Putin on Indian PM Modi: ರಷ್ಯಾದಿಂದ ತೈಲ ಖರೀದಿಸುವ ಭಾರತದ ನಿರ್ಧಾರವನ್ನು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಸಮರ್ಥಿಸಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಓರ್ವ ಬುದ್ಧಿವಂತ ನಾಯಕ, ಅವರು ಅಮೆರಿಕದ ಒತ್ತಡಕ್ಕೆ ಮಣಿದು ದೇಶದ ಹಿತಾಸಕ್ತಿಯನ್ನು ಬಲಿ ಕೊಡಲ್ಲ ಎಂದು ಪುಟಿನ್ ಶ್ಲಾಘಿಸಿದ್ದಾರೆ. 

ಪ್ರಧಾನಿ ನರೇಂದ್ರ ಮೋದಿ ರಾಜನೀತಿಯನ್ನು ಶ್ಲಾಘಿಸಿದ ಪುಟಿನ್

ರಷ್ಯಾದಿಂದ ತೈಲ ಖರೀದಿಸುವುದಕ್ಕೆ ಭಾರತದ ವಿರುದ್ಧ ತೆರಿಗೆ ಸಮರ ಸಾರಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಎಚ್ಚರಿಕೆ ನೀಡಿದ್ದಾರ. ಭಾರತದ ಪ್ರಧಾನಿ ನರೇಂದ್ರ ಮೋದಿ ಓರ್ವ ಬುದ್ಧಿವಂತ ನಾಯಕ ಅವರು ಭಾರತವನ್ನು ಯಾವ ದೇಶದ ಮುಂದೆಯೂ ತಲೆತಗ್ಗಿಸುವುದಕ್ಕೆ ಬಿಡುವುದಿಲ್ಲ, ಅಮೆರಿಕಾವೂ ತನ್ನ ದೇಶವನ್ನು ಅವಮಾನಿಸುವುದಕ್ಕೆ ಪ್ರಧಾನಿ ಮೋದಿ ಯಾವುದೇ ಅವಕಾಶ ನೀಡುತ್ತಿಲ್ಲ ಎಂದು ಪುಟಿನ್ ಹೇಳಿದರು.

ದೇಶದ ಜನ ತಲೆತಗ್ಗಿಸುವ ನಿರ್ಧಾರವನ್ನು ಮೋದಿ ಮಾಡಲ್ಲ:

ಕಪ್ಪು ಸಮುದ್ರದ ರೆಸಾರ್ಟ್ ನಗರವಾದ ಸೋಚಿಯಲ್ಲಿ ನಡೆದ ವಾಲ್ಡೈ ಚರ್ಚಾ ಗುಂಪಿನಲ್ಲಿ ಮಾತನಾಡಿದ ಪುಟಿನ್, ಭಾರತ ನಮ್ಮ ಇಂಧನ ಸಂಪನ್ಮೂಲಗಳನ್ನು ತೆಗೆದುಕೊಳ್ಳದೇ ಹೋದರೆ ಭಾರತಕ್ಕೆ ಕೆಲವು ನಷ್ಟಗಳಾಗಬಹುದು, ಕೆಲವು ಅಂದಾಜುಗಳು ಬದಲಾವಣೆ ಆಗಬಹುದು. ಆದರೆ ಕೆಲವು ಅಂದಾಜಿನ ಪ್ರಕಾರ ಅದು ಸುಮಾರು $9-10 ಬಿಲಿಯನ್ ಡಾಲರ್‌ ಆಗಿರಬಹುದು. ಆದರೆ ಭಾರತ ನಮ್ಮ ತೈಲವನ್ನು ನಿರಾಕರಿಸದೇ ಇದ್ದರೆ, ನಿರ್ಬಂಧಗಳನ್ನು(ಅಮೆರಿಕಾ ಹೇರಿರುವ ನಿರ್ಬಂಧ ಉಲ್ಲೇಖಿಸದೇ) ವಿಧಿಸಲಾಗುತ್ತದೆ ಮತ್ತು ಇದರಿಂದ ನಷ್ಟವು ಒಂದೇ ಆಗಿರುತ್ತದೆ. ಆದರೆ ಅದರಿಂದ ದೇಶೀಯ ರಾಜಕೀಯ ವೆಚ್ಚವೂ ಹೆಚ್ಚಾದರೆ ಏಕೆ ಭಾರತ ತೈಲ ನಿರಾಕರಿಸಬೇಕು? ಭಾರತೀಯ ಜನರು ತಮ್ಮನ್ನು ಯಾರೂ ಅವಮಾನಿಸಲು ಎಂದಿಗೂ ಅವಕಾಶ ನೀಡುವುದಿಲ್ಲ ಎಂದು ನನಗೆ ತಿಳಿದಿದೆ ಪ್ರಧಾನಿ ನರೇಂದ್ರ ಮೋದಿ, ಅವರು ಸಹ ಅಂತಹ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ, ಎಂದು ಪುಟಿನ್ ಹೇಳಿದ್ದಾರೆ.

ಅಮೆರಿಕ ಸುಂಕದ ರೂಪದಲ್ಲಿ ವಿಧಿಸುತ್ತಿರುವ ದಂಡದಿಂದ ಭಾರತ ಎದುರಿಸುತ್ತಿರುವ ನಷ್ಟವನ್ನು ರಷ್ಯಾದಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳುವುದರಿಂದ ಸಮತೋಲನಗೊಳಿಸಲಾಗುತ್ತದೆ, ಇದರ ಜೊತೆ ಜೊತೆಗೆ ಅದು ಸಾರ್ವಭೌಮ ರಾಷ್ಟ್ರವಾಗಿ ಪ್ರತಿಷ್ಠೆಯನ್ನು ಪಡೆಯುತ್ತದೆ ಎಂದು ರಷ್ಯಾದ ಅಧ್ಯಕ್ಷ ಪುಟಿನ್ ಹೇಳಿದ್ದಾರೆ. ಪ್ರಧಾನಿ ಮೋದಿಯವರ ನಡೆಯನ್ನು ಶ್ಲಾಘಿಸಿದ ಪುಟಿನ್ ಅವರನ್ನು ಓರ್ವ ಸಮತೋಲಿತ ಬುದ್ಧಿವಂತ ರಾಷ್ಟ್ರೀಯ ಆಧಾರಿತ ನಾಯಕ ಎಂದು ಕರೆದಿದ್ದಾರೆ.

ಉಕ್ರೇನ್‌ ಮೇಲೆ ರಷ್ಯಾ ನಡೆಸುತ್ತಿರುವ ಯುದ್ಧದ ಕಾರಣಕ್ಕೆ ಭಾರತ, ಯುರೋಪ್, ಚೀನಾಗಳು ರಷ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒತ್ತಾಯಿಸಿದ ನಂತರ ಪುಟಿನ್ ಅವರು ಈ ಹೇಳಿಕೆ ನೀಡಿದ್ದಾರೆ. ಬೇರೆ ದೇಶಗಳು ರಷ್ಯಾದಿಂದ ತೈಲ ಖರೀದಿ ಮಾಡುತ್ತಿರುವುದರಿಂದ ಉಕ್ರೇನ್ ವಿರುದ್ಧ ಯುದ್ಧ ಮಾಡುವುದಕ್ಕೆ ರಷ್ಯಾಗೆ ಆರ್ಥಿಕ ನೆರವು ಸಿಗುತ್ತಿದೆ ಹೀಗಾಗಿ ರಷ್ಯಾದಿಂದ ತೈಲ ಖರೀದಿ ಮಾಡಬಾರದು ಎಂಬುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಾದವಾಗಿದೆ.

ಭಾರತ ಮತ್ತು ರಷ್ಯಾ ಎರಡೂ ವಿಶೇಷ ಸಂಬಂಧವನ್ನು ಹಂಚಿಕೊಳ್ಳುತ್ತವೆ. ಭಾರತದ ಜನರು ಇದನ್ನು ಮತ್ತು ನಮ್ಮ ಸಂಬಂಧಗಳನ್ನು ಎಂದಿಗೂ ಮರೆಯುವುದಿಲ್ಲ ಎಂದು ನಾನು ನಂಬುತ್ತೇನೆ. ಸುಮಾರು 15 ವರ್ಷಗಳ ಹಿಂದೆ, ನಾವು ಸವಲತ್ತು ಪಡೆದ ಕಾರ್ಯತಂತ್ರದ ಪಾಲುದಾರಿಕೆಯ ಬಗ್ಗೆ ಘೋಷಣೆ ಮಾಡಿದ್ದೇವೆ ಮತ್ತು ಅದು ಅತ್ಯುತ್ತಮ ವಿವರಣೆಯಾಗಿದೆ. ಪ್ರಧಾನಿ ಮೋದಿ ತಮ್ಮ ದೇಶದ ಬಗ್ಗೆ ಮೊದಲು ಯೋಚಿಸುವ ಅತ್ಯಂತ ಬುದ್ಧಿವಂತ ನಾಯಕ ಎಂದು ಪುಟಿನ್ ಹೇಳಿದ್ದಾಗಿ ರಷ್ಯಾ ಟುಡೇ ವರದಿ ಉಲ್ಲೇಖಿಸಿ ಸುದ್ದಿಸಂಸ್ಥೆ ಎಎನ್‌ಐ ವರದಿ ಮಾಡಿದೆ.

ಇದನ್ನು ಓದಿ: ಅಸ್ಸಾಂ ಗಾಯಕ ಜುಬೀನ್ ಗಾರ್ಗ್ ಸಾವಿಗೆ ರೋಚಕ ಟ್ವಿಸ್ಟ್‌: ಬ್ಯಾಂಡ್‌ಮೇಟ್, ಸಹ ಗಾಯಕಿಯೂ ಅರೆಸ್ಟ್

ಇದನ್ನು ಓದಿ: ಅಸ್ಸಾಂ ಗಾಯಕ ಝುಬೀನ್ ಗಾರ್ಗ್ ಮ್ಯಾನೇಜರ್, ಸಂಘಟಕನ ವಿರುದ್ಧ ಕೊಲೆ ಕೇಸ್