ಅಮೆರಿಕದ ಸುಂಕಗಳ ಹೊಡೆತಕ್ಕೆ ಸಿಲುಕಿರುವ ಭಾರತೀಯ ಸೀಗಡಿ ರಫ್ತುದಾರರಿಗೆ ರಷ್ಯಾ ಹೊಸ ಮಾರುಕಟ್ಟೆಯಾಗಿ ಹೊರಹೊಮ್ಮುತ್ತಿದೆ. ರಷ್ಯಾದ ಉಪ ಪ್ರಧಾನಿ ಡಿಮಿಟ್ರಿ ಪತ್ರುಶೇವ್ ಅವರ ಭಾರತ ಭೇಟಿ ಈ ವ್ಯಾಪಾರವನ್ನು ಹೆಚ್ಚಿಸುವ ನಿರೀಕ್ಷೆಯಿದೆ. ಈ ಒಪ್ಪಂದದಿಂದ ಭಾರತಕ್ಕೆ ಆಗುವ ಲಾಭಗಳೇನು?
ನವದೆಹಲಿ, (ಸೆ.13): ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ನ 50% ಸುಂಕಗಳ ಹೊಡೆತಕ್ಕೆ ಭಾರತದ ಸೀಗಡಿ ರಫ್ತುದಾರರು ತೀವ್ರ ಆಘಾತ ಅನುಭವಿಸುತ್ತಿರುವಾಗ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತಮ್ಮ ಆಪ್ತ ಮಿತ್ರ ಮತ್ತು ಉಪ ಪ್ರಧಾನಿ ಡಿಮಿಟ್ರಿ ಪತ್ರುಶೇವ್ ಅವರನ್ನು ಈ ತಿಂಗಳು ನವದೆಹಲಿಗೆ ಕಳುಹಿಸುತ್ತಿದ್ದಾರೆ. ಈ ಭೇಟಿಯ ಮೂಲಕ ಭಾರತದಿಂದ ಸೀಗಡಿ (ಶ್ರಿಂಪ್) ಆಮದು ಹೆಚ್ಚಿಸಿ, ರಸಗೊಬ್ಬರ ಪೂರೈಕೆಯನ್ನು ಬಲಪಡಿಸುವ ಯೋಜನೆ ರೂಪಿಸಲಾಗುತ್ತಿದೆ.
ಭಾರತವು ಅಮೆರಿಕಕ್ಕೆ ಸೀಗಡಿಯ ಅತಿದೊಡ್ಡ ಪೂರೈಕೆದಾರವಾಗಿದ್ದರೂ, ಟ್ರಂಪ್‌ನ ಸುಂಕಗಳು ವಾರ್ಷಿಕ ಶತಕೋಟಿ ಡಾಲರ್‌ಗಳ ವ್ಯಾಪಾರಕ್ಕೆ ತೀವ್ರ ಹೊಡೆತ ನೀಡಿವೆ. ಈಗ ರಷ್ಯಾ ಭಾರತೀಯ ರಫ್ತುದಾರರಿಗೆ ಆಕರ್ಷಕ ಮಾರುಕಟ್ಟೆಯಾಗಿ ಹೊಸ ಅವಕಾಶಗಳನ್ನು ಒದಗಿಸಬಹುದು ಎಂದು ತಜ್ಞರು ನಂಬುತ್ತಾರೆ.
ಪತ್ರುಶೇವ್ ಭೇಟಿ ದ್ವಿಪಕ್ಷೀಯ ವ್ಯಾಪಾರ ಬಲಪಡಿಸುವ ಗುರಿ:
ರಷ್ಯಾದ ಕೃಷಿ ಕ್ಷೇತ್ರದ ಪರಿಣಿತ ಡಿಮಿಟ್ರಿ ಪತ್ರುಶೇವ್ ಅವರು ಈ ತಿಂಗಳು ನವದೆಹಲಿಗೆ ಭೇಟಿ ನೀಡಿ, ಪ್ರಮುಖ ಭಾರತದೊಂದಿಗೆ ಚರ್ಚೆ ನಡೆಸುವ ನಿರ್ಧಾರ. ಈ ಭೇಟಿಯ ಪ್ರಮುಖ ಉದ್ದೇಶ – ಅಮೆರಿಕದ ಸುಂಕಗಳ ಹಿನ್ನೆಲೆಯಲ್ಲಿ ಭಾರತದ ಸೀಗಡಿ ರಫ್ತುಗಳಿಗೆ ರಷ್ಯಾದ ಮಾರುಕಟ್ಟೆಯನ್ನು ವಿಸ್ತರಿಸುವುದು ಮತ್ತು ರಸಗೊಬ್ಬರ ಪೂರೈಕೆಯನ್ನು ಹೆಚ್ಚಿಸುವುದು. ಭಾರತದ ಸೀಗಡಿ ರಫ್ತುಗಳು ಅಮೆರಿಕಕ್ಕೆ ವಾರ್ಷಿಕವಾಗಿ ಶತಕೋಟಿ ಡಾಲರ್ ಮೌಲ್ಯ ಹೊಂದಿವೆ, ಆದರೆ 50% ಸುಂಕಗಳು ಈ ವ್ಯಾಪಾರವನ್ನು 43% ಕ್ಕೂ ಹೆಚ್ಚು ಕಡಿಮೆ ಮಾಡಬಹುದು. ಇದರಿಂದ ಭಾರತೀಯ ರಫ್ತುದಾರರು ಇಂಡೋನೇಷ್ಯಾ, ವಿಯೆಟ್ನಾಂ ಮತ್ತು ಚೀನಾದಂತಹ ದೇಶಗಳೊಂದಿಗೆ ಕಠಿಣ ಸ್ಪರ್ಧೆಯನ್ನು ಎದುರಿಸುತ್ತಿದ್ದಾರೆ. ರಷ್ಯಾ ಈ ಕ್ಷೇತ್ರದಲ್ಲಿ ಹೊಸ ಮಾರುಕಟ್ಟೆಯಾಗಿ ಉದಯಿಸುತ್ತಿದ್ದು, ದ್ವಿಪಕ್ಷೀಯ ವ್ಯಾಪಾರವನ್ನು ಬಲಪಡಿಸುವ ಮೂಲಕ ಅಮೆರಿಕದ ಒತ್ತಡಕ್ಕೆ ಪ್ರತ್ಯಾಸ್ತ್ರ ಎನ್ನಬಹುದು. ಅದೇ ರೀತಿ ರಷ್ಯಾ-ಭಾರತ ವ್ಯಾಪಾರ 2024ರಲ್ಲಿ 60% ಹೆಚ್ಚಾಗಿದ್ದು, 2025ರಲ್ಲಿ ಇದು ಮುಂದುವರಿಯುತ್ತದೆ ಎಂದು ಪತ್ರುಶೇವ್ ಅವರೇ ಹೇಳಿದ್ದಾರೆ. ರಷ್ಯಾ ಭಾರತಕ್ಕೆ ರಸಗೊಬ್ಬರ ರಫ್ತುಗಳನ್ನು 44 ಮಿಲಿಯನ್ ಟನ್‌ಗಳಿಗೆ ಹೆಚ್ಚಿಸುವ ಯೋಜನೆಯನ್ನು ಘೋಷಿಸಿದ್ದು, ಭಾರತದ ಕೃಷಿ ಕ್ಷೇತ್ರಕ್ಕೆ ಇದು ದೊಡ್ಡ ಉಪಕಾರವಾಗುತ್ತದೆ.
ಸುಂಕದ ಕುರಿತು ಅಮೆರಿಕದಿಂದ ಒತ್ತಡ:
ಟ್ರಂಪ್ ಆಡಳಿತವು ಭಾರತದ ವಿರುದ್ಧ ಹಲವಾರು ಸುಂಕಗಳನ್ನು ವಿಧಿಸಿದ್ದು, ಭಾರತೀಯ ಆಮದುಗಳ ಮೇಲಿನ ಒಟ್ಟು ಸುಂಕ ದರ 58%ಗಿಂತ ಹೆಚ್ಚು ಆಗಬಹುದು. ಈ ಸುಂಕಗಳು ಮುಖ್ಯವಾಗಿ ರಷ್ಯಾದಿಂದ ತೈಲ ಖರೀದಿಸುವುದಕ್ಕೆ ಸಂಬಂಧಿಸಿದ್ದು, ಇದು ಉಕ್ರೇನ್ ಯುದ್ಧಕ್ಕೆ ಹಣಕಾಸು ಒದಗಿಸುತ್ತದೆ ಎಂದು ಅಮೆರಿಕ ಆರೋಪಿಸಿದೆ. ಆದರೆ, ಶುಕ್ರವಾರ ನಡೆದ ಜಿ-7 ವಿದೇಶಾಂಗ ಮಂತ್ರಿಗಳ ಸಭೆಯಲ್ಲಿ, ಅಮೆರಿಕ ಭಾರತ ಮತ್ತು ಚೀನಾ ವಿರುದ್ಧ 50% ರಿಂದ 100% ಸುಂಕಗಳನ್ನು ವಿಧಿಸುವಂತೆ ಪ್ರಸ್ತಾವಿಸಿತು. ಈ ಪ್ರಸ್ತಾಪದ ಮೂಲಕ ಟ್ರಂಪ್ ಜಿ-7 ಮಿತ್ರರಾಷ್ಟ್ರಗಳನ್ನು ಒತ್ತಾಯಿಸುತ್ತಿದ್ದಾರೆ, ಆದರೆ ಭಾರತ ಇದಕ್ಕೆ ಪ್ರತಿಯಾಗಿ ರಷ್ಯಾದೊಂದಿಗೆ ವ್ಯಾಪಾರ ಸಂಬಂಧಕ್ಕೆ ಹೆಚ್ಚು ಒತ್ತು ನೀಡಿದೆ. ಅಮೆರಿಕ ಸುಂಕಗಳು ಭಾರತದ ರಫ್ತುಗಳನ್ನು 70% ಕ್ಕೂ ಹೆಚ್ಚು ಕಡಿಮೆ ಮಾಡಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ಆದರೂ, ರಷ್ಯಾ ಭಾರತದೊಂದಿಗಿನ ವ್ಯಾಪಾರವನ್ನು ಹೆಚ್ಚಿಸುವ ಮೂಲಕ ಈ ಸುಂಕಗಳ ಹೊಡೆತವನ್ನು ಕಡಿಮೆ ಮಾಡುವ ಉಪಾಯಗಳನ್ನು ಹುಡುಕುತ್ತಿದೆ.
ಭಾರತದ ನಿಲುವೇನು?
ರಾಷ್ಟ್ರೀಯ ಹಿತಾಸಕ್ತಿ ಮೊದಲು ಎಂದಿರುವ ಭಾರತ ಸರ್ಕಾರ ರಷ್ಯಾದಿಂದ ತೈಲ ಖರೀದಿಸುವುದನ್ನು ರಾಷ್ಟ್ರೀಯ ಹಿತಾಸಕ್ತಿ, ಮಾರುಕಟ್ಟೆ ಪರಿಸ್ಥಿತಿ ಮತ್ತು ಇಂಧನ ಸುರಕ್ಷತೆಗಾಗಿ ಸಮರ್ಥಿಸಿಕೊಂಡಿದೆ. ಅಮೆರಿಕದ ಆರೋಪಗಳನ್ನು ತಿರಸ್ಕರಿಸಿ, 'ಇದು ಅನ್ಯಾಯ' ಎಂದು ಹೇಳಿದ್ದು, ಯುರೋಪ್ ಮತ್ತು ಚೀನಾ ಸಹ ರಷ್ಯಾದಿಂದ ಆಮದು ಮಾಡುತ್ತಿವೆ ಎಂದು ಉದಾಹರಣೆ ನೀಡಿದೆ. ಭಾರತ-ರಷ್ಯಾ ವ್ಯಾಪಾರ 2025ರಲ್ಲಿ $68.7 ಬಿಲಿಯನ್‌ಗೆ ತಲುಪಿದ್ದು, ರಸಗೊಬ್ಬರ ಮತ್ತು ತೈಲದಲ್ಲಿ ರಷ್ಯಾ ಭಾರತದ ಅತಿದೊಡ್ಡ ಪೂರೈಕೆದಾರ. ಈ ಭೇಟಿ ಮೂಲಕ ಭಾರತ ಹೊಸ ಮಾರುಕಟ್ಟೆಗಳನ್ನು ವಿಸ್ತರಿಸಿ, ಟ್ರಂಪ್‌ನ ಸುಂಕಗಳಿಗೆ ಸಮರ್ಥವಾದ ಪ್ರತಿಕ್ರಿಯೆ ನೀಡುವ ನಿರ್ಧಾರವಾಗಿದೆ.
