ಹೆಣ್ತನ ಹಾಗೂ ಮುಟ್ಟನ್ನು ಸಂಭ್ರಮಿಸೋ ಹಬ್ಬ ರಜಪರ್ಬ!

By Web DeskFirst Published Jun 25, 2019, 1:15 PM IST
Highlights

ಪ್ರತಿ ಜೂನ್‌ನಲ್ಲಿ ನಾಲ್ಕು ದಿನಗಳ ಕಾಲ ಒಡಿಶಾ ರಜಪರ್ಬಾ ಹಬ್ಬ ಆಚರಿಸುತ್ತದೆ. ಇದರಲ್ಲಿ ಮಹಿಳೆಯ ಋತುಚಕ್ರ ಆರಂಭವನ್ನು ಸುಗ್ಗಿ ಹಬ್ಬಕ್ಕೆ ಹೋಲಿಸಿ ಆಚರಿಸಲಾಗುತ್ತದೆ.

ಭಾರತದಾದ್ಯಂತ ಮುಟ್ಟಿನ ಸಂದರ್ಭದ ಹಲವು ಆಚರಣೆಗಳು ನಮ್ಮಲ್ಲಿ ಸಿಟ್ಟು ತರಿಸುತ್ತವೆ. ಮುಟ್ಟಾದವರನ್ನು ದೂರವಿರಿಸಿ ಮೂರು ದಿನಗಳ ಕಾಲ ಸಂಪೂರ್ಣ ಅಸ್ಪೃಶ್ಯರಂತೆ ನೋಡುವುದು, ಆ ಮೂರು  ದಿನಗಳ ಕಾಲ ಬೇರೆ ಕೋಣೆಯಲ್ಲಿರಿಸುವುದು ಸೇರಿದಂತೆ ಹಲವು ಅಸಂಬದ್ಧ ಆಚರಣೆಗಳನ್ನು ಕಾಣಬಹುದು. ಆದರೆ ಇದಕ್ಕೆ ವಿರುದ್ಧವಾಗಿ ಮುಟ್ಟನ್ನು ಹಬ್ಬದಂತೆ ಆಚರಿಸಿ, ಮಹಿಳೆಯರು ಆಟೋಟಗಳಲ್ಲಿ ಸಂಭ್ರಮಿಸುವ ಪದ್ಧತಿಯೊಂದನ್ನು ಒಡಿಶಾದಲ್ಲಿ ಕಾಣಬಹುದು. ಅದೇ ರಜ ಪರ್ಬಾ ಹಬ್ಬ.

ಸಾಮಾನ್ಯವಾಗಿ ಮುಟ್ಟನ್ನು ಅಶುದ್ಧ ಎಂದು ಭಾವಿಸಲಾಗುತ್ತದೆ. ಅಂಥವರು ಒಡಿಶಾ ಇದನ್ನು ಹೇಗೆ ಸಂತೋಷದಿಂದ ಆಚರಿಸುತ್ತದೆ ನೋಡಬೇಕು. ಮುಟ್ಟಿನ ಸಂದರ್ಭದ ರಕ್ತ ಅಶುದ್ಧ ಎನ್ನುವವರು, ಅದೇ ಹೆಣ್ಣಿನ ದೇಹದೊಳಕ್ಕೆ 9 ತಿಂಗಳ ಕಾಲ ಇನ್ನೊಂದು ಜೀವದ ಹುಟ್ಟಿಗೆ ಕಾರಣವಾಗುತ್ತದೆ ಎಂಬುದನ್ನು ಮರೆಯಬಾರದು. 

ಋತುಮತಿಯಾಗೋ ದೇವಿ, ಮಾತೃತ್ವಕ್ಕಿಲ್ಲಿ ವಿಶೇಷ ಪೂಜೆ..

ಸಾಮಾನ್ಯವಾಗಿ ಮುಟ್ಟನ್ನು ಆಡುಭಾಷೆಯಲ್ಲಿ ರಜಾ ಎನ್ನುವುದನ್ನು ಕೇಳಿರಬಹುದು. ಇದು ರಜಸ್ವಲೆ ಎಂಬ ಪದದಿಂದ ಬಂದಿದೆ. ಇಲ್ಲಿ ಅದೇ ಪದದಿಂದ ರಜಪರ್ಬಾ (ರಜಪರ್ವ) ಎಂದು ಹಬ್ಬವನ್ನು ಹೆಸರಿಸಲಾಗಿದೆ. ಮೊದಲ ಮೂರು ದಿನಗಳ ಕಾಲ ಜಗನ್ನಾಥನ ಪತ್ನಿ ಭೂದೇವಿ (ಭೂಮಿ) ಮುಟ್ಟಾಗಿರುತ್ತಾಳೆ, ನಾಲ್ಕನೇ ದಿನ ಆಕೆಗೆ ಪವಿತ್ರ ಸ್ನಾನ ಮಾಡುವ ದಿನ ಎಂದು ಫಲವತ್ತತೆಯ ಹಬ್ಬವಾಗಿ ಇದನ್ನು ಆಚರಿಸಲಾಗುತ್ತದೆ. 

ಹೇಗೆ ನಡೆಯುತ್ತದೆ ಹಬ್ಬ?

ಈ ನಾಲ್ಕು ದಿನಗಳಲ್ಲಿ ಒಂದೊಂದು ದಿನವನ್ನು ಒಂದೊಂದು ಹೆಸರಿನಲ್ಲಿ ಕರೆದು, ವಿಶೇಷವಾಗಿ ಆಚರಿಸಲಾಗುತ್ತದೆ. ಮೊದಲನೇ ದಿನ ಪಹಿಲಿ ರಜೋ, ಎರಡನೇ ದಿನ ಮಿಥುನ ಮಾಸ ಅಂದರೆ ಮಳೆಗಾಲ ಆರಂಭವನ್ನು ಸೂಚಿಸುವ ಮಿಥುನ ಸಂಕ್ರಾಂತಿ, ಮೂರನೇ ದಿನ ಭೂ ದಾಹ ಅಥವಾ ಬಸಿ ರಜಾ, ನಾಲ್ಕನೇ ದಿನವನ್ನು ವಸುಮತಿ ಸ್ನಾನ ಎಂದು ಕರೆಯಲಾಗುತ್ತದೆ. ಮೊದಲ ಮೂರುದಿನಗಳಲ್ಲಿ ಹೂವನ್ನು ಕೊಯ್ಯುವುದರಿಂದ ಹಿಡಿದು ಹೂಡುವವರೆಗೆ ಎಲ್ಲ ರೀತಿಯ ಕೃಷಿ ಚಟುವಟಿಕೆಗಳನ್ನು ಸಂಪೂರ್ಣ ನಿಲ್ಲಿಸಲಾಗುತ್ತದೆ. ಭೂಮಿಯು ಈ ಮೊದಲ ಮೂರು ದಿನಗಳಲ್ಲಿ ಮರುಹುಟ್ಟು ಪಡೆಯುತ್ತಿರುತ್ತದೆ ಎಂಬ ನಂಬಿಕೆ ಇದೆ. ಅಂದರೆ, ಮುಟ್ಟಿನ ಮೊದಲ ಮೂರು ದಿನಗಳ ಕಾಲ ಯುವತಿಯನ್ನು ಯಾರೂ ಡಿಸ್ಟರ್ಬ್ ಮಾಡಬಾರದು ಎಂಬುದನ್ನು ಸೂಚಿಸುವ ನಡೆ ಇದು. ಈ ದಿನಗಳಲ್ಲಿ ಮಹಿಳೆಯರು ಹಾಗೂ ಅವಿವಾಹಿತ ಹುಡುಗಿಯರು ಸಾಧ್ಯವಾದಷ್ಟು ಚೆನ್ನಾಗಿ ಶೃಂಗರಿಸಿಕೊಂಡು, ಹೊಸ ಬಟ್ಟೆ ತೊಟ್ಟು 'ಅಲತ'ದಿಂದ ತಮ್ಮನ್ನು ಅಲಂಕರಿಸಿಕೊಳ್ಳುತ್ತಾರೆ. ಈ ಮೂರು ದಿನಗಳ ಕಾಲ ಅವರು ಯಾವ ಕೆಲಸವನ್ನೂ ಮಾಡುವಂತಿಲ್ಲ. ಬದಲಿಗೆ ಜೋಕಾಲಿ ಜೀಕುತ್ತಾ, ಒಳಾಂಗಣ ಹಾಗೂ ಹೊರಾಂಗಣ ಆಟಗಳಲ್ಲಿ ಭಾಗವಹಿಸುತ್ತಾ, ರುಚಿರುಚಿಯಾದ ಭಕ್ಷ್ಯಗಳನ್ನು ತಿನ್ನುತ್ತಾ ಸಂತೋಷವಾಗಿ ನಲಿದಾಡಬೇಕು. ಹೆಣ್ತನವನ್ನು ಆನಂದಿಸಬೇಕು. ಈ ದಿನಗಳಲ್ಲಿ ಒಡಿಶಾದ ಬಹುತೇಕ ಮರಗಳಲ್ಲೂ ಜೋಕಾಲಿ ನೇತಾಡುವುದನ್ನೂ, ಅದರಲ್ಲಿ ಯುವತಿಯರು ಸಂತೋಷದಿಂದ ಜೀಕುವುದನ್ನೂ ಕಾಣಬಹುದು. 

ಪುರಿ ಜಗನ್ನಾಥ ದೇವಸ್ಠಾನದಲ್ಲಿ ನಡೆಯೋ ಈ ಪವಾಡಗಳಿಗೆ ಉತ್ತರವೇ ಇಲ್ಲ!

ಸಂಪ್ರದಾಯದಂತೆ ಮೊದಲ ದಿನ ಸೂರ್ಯ ಹುಟ್ಟುವ ಮುಂಚೆ ಹೆಣ್ಮಕ್ಕಳು ಎದ್ದು, ತಲೆ ಬಾಚಿಕೊಂಡು ಮೈಗೆಲ್ಲ ಅರಿಶಿನ ಹಾಗೂ ಎಣ್ಣೆ ಹಚ್ಚಿಕೊಂಡು ನದಿಯಲ್ಲಿ ಅಥವಾ ಟ್ಯಾಂಕ್‌ ನೀರಿನಲ್ಲಿ ಸ್ನಾನ ಮಾಡಬೇಕು. ನಂತರದ ಎರಡು ದಿನಗಳ ಕಾಲ ಅವರಿಗೆ ಸ್ನಾನ ನಿಷಿದ್ಧ. ನಾಲ್ಕನೇ ದಿನ ಭೂದೇವಿಯ ಸ್ನಾನ. ಅಂದು ಭೂತಾಯಿಯ ಪೀರಿಯಡ್ಸ್ ಮುಗಿಯಿತೆಂದು ಭಾವಿಸಲಾಗುತ್ತದೆ. 

ಕಳೆದ ವರ್ಷ ಶಬರಿಮಲೆಯಲ್ಲಿ ಮುಟ್ಟಾದ ಮಹಿಳೆಯರಿಗೆ ಪ್ರವೇಶ ನಿಷೇಧ ನಿಯಮಾವಳಿ ವಿರುದ್ಧ ದೇಶಾದ್ಯಂತ ಮಹಿಳೆಯರು 'ಹ್ಯಾಪಿ ಟು ಬ್ಲೀಡ್' ಅಭಿಯಾನ ಆರಂಭಿಸಿದ್ದು ಇನ್ನೂ ಹಸಿರಾಗೇ ಇದೆ. ಮುಟ್ಟು ಜೀವನಚಕ್ರದ ಭಾಗವಾಗಿದ್ದು, ಮರುಹುಟ್ಟಿಗೆ ಮೂಲವಾಗಿದೆ. ಇದು ಫಲವತ್ತತೆಯ ಪ್ರತೀಕ. ಹಾಗಾಗಿ, ರಜಪರ್ಬದಂಥ ಹಬ್ಬಗಳ ಆಚರಣೆ ಇಂದಿನ ಅಗತ್ಯವಾಗಿದೆ. 

ಬುಡಕಟ್ಟಿನ ಆಚರಣೆಯಾಗಿ ಆರಂಭವಾಗಿದ್ದ ಈ ಹಬ್ಬವು ಈಗ ಒಡಿಶಾದಾದ್ಯಂತ ಹಬ್ಬಿದೆ. ದೊಡ್ಡ ಮಟ್ಟದಲ್ಲಿ ಹಬ್ಬ ನಡೆಯುತ್ತದೆ. ಇದನ್ನು ದೇಶಾದ್ಯಂತ ಆಚರಣೆಗೆ ತಂದರೆ, ಸಂಭ್ರಮಿಸಲು ವರ್ಷದಲ್ಲಿ ಮತ್ತೆ ನಾಲ್ಕು ದಿನ ಹೆಚ್ಚು ಸಿಕ್ಕಂತಾಯಿತು, ಮಹಿಳೆಯರಿಗೂ ದೈನಂದಿನ ಕೆಲಸಗಳಿಂದ ನಾಲ್ಕು ದಿನಗಳ ರಜಾ ಸಿಕ್ಕೀತು ಅಲ್ಲವೇ? 

click me!