ಪತ್ನಿ ಜತೆ ಅನೈತಿಕ ಸಂಬಂಧ: ಸ್ನೇಹಿತನ ಕೊಂದು ಠಾಣೆಗೆ ಬಂದ..!

By Kannadaprabha NewsFirst Published Oct 12, 2022, 6:49 AM IST
Highlights

ಪತ್ನಿ ಜತೆಗೆ ಅನೈತಿಕ ಸಂಬಂಧ ಹೊಂದಿದ್ದಕ್ಕೆ ನೈಜೀರಿಯಾ ಪ್ರಜೆಯನ್ನು ಚುಚ್ಚಿ ಕೊಂದ ಅದೇ ದೇಶದ ಪ್ರಜೆ

ಬೆಂಗಳೂರು(ಅ.12):  ಪತ್ನಿ ಜತೆಗೆ ಅನೈತಿಕ ಸಂಬಂಧ ಹೊಂದಿದ್ದ ತನ್ನದೇ ದೇಶದ ಸ್ನೇಹಿತನನ್ನು ನೈಜೀರಿಯಾ ಪ್ರಜೆಯೊಬ್ಬ ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಅಮೃತಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕೊಡಿಗೇಹಳ್ಳಿ ನಿವಾಸಿ ಸೊಲೊಮಾನ್‌ (34) ಹತ್ಯೆಯಾದ ನೈಜಿರಿಯ ಪ್ರಜೆ. ಈ ಸಂಬಂಧ ಆತನ ಸ್ನೇಹಿತ ಒಬಿನೋ ವಿಕ್ಟರ್‌(35)ನನ್ನು ಪೊಲೀಸರು ಬಂಧಿಸಿದ್ದಾರೆ. ಅಮೃತಹಳ್ಳಿಯ ಮುನಿಕೆಂಪಣ್ಣ ಲೇಔಟ್‌ನಲ್ಲಿ ಭಾನುವಾರ ಸಂಜೆ ಈ ದುರ್ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನೈಜೀರಿಯಾ ಮೂಲದ ಆರೋಪಿ ಒಬಿನೊ ವಿಕ್ಟರ್‌ 2019ರಲ್ಲಿ ನೇಪಾಳದ ಮೂಲಕ ಅಕ್ರಮವಾಗಿ ಭಾರತಕ್ಕೆ ಬಂದಿದ್ದು, ನಕಲಿ ಪಾಸ್‌ಪೋರ್ಟ್‌ ಸಿದ್ಧಪಡಿಸಿಕೊಂಡಿದ್ದ. ಬಳಿಕ ಬೆಂಗಳೂರಿಗೆ ಬಂದು ಬಟ್ಟೆ ವ್ಯಾಪಾರ ನಡೆಸುತ್ತಿದ್ದ. ಈ ನಡುವೆ ನರ್ಸಿಂಗ್‌ ಕೆಲಸ ಮಾಡುತ್ತಿದ್ದ ಮೇಘಾಲಯ ಮೂಲದ ಜೆನ್ನಿ ಎಂಬಾಕೆಯ ಜತೆ ಸ್ನೇಹ ಬೆಳೆಸಿ ಬಳಿಕ ಪ್ರೀತಿಸಿ ಮದುವೆಯಾಗಿದ್ದರು. ದಂಪತಿಗೆ ನಾಲ್ಕು ವರ್ಷದ ಮಗುವಿದೆ.

ರೀಲ್‌ ಬೇರೆ..ರಿಯಲ್‌ ಲೈಫ್‌ ಬೇರೆ... ಸಿನಿಮಾ ಸ್ಫೂರ್ತಿಯಿಂದ ಕೊಲೆ ಮಾಡಿದ್ರೆ ಜೈಲು ಪಾಲೇ!

ಇದರ ನಡುವೆ ಕೊಡಿಗೇಹಳ್ಳಿಯಲ್ಲಿ ನೆಲೆಸಿದ್ದ ನೈಜೀರಿಯಾ ಮೂಲದ ಸೊಲೊಮಾನ್‌, ಒಬಿನೊ ವಿಕ್ಟರ್‌ಗೆ ಪರಿಚಯವಾಗಿದೆ. ಈ ವೇಳೆ ಸೊಲೊಮಾನ್‌, ತನ್ನ ಮನೆ ಎದುರು ಖಾಲಿಯಿದ್ದ ಮನೆಯೊಂದನ್ನು ವಿಕ್ಟರ್‌ಗೆ ಬಾಡಿಗೆಗೆ ಕೊಡಿಸಿದ್ದ. ಆಗ ಪರಿಚಯವಾಗಿದ್ದ ವಿಕ್ಟರ್‌ ಪತ್ನಿ ಜೆನ್ನಿ ಜತೆಗೆ ಸೊಲೊಮಾನ್‌ ಅನೈತಿಕ ಸಂಬಂಧ ಇರಿಸಿಕೊಂಡಿದ್ದ. ಬಳಿಕ ಕೊಡಿಗೇಹಳ್ಳಿಯಿಂದ ಅಮತಹಳ್ಳಿಯ ಮುನಿಕೆಂಪಣ್ಣ ಲೇಔಟ್‌ಗೆ ಮನೆ ಬದಲಿಸಿದ್ದ. ಆದರೂ ಜೆನ್ನಿ ಮತ್ತು ಸೊಲೊಮಾನ್‌ ಅನೈತಿಕ ಸಂಬಂಧ ಮುಂದುವರೆಸಿದ್ದರು ಎನ್ನಲಾಗಿದೆ.

ಈ ವಿಚಾರವಾಗಿ ಭಾನುವಾರ ಸಂಜೆ ವಿಕ್ಟರ್‌ ತನ್ನ ಪತ್ನಿಗೆ ಹೊಡೆದಿದ್ದಾನೆ. ಬೆಂಗಳೂರಿನಲ್ಲಿ ಇರುವುದ ಬೇಡ. ಮುಂಬೈಗೆ ಹೋಗೋಣವೆಂದು ಸರಕು-ಸರಂಜಾಮು ತುಂಬಿಕೊಂಡಿದ್ದಾನೆ. ಅಷ್ಟರಲ್ಲಿ ಜೆನ್ನಿ, ತನ್ನ ಪ್ರಿಯಕರನಿಗೆ ಕರೆ ಮಾಡಿದ್ದು, ಆತ ಸ್ವೀಕರಿಸಿಲ್ಲ. ಮನೆಯ ಲೊಕೇಶನ್‌ ಶೇರ್‌ ಮಾಡಿದ್ದಾಳೆ. ಅಲ್ಲಿಗೆ ಬಂದ ಸೊಲೊಮಾನ್‌ ಹಾಗೂ ವಿಕ್ಟರ್‌ ನಡುವೆ ಗಲಾಟೆವಾಗಿದೆ. ಈ ವೇಳೆ ವಿಕ್ಟರ್‌ ಚಾಕು ತೆಗೆದು ಸೊಲೊಮಾನ್‌ ಕುತ್ತಿಗೆ, ಹೊಟ್ಟೆ, ಎದೆ ಭಾಗಕ್ಕೆ ಹಲವು ಬಾರಿ ಚುಚ್ಚಿದ್ದಾನೆ. ಈ ವೇಳೆ ತೀವ್ರ ರಕ್ತಸ್ರಾವವಾಗಿ ತಪ್ಪಿಸಿಕೊಳ್ಳಲು ಮುಂದಾದ ಸೊಲೊಮಾನ್‌ ಮೆಟ್ಟಿಲ ಮೇಲಿಂದ ಬಿದ್ದು ಮೃತಪಟ್ಟಿದ್ದಾನೆ.

ಸ್ನೇಹಿತ ಸೊಲೊಮಾನ್‌ನನ್ನು ಹತ್ಯೆ ಮಾಡಿದ ವಿಕ್ಟರ್‌ ರಕ್ತ ಮೆತ್ತಿದ ಕೈಯಲ್ಲೇ ಅಮೃತಹಳ್ಳಿ ಪೊಲೀಸ್‌ ಠಾಣೆಗೆ ತೆರಳಿದ್ದಾನೆ. ಈ ವೇಳೆ ಪೊಲೀಸರಿಗೆ ಆತನ ಭಾಷೆ ಅರ್ಥವಾಗದೆ ಪ್ರಾಥಮಿಕ ಚಿಕಿತ್ಸೆ ಪಡೆದುಕೊಂಡು ಬರುವಂತೆ ಸೂಚಿಸಿದ್ದಾರೆ. ಆದರೆ, ಆರೋಪಿ ವಿಕ್ಟರ್‌ ಮತ್ತೆ ಮನೆಗೆ ಹೋಗಿದ್ದಾನೆ. ಅಷ್ಟರಲ್ಲಿ ಸ್ಥಳೀಯರು ನೈಜೀರಿಯಾ ಪ್ರಜೆ ಕೊಲೆ ಬಗ್ಗೆ ಪೊಲೀಸ್‌ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಪರಿಶೀಲನೆ ಮಾಡಿದಾಗ ಆರೋಪಿ ವಿಕ್ಟರ್‌ ಅದೇ ಮನೆಯಲ್ಲಿ ಪತ್ತೆಯಾಗಿದ್ದಾನೆ. ಈ ವೇಳೆ ಆತನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಸ್ನೇಹಿತ ಸೊಲೊಮಾನ್‌ ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ.
 

click me!