಡಿಗೆ ವಹಿಸಿತ್ತು. ಮೃತದೇಹವನ್ನು ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸ್ಥಳಾಂತರಿಸಿದ್ದು ಶನಿವಾರ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಯಲಿದೆ.

click me!