ಕೋತಿ ಆಯ್ತು, ಈಗ ಬೀದಿ ನಾಯಿಗಳಿಗೆ ವಿಷವಿಕ್ಕಿ ಹತ್ಯೆ!

By Kannadaprabha NewsFirst Published Jan 28, 2020, 11:45 AM IST
Highlights

ಕೋತಿ ಬಳಿಕ ಬೀದಿ ನಾಯಿಗಳಿಗೆ ವಿಷವಿಟ್ಟು ಕೊಂದರು| ಜೆ.ಪಿ.ನಗರದಲ್ಲಿ ಘಟನೆ| ವಿಷಾಹಾರ ಸೇವಿಸಿದ 6 ನಾಯಿಗಳು ಸಾವು, ನಾಲ್ಕರ ಸ್ಥಿತಿ ಗಂಭೀರ

ಬೆಂಗಳೂರು[ಜ.28]: ನಗರದಲ್ಲಿ ಇತ್ತೀಚೆಗೆ ಕಿಡಿಗೇಡಿಗಳು ಕೋತಿಗಳಿಗೆ ವಿಷ ಹಾಕಿ ಕೊಂದ ಪ್ರಕರಣ ಸಾರ್ವಜನಿಕರ ನೆನಪಿನಿಂದ ಮಾಸುವ ಮುನ್ನವೇ ಬೀದಿ ನಾಯಿಗಳಿಗೆ ವಿಷ ಹಾಕಿರುವ ದಾರುಣ ಘಟನೆ ನಡೆದಿದ್ದು, ವಿಷಾಹಾರ ಸೇವಿಸಿದ ಆರು ನಾಯಿಗಳು ಮೃತಪಟ್ಟಿವೆ.

ಜೆ.ಪಿ.ನಗರದ 8ನೇ ಹಂತದ ಎಂ.ಎಸ್‌.ರಾಮಯ್ಯ ಸಿಟಿ ಬಳಿ ಭಾನುವಾರ ರಾತ್ರಿ ಹತ್ತಕ್ಕೂ ಹೆಚ್ಚು ಬೀದಿ ನಾಯಿಗಳಿಗೆ ಕಿಡಿಗೇಡಿಗಳು ವಿಷಾಹಾರ ಹಾಕಿದ್ದಾರೆ. ವಿಷಾಹಾರ ಸೇವಿಸಿದ ಆರು ನಾಯಿಗಳು ಸೋಮವಾರ ಮೃತಪಟ್ಟಿವೆ. ಉಳಿದ ನಾಲ್ಕು ನಾಯಿಗಳ ಆರೋಗ್ಯ ಪರಿಸ್ಥಿತಿ ಗಂಭೀರವಾಗಿದ್ದು, ಸ್ಥಳೀಯರು ಚಿಕಿತ್ಸೆ ಕೊಡಿಸುತ್ತಿದ್ದಾರೆ.

ಬೀದಿ ನಾಯಿಗಳ ಹಾವಳಿಗೆ ಬಾಲಕಿ ಬಲಿ

ಭಾನುವಾರ ರಾತ್ರಿ ಮಾಂಸ ಆಹಾರದಲ್ಲಿ ವಿಷ ಮಿಶ್ರಣ ಮಾಡಿರುವ ಸಾಧ್ಯತೆ ಇದೆ. ಸೋಮವಾರ ಬೆಳಗ್ಗೆ ನಾಯಿಗಳಿಗೆ ಆಹಾರ ಹಾಕಲು ಹೋದಾಗ ಅಲ್ಲಲ್ಲಿ ನಾಯಿಗಳು ಸಾವನ್ನಪ್ಪಿರುವುದು ತಿಳಿದು ಬಂದಿದೆ. ನಾಯಿಗಳು ಬಾಯಿಯಿಂದ ಜೊಲ್ಲು, ರಕ್ತಸ್ರಾವವಾಗುತ್ತಿತ್ತು. ನಾಲ್ಕು ನಾಯಿಗಳ ಸ್ಥಿತಿ ಗಂಭೀರವಾಗಿದೆ. ಚಿಕಿತ್ಸೆ ಕೊಡಿಸಲಾಗುತ್ತಿದೆ. ವಿಷ ಹಾಕಿರುವ ಕಿಡಿಗೇಡಿಗಳ ಪತ್ತೆಗೆ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲನೆ ಮಾಡಲಾಗುತ್ತಿದೆ ಎಂದು ಸ್ಥಳೀಯ ಪ್ರವೀಣ್‌ ಕುಮಾರ್‌ ಮಾಹಿತಿ ನೀಡಿದ್ದಾರೆ.

2 ಕೋತಿಗಳು ಬಲಿ:

ಕಳೆದ ಗುರುವಾರವಷ್ಟೇ ಬಸವನಗುಡಿಯ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನದ ಸಮೀಪದ ಅಪಾರ್ಟ್‌ಮೆಂಟ್‌ ಬಳಿ ಕೋತಿಗಳು ಮನೆಯಲ್ಲಿರುವ ಆಹಾರ, ದವಸ ಧಾನ್ಯ ಹಾಗೂ ಬಟ್ಟೆಹಾಳು ಮಾಡುತ್ತವೆ ಎಂಬ ಕಾರಣಕ್ಕೆ ಕಿಡಿಗೇಡಿಗಳು 30 ರಿಂದ 35 ಕೋತಿಗಳಿರುವ ಗುಂಪಿಗೆ ವಿಷಾಹಾರ ಹಾಕಿದ್ದರು. ಎರಡು ಕೋತಿಗಳು ಮೃತಪಟ್ಟಿದ್ದವು.

ಶಿಕ್ಷಾರ್ಹ ಅಪರಾಧ

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿಬಿಎಂಪಿ ಘನತ್ಯಾಜ್ಯ ವಿಭಾಗದ ವಿಶೇಷ ಆಯುಕ್ತ ಡಿ.ರಂದೀಪ್‌, ಮೂಕ ಪ್ರಾಣಿಗಳಿಗೆ ಈ ರೀತಿ ವಿಷ ಹಾಕುವುದು ಶಿಕ್ಷಾರ್ಹ ಅಪರಾಧವಾಗಿದ್ದು, ವಿಷ ಹಾಕಿರುವುದು ಯಾರು ಎಂಬುದು ಪತ್ತೆಗೆ ಪೊಲೀಸ್‌ ಠಾಣೆಗೆ ಬಿಬಿಎಂಪಿ ವತಿಯಿಂದ ದೂರು ನೀಡಲಾಗುವುದು ಎಂದು ತಿಳಿಸಿದರು.

click me!