ನಮ್ಮ ಮೆಟ್ರೋ ದರ ಏರಿಕೆ ಬಳಿಕ ನಾಲ್ಕೇ ದಿನದಲ್ಲಿ 80 ಸಾವಿರ ಪ್ರಯಾಣಿಕರು ಕಡಿಮೆ!
ದರ ಏರಿಕೆಯ ನಂತರ ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆ ಇಳಿಮುಖವಾಗಿದ್ದು, ಈ ಬಗ್ಗೆ ಚರ್ಚೆಗಳು ಆರಂಭವಾಗಿವೆ. ದರ ಏರಿಕೆಯನ್ನು ಸಮರ್ಥಿಸಿಕೊಂಡಿರುವ ಮೆಟ್ರೋ ನಿಗಮ, ಆರ್ಥಿಕ ಹೊರೆಯನ್ನು ಉಲ್ಲೇಖಿಸಿದೆ. ರಾಜ್ಯ ಸರ್ಕಾರ ಮತ್ತು ಬಿಜೆಪಿ ನಡುವೆ ದೂಷಣೆಗಳು ಕೇಳಿಬಂದಿವೆ.

ಬೆಂಗಳೂರು (ಫೆ.13) : ದರ ಏರಿಕೆಗೆ ಬೇಸತ್ತ ಪ್ರಯಾಣಿಕರು ‘ನಮ್ಮ ಮೆಟ್ರೋ’ ದಿಂದ ದೂರವಾಗುತ್ತಿದ್ದಾರಾ? ಕಳೆದ 4 ದಿನಗಳಿಂದ ಪ್ರಯಾಣಿಕರ ಸಂಖ್ಯೆ ಇಳಿಮುಖ ದಾಖಲಾಗಿರುವುದು ಇಂಥದ್ದೊಂದು ಪ್ರಶ್ನೆಗೆ ಕಾರಣವಾಗಿದೆ.
ಶೇ.40ರಿಂದ ಆರಂಭವಾಗಿ ದುಪ್ಪಟ್ಟು ಪ್ರಮಾಣದಲ್ಲಿ ದರ ಏರಿಕೆ ಮಾಡಿದ್ದ ನಮ್ಮ ಮೆಟ್ರೋಗೆ ಪ್ರಯಾಣಿಕರ ಅಸಮಾಧಾನದ ಬಿಸಿ ತಟ್ಟುತ್ತಿದೆ. ದುಬಾರಿ ದರ ತೆತ್ತು ಮೆಟ್ರೋ ಪ್ರಯಾಣ ಮಾಡುವ ಬದಲಾಗಿ ತಮ್ಮ ನಿಗದಿತ ಸ್ಥಳಗಳಿಗೆ ಸ್ವಂತ, ಇತರೆ ವಾಹನಗಳನ್ನು ಬಳಸಲು ಆರಂಭಿಸಿದ್ದಾರೆ. ಯಲಹಂಕದಲ್ಲಿ ನಡೆಯುತ್ತಿರುವ ಏರ್‌ಶೋ, ಅರಮನೆಯಲ್ಲಿ ನಡೆಯುತ್ತಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದ ಹೊರತಾಗಿಯೂ ಮೆಟ್ರೋದ ಪ್ರಯಾಣಿಕರ ಸಂಖ್ಯೆ ಕುಸಿದಿದೆ.
ಆದರೆ, ಸೋಮವಾರ ಪ್ರಯಾಣಿಕರ ಸಂಖ್ಯೆಯಲ್ಲಿ ಕುಸಿತವಾದರೂ ಆದಾಯ ಹೆಚ್ಚಳವಾಗಿದ್ದು, ₹3.91 ಕೋಟಿ ಸಂಗ್ರಹವಾಗಿದೆ ಎನ್ನಲಾಗಿದೆ.ನಮ್ಮ ಮೆಟ್ರೋದಲ್ಲಿ ಸಾಮಾನ್ಯವಾಗಿ 8 ಲಕ್ಷದಿಂದ 8.50 ಲಕ್ಷ ಪ್ರಯಾಣಿಕರು ಸಂಚರಿಸುತ್ತಾರೆ. ಡಿ.6 ರಂದು 9.20 ಲಕ್ಷಕ್ಕೂ ಅಧಿಕ ಪ್ರಯಾಣಿಕರು ಸಂಚರಿಸಿದ್ದು, ಈವರೆಗಿನ ದಾಖಲೆಯಾಗಿದೆ. ಆದರೆ, ಮಂಗಳವಾರ (ಫೆ.11) ಸುಮಾರು 80 ಸಾವಿರದಷ್ಟು ಪ್ರಯಾಣಿಕರ ಸಂಖ್ಯೆ ಕುಸಿತವನ್ನು ಮೆಟ್ರೋ ಕಂಡಿದ್ದು, 7,78,774 ಮಂದಿ ಪ್ರಯಾಣಿಕರು ಓಡಾಡಿದ್ದಾರೆ. ಅದಕ್ಕೂ ಹಿಂದಿನ ವಾರ ಫೆ.4 ರಂದು 8,58,417 ಮಂದಿ ಪ್ರಯಾಣಿಸಿದ್ದರು. ಪ್ರಯಾಣಿಕರ ಸಂಖ್ಯೆ ಫೆ.10ರಂದು 8,28,149ರಷ್ಟಿತ್ತು. 79,643 ಮಂದಿ ಪ್ರಯಾಣಿಕರ ಕುಸಿತವನ್ನು ನಮ್ಮ ಮೆಟ್ರೋ ದಾಖಲಿಸಿದೆ.
ಇದನ್ನೂ ಓದಿ: ಬೆಂಗಳೂರು ಮೆಟ್ರೋ ಟಿಕೆಟ್ ದರ ಏರಿಕೆ ನಿರ್ಧಾರ ಕೇಂದ್ರದ್ದು, ಬಿಜೆಪಿ ನಾಯಕರ ವಿರುದ್ಧ ಸಿಎಂ ಕಿಡಿ
ಶೇ.100ರಷ್ಟು ದರ ಹೆಚ್ಚಳ: ಈ ಮೊದಲು ನಲ್ಲೂರು ಹಳ್ಳಿಯಿಂದ ಬೆನ್ನಿಗಾನಹಳ್ಳಿಗೆ ₹23.75 ದರವಿತ್ತು. ಈಗದು ₹50 ಆಗಿದೆ. ಹೀಗೆ ಶೇ.100 ಕ್ಕಿಂತಲೂ ಅಧಿಕವಾಗಿ ಮೆಟ್ರೋ ದರ ಏರಿಸಲಾಗಿದೆ. ಹೋಗಿಬರಲು ₹100 ಕೊಡಬೇಕಾಗಿದೆ. ಇದೇ ಮೊತ್ತದಲ್ಲಿ 1ಲೀ ಪೆಟ್ರೋಲ್ ಹಾಕಿಸಿಕೊಂಡರೆ 45ಕಿ.ಮೀ ದೂರ ಬೈಕ್‌ನಲ್ಲೇ ಸಂಚರಿಸಬಹುದು. ಹೀಗಿರುವಾಗ ನಾನ್ಯಾಕೆ ಮೆಟ್ರೋ ಆಯ್ಕೆ ಮಾಡಿಕೊಳ್ಳಲಿ ಎಂದು ‘ಎಕ್ಸ್’ನಲ್ಲಿ ಅಕ್ಷಯ್ ಪಡ್ನಿಸ್ ಪ್ರಶ್ನಿಸಿದ್ದಾರೆ. ಆದರೆ, ಮೆಟ್ರೋ ನಿಗಮವು ದರ ಏರಿಕೆಯನ್ನು ಸಮರ್ಥಿಸಿಕೊಳ್ಳುತ್ತಿದೆ. ವಾರ್ಷಿಕ ಸಾಲ ₹500- ₹800 ಕೋಟಿ ಕಟ್ಟಬೇಕಿದ್ದು, ಸೌಕರ್ಯ ಒದಗಿಸಲು ಸಾಕಷ್ಟು ಆರ್ಥಿಕ ಹೊರೆ ಬಿಎಂಆರ್‌ಸಿಎಲ್ ಮೇಲಿದೆ. ಪ್ರತಿ ಮೆಟ್ರೋ ನಿಲ್ದಾಣದ ಅಭಿವೃದ್ಧಿಗೆ ತಲಾ ₹6 ಕೋಟಿಯಂತೆ ₹300 ಕೋಟಿ ಮೀಸಲು ಬೇಕು. ಕಳೆದ ಆರ್ಥಿಕ ವರ್ಷದಲ್ಲಿ ₹200 ಕೋಟಿ ಆದಾಯ (ಆಪರೇಷನಲ್) ಗಳಿಸಿದ್ದರೂ ಇದಲ್ಲಿ ನಿವ್ವಳ ಲಾಭ ₹20 ಕೋಟಿ ಮಾತ್ರ. ಹೀಗಿರುವಾಗ ದರ ಏರಿಕೆ ಅನಿವಾರ್ಯ. ಮೆಟ್ರೋ ರೈಲ್ವೇ ನಿಯಮಾವಳಿ ಪ್ರಕಾರ ದರ ಪರಿಷ್ಕರಣ ಸಮಿತಿಯ ಶಿಫಾರಸ್ಸಿನಂತೆಯೇ ದರ ಏರಿಕೆ ಮಾಡಲಾಗಿದೆ ಎಂದು ಬಿಎಂಆರ್‌ಸಿಎಲ್ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಮೆಟ್ರೋ ಪ್ರಯಾಣ ದರ ನಮ್ಮ ನಿರ್ಧಾರವಲ್ಲ: ಡಿಕೆಶಿ
ಮೆಟ್ರೋ ಪ್ರಯಾಣ ದರ ಏರಿಕೆಯನ್ನು ಕೇಂದ್ರ ಸರ್ಕಾರ ಹೈಕೋರ್ಟ್ ನ್ಯಾಯಾಧೀಶ್ವರ ನೇತೃತ್ವದ ಸಮಿತಿ ನಿರ್ಧರಿಸುತ್ತದೆಯೇ ಹೊರತು ರಾಜ್ಯ ಸರ್ಕಾರ ಅಲ್ಲ. ಬಿಜೆಪಿಯವರಿಗೆ ರಾಜಕೀಯ ಹೊರತು ಬೇರೇನೂ ಗೊತ್ತಿಲ್ಲ. ಯಾರೂ ಬೇಕಾದರೂ ಸಂಸತ್ತಿನಲ್ಲಿ ಮಾತನಾಡಲಿ. ಮೆಟ್ರೋ ಯೋಜನೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ 50:50 ಅನುಪಾತದಲ್ಲಿ ಜಾರಿ ಮಾಡಲಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ನೀರಿನ ದರ ಏರಿಕೆ ಮಾಡಿ 14 ವರ್ಷವಾಗಿದೆ. ಹಾಗಾಗಿ ಪ್ರತಿ ಲೀಟರ್‌ಗೆ ಒಂದು ಪೈಸೆ ಏರಿಕೆ ಮಾಡುವ ಪ್ರಸ್ತಾವ ತಮ್ಮ ಮುಂದೆ ಬಂದಿದೆ. ಈ ಬಗ್ಗೆ ಪರಿಶೀಲಿಸಿ ತೀರ್ಮಾನಿಸಲಾಗುವುದು ಎಂದರು.
ಇದನ್ನೂ ಓದಿ: 1984ರ ಸಿಖ್ ವಿರೋಧಿ ದಂಗೆ ಪ್ರಕರಣ: ಕಾಂಗ್ರೆಸ್ ಮಾಜಿ ಸಂಸದ ಸಜ್ಜನ್ ಕುಮಾರ್ ದೋಷಿ:, ಮರಣದಂಡನೆ ಸಾಧ್ಯತೆ?
ದರ ಏರಿಕೆಗೆ ರಾಜ್ಯ ಸರ್ಕಾರ ಕಾರಣ: ಸೂರ್ಯ
ನವದೆಹಲಿ: ನಮ್ಮ ಮೆಟ್ರೋ ದರ ಏರಿಕೆಗೆ ರಾಜ್ಯ ಸರ್ಕಾರವೇ ಕಾರಣ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ. ದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೆಟ್ರೋ ದರ ಏರಿಕೆಯಿಂದ ಜನರಿಗೆ ಸಮಸ್ಯೆಯಾಗಿದೆ. ಕೇಂದ್ರ ಸರ್ಕಾರ ದರ ಏರಿಸಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಆದರೆ, ದರ ಪರಿಷ್ಕರಣೆಗೆ ಪತ್ರ ಬರೆದಿದ್ದೆ ರಾಜ್ಯ ಸರ್ಕಾರ. ಬರೀ ಮೆಟ್ರೋ ಅಲ್ಲ ನೊಂದಣಿ ಶುಲ್ಕ, ವಾಹನ ನೋಂದಣಿ, ಆಸ್ಪತ್ರೆ ಸೇವಾ ಶುಲ್ಕ, ಕಾಲೇಜು ಫೀಸ್, ಮೆಟ್ರೋ ದರ ಏರಿಸಿ ಎಂದು ಪತ್ರ ಬರೆದಿದ್ದು, ಈಗ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡಲಾಗುತ್ತಿದೆ. ಸಮಸ್ಯೆ ಬಗೆಹರಿಸುವಂತೆ ನಗರಾಭಿವೃದ್ಧಿ ಸಚಿವರನ್ನು ಭೇಟಿ ಮಾಡಿ ಮಾತನಾಡಿದ್ದೇವೆ. ಅವರು ರಾಜ್ಯ ಸರ್ಕಾರ ಇನ್ನೊಮ್ಮೆ ಪತ್ರ ಬರೆದರೆ ಮತ್ತೊಮ್ಮೆ ದರ ಪರಿಷ್ಕರಣೆಗೆ ಸಮಿತಿ ರಚಿಸಲಾಗುವುದೆಂದು ಭರವಸೆ ನೀಡಿದ್ದಾರೆ ಎಂದರು