ಕೊಡಗು ಜಿಲ್ಲೆಯ ಒಣಚಲು ಗ್ರಾಮದಲ್ಲಿ ಸೋಮವಾರ ಬೆಳಿಗ್ಗೆ ಎಣ್ಣೆ ವಿಷಯಕ್ಕೆ ಜಗಳವಾಡಿಕೊಂಡ ಅಣ್ಣ ತಮ್ಮಂದಿರ ನಡುವೆ ಹೊಡೆದಾಟ ನಡೆದು, ತಮ್ಮ ಮಾಚಯ್ಯ ಜಮ್ಮಾ ಕೋವಿಯಿಂದ ಗುಂಡು ಹಾರಿಸಿ ಅಣ್ಣ ಅಪ್ಪಣ್ಣನನ್ನು ಹತ್ಯೆ ಮಾಡಿದ್ದಾನೆ. ಆರೋಪಿ ತಲೆಮರೆಸಿಕೊಂಡಿದ್ದು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ವರದಿ : ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಡಿ.16): ಅವರಿಬ್ಬರೂ ಒಡಹುಟ್ಟಿದ ಅಣ್ಣ ತಮ್ಮಂದಿರು, ಒಂದೇ ಮನೆಯಲ್ಲಿ ಬದುಕುತ್ತಿದ್ದವರು. ಆದರೆ ಸೋಮವಾರ ಬೆಳಗ್ಗೆ ಏನಾಯಿತೋ ಏನೋ ಗೊತ್ತಿಲ್ಲ ಇಬ್ಬರು ಜಗಳವಾಡಿಕೊಳ್ಳುವುದಕ್ಕೆ ಶುರು ಮಾಡಿದ್ದರು. ಜಗಳ ಹೊಡೆದಾಟಕ್ಕೆ ತಿರುಗಿ, ಅದು ವಿಕೋಪಕ್ಕೆ ತಲುಪಿ ಕೊನೆಗೆ ಒಬ್ಬರ ಹತ್ಯೆಯಲ್ಲಿ ಮುಗಿದು ಹೋಗಿದೆ.
ಹೌದು ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕಿನ ಒಣಚಲು ಗ್ರಾಮದ 53 ವರ್ಷದ ಅಣ್ಣಪ್ಪ ಅಲಿಯಾಸ್ ಧರ್ಮ, ತನ್ನ ತಮ್ಮ ಮಾಚಯ್ಯ ಅಲಿಯಾಸ್ ಪೃತ್ತು ಎಂಬಾತನಿಂದ ಭರ್ಬರವಾಗಿ ಹತ್ಯೆಯಾಗಿದ್ದಾನೆ. ಕುಗ್ರಾಮವಾದ ಹಾಗೂ ತೀರಾ ಕಾಡು ಪ್ರದೇಶದಲ್ಲಿರುವ ಒಣಚಲು ಗ್ರಾಮಕ್ಕೆ ತೆರಳುವುದೇ ದುಸ್ತರ. ಅಂತಹ ಕುಗ್ರಾಮದಲ್ಲಿ ತೀರಾ ಬಡತನದ ಕುಟುಂಬ ಇವರದು. ತನ್ನ ಅಣ್ಣನ ಹೆಂಡತಿಯೊಂದಿಗೆ ಬದುಕುತ್ತಿದ್ದ ಇವರಿಬ್ಬರು ಕಳೆದ ಐದು ವರ್ಷಗಳಿಂದಲೂ ಸಣ್ಣಪುಟ್ಟ ವಿಷಯಗಳಿಗೆ ಜಗಳವಾಡುತ್ತಲೇ ಇದ್ದರಂತೆ. ಆದರೂ ಒಂದೇ ಮನೆಯಲ್ಲಿ ಊಟ, ವಾಸ. ಹೀಗೆ ಇದ್ದವರು ಸೋಮವಾರ ಬೆಳಗ್ಗೆ ಹನ್ನೊಂದು ಗಂಟೆ ಸಮಯಕ್ಕೆ ಜಗಳವಾಡಿಕೊಂಡಿದ್ದಾರೆ. ಅದೂ ಕೂಡ ಎಣ್ಣೆಯ ವಿಷಯಕ್ಕೆ ಜಗಳವಾಡಿಕೊಂಡಿದ್ದಾರೆ ಎನ್ನಲಾಗಿದೆ.
ಕೊಡಗು: ಗುಂಡು ಹಾರಿಸಿ ನಿರ್ವಾಹಕನಿಗೆ ಕೊಲೆ ಬೆದರಿಕೆ, ಕೆಎಸ್ಆರ್‌ಟಿಸಿ ಚಾಲಕ ಅರೆಸ್ಟ್
undefined
ಈ ಜಗಳ ಒಂದಿಷ್ಟು ತೀವ್ರಗೊಂಡು ಕೊನೆಗೆ ಹೊಡೆದಾಟಕ್ಕೆ ತಿರುಗಿದೆ. ಈ ವೇಳೆ ತಮ್ಮ ಮಾಚಯ್ಯನಿಗೆ ಅಣ್ಣ ಅಪ್ಪಣ್ಣ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಇದರಿಂದ ಸಿಟ್ಟಿಗೆದ್ದ ಮಾಚಯ್ಯ ಮನೆಯೊಳಗೆ ಇದ್ದ ಜಮ್ಮಾ ಕೋವಿಯನ್ನು ತೆಗೆದುಕೊಂಡು ಬಂದವನೇ ಹಿಂದೆ-ಮುಂದೆ ನೋಡದೆ ಶೂಟ್ ಮಾಡಿದ್ದಾನೆ. ಹೊಟ್ಟೆ ಹಾಗೂ ಎದೆಯ ಭಾಗಕ್ಕೆ ಗುಂಡು ಹೊಕ್ಕಿದ್ದರಿಂದ ಅಪ್ಪಣ್ಣ ಮನೆ ಮುಂಭಾಗದಲ್ಲೇ ತೀವ್ರ ರಕ್ತ ಸ್ರಾವವಾಗಿ ರಕ್ತದ ಮಡುವಿನಲ್ಲೇ ಬಿದ್ದು ಮೃತಪಟ್ಟಿದ್ದಾನೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹೋದ ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಮತ್ತು ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಶವವನ್ನು ಮಡಿಕೇರಿ ಶವಗಾರಕ್ಕೆ ಸಾಗಿಸಿದ್ದಾರೆ. ಅತ್ತ ಎಣ್ಣೆ ವಿಷಯಕ್ಕೆ ಅಣ್ಣನ ಪ್ರಾಣವನ್ನೇ ತೆಗೆದ ಪಾಪಿ ಮಾಚಯ್ಯ ತಾನು ಶೂಟ್ ಮಾಡಿದ ಸಿಂಗಲ್ ಬ್ಯಾರಲ್ ಕೋವಿಯೊಂದಿಗೆ ಎಸ್ಕೇಪ್ ಆಗಿ ತಲೆ ಮರೆಸಿಕೊಂಡಿದ್ದಾನೆ. ಆರೋಪಿ ಮಾಚಯ್ಯನ ಅರೆಸ್ಟ್ ಮಾಡುವುದಕ್ಕಾಗಿ ಪೊಲೀಸರು ತಂಡ ರಚಿಸಿಕೊಂಡು ಹುಡುಕಾಟ ಶುರು ಮಾಡಿದ್ದಾರೆ. ಹತ್ಯೆಯನ್ನು ನೋಡಿದ ಗ್ರಾಮದ ಯುವಕ ನಂದನ್ ಯಾವುದೇ ಗಂಭೀರಕ್ಕೆ ಜಗಳವಾಗಿಲ್ಲ. ಬದಲಾಗಿ ಎಣ್ಣೆ ವಿಷಯಕ್ಕೆ ಇಬ್ಬರ ನಡುವೆ ಗಲಾಟೆ ಮಾಡಿಕೊಂಡು ಈ ರೀತಿ ಹತ್ಯೆ ಮಾಡಿದ್ದಾನೆ ಎಂದಿದ್ದಾರೆ.
ಕೊಡಗಿನಲ್ಲಿ KSRTC ಬಸ್ ಭೀಕರ ಅಪಘಾತ: 17 ಮಂದಿಗೆ ಗಾಯ
ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಹಲವು ವರ್ಷಗಳ ಹಿಂದೆಯೇ ಮನೆ ಬಿಟ್ಟು ಹೋಗಿದ್ದ ಮಾಚಯ್ಯ ಕಳೆದ ಐದು ವರ್ಷಗಳ ಹಿಂದೆಯಷ್ಟೇ ಗ್ರಾಮಕ್ಕೆ ಬಂದು ಇದೇ ಮನೆಯಲ್ಲಿಯೇ ನೆಲೆಸಿದ್ದ. ಐದು ವರ್ಷದಿಂದಲೂ ಸಣ್ಣಪುಟ್ಟ ವಿಷಯಗಳಿಗೆ ಜಗಳವಾಡಿಕೊಂಡಿರುವ ಬಗ್ಗೆ ಮಾಹಿತಿ ಇದೆ. ಆದರೆ ಆ ಗಲಾಟೆಗಳು ಯಾವುವು ಪೊಲೀಸ್ ಠಾಣೆ ಮೆಟ್ಟಿಲೇರುವಂತಹ ದೊಡ್ಡ ಗಲಾಟೆಗಳಾಗಿರಲಿಲ್ಲ. ಸೋಮವಾರ ಬೆಳಗ್ಗೆ ಮಾತ್ರ ಎಣ್ಣೆ ವಿಷಯಕ್ಕಾಗಿಯೇ ಗಲಾಟೆ ಮಾಡಿಕೊಂಡು ಹತ್ಯೆ ಮಾಡುವ ಹಂತಕ್ಕೆ ಹೋಗಿದೆ.
ಆರೋಪಿಯ ಬಂಧನಕ್ಕಾಗಿ ಹುಡುಕಾಟ ಶುರುವಾಗಿದ್ದು ಒಂದೆರಡು ದಿನಗಳಲ್ಲಿಯೇ ಆರೋಪಿಯನ್ನು ಬಂಧಿಸಲಾಗುವುದು ಎಂದಿದ್ದಾರೆ. ಏನೇ ಆಗಲಿ ಆಸ್ತಿಯೂ ಇಲ್ಲದೆ, ಸರಿಯಾದ ಒಂದು ಮನೆಯೂ ಇಲ್ಲದೇ ಕೂಲಿ, ನಾಲಿ ಮಾಡಿಕೊಂಡು ಬದುಕುತ್ತಿದ್ದ ಅಣ್ಣ, ತಮ್ಮಂದಿರು ಎಣ್ಣೆ ವಿಷಯಕ್ಕಾಗಿ ಹೊಡೆದಾಡಿಕೊಂಡು ಅಣ್ಣನ ಭರ್ಬರವಾಗಿ ಹತ್ಯೆಯಾಗಿರುವುದು ವಿಪರ್ಯಾಸವೇ ಸರಿ.