ನಂಬಿಕೆಯನ್ನು ಮೀರಿದ ದೈವವಿಲ್ಲ ಎಂಬ ಮಾತಿದೆ. ಆ ಮಾತು ನಿಜವಾಗಿದೆ. ವೈದ್ಯರು ಕೈ ಚೆಲ್ಲಿದರೂ ಪತ್ನಿ ಮಾಡಿದ ಆರೈಕೆ ಫಲಕೊಟ್ಟಿದ್ದು, ಹಾಸಿಗೆ ಹಿಡಿದಿದ್ದ ಗಂಡ ಎದ್ದು ಓಡಾಡುವಂತಾಗಿದೆ. ಆ ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ ನೋಡಿ..
ಸಾಮಾನ್ಯವಾಗಿ ಒಮ್ಮೆ ಸಂಪೂರ್ಣವಾಗಿ ಪಾರ್ಶ್ವವಾಯು ಪೀಡಿತರಾದವರು ಎದ್ದು ಓಡಾಡುವುದು ತೀರಾ ಕಡಿಮೆ. ಭಾಗಶಃ ಪಾರ್ಶ್ವವಾಯುವಿಗೆ ಒಳಗಾದವವರು ಕೆಲವೊಮ್ಮೆ ಹುಷಾರಾಗುತ್ತಾರೆ. ಆದರೆ ಸಂಪೂರ್ಣವಾಗಿ ಮೊದಲಿನಂತಾಗುವುದು ತೀರಾ ಅಪರೂಪ. ಅದರೆ ರೋಗಿ ಚೇತರಿಸಿಕೊಳ್ಳುವುದಕ್ಕೆ ಇನ್ನೇನೂ ಸಾಧ್ಯವೇ ಇಲ್ಲ ಎಂದು ಹೇಳಿದ ಪ್ರಕರಣಗಳಲ್ಲಿಯೂ ಚೇತರಿಕೆ ಅಪರೂಪ. ಆದರೆ ಇಲ್ಲೊಂದು ಕಡೆ ಕಾಲಿನಿಂದ ತಲೆಯವರೆಗೂ ಪಾರ್ಶ್ವವಾಯುವಿಗೆ ತುತ್ತಾದ, ವೈದ್ಯರೂ ಕೂಡ ಇನ್ನು ಇವರು ಹುಷಾರಾಗುವುದು ಸಾಧ್ಯವಿಲ್ಲ ಎಂದು ಕೈ ಬಿಟ್ಟ ಪ್ರಕರಣವೊಂದರ ರೋಗಿಯೊಬ್ಬರು ಸಂಪೂರ್ಣವಾಗಿ ಗುಣಮುಖರಾಗಿದ್ದು, ಎದ್ದು ಓಡಾಡಲು ಶುರು ಮಾಡಿದ್ದಾರೆ. ಅದು ವೈದ್ಯರ ಚಿಕಿತ್ಸೆಯಿಂದಲ್ಲ, ಪತ್ನಿ ನೀಡಿದ ಕೆಲ ವಿಚಿತ್ರವಾದ ಆರೈಕೆಯಿಂದ. ಅಚ್ಚರಿಯಾದರೂ ಇದು ಸತ್ಯ.
ಚೇತರಿಕೆ ಸಾಧ್ಯವಿಲ್ಲ ಎಂದು ವೈದ್ಯರು ಕೈ ಬಿಟ್ಟಿದ್ದರು:
ಅಂದಹಾಗೆ ಈ ಘಟನೆ ನಡೆದಿರುವುದು ಗಲ್ಫ್ ರಾಷ್ಟ್ರದಲ್ಲಿ. ಅರಬ್ ರಾಷ್ಟ್ರವಾದ ಅಬುಧಾಬಿಯ ಪಶ್ಚಿಮ ಪ್ರದೇಶದ ಅಲ್ ಮಿರ್ಫಾದ ಖಲೀಲ್ ಅಲ್ ಹೊಸಾನಿ ಎಂಬುವವರು 7 ವರ್ಷಗಳ ಹಿಂದೆ ಪಾರ್ಶ್ವವಾಯುವಿನ ಹೊಡೆತಕ್ಕೊಳಗಾದರು. ತಲೆಯಿಂದ ಕಾಲಿನವರೆಗೂ ಅವರು ಪಾರ್ಶ್ವವಾಯುವಿಗೆ ತುತ್ತಾಗಿದ್ದರು. ಎಂಟು ಮಕ್ಕಳ ತಂದೆಯೂ ಆಗಿದ್ದ , ಮಾಜಿ ಯೋಧ ಖಲೀಲ್ ಅಲ್ ಹೊಸಾನಿ ಅವರ ಕುಟುಂಬದವರಿಗೆ ವೈದ್ಯರು ಇದು ಚೇತರಿಕೆ ಕಾಣದ ಪ್ರಕರಣವಾಗಿದ್ದು, ಅವರ ಆಸೆ ಬಿಡುವಂತೆ ಹೇಳಿದ್ದರು. ಇದಾದ ನಂತರ ಮುಂದಿನ ಐದು ವರ್ಷಗಳ ಕಾಲ, ಅವರು ಮನೆಯಲ್ಲಿಯೇ ಹಾಸಿಗೆಯಲ್ಲೇ ಮಲಗಿ ಕಾಲ ಕಳೆದಿದ್ದರು.
ಭರವಸೆ ಕಳೆದುಕೊಳ್ಳದ ಪತ್ನಿಯಿಂದ ತನ್ನದೇ ರೀತಿಯ ಚಿಕಿತ್ಸೆ:
ವೈದ್ಯರು ಭರವಸೆ ಕಳೆದುಕೊಂಡರು ಖಲೀಲ್ ಅಲ್ ಹೊಸಾನಿ ಅವರ ಪತ್ನಿ ಮಾತ್ರ ಭರವಸೆ ಕಳೆದುಕೊಳ್ಳಲಿಲ್ಲ, ಒಂದಲ್ಲ ಒಂದು ದಿನ ತನ್ನ ಪತಿ ಹುಷಾರಾಗಿ ಮೇಲೆದ್ದು ಬಂದೇ ಬರ್ತಾರೆ ಎಂಬ ವಿಶ್ವಾಸ ಅವರಿಗಿತ್ತು. ಹೀಗಾಗಿ ಪತ್ನಿ ಫಾತಿಮಾ, ಅವರಿಗೆ ತಮ್ಮದೇ ಆದ ವಿಚಿತ್ರವೆನಿಸುವ ವೈದ್ಯಕೀಯ ಜಗತ್ತು ಹಿಂದೆಂದು ಮಾಡದ ಪ್ರಾಕೃತಿಕ ಚಿಕಿತ್ಸೆ ನೀಡಲು ಮುಂದಾದರು. ಅವರನ್ನು ದಿನವೂ ಸಮೀಪದ ಅಲ್ ಮಿರ್ಫಾದ ಬೀಚ್‌ಗೆ ಕರೆದೊಯ್ಯಲು ಪ್ರಾರಂಭಿಸಿದರು ಗಂಟೆಗಳ ಕಾಲ ಪತಿಯನ್ನು ಮರಳಿನಲ್ಲಿ ಹೂತುಹಾಕುತ್ತಿದ್ದರು. ಮರಳು ಮತ್ತು ಸಮುದ್ರದ ನೀರಿನಿಂದ ಪತಿಯ ಸ್ನಾಯುಗಳಿಗೆ ಮಸಾಜ್ ಮಾಡಿದರು. ನಂತರ ಸಮುದ್ರದ ನೀರಿನಲ್ಲೇ ಅವರನ್ನು ಸ್ನಾನ ಮಾಡಿಸಿದರು. ಸುಮಾರು ತಿಂಗಳುಗಳ ಕಾಲ ನಿರಂತರವಾಗಿ ಅವರು ತಮ್ಮ ಪತಿಗೆ ಈ ಪ್ರಾಕೃತಿಕ ಚಿಕಿತ್ಸೆಯನ್ನು ನೀಡಿದರು. ಈ ಅಸಾಂಪ್ರದಾಯಿಕ ಚಿಕಿತ್ಸೆ ಆರಂಭಿಸಿದ 4ರಿಂದ 5 ತಿಂಗಳ ಅವಧಿಯಲ್ಲಿ ಖಲೀಲ್ ಯಾರ ಸಹಾಯವೂ ಇಲ್ಲದೇ ಅವರೇ ನಿಲ್ಲಲು ಆರಂಭಿಸಿದರು ಎಂದು ಪತ್ನಿ ಫಾತಿಮಾ ಹೇಳಿದ್ದಾರೆ.

ಯಾರ ಸಹಾಯವಿಲ್ಲದೇ ಎದ್ದು ಓಡಾಡಲು ಶುರು ಮಾಡಿದ ಪತಿ
ವೈದ್ಯಕೀಯ ಜಗತ್ತಿನಲ್ಲಿ ಇದೊಂದು ಅಚ್ಚರಿ ಎನಿಸಿದೆ. ಈ ಬಗ್ಗೆ ಸ್ವತಃ ಖಲೀಲ್ ಪತ್ನಿ ಫಾತಿಮಾ ಅವರೇ ತಾವು ಮಾಡಿದ ಈ ಹಠಯೋಗದ ಬಗ್ಗೆ ಹೇಳಿಕೊಂಡಿದ್ದು ಹೀಗೆ, ಆಸ್ಪತ್ರೆಯಲ್ಲಿ ಚಿಕಿತ್ಸೆಯು ತುಂಬಾ ಸಮಯ ತೆಗೆದುಕೊಳ್ಳುತ್ತಿತ್ತು, ಆದ್ದರಿಂದ ನಾನು ಅವನನ್ನು ಮನೆಗೆ ಕರೆತಂದೆ. ನಂತರ ನಾನು ಅವನನ್ನು ಅಲ್ ಮಿರ್ಫಾದ ಬೀಚ್‌ಗೆ ಕರೆದೊಯ್ಯಲು ಪ್ರಾರಂಭಿಸಿದೆ. ಅಲ್ಲಿ ಗಂಟೆಗಟ್ಟಲೆ ಮರಳಿನಲ್ಲಿ ಅವರನ್ನು ಹೂತುಹಾಕಿದೆ ಮತ್ತು ಮರಳು ಮತ್ತು ಸಮುದ್ರದ ನೀರಿನಿಂದ ಅವರ ಸ್ನಾಯುಗಳನ್ನು ಮಸಾಜ್ ಮಾಡಿದೆ. ನಂತರ ಸಮುದ್ರ ನೀರಲ್ಲಿ ಅವರನ್ನು ಸ್ವಚ್ಛಗೊಳಿಸುತ್ತಿದ್ದೆ. ಇದು ಹಲವು ತಿಂಗಳುಗಳ ಕಾಲ ನಡೆಯಿತು.
ಈ ಸಾಂಪ್ರದಾಯಿಕವಲ್ಲದ ಚಿಕಿತ್ಸೆ ಆರಂಭಿಸಿದ ಕೇವಲ ನಾಲ್ಕರಿಂದ ಐದು ತಿಂಗಳ ನಂತರ, ಖಲೀಲ್ ಎದ್ದು ನಿಲ್ಲಲು ಆರಂಭಿಸಿದರು. ಅವರು ಮತ್ತೆ ಮಗುವಿನಂತೆ ನಡೆಯುವುದು, ಓಡುವುದು ಮತ್ತು ಆಟವಾಡುವುದನ್ನು ನೋಡುವುದನ್ನು ನಾನು ಆನಂದಿಸುತ್ತಿದ್ದೆ ಎಂದು ಅವರು ತಾಯಿಯಂತೆ ನಗುತ್ತಾ ಹೇಳಿದ್ದಾರೆ ಇಂದು ಅವರಿಗೆ 60 ವರ್ಷ, ಅವರು ಯಾರ ಸಹಾಯವಿಲ್ಲದೆ ನಡೆಯುತ್ತಾರೆ ಎಂದು ಫಾತಿಮಾ ಹೇಳಿಕೊಂಡಿದ್ದಾರೆ.
ಅಂದಹಾಗೆ ಈ ದಂಪತಿ ಘಟನೆಗೂ ಮೊದಲು ಸಾರ್ವಜನಿಕ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಆದರೆ ಖಲೀಲ್ ಚೇತರಿಕೆಯ ನಂತರ ದಂಪತಿ ಮತ್ತೆ ತಮ್ಮ ಸೇವೆಗೆ ಮರಳಿದ್ದು, ಕಡಿಮೆ ಆದಾಯದ ಕುಟುಂಬಗಳ ಮಕ್ಕಳಿಗೆ ಶಾಲಾ ಕಿಟ್‌ಗಳನ್ನು ಜೋಡಿಸಲು ಸಹಾಯ ಮಾಡುತ್ತಾರೆ. ದುಬೈ ಕೇರ್ಸ್, ಅಲ್ದರ್ ಜೊತೆ ಸಹಭಾಗಿತ್ವದಲ್ಲಿ ಆಯೋಜಿಸಿದ್ದ 'ವಾಲಂಟೀರ್ ಎಮಿರೇಟ್ಸ್ ಬ್ಯಾಕ್ ಟು ಸ್ಕೂಲ್ ಹೆಸರಿನ ಯೋಜನೆಯಲ್ಲಿ ಇವರು ಆರ್ಥಿಕವಾಗಿ ದುರ್ಬಲವಾಗಿರುವ ಮಕ್ಕಳ ಶಿಕ್ಷಣಕ್ಕೆ ನೆರವಾಗುತ್ತಾರೆ.
ಅದೇನೆ ಇರಲಿ ಈ ಘಟನೆ ಒಳ್ಳೆಯವರಿಗೆ ನಿಧಾನವಾಗಿಯಾದರೂ ಒಳ್ಳೆಯದೇ ಆಗುತ್ತದೆ ಎಂಬ ಮಾತಿನ ಮೇಲೆ ನಂಬಿಕೆ ಇಡುವಂತೆ ಮಾಡಿದೆ. ಜೊತೆಗೆ ಎರಡನೇಯದಾಗಿ ಖಲೀಲ್ ಅವರ ಚೇತರಿಕೆಯ ಹಿಂದೆ ಅಮ್ಮನಂತಹ ಪತ್ನಿಯ ಭರವಸೆ, ತಾಳ್ಮೆ, ಪ್ರೀತಿ, ತ್ಯಾಗ ಚೈತನ್ಯವಿದೆ. ನಂಬಿಕೆಗಿಂತ ಮಿಗಿಲಾದ ಶಕ್ತಿ ಬೇರಿಲ್ಲ ಎಂಬುದು ಸಾಬೀತಾಗಿದೆ. ಈ ಘಟನೆ ಬಗ್ಗೆ ನಿಮಗೇನನಿಸುತ್ತದೆ ಕಾಮೆಂಟ್ ಮಾಡಿ.
ಇದನ್ನೂ ಓದಿ: ಮೊದಲು ಮೂಗಿನ ಪ್ಲಾಸ್ಟಿಕ್ ಸರ್ಜರಿ ಮಾಡಿದ್ದು, ಬ್ರಿಟಿಷ್ ಡಾಕ್ಟರ್ ಅಲ್ಲ, ಭಾರತೀಯ ಕುಂಬಾರ
