ಏ.1ರಿಂದ ಜೆಟ್‌ ಏರ್‌ವೇಸ್‌ ಹಾರಾಟ ಬಂದ್‌?

By Web DeskFirst Published Mar 20, 2019, 8:04 AM IST
Highlights

ಏಪ್ರಿಲ್ 1 ರಿಂದ ಜೆಟ್ ಏರ್ವೇಸ್ ವಿಮಾನ ಸಂಚಾರ ಸ್ತಬ್ಧವಾಗಲಿದೆ. ತೀವ್ರ ಆರ್ಥಿಕ ಸಂಕಷ್ಟ ತಲೆದೋರಿದ್ದು, ವೇತನ ಪಾವತಿ ಮಾಡದ ಹಿನ್ನೆಲೆಯಲ್ಲಿ ಪೈಲಟ್ ಗಳು ಮುಷ್ಕರ ಹೂಡಲು ತೀರ್ಮಾನಿಸಿದ್ದು ಈ ನಿಟ್ಟಿನಲ್ಲಿ ಹಾರಾಟ ನಿಲ್ಲಲಿದೆ. 

ನವದೆಹಲಿ :  ದೇಶದ ಪ್ರತಿಷ್ಠಿತ ವಿಮಾನಯಾನ ಸಂಸ್ಥೆ ಜೆಟ್‌ ಏರ್‌ವೇಸ್‌ನ ಆರ್ಥಿಕ ಪರಿಸ್ಥಿತಿ ಮತ್ತಷ್ಟುಬಿಗಡಾಯಿಸಿದ್ದು, ಮಾ.31ರೊಳಗೆ ವೇತನ ಪಾವತಿ ಮಾಡದೇ ಇದ್ದಲ್ಲಿ. ಏ.1ರಿಂದ ಸೇವೆಗೆ ಗೈರಾಗುವುದಾಗಿ 1000ಕ್ಕೂ ಹೆಚ್ಚು ಪೈಲಟ್‌ಗಳು ಎಚ್ಚರಿಸಿದ್ದಾರೆ. ಮತ್ತೊಂದೆಡೆ ‘ಸಂಬಳವಿಲ್ಲದೆ ನಾವು ಮಾನಸಿಕ ಸಂಕಷ್ಟಕ್ಕೆ ಸಿಲುಕಿದ್ದೇವೆ. ಇದರಿಂದಾಗಿ ಜೆಟ್‌ ಏರ್‌ವೇಸ್‌ನ ವಿಮಾನದ ಪ್ರಯಾಣಿಕರ ಸುರಕ್ಷತೆಗೂ ಸಮಸ್ಯೆಯಾಗಬಹುದು’ ಎಂದು ಜೆಟ್‌ನ ತಂತ್ರಜ್ಞರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಎಚ್ಚರಿಸಿದ್ದಾರೆ. ಇದರೊಂದಿಗೆ ಈಗಾಗಲೇ 119 ವಿಮಾನಗಳ ಪೈಕಿ ಕೇವಲ 41 ವಿಮಾನಗಳ ಸಂಚಾರ ಮಾತ್ರ ನಡೆಸುತ್ತಿರುವ ನರೇಶ್‌ ಗೋಯೆಲ್‌ ಒಡೆತನದ ವಿಮಾನ ಸಂಸ್ಥೆ ಮತ್ತೊಂದು ದೊಡ್ಡ ಒತ್ತಡಕ್ಕೆ ಸಿಕ್ಕಿಬಿದ್ದಿದೆ.

ಈ ನಡುವೆ ವಿಜಯ್‌ ಮಲ್ಯ ಒಡೆತನದ ಕಿಂಗ್‌ಫಿಶರ್‌ ಏರ್‌ಲೈನ್ಸ್‌ಗೆ ಆದ ಗತಿ, ಜೆಟ್‌ಗೂ ಬಾರದೇ ಇರಲಿ ಎಂದು ಎಚ್ಚರಿಕೆ ವಹಿಸಿರುವ ಕೇಂದ್ರ ಸರ್ಕಾರ, ಜೆಟ್‌ನ ಆಡಳಿತ ಮಂಡಳಿಯೊಂದಿಗೆ ಸಮಾಲೋಚನೆ ನಡೆಸುವಂತೆ ನಾಗರಿಕ ವಿಮಾನಯಾನ ನಿರ್ದೇಶನಾಲಕ್ಕೆ ಸೂಚಿಸಿದೆ. ಜೊತೆಗೆ ಜೆಟ್‌ ಏರ್‌ವೇಸ್‌ಗೆ ಹೊಸ ಮಾಲೀಕರು ಸಿಗುವವರೆಗೂ, ಅದಕ್ಕೆ ಅಗತ್ಯ ಹಣಕಾಸಿನ ನೆರವು ನೀಡುವಂತೆ ಎಸ್‌ಬಿಐ ನೇತೃತ್ವದ ಸರ್ಕಾರಿ ವಲಯದ ಕೆಲವು ಬ್ಯಾಂಕ್‌ಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ.

ಒಂದು ವೇಳೆ, ಬ್ಯಾಂಕ್‌ಗಳು ತಕ್ಷಣಕ್ಕೆ ಜೆಟ್‌ಗೆ ಹಣಕಾಸಿನ ನೆರವು ನೀಡಿದರೆ, ವಿಮಾನಯಾನ ಕಂಪನಿ ಉಳಿಯಲಿದೆ. ಒಂದು ವೇಳೆ ನೆರವು ನೀಡದೇ ಇದಲ್ಲಿ, ಅದು ಕೂಡಾ ಕಿಂಗ್‌ಫಿಶರ ಹಾದಿ ಹಿಡಿಯುವ ಸಾಧ್ಯತೆ ಹೆಚ್ಚು ಎನ್ನಲಾಗಿದೆ.

3 ತಿಂಗಳಿಂದ ವೇತನ ಇಲ್ಲ:

ಜೆಟ್‌ ಏರ್‌ವೇಸ್‌ ತನ್ನ ಎಂಜಿನಿಯರ್‌ಗಳು, ಪೈಲಟ್‌ಗಳು ಹಾಗೂ ಹಿರಿಯ ಅಧಿಕಾರಿಗಳಿಗೆ 3 ತಿಂಗಳಿನಿಂದ ವೇತನ ಪಾವತಿಸಿಲ್ಲ ಎಂಬ ಸಂಗತಿ ಬೆಳಕಿಗೆ ಬಂದಿದೆ. ಈ ಕುರಿತು ಸಂಸ್ಥೆಯ ಎಂಜಿನಿಯರ್‌ಗಳು ಕೇಂದ್ರ ಸರ್ಕಾರ, ಪ್ರಧಾನಿ ಹಾಗೂ ವಿಮಾನಯಾನ ಸಚಿವರಿಗೆ ಪತ್ರ ಬರೆದಿದ್ದು, ‘ಸಂಬಳವಿಲ್ಲದೆ ನಾವು ಮಾನಸಿಕ ಸಂಕಷ್ಟಕ್ಕೆ ಸಿಲುಕಿದ್ದೇವೆ. ಇದರಿಂದಾಗಿ ಜೆಟ್‌ ಏರ್‌ವೇಸ್‌ನ ವಿಮಾನದ ಪ್ರಯಾಣಿಕರ ಸುರಕ್ಷತೆಗೂ ಸಮಸ್ಯೆಯಾಗಬಹುದು. ಹೀಗಾಗಿ ಕೂಡಲೇ ವೇತನ ಕೊಡಿಸುವಂತೆ ಆಗ್ರಹಿಸಿದ್ದಾರೆ. ಜೊತೆಗೆ, ತಮಗೆ ಆಗುತ್ತಿರುವ ಮಾನಸಿಕ ಹಾಗೂ ಕೌಟುಂಬಿಕ ನಿರ್ವಹಣೆಯ ಸಮಸ್ಯೆಯಿಂದ ಪ್ರಯಾಣಿಕರ ಸುರಕ್ಷತೆಯೂ ಅಪಾಯಕ್ಕೆ ಸಿಲುಕಿದೆ ಎಂದು ಎಚ್ಚರಿಸಿದ್ದಾರೆ.

ಸಂಚಾರ ಬಂದ್‌: ಈ ನಡುವೆ ವೇತನ ಬಾಕಿ ಪಾವತಿಗೆ ಮಾ.31ರ ಗಡುವು ನೀಡಿರುವ ಜೆಟ್‌ನ 1000ಕ್ಕೂ ಹೆಚ್ಚು ಪೈಲಟ್‌ಗಳು, ವೇತನ ಪಾವತಿ ಆಗದೇ ಇದ್ದಲ್ಲಿ ಏ.1ರಿಂದ ವಿಮಾನಗಳ ಹಾರಾಟ ನಡೆಸುವುದಿಲ್ಲ ಎಂದು ಎಚ್ಚರಿಸಿದ್ದಾರೆ. ಹೀಗಾದಲ್ಲಿ ಈಗಾಗಲೇ ಟಿಕೆಟ್‌ ಕಾದಿರಿಸಿರುವ ಪ್ರಯಾಣಿಕರು ಸಂಕಷ್ಟಎದುರಿಸಬೇಕಾದ ಜೊತೆಗೆ, ಸಂಸ್ಥೆಯೂ ನಾನಾ ರೀತಿಯ ಕಾನೂನು ಕ್ರಮ ಎದುರಿಸಬೇಕಾಗಿ ಬರುವ ಭೀತಿ ಎದುರಾಗಿದೆ.

ಬ್ಯಾಂಕ್‌ಗಳಿಂದ ಖರೀದಿ?: ಈ ನಡುವೆ ಸುಮಾರು 8200 ಕೋಟಿ ರು. ಸಾಲದಲ್ಲಿರುವ ಜೆಟ್‌ ಏರ್‌ವೇಸನ್ನು ಉಳಿಸಲು ಕೇಂದ್ರ ಸರ್ಕಾರ ಹೊಸ ಉಪಾಯವೊಂದನ್ನು ಹುಡುಕಿದೆ ಎನ್ನಲಾಗಿದ್ದು, ಸಾಲ ನೀಡಿದ ಎಸ್‌ಬಿಐ ನೇತೃತ್ವದ ಬ್ಯಾಂಕುಗಳ ಒಕ್ಕೂಟಕ್ಕೇ ಜೆಟ್‌ ಏರ್‌ವೇಸ್‌ನ ಷೇರು ಖರೀದಿಸಲು ಸೂಚಿಸಿದೆ ಎಂದು ಮೂಲಗಳು ಹೇಳಿವೆ. ಲೋಕಸಭೆ ಚುನಾವಣೆಗೂ ಮುನ್ನ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ನಷ್ಟವಾಗುವುದನ್ನು ತಪ್ಪಿಸಲು ಕೇಂದ್ರ ಸರ್ಕಾರ ಈ ನಿಲುವಿಗೆ ಬಂದಿದೆ. ಜೆಟ್‌ ಏರ್‌ವೇಸ್‌ ದಿವಾಳಿಯಾಗುವುದನ್ನು ತಡೆಯಲು ಎಸ್‌ಬಿಐ, ಪಿಎನ್‌ಬಿ ಮುಂತಾದ ಬ್ಯಾಂಕುಗಳಿಗೆ ಹಾಗೂ ನ್ಯಾಷನಲ್‌ ಇನ್‌ವೆಸ್ಟ್‌ಮೆಂಟ್‌ ಇನ್‌ಫ್ರಾಸ್ಟ್ರಕ್ಚರ್‌ ಫಂಡ್‌ (ಎನ್‌ಐಐಎಫ್‌)ಗೆ ನೀವು ಜೆಟ್‌ ಏರ್‌ವೇಸ್‌ಗೆ ನೀಡಿದ ಸಾಲವನ್ನು ಷೇರಾಗಿ ಪರಿವರ್ತಿಸಿಕೊಳ್ಳಿ. ನಂತರ ವಿಮಾನಯಾನ ಸಂಸ್ಥೆಯ ಪರಿಸ್ಥಿತಿ ಸುಧಾರಿಸಿದ ಮೇಲೆ ಆ ಷೇರುಗಳನ್ನು ಮಾರಾಟ ಮಾಡಿ ನಿಮ್ಮ ಸಾಲ ಮರುಪಾವತಿ ಮಾಡಿಸಿಕೊಳ್ಳಬಹುದು ಎಂದು ಹಣಕಾಸು ಸಚಿವಾಲಯ ಸೂಚಿಸಿದೆ ಎನ್ನಲಾಗಿದೆ.


119: ಜೆಟ್‌ ಏರ್‌ವೇಸ್‌ ಹೊಂದಿರುವ ವಿಮಾನಗಳು

41: ಹಾಲಿ ಸಂಚಾರ ನಡೆಸುತ್ತಿರುವ ವಿಮಾನಗಳು

984: ಜೆಟ್‌ ವಿಮಾನಗಳ ನಿತ್ಯ ಹಾರಾಟದ ಸಂಖ್ಯೆ

8200: ಜೆಟ್‌ ಏರ್‌ವೇಸ್‌ನ ಒಟ್ಟು ಸಾಲದ ಮೊತ್ತ

23000: ಜೆಟ್‌ ಏರ್‌ವೇಸ್‌ನ ಒಟ್ಟು ಸಿಬ್ಬಂದಿ ಸಂಖ್ಯೆ

click me!