ರಥಯಾತ್ರೆ- ರಥದ ಹಗ್ಗ ಮುಟ್ಟಿದರೆ ಮುಕ್ತಿ!

By Web DeskFirst Published Jul 22, 2019, 2:42 PM IST
Highlights

ಪುರಿ ಜಗನ್ನಾಥನ ರಥಯಾತ್ರೆ ಎಂದರೆ ದೇಶವಾಸಿಗಳಿಗೆ ಹಬ್ಬ. ಲಕ್ಷಾಂತರ ಜನರು ರಥದ ಮೇಲೆ ಕುಳಿತು ಠೀವಿಯಿಂದ ಚಲಿಸುವ ಜಗನ್ನಾಥನನ್ನು ಕಣ್ತುಂಬಿಕೊಳ್ಳಲೆಂದೇ ಪುರಿಗೆ ಹೋಗುವುದುಂಟು. ಈ ಬಾರಿ ಜುಲೈ 4ರಿಂದ 15ರವರೆಗೆ ಜಗನ್ನಾಥನ ರಥಯಾತ್ರೆ ಸಾಂಗವಾಗಿ ನೆರವೇರಿತು.
 

ಪ್ರತಿ ವರ್ಷ ಆಶಾಢ ಬಂತೆಂದರೆ ಒರಿಸ್ಸಾದ ಪುರಿ ಊರಿಗೂರೇ ರಥಯಾತ್ರೆಯ ಸಂಭ್ರಮದಲ್ಲಿ ಮಿಂದೇಳುತ್ತದೆ. ಶುಕ್ಲಪಕ್ಷದ ಎರಡನೇ ದಿನ ಆರಂಭವಾಗುವ ಈ ಹಬ್ಬಕ್ಕೆ ಪುರಿ ಸಿಂಗಾರಗೊಂಡ ಮಧುಮಗಳಂತೆ ತೋರುತ್ತದೆ. ದೇಶಾದ್ಯಂತದ ಲಕ್ಷಾಂತರ ಭಕ್ತರು ತಮ್ಮ ಪ್ರೀತಿಯ ಜಗನ್ನಾಥ ರಥವೇರಿ ಸಾಗುವುದನ್ನು ನೋಡಲು ಸಾಗರೋಪಾದಿಯಲ್ಲಿ ಪುರಿಗೆ ಆಗಮಿಸುತ್ತಾರೆ. ಭಾರತದ ಅತಿ ಪುರಾತನ ಹಾಗೂ ಅತಿ ದೊಡ್ಡದಾದ ಪುರಿ ಜಗನ್ನಾಥನ ರಥಯಾತ್ರೆಯ ವಿಶೇಷಗಳೇನು ಗೊತ್ತಾ? ಇಲ್ಲಿ ದೇವರ ಮೂರ್ತಿಗಳನ್ನು ಆಗಾಗ ಬದಲಾಯಿಸುವ ವಿಷಯ ತಿಳಿದಿದೆಯೇ? ರಥಯಾತ್ರೆಯಲ್ಲಿ ರಥದ ಹಗ್ಗವನ್ನು ಮುಟ್ಟಲೇಬೇಕು.

ಏಕೆ? 

Latest Videos

ಜಗನ್ನಾಥನು ಅಣ್ಣ ಬಾಲಭದ್ರ ಹಾಗೂ ತಂಗಿ ಸುಭದ್ರಾ ಜೊತೆಗೂಡಿ ತಾನು ಹುಟ್ಟಿದ ಸ್ಥಳವಾದ ಗುಂಡೀಚಾ ದೇಗುಲಕ್ಕೆ ಹೋಗುವ ಸಡಗರವೇ ಈ ರಥಯಾತ್ರೆ. ಈ ಮೂವರೂ ದೊಡ್ಡದಾದ ಮರದ ಮಹಡಿ ರಥವೇರಿ ಸುಮಾರು 3 ಕಿ.ಮೀ. ದೂರದ ಗುಂಡೀಚಾ ದೇವಾಲಯಕ್ಕೆ ಹೋಗುವಾಗ ಭಕ್ತರು ಜೈಕಾರ ಘೋಷಣೆಗಳನ್ನು ಮಾಡುತ್ತಾ ಭಕ್ತಿಪರವಶರಾಗಿ ರಥದ ಹಗ್ಗವನ್ನೆಳೆಯುತ್ತಾರೆ. ಗುಂಡೀಚಾ ದೇವಾಲಯದಲ್ಲಿ 7 ದಿನಗಳ ಕಾಲ ದೇವರು ಕಾಲ ಕಳೆದು ಬಳಿಕ ಮೌಸಿಮಾ ದೇಗುಲಕ್ಕೆ ಭೇಟಿ ನೀಡುತ್ತಾರೆ. 

ಪುರಿ ಮಂದಿರದಲ್ಲಿ ಸಂಭವಿಸಿತಾ ಪವಾಡ!

- ರಥದ ಹಗ್ಗವನ್ನೆಳೆಯಲು, ಮುಟ್ಟಲು ಭಕ್ತರು ಪರದಾಡುವುದಿದೆ. ಏಕೆಂದರೆ ಇದೊಂದು ಪವಿತ್ರವಾದ ಹಗ್ಗವಾಗಿದ್ದು, ರಥದ ಮೂಲಕ ಜಗನ್ನಾಥನನ್ನೇ ತಲುಪುವುದರಿಂದ ದೇವರನ್ನೇ ಮುಟ್ಟಲು ಸಿಕ್ಕಿದ ಅವಕಾಶ ಎಂಬ ನಂಬಿಕೆ ಭಕ್ತರದ್ದು. ಹೀಗೆ ಹಗ್ಗ ಮುಟ್ಟಿ ಆಶೀರ್ವಾದ ಪಡೆದರೆ ಪಾಪಗಳೆಲ್ಲ ಪರಿಹಾರವಾಗಿ, ಮೋಕ್ಷ ದೊರೆಯುತ್ತದೆ ಎಂಬ ಪ್ರತೀತಿ ಇದೆ. ಸೂಚ್ಯಾರ್ಥವಾಗಿ ಇಲ್ಲಿ ರಥವು ಮನಸ್ಸಿನಂತೆ ಕೆಲಸ ಮಾಡುತ್ತಿದ್ದು, ನೀವದನ್ನು ಹೇಗೆ ನಿಯಂತ್ರಿಸಬೇಕು, ಎತ್ತ ಕಡೆ ಎಳೆಯಬೇಕು ಎಂಬುದನ್ನು ಇದು ಕಲಿಸುತ್ತದೆ. 

- ರಥಯಾತ್ರೆಯ ಸಂದರ್ಭದಲ್ಲಿ ಜಗನ್ನಾಥನು ಮಾನವ ಅವತಾರಕ್ಕಿಳಿದು, ನಾನೂ ನಿಮ್ಮಂತೆಯೇ ಎಂದು ತೋರಿಸಿಕೊಡುತ್ತಾನೆ ಎಂದು ನಂಬಲಾಗಿದೆ. ಸರಳವಾದ ಪ್ರೀತಿ ಹಾಗೂ ನಂಬಿಕೆಯ ಮೂಲಕ ಯಾವುದೇ ಭಕ್ತನು ದೇವರ ಸ್ವರೂಪವನ್ನೂ, ಆತನ ಪರಮಾಧಿಕಾರವನ್ನೂ ನೋಡಬಲ್ಲ ಎನ್ನಲಾಗುತ್ತದೆ. ಭಕ್ತರಿಗೆ ಆಶೀರ್ವಾದ ಮಾಡಲು ಜಗನ್ನಾಥನು ಕೆಳಗಿಳಿದು ಬರುತ್ತಾನೆ, ಇದಕ್ಕೆ ಪ್ರತಿಯಾಗಿ ಆತನಿಗೆ ನಿಶ್ಕಲ್ಮಶ ಪ್ರೀತಿ ನೀಡಿದರೆ ಸಾಕಷ್ಟೇ ಎಂದು ತೋರಿಸುವಂತ ಹಲವು ಶಾಸ್ತ್ರಗಳನ್ನು ಈ ಸಂದರ್ಭದಲ್ಲಿ ನಡೆಸಲಾಗುತ್ತದೆ. 

- ಪ್ರತಿ 9ರಿಂದ 19 ವರ್ಷಗಳಿಗೊಮ್ಮೆ ಎರಡು ತಿಂಗಳು ಆಶಾಢ ಬರುತ್ತದೆ. ಅಂದರೆ ಒಂದು ಆಶಾಢ ಮಾಸ ಮುಗಿಯುತ್ತಲೇ ಮತ್ತೊಂದು ಆಶಾಢವೇ ಎದುರಾಗುತ್ತದೆ. ಈ ಸಂದರ್ಭದಲ್ಲಿ ವಿಶೇಷವಾದ ಹಾಗೂ ಅಪರೂಪದ ನಬಕಳೇಬರ್ ವಿಧಿವಿಧಾನ ಕೈಗೊಳ್ಳಲಾಗುತ್ತದೆ. ನಬಕಳೇಬರ ಎಂದರೆ ಹೊಸ ದೇಹವೆಂದರ್ಥ. ಈ ಸಂದರ್ಭದಲ್ಲಿ ದೇವರ ಮರದ ವಿಗ್ರಹಗಳನ್ನು ಹೊಸ ಮರದ ವಿಗ್ರಹಗಳಿಂದ ಬದಲಾಯಿಸಲಾಗುತ್ತದೆ. 1912, 1931, 1950, 1969, 1977, 1996 ಹಾಗೂ 2015ರಲ್ಲಿ ಹೀಗೆ ದೇವರ ಮೂರ್ತಿಗಳನ್ನು ಬದಲಾಯಿಸಲಾಗಿದೆ. 

ಮನೆಯಲ್ಲೇ ಮಾಡಿ ಮಸಾಲಾ ಪುರಿ, ಇಲ್ಲಿದೆ ರೆಸಿಪಿ

- ಪುರಿಯಲ್ಲಿರುವ ಜಗನ್ನಾಥ ಹಾಗೂ ಆತನ ಸಹೋದರ ಬಾಲಭದ್ರ, ಸೋದರಿ ಸುಭದ್ರೆಯರ ಮೂರ್ತಿಗಳು ಮರದ್ದಾಗಿರುವುದರಿಂದ ಕೆಲ ವರ್ಷಗಳಲ್ಲಿ ಅವು ಹಾಳಾಗುತ್ತವೆ. ಹೀಗಾಗಿ, ಅನ್ನು ಹೊಸತರಿಂದ ಬದಲಾಯಿಸುವುದು ಅಗತ್ಯ. ಇದಕ್ಕಾಗಿ ನಬಕಳೇಬರಕ್ಕಾಗಿ ಬೇವಿನ ಮರದ ರೆಂಬೆಗಳನ್ನು ಬಳಸಲಾಗುತ್ತದೆ. ಆದರೆ, ಎಲ್ಲ ಬೇವಿನ ಮರಗಳೂ ಮೂರ್ತಿ ಕೆತ್ತನೆಗೆ ಯೋಗ್ಯವಲ್ಲ. ಅದಕ್ಕೆ ಇಂತಿಷ್ಟೇ ಕೊಂಬೆಗಳು, ಬಣ್ಣ ಇರಬೇಕು, ಇದೇ ಸ್ಥಳದದಲ್ಲಿರಬೇಕು ಮುಂತಾದ ನಿಯಮಗಳಿವೆ. 

- ಹೀಗೆ ಡಬಲ್ ಆಶಾಢ ಬಂದಾಗ ಸರಿಯಾದ ಮರವನ್ನು ಹುಡುಕುವ ಸಲುವಾಗಿ ಬನಜಗ ಯಾತ್ರಾ ಹೆಸರಿನ ಮೆರವಣಿಗೆಯಲ್ಲಿ ದೇವಾಲಯದ ಅರ್ಚಕರು, ಬಡಗಿಗಳು ಹಾಗೂ ಸೇವಕರು ಕಾಡಿಗೆ ಹೊರಡುತ್ತಾರೆ. 50 ಕಿ.ಮೀ ದೂರ ಬರಿಗಾಲಿನಲ್ಲಿ ನಡೆದ ಬಳಿಕ ಕಾಕತ್‌ಪುರ ಮಂಗಳಾದೇವಿ ದೇವಾಲಯದಕ್ಕೆ ಹೋಗುತ್ತಾರೆ. ಅಲ್ಲಿ ದೇವಿ ಕನಸಿನಲ್ಲಿ ಕಾಣಿಸಿಕೊಂಡು ಮೂರ್ತಿ ಕೆತ್ತನೆಗೆ ಅಗತ್ಯ ಮರಗಳು ಎಲ್ಲಿ ಸಿಗುತ್ತವೆಂದು ನಿರ್ದೇಶಿಸುತ್ತಾಳೆ. 

- ಮರಗಳು ಸಿಕ್ಕ ಬಳಿಕ ದೊಡ್ಡ ಮರದ ಪೆಟ್ಟಿಗೆಯಲ್ಲಿ ಗುಟ್ಟಾಗಿ ಅವನ್ನು ದೇವಾಲಯಕ್ಕೆ ತರಲಾಗುತ್ತದೆ. ಅಲ್ಲಿ ಮೂರ್ತಿ ಕೆತ್ತನೆಗೆಂದೇ ಕೊಯ್ಲಿ ಬೈಕುಂಠ ಎಂಬ ವಿಶೇಷ ಸ್ಥಳವಿದೆ. ಕೃಷ್ಣನು ಬೇಟೆಗಾರನ ಬಾಣಕ್ಕೆ ಬಲಿಯಾದ ಬಳಿಕ ಆತನ ಅಂತ್ಯಕ್ರಿಯೆ ಇಲ್ಲೇ ಮಾಡಿದ್ದಾಗಿ ನಂಬಿಕೆ ಇದೆ. ಹೀಗೆ ಹೊಸ ಮೂರ್ತಿ ಕೆತ್ತನೆ ಮಾಡುತ್ತಲೇ ಹಳೇ ಮೂರ್ತಿಗಳಿಗೆ ಮುಕ್ತಿ ನೀಡಲಾಗುತ್ತದೆ. ಹೊಸ ಮೂರ್ತಿ ಕೆತ್ತನೆಯುದ್ದಕ್ಕೂ ಭಜನೆಗಳು ನಿರಂತರ ನಡೆಯುತ್ತಲೇ ಇರುತ್ತವೆ. 

- ಹೊಸ ಮೂರ್ತಿಗಳ ಪ್ರತಿಷ್ಠಾಪನೆ ಸಂದರ್ಭದಲ್ಲಿ ಬ್ರಹ್ಮ ಪರಿವರ್ತನೆ ಎಂಬ ವಿಧಾನ ನಡೆಸಲಾಗುತ್ತದೆ. ಇದು ಹಳೆಯ ಮೂರ್ತಿಗಳಿಂದ  ಹೊಸತಕ್ಕೆ ಆತ್ಮ ಬದಲಿಸುವ ಕ್ರಿಯೆ. ಈ ಕ್ರಿಯೆಯನ್ನು ನಡೆಸುವಾಗ ಅರ್ಚಕರು ಮಾತ್ರ ಇದ್ದು, ಅವರು ಕೂಡಾ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು, ಕೈಗಳಿಗೆ ದಪ್ಪನೆಯ ಬಟ್ಟೆಯಿಂದ ಸುತ್ತಿಕೊಂಡಿರುತ್ತಾರೆ. ಹಳೆಯ ಮೂರ್ತಿಗಳನ್ನು ಕೊಯ್ಲಿ ಬೈಕುಂಠದಲ್ಲಿ ವಿಸರ್ಜಿಸಲಾಗುತ್ತದೆ. ಈ ಕ್ರಿಯೆ ಕೂಡಾ ಅರ್ಚಕರ ಹೊರತಾಗಿ ಯಾರೇ ನೋಡಿದರೂ ಅವರು ಸಾಯುತ್ತಾರೆಂಬ ನಂಬಿಕೆ ಇದೆ. ಹೀಗಾಗಿ ರಾಜ್ಯ ಸರ್ಕಾರ ಈ ಕ್ರಿಯೆ ನಡೆಸುವ ರಾತ್ರಿ ರಾಜ್ಯಾದ್ಯಂತ ಪವರ್ ಕಟ್ ಮಾಡುತ್ತದೆ.

click me!