ಸ್ಟಾರ್ಟ್‌ಅಪ್‌ ಪ್ರಾರಂಭಿಸಬೇಕಾ? ಹಾಗಾದ್ರೆ ನೀವು ಈ ವಿಷಯ ತಿಳಿದುಕೊಳ್ಳಿ

By Suvarna NewsFirst Published Sep 28, 2020, 7:53 PM IST
Highlights

ಸ್ಟಾರ್ಟ್‌ಅಪ್‌ ಪ್ರಾರಂಭಿಸಬೇಕು ಎಂಬ ಕನಸೇನೋ ಇದೆ. ಆದ್ರೆ ಅದು ನಮ್ಮಂತಹ ಮಧ್ಯಮ ವರ್ಗದವರ ಕೈಯಿಂದ ಆಗೋ ಮಾತಲ್ಲ ಎಂಬ ಯೋಚನೆ ನಿಮ್ಮ ತಲೆಯಲ್ಲಿದ್ರೆ ಇಂದೇ ತೆಗೆದು ಹಾಕಿ. ನಿಮ್ಮ ಸ್ಟಾರ್ಟ್‌ಅಪ್‌ ಕನಸಿಗೆ ಕೇಂದ್ರ ಸರ್ಕಾರದ ಸ್ಟಾರ್ಟ್‌ಅಪ್‌ ಇಂಡಿಯಾ ಯೋಜನೆ ನೀರೆರೆಯುತ್ತದೆ. ಹಾಗಾದ್ರೆ ಈ ಯೋಜನೆಯಿಂದ ಏನೆಲ್ಲ ಪ್ರಯೋಜನ ಪಡೆಯಬಹುದು?

ಲಕ್ಷಗಟ್ಟಲೆ ಸಂಬಳ ನೀಡೋ ಅದೆಷ್ಟೇ ಉನ್ನತ ಹುದ್ದೆಯಿದ್ರೂ ಯಾರದ್ದೋ ಕೈ ಕೆಳಗೆ ಕೆಲಸ ಮಾಡೋದು ಅಂದ್ರೆ ಕೆಲವರಿಗೆ ಏನೋ ಕಸಿವಿಸಿ. ತನ್ನದೇ ಸ್ವಂತ ಉದ್ಯಮವಿರಬೇಕು,ನಾನೇ ಅದರ ಬಾಸ್‌ ಆಗಿರಬೇಕು. ಹೇಳೋರು,ಕೇಳೋರು ಯಾರೂ ಇರಬಾರದು ಎಂಬುದು ಬಹುತೇಕರ ಬಯಕೆ.ಇದೇ ಕಾರಣಕ್ಕೆ ಇತ್ತೀಚಿನ ದಿನಗಳಲ್ಲಿಭಾರತದ ಯುವಜನತೆ ಸ್ವಂತ ಉದ್ಯಮದತ್ತ ಒಲವು ತೋರುತ್ತಿದ್ದಾರೆ. ಪರಿಣಾಮ ಭಾರತದಲ್ಲಿ ಸ್ಟಾರ್ಟ್‌ಅಪ್‌ಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿವೆ.ಅದ್ರಲ್ಲೂ ನಮ್ಮ ಬೆಂಗಳೂರು ಅತಿ ಹೆಚ್ಚು ನವೋದ್ಯಮಗಳಿಗೆ ನೆಚ್ಚಿನ ತಾಣವಾಗಿದ್ದು,ಭಾರತದ ಸ್ಟಾರ್ಟ್‌ ಅಪ್‌ ಹಬ್‌ ಎಂಬ ಖ್ಯಾತಿಯನ್ನು ಕೂಡ ಗಳಿಸಿದೆ. ಭಾರತದಲ್ಲಿ ಸ್ಟಾರ್ಟ್‌ಅಪ್‌ಗಳ ಸಂಖ್ಯೆ ಗಣನೀಯ ಏರಿಕೆ ಕಾಣಲು ಕೇಂದ್ರ ಸರ್ಕಾರ 2016ರಲ್ಲಿ ಜಾರಿಗೆ ತಂದ ಸ್ಟಾರ್ಟ್‌ಅಪ್‌ ಇಂಡಿಯಾ ಯೋಜನೆ ಕೂಡ ಕಾರಣ. ನವೋದ್ಯಮಿಗಳಿಗೆ ಬೆಂಬಲ, ಉದ್ಯಮ ಪ್ರಾರಂಭಿಸಲು ಸೂಕ್ತ ಮೂಲಸೌಕರ್ಯ ಕಲ್ಪಿಸೋ ಜೊತೆ ಭಾರತದಲ್ಲಿ ಉದ್ಯೋಗ ಸೃಷ್ಟಿಗೆ ಉತ್ತೇಜನ ನೀಡೋದು ಈ ಯೋಜನೆಯ ಮೂಲ ಉದ್ದೇಶ. ಆವಿಷ್ಕಾರ ಹಾಗೂ ವಿನೂತನ ಯೋಚನೆಗಳ ಮೂಲಕ ಬೆಳವಣಿಗೆ ಹೊಂದಲು ಈ ಯೋಜನೆ ಮುಖಾಂತರ ಸ್ಟಾರ್ಟ್‌ಅಪ್‌ಗಳಿಗೆ ಸರ್ಕಾರ ನೆರವು ನೀಡುತ್ತಿದೆ.

ರಿಲಯನ್ಸ್‌ನಲ್ಲಿ ಕೆಕೆಆರ್‌ 5500 ಕೋಟಿ ರು. ಹೂಡಿಕೆ

ಸ್ಟಾರ್ಟ್‌ಅಪ್‌ ಅಂದ್ರೇನು?
ಭಾರತದಲ್ಲಿ ಕೇಂದ್ರ ಸ್ಥಾನ ಹೊಂದಿದ್ದು,ಸ್ಥಾಪನೆಗೊಂಡು 10ವರ್ಷ ಪೂರ್ಣಗೊಳಿಸದ ಹಾಗೂ 100ಕೋಟಿ ರೂ.ಗಿಂತ ಕಡಿಮೆ ವಾರ್ಷಿಕ ವಹಿವಾಟು ನಡೆಸೋ ಸಂಸ್ಥೆಯನ್ನು ಸ್ಟಾರ್ಟ್‌ಅಪ್‌ ಎಂದು ಪರಿಗಣಿಸಲಾಗುತ್ತದೆ. ಹೊಸ ಉತ್ಪನ್ನ ಅಥವಾ ಸೇವೆ ಅನ್ವೇಷಣೆ,ಅಭಿವೃದ್ಧಿ ಅಥವಾ ಪ್ರಗತಿಯ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಸಂಸ್ಥೆಗಳಿಗೆ ಹೆಚ್ಚಿನ ಉತ್ತೇಜನ ನೀಡಲಾಗುತ್ತಿದೆ. ಉದ್ಯೋಗ ಸೃಷ್ಟಿಸೋ ಜೊತೆ ಉತ್ತಮ ಆದಾಯ ಹುಟ್ಟು ಹಾಕೋ ಸಾಮರ್ಥ್ಯ ಹೊಂದಿರೋ ಸಂಸ್ಥೆಗಳನ್ನು ಕೂಡ ಸ್ಟಾರ್ಟ್‌ಅಪ್‌ ಪಟ್ಟಿಯಲ್ಲಿ ಸೇರಿಸಲಾಗಿದೆ. ಈಗಾಗಲೇ ಇರೋ ಕಂಪನಿ ಅಥವಾ ಸಂಸ್ಥೆಯನ್ನು ವಿಭಜಿಸಿ ಹೊಸ ಸಂಸ್ಥೆ ಹುಟ್ಟು ಹಾಕಿದ್ರೆ ಅಥವಾ ಇರುವ ಸಂಸ್ಥೆಗೆ ಹೊಸ ರೂಪ ನೀಡಿದರೆ ಅಂಥವನ್ನು ಸರ್ಕಾರ ಸ್ಟಾರ್ಟ್‌ಅಪ್‌ ಎಂದು ಪರಿಗಣಿಸೋದಿಲ್ಲ. ಭಾರತೀಯ ಉದ್ಯಮಿಗಳಿಗೆ ಮೊಬೈಲ್‌ ಆಪ್‌ ಸ್ಟಾರ್ಟ್‌ಅಪ್‌ಗಳನ್ನು ಪ್ರಾರಂಭಿಸಲು ಐ-ಮೇಡ್‌ ಎಂಬ ಕಾರ್ಯಕ್ರಮವನ್ನು ಕೂಡ ಸರ್ಕಾರ ಪ್ರಾರಂಭಿಸಿದೆ. ಅಲ್ಲದೆ, ಮುದ್ರ ಬ್ಯಾಂಕ್‌ ಮೂಲಕ ಆರ್ಥಿಕವಾಗಿ ಹಿಂದುಳಿದ ವರ್ಗದ ಜನರಿಗೆ ಸ್ಟಾರ್ಟ್‌ಅಪ್‌ ಪ್ರಾರಂಭಿಸಲು ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯವನ್ನು ಕೂಡ ನೀಡುತ್ತಿದೆ. 

ಸಿಇಒ ಸ್ಯಾಲರಿ ಎಷ್ಟಿರಬೇಕು? ಇದು ನಾರಾಯಣ ಮೂರ್ತಿ ಕೊಟ್ಟ ಲೆಕ್ಕಾಚಾರ!

ಏನೆಲ್ಲ ಪ್ರಯೋಜನ ಪಡೆಯಬಹುದು?
ಸ್ಟಾರ್ಟ್‌ಅಪ್‌ ಇಂಡಿಯಾ ಯೋಜನೆಯಡಿಯಲ್ಲಿ ಸ್ಟಾರ್ಟ್‌ಅಪ್‌ಗಳು ಸರ್ಕಾರದಿಂದ ಅನೇಕ ನೆರವುಗಳನ್ನು ಪಡೆಯಬಹುದು. ಆದ್ರೆ ಈ ಎಲ್ಲ ಪ್ರಯೋಜನಗಳನ್ನು ಪಡೆಯಲು ಆ ಸಂಸ್ಥೆ ಅಥವಾ ಕಂಪನಿ ಕೈಗಾರಿಕೆ ಹಾಗೂ ಆಂತರಿಕ ವ್ಯಾಪಾರ ಸಂವರ್ಧನ ಇಲಾಖೆ (ಡಿಪಿಐ-ಐಟಿ)ಯಿಂದ ಸ್ಟಾರ್ಟ್‌ಅಪ್‌ ಎಂದು ಗುರುತಿಸಲ್ಪಟ್ಟಿರಬೇಕು.
- ಆರು ಕಾರ್ಮಿಕ ಹಾಗೂ ಮೂರು ಪರಿಸರ ಕಾನೂನುಗಳ ಅನುಸರಣೆ ಬಗ್ಗೆ ಸ್ಟಾರ್ಟ್‌ಅಪ್‌ಗಳೇ ಸ್ವ ದೃಢೀಕರಣ ಕೊಟ್ಟುಕೊಳ್ಳಬಹುದಾಗಿದೆ. ಹೀಗಾಗಿ ಇದಕ್ಕೆ ಸಂಬಂಧಿಸಿದ ಯಾವುದೇ ಇಲಾಖೆಯನ್ನು ಸಂಪರ್ಕಿಸಬೇಕಾದ ಅಗತ್ಯವಿಲ್ಲ.ಆದ್ರೆ ಈ ಸ್ವದೃಢೀಕರಣವನ್ನು ಸ್ಟಾರ್ಟ್‌ಅಪ್‌ ಪ್ರಾರಂಭಗೊಂಡ 5ವರ್ಷಗಳ ತನಕ ಮಾತ್ರ ಮಾಡಿಕೊಳ್ಳಲು ಅವಕಾಶವಿದೆ. ಆ ಬಳಿಕ ನಿಗದಿತ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಸ್ಟಾರ್ಟ್‌ಅಪ್‌ಗಳ ಮೇಲಿನ ನಿಯಂತ್ರಣವನ್ನು ತಗ್ಗಿಸೋ ಉದ್ದೇಶದಿಂದ ಸರ್ಕಾರ ಈ ಅನುಕೂಲವನ್ನು ಕಲ್ಪಿಸಿದೆ. ಉದ್ಯಮಿಗಳಿಗೆ ವಿವಿಧ ಇಲಾಖೆಗಳಿಂದ ಅನುಮೋದನೆ ಪಡೆದುಕೊಳ್ಳೋ ಕೆಲಸ ತಗ್ಗಿಸಿ ಉದ್ಯಮದ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸಲು ನೆರವಾಗೋ ಉದ್ದೇಶದಿಂದ ಈ ಸಡಿಲಿಕೆ ಮಾಡಲಾಗಿದೆ. 
-ಇಂಟರ್‌ ಮಿನಿಸ್ಟ್ರಿಯಲ್‌ ಬೋರ್ಡ್‌ ಪ್ರಮಾಣಪತ್ರ ಹೊಂದಿರೋ ಸ್ಟಾರ್ಟ್‌ಅಪ್‌ಗಳು ಗಳಿಸೋ ಲಾಭಕ್ಕೆ ಸತತ ಮೂರು ವರ್ಷಗಳ ತನಕ  ಆದಾಯ ತೆರಿಗೆ ವಿನಾಯ್ತಿ ನೀಡಲಾಗಿದೆ. ಉದ್ಯಮದ ಬೆಳವಣಿಗೆಯನ್ನು ಪ್ರೋತ್ಸಾಹಿಸೋ ನಿಟ್ಟಿನಲ್ಲಿ ಇಂಥ ವಿನಾಯ್ತಿ ನೀಡಲಾಗಿದೆ. 

ಅಂತಿಂಥ ಅಣಬೆಯಲ್ಲಈ ಗುಚ್ಚಿ,ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!

- ಇಂಟರ್‌ ಮಿನಿಸ್ಟ್ರಿಯಲ್‌ ಬೋರ್ಡ್‌ ಪ್ರಮಾಣಪತ್ರ ಹೊಂದಿರೋ ಸ್ಟಾರ್ಟ್‌ಅಪ್‌ಗಳು ಮಾರುಕಟ್ಟೆ ಮೌಲ್ಯಕ್ಕಿಂತ ಹೆಚ್ಚಿನ ಬೆಲೆಗೆ ಶೇರ್‌ಗಳನ್ನು ಮಾರಾಟ ಮಾಡಿ ಗಳಿಸೋ 10ಕೋಟಿ ರೂ. ತನಕದ ಆದಾಯಕ್ಕೆ ಯಾವುದೇ ತೆರಿಗೆ ಇರೋದಿಲ್ಲ.
-ಸ್ಟಾರ್ಟ್‌ಅಪ್‌ ಪ್ರಾರಂಭಿಸಿ ತೀವ್ರ ನಷ್ಟವಾದ್ರೆ ಆ ಸಂಸ್ಥೆಯನ್ನು ಮುಚ್ಚೋದು ಇತರ ಕಂಪನಿಗಳಿಗಿಂತ ಸುಲಭ. ಇತರ ಕಂಪನಿಗಳನ್ನು ಮುಚ್ಚಲು ಕನಿಷ್ಠ 180 ದಿನಗಳು ಅಗತ್ಯ. ಆದ್ರೆ ಸ್ಟಾರ್ಟ್‌ಅಪ್‌ಗಳನ್ನು 90 ದಿನಗಳಲ್ಲೇ ಮುಚ್ಚಬಹುದು. ಅಲ್ಲದೆ, ಇಂಥ ಸ್ಟಾರ್ಟ್‌ಅಪ್‌  ಆಸ್ತಿಗಳನ್ನು ಮಾರಾಟ ಮಾಡಿ ಅದ್ರಿಂದ ಬಂದ ಹಣವನ್ನು ಸಾಲ ನೀಡಿದವರಿಗೆ ಪಾವತಿಸಲು ಒಬ್ಬ ಅಧಿಕಾರಿಯನ್ನು ಕೂಡ ನೇಮಿಸಲಾಗುತ್ತದೆ. ಈ ಎಲ್ಲ ಪ್ರಕ್ರಿಯೆಗಳು ಸ್ಟಾರ್ಟ್‌ಅಪ್‌ ನಿಲ್ಲಿಸೋ ಕುರಿತು ಅರ್ಜಿ ಸಲ್ಲಿಸಿದ ಆರು ತಿಂಗಳೊಳಗೆ ಪೂರ್ಣಗೊಳಿಸಲಾಗುತ್ತದೆ. 
-ಸ್ಟಾರ್ಟ್‌ಅಪ್‌ ಪೇಟೆಂಟ್‌ ಅರ್ಜಿಯ ಕ್ಷಿಪ್ರ ವಿಲೇವಾರಿ ಹಾಗೂ ಬೌದ್ಧಿಕ ಆಸ್ತಿ ಹಕ್ಕುಗಳ ರಕ್ಷಣೆಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುತ್ತದೆ.
- ವಿನೂತನ ಆವಿಷ್ಕಾರಗಳಲ್ಲಿ ತೊಡಗಿರೋ ಸ್ಟಾರ್ಟ್‌ಅಪ್‌ಗಳ ಅಭಿವೃದ್ಧಿ ಹಾಗೂ ಬೆಳವಣಿಗೆಗಾಗಿ ಕೇಂದ್ರ ಸರ್ಕಾರ 10ಸಾವಿರ ಕೋಟಿ ರೂ. ಹಣವನ್ನು ಮೀಸಲಿಟ್ಟಿದೆ. ಭಾರತೀಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್‌ (ಎಸ್‌ಐಡಿಬಿಐ) ಈ ಹಣವನ್ನು ನಿರ್ವಹಣೆ ಮಾಡುತ್ತಿದೆ.  

click me!