ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಸಂಘರ್ಷದಿಂದಾಗಿ ಗಡಿಗಳನ್ನು ಮುಚ್ಚಲಾಗಿದ್ದು, ಎರಡೂ ದೇಶಗಳ ವ್ಯಾಪಾರ ಸ್ಥಗಿತಗೊಂಡಿದೆ. ಈ ಬಿಕ್ಕಟ್ಟಿನಿಂದಾಗಿ ಪಾಕಿಸ್ತಾನದಲ್ಲಿ ಟೊಮೆಟೊ ಬೆಲೆ ಕೆಜಿಗೆ 600 ರೂಪಾಯಿ ತಲುಪಿದ್ದು, ಸಾವಿರಾರು ಕಂಟೇನರ್‌ಗಳು ಗಡಿಯಲ್ಲಿ ಸಿಲುಕಿಕೊಂಡಿವೆ.
ಗಗನಕ್ಕೇರಿದ ದಿನಬಳಕೆ ವಸ್ತುಗಳ ಬೆಲೆ
ಇಸ್ಲಾಮಾಬಾದ್: ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಸಂಘರ್ಷದ ನಂತರ ಎರಡು ದೇಶಗಳು ಗಡಿಯನ್ನು ಮುಚ್ಚಿರುವುದರಿಂದ ಎರಡೂ ದೇಶಗಳಿಗೆ ಹಿನ್ನಡೆಯಾಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಎರಡೂ ದೇಶಗಳ ಜನರು ತೀವ್ರವಾಗಿ ತತ್ತರಿಸಿ ಹೋಗಿದ್ದಾರೆ. ಪ್ರವಾಹ ಸಂಬಂಧಿತ ಬೆಳೆ ನಷ್ಟದ ಜೊತೆಗೆ ಎರಡು ದೇಶಗಳ ನಡುವೆ ಸಂಘರ್ಷ ಭುಗಿಲೆದ್ದ ನಂತರ ಪಾಕಿಸ್ತಾನದಲ್ಲಿ ಟೊಮೆಟೊ ಬೆಲೆ ಐದು ಪಟ್ಟು ಹೆಚ್ಚಾಗಿದೆ. ಎರಡು ದೇಶಗಳ ನಡುವೆ ಸಂಘರ್ಷ ಭುಗಿಲೆದ್ದ ನಂತರ ಎಲ್ಲಾ ವ್ಯಾಪಾರ ಮತ್ತು ಸಾರಿಗೆಯನ್ನು ನಿರ್ಬಂಧಿಸಲಾಗಿದೆ ಎಂದು ಕಾಬೂಲ್‌ನಲ್ಲಿರುವ ಪಾಕ್-ಅಫ್ಘಾನ್ ವಾಣಿಜ್ಯ ಮಂಡಳಿಯ ಮುಖ್ಯಸ್ಥ ಖಾನ್ ಜಾನ್ ಅಲೋಕೋಸ್ ಗುರುವಾರ ಸುದ್ದಿಸಂಸ್ಥೆ ರಾಯಿಟರ್ಸ್‌ಗೆ ತಿಳಿಸಿದ್ದಾರೆ. ಈ ಸಂಘರ್ಷದಿಂದಾಗಿ ಎರಡೂ ದೇಶಗಳಿಗೂ ಭಾರಿ ಆರ್ಥಿಕ ಹಾನಿ ಸಂಭವಿಸಿದೆ. ಪ್ರತಿ ದಿನ ಎರಡೂ ಕಡೆಯವರು ಸುಮಾರು 1 ಮಿಲಿಯನ್ ಡಾಲರ್‌ಗಳನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಗಡಿಯಲ್ಲಿ ನಿಂತಿರುವ 500ಕ್ಕೂ ಹೆಚ್ಚು ಕಂಟೈನರ್‌ಗಳು
ಎರಡೂ ದೇಶಗಳ ನಡುವಿನ ವಾರ್ಷಿಕ $2.3 ಶತಕೋಟಿ ಡಾಲರ್‌ನಷ್ಟು ವ್ಯವಹಾರ ನಡೆಯುತ್ತದೆ. ಈ ವ್ಯಾಪಾರದ ಬಹುಪಾಲು ಹಣ್ಣುಗಳು, ತರಕಾರಿಗಳು, ಖನಿಜಗಳು, ಔಷಧಿಗಳು, ಗೋಧಿ, ಅಕ್ಕಿ, ಸಕ್ಕರೆ, ಮಾಂಸ ಮತ್ತು ಡೈರಿ ಉತ್ಪನ್ನಗಳಾಗಿವೆ. ಪಾಕಿಸ್ತಾನದಲ್ಲಿ ಬಹುತೇಕರು ಸೇವಿಸುವ ಟೊಮೆಟೊಗಳ ಬೆಲೆ ಶೇ. 400 ಕ್ಕಿಂತ ಹೆಚ್ಚು ಏರಿಕೆಯಾಗಿದ್ದು, ಹೀಗಾಗಿ ಪ್ರತಿ ಕಿಲೋಗೆ ಸುಮಾರು 600 ಪಾಕಿಸ್ತಾನಿ ರೂಪಾಯಿಗಳಿಗೆ ಟೊಮೆಟೋ ದರ ತಲುಪಿದೆ. ಅಫ್ಘಾನಿಸ್ತಾನದಿಂದ ಬರುವ ಸೇಬುಗಳ ಬೆಲೆಯೂ ಏರಿಕೆಯಾಗುತ್ತಿದೆ. ಪ್ರತಿದಿನ ರಫ್ತು ಮಾಡಲು ನಮ್ಮಲ್ಲಿ ಸುಮಾರು 500 ಕಂಟೇನರ್ ತರಕಾರಿಗಳಿವೆ. ಅವೆಲ್ಲವೂ ಹಾಳಾಗುತ್ತಿವೆ ಎಂದು ಅಲೋಕೋಸ್ ಹೇಳಿದ್ದಾರೆ.
ಗಡಿಯ ಎರಡೂ ಬದಿಗಳಲ್ಲಿ ಸುಮಾರು 5,000 ಕಂಟೇನರ್ ಸರಕುಗಳು ಸಿಲುಕಿಕೊಂಡಿವೆ. ಮಾರುಕಟ್ಟೆಯಲ್ಲಿ ಈಗಾಗಲೇ ಟೊಮೆಟೊ, ಸೇಬು ಮತ್ತು ದ್ರಾಕ್ಷಿಯ ಕೊರತೆಯಿದೆ ಎಂದು ಅವರು ಹೇಳಿದರು. ಈ ವಿಚಾರಕ್ಕೆ ಸಂಬಂಧಿಸಿದಂತೆಎ ಪಾಕಿಸ್ತಾನ ವಾಣಿಜ್ಯ ಸಚಿವಾಲಯವು ಪ್ರತಿಕ್ರಿಯೆಗೆ ಸಿಕ್ಕಿಲ್ಲ, ಕಳೆದ ವಾರಾಂತ್ಯದಲ್ಲಿ ಕತಾರ್ ಮತ್ತು ಟರ್ಕಿ ನಡುವಿನ ಮಾತುಕತೆಯ ಸಮಯದಲ್ಲಿ ಕದನ ವಿರಾಮ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಆದರೆ ಗಡಿಯಾಚೆಗಿನ ವ್ಯಾಪಾರ ಇನ್ನೂ ಪುನರಾರಂಭಗೊಂಡಿಲ್ಲ. ಮುಂದಿನ ಸುತ್ತಿನ ಮಾತುಕತೆ ಅಕ್ಟೋಬರ್ 25 ರಂದು ಇಸ್ತಾಂಬುಲ್‌ನಲ್ಲಿ ನಡೆಯಲಿದೆ.
ಟೊಮೆಟೋ ಬೆಲೆ 400 ಪಟ್ಟು ಏರಿಕೆ
ಪೂರೈಕೆ ಕೊರತೆ ಮತ್ತು ಹಣದುಬ್ಬರದ ಒತ್ತಡಗಳು ಸ್ಥಳೀಯ ಮಾರುಕಟ್ಟೆಗಳನ್ನು ಸಂಕಷ್ಟಕ್ಕೆ ದೂಡುತ್ತಿವೆ. ಪಾಕಿಸ್ತಾನದಲ್ಲಿ ಟೊಮೆಟೋ ಸಾಮಾನ್ಯವಾಗಿ ಕೇಜಿಗೆ 50 ರಿಂದ 100 ರೂಪಾಯಿ ಇರುತ್ತಿತ್ತು. ಆದರೆ ಈಗ ಪ್ರತಿ ಕೇಜಿಗೆ 550ರಿಂದ 600 ರೂಪಾಯಿ ಆಗಿದೆ. ಇದು ಜನರ ಮೇಲೆ ದೊಡ್ಡ ಹೊರೆಯನ್ನು ಸೃಷ್ಟಿಸಿದೆ. ಇಸ್ಲಾಮಾಬಾದ್ ಮತ್ತು ಕಾಬೂಲ್ ನಡುವೆ ಸಂಘರ್ಷದ ನಂತರ ಅಕ್ಟೋಬರ್ 11 ರಿಂದ ಟೋರ್ಖಾಮ್ ಮತ್ತು ಚಮನ್‌ನಲ್ಲಿರುವ ಪ್ರಮುಖ ಕ್ರಾಸಿಂಗ್‌ಗಳು ಸೇರಿದಂತೆ ಪಾಕಿಸ್ತಾನ-ಅಫ್ಘಾನಿಸ್ತಾನ ಗಡಿಯನ್ನು ಮುಚ್ಚಲಾಗಿದೆ. ಅಫ್ಘಾನಿಸ್ತಾನ ಭಯೋತ್ಪಾದಕ ದಾಳಿಗಳನ್ನು ಬೆಂಬಲಿಸುತ್ತಿದೆ ಎಂದು ಪಾಕಿಸ್ತಾನ ಆರೋಪಿಸಿದೆ, ಇದರ ಪರಿಣಾಮವಾಗಿ ವ್ಯಾಪಾರ ಸ್ಥಗಿತಗೊಂಡಿದೆ ಮತ್ತು ಅಗತ್ಯ ವಸ್ತುಗಳ ಸಾಗಣೆ ವಿಳಂಬವಾಗಿದೆ. ಈ ಗಡಿ ಮುಚ್ಚುವಿಕೆಯಿಂದಾಗಿ ಟೊಮೆಟೊ, ಸೇಬು ಮತ್ತು ದ್ರಾಕ್ಷಿ ಸೇರಿದಂತೆ ಸುಮಾರು 5,000 ಕಂಟೇನರ್‌ಗಳು ಗಡಿಯಲ್ಲಿ ಸಿಲುಕಿಕೊಂಡಿವೆ.
ಲಾಹೋರ್‌ನ ಬಾದಾಮಿ ಬಾಗ್ ಮಾರುಕಟ್ಟೆಗೆ ದಿನನಿತ್ಯ 30 ಟ್ರಕ್‌ಗಳ ಟೊಮೆಟೊ ತಲುಪುತ್ತಿದ್ದವು ಆದರೆ ಈಗ ಕೇವಲ 15ರಿಂದ 20 ಟ್ರಕ್‌ಗಳ ಟೊಮೆಟೊ ಮಾತ್ರ ತಲುಪುತ್ತಿರುವುದರಿಂದ ಮಾರುಕಟ್ಟೆಗಳು ಪೂರೈಕೆಯ ಕೊರತೆಯನ್ನು ಎದುರಿಸುತ್ತಿವೆ. ಒಳಹರಿವು ಕಡಿಮೆಯಾಗಿರುವುದು ಬೇಡಿಕೆ ಹಾಗೂ ಪೂರೈಕೆ ನಡುವಣ ಅಂತರವನ್ನು ಹೆಚ್ಚಿಸಿದ್ದು, ಬೆಲೆಗಳನ್ನು ಹೆಚ್ಚಿಸಿದೆ. ಹೆಚ್ಚುವರಿಯಾಗಿ, ಖೈಬರ್ ಪಖ್ತುಂಖ್ವಾ, ಬಲೂಚಿಸ್ತಾನ್ ಮತ್ತು ಸಿಂಧ್‌ನಲ್ಲಿನ ಪ್ರವಾಹವು ಬೆಳೆಗಳನ್ನು ಹಾನಿಗೊಳಿಸಿದ್ದು, ಸ್ಥಳೀಯ ಉತ್ಪಾದನೆಯನ್ನು ಮತ್ತಷ್ಟು ಕಡಿಮೆ ಮಾಡಿದೆ.
ಹಿಂದೆಲ್ಲಾ ಐತಿಹಾಸಿಕವಾಗಿ, ಕೊರತೆಯ ಸಮಯದಲ್ಲಿ ಬೇಡಿಕೆಯನ್ನು ಪೂರೈಸಲು ಪಾಕಿಸ್ತಾನ, ಭಾರತದಿಂದ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತಿತ್ತು. ವರದಿಗಳ ಪ್ರಕಾರ, 2011 ರಲ್ಲಿ, ಭಾರತೀಯ ವ್ಯಾಪಾರಿಗಳು ಅಟ್ಟಾರಿ ವಾಘಾ ಗಡಿಗಳ ಮೂಲಕ ಟ್ರಕ್‌ಗಳನ್ನು ಕಳುಹಿಸುವ ಮೂಲಕ ಪಾಕಿಸ್ತಾನದ ಹೆಚ್ಚಿನ ಟೊಮೆಟೊ ಬೆಲೆಗಳಿಂದ ಲಾಭ ಪಡೆದಿದ್ದರು. ನಾಸಿಕ್, ಪುಣೆ ಮತ್ತು ಅಹ್ಮದ್‌ನಗರದಂತಹ ಪ್ರಮುಖ ಭಾರತೀಯ ಪ್ರದೇಶಗಳು ನಿಯಮಿತವಾಗಿ ಉತ್ತರದ ಮಾರುಕಟ್ಟೆಗಳಿಗೆ ಟೊಮೆಟೋ ಸರಬರಾಜು ಮಾಡುತ್ತವೆ. ಆದರೆ ಪ್ರಸ್ತುತ ಗಡಿ ಮುಚ್ಚುವಿಕೆಯಿಂದಾಗಿ ಸ್ಥಳೀಯ ಪೂರೈಕೆಯೂ ಇಲ್ಲದೇ ಇರುವುದರಿಂದ ಪಾಕಿಸ್ತಾನವು ಇದೇ ರೀತಿಯ ಬೆಲೆ ಒತ್ತಡವನ್ನು ಎದುರಿಸುತ್ತಿದೆ.
ಪಾಕಿಸ್ತಾನಕ್ಕೆ ಆಹಾರ ಬೆಲೆಗಳು ಗಗನಕ್ಕೇರುತ್ತಿರುವುದು ಇದೇ ಮೊದಲಲ್ಲ. ಜುಲೈ 2023 ರಲ್ಲಿ ಅಲ್ಲಿ ಗೋಧಿ ಬೆಲೆ ಕೆಜಿಗೆ 320 ತಲುಪಿತು, 20 ಕೆಜಿ ಚೀಲ ದರ 3,200 ರೂ ತಲುಪಿತು, ಇದು ವಿಶ್ವದ ಅತ್ಯಂತ ದುಬಾರಿ ಗೋಧಿ ದರವಾಗಿತ್ತು.
ಇದನ್ನೂ ಓದಿ: ಮರ ಬೀಳಿಸಿ ರೋಡ್ ಬ್ಲಾಕ್ ಮಾಡಿದ ಕಬಾಲಿ: ಕಾಡಾನೆ ದರ್ಬಾರ್‌ಗೆ 18 ಗಂಟೆ ಹೆದ್ದಾರಿ ಬಂದ್
ಇದನ್ನೂ ಓದಿ: ರೋಗಿಯ ಸಂಬಂಧಿಗೆ ಲೈಂಗಿಕ ಕಿರುಕುಳ : ಭಾರತೀಯ ಪುರುಷ ನರ್ಸ್‌ಗೆ ಸಿಂಗಾಪುರದಲ್ಲಿ ಜೈಲು ಶಿಕ್ಷೆ
