ಗಂಡನಿಗೆ ಕನಸಿನ ಬೈಕ್ ಉಡುಗೊರೆಯಾಗಿ ನೀಡಿದ ಹೆಂಡತಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಭಾವುಕ ಕ್ಷಣ ನೋಡಿ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪತಿಯ ಆಸೆಯನ್ನು ಈಡೇರಿಸಿದ ಹೆಂಡತಿಯ ಪ್ರೀತಿಗೆ ಅನೇಕರು ಭಾವುಕರಾಗಿದ್ದಾರೆ.
ಕೆಲದಿನಗಳಿಂದ ಗಂಡ ಹೆಂಡತಿಯನ್ನು ಹತ್ಯೆ ಮಾಡುವುದು ಹೆಂಡತಿ ಗಂಡನನ್ನು ಹತ್ಯೆ ಮಾಡುವುದು ಮುಂತಾದ ಸುದ್ದಿಗಳೇ ಸಾಮಾಜಿಕ ಜಾಲತಾಣವೂ ಸೇರಿದಂತೆ ಬಹುತೇಕ ಪ್ರಮುಖ ಸುದ್ದಿ ಮಾಧ್ಯಮಗಳಲ್ಲಿ ವರದಿಯಾಗಿ ಸಂಚಲನ ಸೃಷ್ಟಿಸಿದ್ದವು. ಈ ಸುದ್ದಿಗಳನ್ನು ಕೇಳಿ ಯುವ ಸಮುದಾಯ ಮದುವೆಯ ಕತೆಯೇ ಬೇಡ ಎಂಬಂತಹ ಯೋಚನೆ ಮಾಡಲು ಶುರು ಮಾಡಿದ್ದರು. ಇಂತಹ ಸುದ್ದಿಗಳನ್ನು ಕೇಳಿ ಬೇಜಾರಾಗಿದ್ದ ಯುವ ಸಮೂಹಕ್ಕೊಂದು ಗಂಡ ಹೆಂಡತಿಯ ಪ್ರೀತಿಯ ಕತೆ ಇದೆ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಅನೇಕರು ವೀಡಿಯೋ ನೋಡಿ ಭಾವುಕರಾಗಿದ್ದಾರೆ. ಹಾಗಿದ್ರೆ ಅದೇನು ಹೆಚ್ಚೇನು ಇಲ್ಲ ಹೆಂಡತಿ ತನ್ನ ಪ್ರೀತಿಯ ಗಂಡನಿಗೆ ಆತ ಇಷ್ಟಪಟ್ಟಂತಹ ಆತನ ಕನಸಿನ ಬೈಕನ್ನು ಉಡುಗೊರೆಯಾಗಿ ನೀಡಿದ್ದಾಳೆ. ಈ ವೀಡಿಯೋ ಈಗ ಬರೀ ವೈರಲ್ ಆಗಿದೆ. ಹೆಂಡ್ತಿಯಿಂದ ಗಂಡನ ಕೊಲೆ ಎಂಬ ಸುದ್ದಿ ಕೇಳಿ ಕೇಳಿ ಹೈರಾಣಾಗಿದ್ದ ಗಂಡೈಕ್ಳು ಪರ್ವಾಗಿಲ್ಲ ಇಂತಹ ಹೆಂಗೆಳೆಯರು ಇದ್ದಾರೆ ಅಂತ ಖುಷಿಪಟ್ಟಿದ್ದಾರೆ.
ಬಹುತೇಕ ಪುರುಷರಿಗೆ ತಮ್ಮ ವಾಹನಗಳ ಮೇಲೆ ಪ್ರೀತಿ ಹೆಚ್ಚು ಕೆಲವರಿಗೆ ಕಾರಿನ ಕ್ರೇಜ್ ಆದರೆ ಇನ್ನು ಕೆಲವರಿಗೆ ಬೈಕ್ ಕ್ರೇಜ್ ಆದರೆ ಎಲ್ಲರಿಗೂ ತಮ್ಮ ಕನಸಿನ ಬೈಕ್ ಅಥವಾ ಕಾರನ್ನು ಕೊಂಡುಕೊಳ್ಳುವಷ್ಟು ಶಕ್ತಿ ಇರುವುದಿಲ್ಲ, ಕೆಲವರಿಗೆ ಕುಟುಂಬವನ್ನು ನಿಭಾಯಿಸುವುದೇ ದೊಡ್ಡ ಸವಾಲು ಹೀಗಿರುವಾಗ ಕನಸಿನ ಬೈಕ್ ಕಾರುಗಳನ್ನು ಖರೀದಿಸುವುದಾದರು ಹೇಗೆ? ಬಹುತೇಕ ಮಧ್ಯಮ ವರ್ಗದ ಪುರುಷರ 'ಮನಸ್ಥಿತಿ ಮನಿಸ್ಥಿತಿ' ಹೀಗೆಯೇ ಇರುತ್ತದೆ. ಹೆಣ್ಮಕ್ಕಳಾದರು ನನಗದು ಕೊಡಿಸು ಇದು ಕೊಡಿಸು ಎಂದು ಗಂಡನನ್ನು ಕೇಳುತ್ತಾರೆ ಆದರೆ ಪುರುಷರು ಕೇಳುವುದು ಬಹಳ ವಿರಳ. ಹೀಗಾಗಿ ಪುರುಷರು ತಮ್ಮ ಆಸೆಗಳಿಗೆ ತಣ್ಣಿರೆರೆದು ಸುಮ್ಮನಾಗುವುದೇ ಹೆಚ್ಚು. ಆದರೆ ಈ ರೀತಿ ಆಸೆಪಟ್ಟ ಗಂಡನ ಕನಸ್ಸನ್ನು ಪ್ರೀತಿಯ ಹೆಂಡ್ತಿ ಈಡೇರಿಸಿದ್ದು, ಆ ಭಾವುಕ ಕ್ಷಣದ ವಿಡಿಯೋ ವೈರಲ್ ಆಗಿದೆ.
ಅಂದಹಾಗೆ ಈ ವೀಡಿಯೋವನ್ನು vinayshaarma ಎಂಬುವವರು ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಎಂದಿಗೂ ಏನನ್ನೂ ಕೇಳದ ವ್ಯಕ್ತಿಗೆ... ಸರ್‌ಫ್ರೈಸ್ ಎಂದು ಬರೆದು ವೀಡಿಯೋ ಪೋಸ್ಟ್ ಮಾಡಲಾಗಿದೆ. ಅಲ್ಲದೇ ಪತ್ನಿಯ ಸರ್‌ಪ್ರೈಸ್ ನೋಡಿ ಆ ಪತಿ ಬಹಳ ಭಾವುಕರಾಗಿದ್ದಾರೆ. ವೀಡಿಯೋದಲ್ಲಿ ಒಬ್ಬರು ಬೈಕನ್ನು ರೈಡ್ ಮಾಡಿ ತಂದು ಅವರ ಮನೆಯ ಮುಂದೆ ನಿಲ್ಲಿಸಿದ್ದಾರೆ. ಆದರೆ ಪತಿಗೆ ಅದು ತನಗಾಗಿಯೇ ಬಂದಿದೆ ಎಂಬ ವಿಚಾರ ಗೊತ್ತಿಲ್ಲ. ಇಲ್ಲೇಕೆ ಈ ಬೈಕ್ ಇದೆ ಎಂದು ಅವರು ಗೊಂದಲದಿಂದಲೇ ನೋಡುತ್ತಾರೆ. ಆದರೆ ಡೆಲಿವರಿ ಮ್ಯಾನ್ ಏನು ಹೇಳದೇ ಸುಮ್ಮನಿರುತ್ತಾನೆ. ಈ ವೇಳೆ ಅವರ ಮಗ ಖುಷಿಯಿಂದ ಅತ್ತಿತ್ತ ಓಡಾಡುತ್ತಿದ್ದರೆ ಅಪ್ಪ ಮಾತ್ರ ಶಾಕ್ ಆದವರಂತೆ ಜೊತೆಗೆ ಭಾವುಕರು ಆಗಿದ್ದು ಏನು ಹೇಳಲಾಗದೆ ಸುಮ್ಮನೇ ಹೆಂಡತಿ ಮುಖ ನೋಡುತ್ತಾರೆ. ಹೆಂತಿ ಇದು ನಿಮಗಾಗಿ ಎಂದು ಹೇಳುವಾಗ ಅವರ ಕಣ್ಣಂಚು ತೇವಗೊಳ್ಳುತ್ತದೆ. ಗಂಡ ಹೆಂಡತಿ ಇಬ್ಬರು ಆ ಕ್ಷಣ ಭಾವುಕರಾಗಿದ್ದು ಒಬ್ಬರನ್ನೊಬ್ಬರು ತಬ್ಬಿಕೊಂಡಿದ್ದಾರೆ.
ಈ ವೀಡಿಯೋ ನೋಡಿದವರು ಕೂಡ ಭಾವುಕರಾಗಿದ್ದು, ಗಂಡನ ಮೇಲಿನ ಪತ್ನಿಯ ಪ್ರೀತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಅಪರಿಚಿತರ ವೀಡಿಯೋ ನೋಡಿ ನನಗೇಕೆ ಕಣ್ಣೀರು ಬರುತ್ತಿದೆ ಎಂದು ಒಬ್ಬರು ಪ್ರಶ್ನೆ ಮಾಡಿದ್ದಾರೆ. ಇದೊಂದು ಶುದ್ಧ ಪ್ರೀತಿ ಅವರಿಬ್ಬರ ಪ್ರೀತಿ ನೋಡಿ ಖುಷಿ ಆಯ್ತು, ಪ್ರತಿದಿನವೂ ಇಂತಹ ವೀಡಿಯೋಗಳಿಂದ ನನ್ನ ದಿನ ಆರಂಭವಾಗಲಿ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇದು ಇಂಟರ್‌ನೆಟ್‌ನಲ್ಲಿ ನಾನು ನೋಡಿದ ತುಂಬಾ ಒಳ್ಳೆಯ ವಿಡಿಯೋ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಪುರುಷರಿಗೂ ಭಾವನೆಗಳಿವೆ. ಅವರಿಗೂ ಉಡುಗೊರೆಗಳು, ಆಶ್ಚರ್ಯ, ಮುದ್ದು ಮತ್ತು ಎಲ್ಲಾ ಪ್ರೀತಿ ಮತ್ತು ಗೌರವಗಳು ಅರ್ಹವಾಗಿವೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಈ ವೀಡಿಯೋ ಬಗ್ಗೆ ನಿಮಗೇನನಿಸಿತು ಕಾಮೆಂಟ್ ಮಾಡಿ.
