ವನ್ಯಜೀವಿ ಅಭಯಾರಣ್ಯದಲ್ಲಿ ಸ್ಪ್ಯಾನಿಷ್ ಪ್ರವಾಸಿಗನೊಬ್ಬ ಆನೆಗೆ ಬಿಯರ್ ಕುಡಿಸಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಪ್ರವಾಸಿಗರು ಮಾಡುವ ಅವಾಂತರಗಳು ಒಂದೆರಡಲ್ಲ, ವನ್ಯಜೀವಿಗಳನ್ನು ಕೆಣಕುವುದಕ್ಕೆ ಹೋಗಬಾರದು ಎಂಬುದು ಅರಣ್ಯ ಇಲಾಖೆಯ ನಿಯಮ. ಆದರೂ ಕೆಲ ಕಿಡಿಗೇಡಿಗಳು ಕಾಡುಪ್ರಾಣಿಗಳನ್ನು ಕೆಣಕಲು ಹೋಗಿ ಅವುಗಳೀಗೂ ತೊಂದರೆ ಮಾಡುವುದಲ್ಲದೇ ತಮ್ಮ ಜೀವಕ್ಕೂ ಸಂಕಷ್ಟ ತಂದುಕೊಳ್ಳುತ್ತಾರೆ. ಕೆಲ ದಿನಗಳ ಹಿಂದಷ್ಟೇ ಬಂಡೀಪುರ ಅರಣ್ಯದಲ್ಲಿ ಆನೆಯ ಜೊತೆ ಫೋಟೋ ತೆಗೆಯಲು ಹೋಗಿ ಪ್ರಯಾಣಿಕರರೊಬ್ಬರನ್ನು ಆನೆ ಅಟ್ಟಿಸಿಕೊಂಡು ಬಂದಿತ್ತು. ಆನೆಯ ಮುಂದೆಯೇ ಬಿದ್ದರೂ ಅದ್ಯಾವೋ ಪುಣ್ಯವೋ ಏನೋ ಸಣ್ಣಪುಟ್ಟ ಗಾಯಗಳಿಂದ ಅವರು ಬದುಕಿ ಉಳಿದಿದ್ದರು. ಹಾಗೆಯೇ ಇಲ್ಲೊಬ್ಬ ಆನೆಯೊಂದನ್ನು ಕೆಣಕಲು ಹೋಗಿದ್ದಾನೆ. ಆನೆಗೆ ಯುವಕನೋರ್ವ ಬೀರ್ ಕುಡಿಸಿದ್ದು, ಘಟನೆಯ ವೀಡಿಯೋ ವೈರಲ್ ಆಗುತ್ತಿದ್ದಂತೆ ಪ್ರವಾಸಿಗನ ವರ್ತನೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಆನೆಗೆ ಬಿಯರ್ ಕುಡಿಸಿದ ಪ್ರವಾಸಿಗ:
ಸ್ಪ್ಯಾನಿಷ್ ಮೂಲದ ಪ್ರವಾಸಿಗನೋರ್ವ ಕೀನ್ಯಾದ ವನ್ಯಜೀವಿಗಳ ಅಭಯಾರಣ್ಯದಲ್ಲಿ ಆನೆಯ ಸೊಂಡಿಲಿಗೆ ಬಿಯರ್ ಸುರಿದಿದ್ದಾನೆ. ಘಟನೆಗೆ ತೀವ್ರ ಆಕ್ರೋಶವ್ಯಕ್ತವಾಗುತ್ತಿದ್ದಂತೆ ಆ ವೀಡಿಯೋವನ್ನು ಡಿಲೀಟ್ ಮಾಡಲಾಗಿದೆ. @skydive_kenya ಎಂಬ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಈ ಅಮಾನವೀಯ ವೀಡಿಯೋ ಪೋಸ್ಟ್ ಆಗಿತ್ತು. ಇದರಲ್ಲಿ ಆತ ತಾನು ಬಿಯರ್ ಕುಡಿಯುವ ಜೊತೆ ಆನೆಗೂ ಬಿಯರ್ ನೀಡಿದ್ದಾನೆ. ಬಿಬಿಸಿ ವರದಿಯ ಪ್ರಕಾರ , ಈ ಘಟನೆ ಕಳೆದ ವರ್ಷ ಮಧ್ಯ ಕೀನ್ಯಾದ ಲೈಕಿಪಿಯಾ ಕೌಂಟಿಯ ಓಲ್ ಜೋಗಿ ರಕ್ಷಿತಾರಣ್ಯದಲ್ಲಿ ನಡೆದಿತ್ತು. ದಂತವಿರುವ ಸ್ನೇಹಿತನೊಂದಿಗೆ ಕೇವಲ ಆನೆ ಎಂಬ ಕ್ಯಾಪ್ಷನ್ ನೀಡಿ ಈ ವೀಡಿಯೋವನ್ನು ಪೋಸ್ಟ್ ಮಾಡಲಾಗಿತ್ತು.
ಈ ವೀಡಿಯೋಗೆ ಇತ್ತೀಚೆಗೆ ಕೀನ್ಯಾದವರು ಮತ್ತೆ ಪ್ರತಿಕ್ರಿಯಿಸಿದ ನಂತರ ಈ ವೀಡಿಯೋ ಮತ್ತೆ ಸುದ್ದಿಯಲ್ಲಿದೆ. ಇದು ಎಂದಿಗೂ ಸಂಭವಿಸಬಾರದಿತ್ತು. ನಾವು ಸಂರಕ್ಷಣಾ ಅಭಯಾರಣ್ಯದವರು ಮತ್ತು ಈ ರೀತಿ ಆಗುವುದಕ್ಕೆ ನಾವು ಅನುಮತಿಸುವುದಿಲ್ಲ, ನಾವು ಜನರು ಆನೆಗಳ ಹತ್ತಿರ ಹೋಗಲು ಸಹ ಅನುಮತಿಸುವುದಿಲ್ಲ ಎಂದು ಅಲ್ಲಿನ ಸಿಬ್ಬಂದಿಯೊಬ್ಬರು ಹೇಳಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಈ ಕೃತ್ಯವೆಸಗಿದ ವ್ಯಕ್ತಿಯನ್ನು ಗುರುತಿಸಿ ಆತನ ವಿರುದ್ಧ ತನಿಖೆ ಮಾಡುವಂತೆ ಕೀನ್ಯಾ ವನ್ಯಜೀವಿ ಸೇವೆ ವಕ್ತಾರ ಪಾಲ್ ಉಡೋಟೊ ಹೇಳಿದ್ದಾರೆ.
ಆನೆ ಆರೋಗ್ಯವಾಗಿದೆ ಎಂದ ಅಭಯಾರಣ್ಯ ಸಿಬ್ಬಂದಿ
ಘಟನೆಗೆ ಸಂಬಂಧಿಸಿದಂತೆ ಕೀನ್ಯಾದ ಅಭಯಾರಣ್ಯವು ಕಳೆದ ತಿಂಗಳು ಫೇಸ್‌ಬುಕ್‌ನಲ್ಲಿ ಘಟನೆಯನ್ನು ದೃಢಪಡಿಸುವ ಹೇಳಿಕೆಯನ್ನು ಹಂಚಿಕೊಂಡಿದ್ದು, ಆನೆ ಆರೋಗ್ಯವಾಗಿದೆ ಎಂದು ಹೇಳಿಕೊಂಡಿದೆ. ನಮ್ಮಲ್ಲಿ ವಾಸಿಸುತ್ತಿದ್ದ ಆನೆಗಳಲ್ಲಿ ಒಂದಕ್ಕೆ ಒಬ್ಬ ವ್ಯಕ್ತಿ ಬಿಯರ್ ಕುಡಿಸಿದ ವೀಡಿಯೊ ಮತ್ತೆ ವೈರಲ್ ಆದ ಬಗ್ಗೆ ಓಲ್ ಜೋಗಿ ವನ್ಯಜೀವಿ ಸಂರಕ್ಷಣಾಲಯಕ್ಕೆ ತಿಳಿದಿದೆ. ವೀಡಿಯೊದಲ್ಲಿ ತೋರಿಸಿರುವ ಆನೆ ಬುಪಾ ಹಲವು ವರ್ಷಗಳಿಂದ ಓಲ್ ಜೋಗಿಯಲ್ಲಿ ವಾಸಿಸುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ನಾವು ಇಂತಹ ವಿಷಯಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸುತ್ತೇವೆ ಮತ್ತು ನಮ್ಮ ಆರೈಕೆಯಲ್ಲಿರುವ ಪ್ರಾಣಿಗಳ ಯೋಗಕ್ಷೇಮ ಮತ್ತು ಘನತೆಯನ್ನು ಖಚಿತಪಡಿಸಿಕೊಳ್ಳಲು ಬದ್ಧರಾಗಿದ್ದೇವೆ ಎಂದು ಪ್ರಾಣಿ ಸಂರಕ್ಷಣಾಲಯವು ಹೇಳಿದೆ.
ಸಾಮೂಹಿಕ ಬೇಟೆಯ ವೇಳೆ ರಕ್ಷಿಸಲ್ಪಟ್ಟ ಆನೆ ಈ ಬೂಪಾ…
ವೀಡಿಯೊದಲ್ಲಿರುವ ಆನೆಯನ್ನು ಬುಪಾ ಎಂದು ಗುರುತಿಸಲಾಗಿದ್ದು, 1989 ರಲ್ಲಿ ಜಿಂಬಾಬ್ವೆಯಲ್ಲಿ ನಡೆದ ಸಾಮೂಹಿಕ ಬೇಟೆಯಿಂದ ಈ ಆನೆಯನ್ನು ರಕ್ಷಿಸಿ ಓಲ್ ಜೋಗಿಗೆ ತರಲಾಗಿತ್ತು. ಆ ಸಮಯದಲ್ಲಿ ಆನೆಗೆ ಕೇವಲ 8 ವರ್ಷ ವಯಸ್ಸಾಗಿತ್ತು.ಸಂರಕ್ಷಣಾ ರಾಯಭಾರಿಯಾಗಿ ನಮ್ಮ ತಂಡವು ಅದನ್ನು ನಿಕಟವಾಗಿ ನೋಡಿಕೊಳ್ಳುತ್ತಿದೆ ಎಂದು ಈ ವಿಷಯದ ಬಗ್ಗೆ ಪರಿಚಿತವಾಗಿರುವ ಅಭಯಾರಣ್ಯದ ಒಬ್ಬರು ಬಿಬಿಸಿಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಪ್ರವಾಹ ಪೀಡಿತ ಪ್ರದೇಶದಲ್ಲಿ ಕೇವಲ 12 ಗಂಟೆಯಲ್ಲಿ ಸೇತುವೆ ನಿರ್ಮಿಸಿದ ಭಾರತೀಯ ಸೇನೆ
ಇದನ್ನೂ ಓದಿ: HALನಲ್ಲಿ 42 ವರ್ಷಗಳ ಸೇವೆಯ ಬಳಿಕ ನಿವೃತ್ತಿ: ಬದುಕು ನೀಡಿದ ಸಂಸ್ಥೆಗೆ ಉದ್ಯೋಗಿಯ ಭಾವುಕ ವಿದಾಯ
