ಪ್ಲಾಸ್ಟಿಕ್ ಸರ್ಜರಿ ಆಧುನಿಕ ವೈದ್ಯಲೋಕದ ಕರಾಮತ್ತು ಎಂದೇ ನೀವು ಇಷ್ಟು ದಿನ ಭಾವಿಸಿದ್ದಿರಬಹುದು ಆದರೆ ಅದು ನಿಜನಾ? ಖಂಡಿತ ಅಲ್ಲ, 1793ರಲ್ಲೇ ಪುಣೆಯ ವೈದ್ಯನಲ್ಲ, ಮಡಿಕೆ ಮಾಡುವ ಕುಂಬಾರನೋರ್ವ ಇಂದು ಬಹಳಷ್ಟು ಫೇಮಸ್ ಆಗಿರುವ ಪ್ಲಾಸ್ಟಿಕ್ ಸರ್ಜರಿಯನ್ನು ಓರ್ವನ ಮೂಗಿಗೆ ಮಾಡಿ ಯಶಸ್ವಿಯಾಗಿದ್ದ.

ಪ್ಲಾಸ್ಟಿಕ್ ಸರ್ಜರಿ ಆಧುನಿಕ ವೈದ್ಯಲೋಕದ ಕರಾಮತ್ತು ಎಂದೇ ನೀವು ಇಷ್ಟು ದಿನ ಭಾವಿಸಿದ್ದಿರಬಹುದು ಆದರೆ ಅದು ನಿಜನಾ? ಖಂಡಿತ ಅಲ್ಲ, 1793ರಲ್ಲೇ ಪುಣೆಯ ವೈದ್ಯನಲ್ಲ, ಮಡಿಕೆ ಮಾಡುವ ಕುಂಬಾರನೋರ್ವ ಇಂದು ಬಹಳಷ್ಟು ಫೇಮಸ್ ಆಗಿರುವ ಪ್ಲಾಸ್ಟಿಕ್ ಸರ್ಜರಿಯನ್ನು ಓರ್ವನ ಮೂಗಿಗೆ ಮಾಡಿ ಯಶಸ್ವಿಯಾಗಿದ್ದ. ಈತನ ಈ ಶಸ್ತ್ರಚಿಕಿತ್ಸೆ ವಿಧಾನವನ್ನು ಇಬ್ಬರು ಬ್ರಿಟಿಷ್ ವೈದ್ಯಕೀಯ ಸಿಬ್ಬಂದಿ ವೀಕ್ಷಿಸಿದರು ಮತ್ತು ಅದನ್ನು ಇಂಗ್ಲೆಂಡ್‌ನಲ್ಲಿ ಪ್ರಚಾರ ಮಾಡಿ ಕಾರ್ಯರೂಪಕ್ಕೆ ತಂದು ಪ್ರಸಿದ್ಧಿ ಮಾಡಿದರು.

ಬಹುಶಃ ಇದನ್ನು ನಿಮಗೆ ಕೇಳುವುದಕ್ಕೂ ನಂಬುವುದಕ್ಕೂ ಕಷ್ಟಕರ ಎನಿಸಬಹುದು. ಆದರೆ ಈ ವಿಚಾರ ಸುಳ್ಳಲ್ಲ. ಹಾಗಿದ್ರೆ ಈ ನೋಸ್ ಜಾಬ್ ಎಂದು ಕರೆಯಲ್ಪಡುವ ಮೂಗಿನ ಪ್ಲಾಸ್ಟಿಕ್ ಸರ್ಜರಿಯನ್ನು ನಡೆಸಿದ್ದು ಏಕೆ? ಆಗಿನ ಕಾಲದಲ್ಲಿ ಪ್ಲಾಸ್ಟಿಕ್‌ ಸರ್ಜರಿ ಮಾಡುವಂತಹ ಸಂದರ್ಭ ಎದುರಾಗಿದ್ದು ಹೇಗೆ ಇದೆಲ್ಲದರ ಡಿಟೇಲ್ ಇಲ್ಲಿದೆ ನೋಡಿ...

ಐರೋಪ್ಯ ದೇಶಗಳ ಸರ್ಜನ್‌ಗಳು ಪುಣೆಯ ಕುಂಬಾರನಿಂದ ಈ ನೋಸ್ ಜಾಬ್ ಕಲಿತ್ತಿದ್ದು ಹೇಗೆ?

ಈ ಪ್ಲಾಸ್ಟಿಕ್ ಸರ್ಜರಿ ಮಿಲಿಯನ್ ಡಾಲರ್‌ನ ಉದ್ಯಮವಾಗಿ ಆರಂಭವಾಗುವ ಮೊದಲು ಪುಣೆಯ ಮಡಿಕೆ ಮಾಡುವ ಕುಂಬಾರನೋರ್ವ ವ್ಯಕ್ತಿಯೋರ್ವನ ಹಣೆಯ ಮೇಲೆ ಚರ್ಮವನ್ನು ಬಳಸಿ ಆತನ ಮೂಗನ್ನು ಮತ್ತೆ ಮರುಸ್ಥಾಪಿಸಿದ್ದ. ಇದೊಂದು ಪ್ಲಾಸ್ಟಿಕ್ ಸರ್ಜರಿ ಐರೋಪ್ಯ ದೇಶಗಳ ವೈದ್ಯರಿಗೆ ಹೇಗೆ ನೋಸ್ ಜಾಬ್ ಅನ್ನು ನಿಜವಾಗಿಯೂ ಮಾಡಲಾಗುತ್ತದೆ ಎಂಬುದನ್ನು ತಿಳಿಸಿ ಕೊಟ್ಟಿತ್ತು.

ಈ ಆಪರೇಷನ್ ನಡೆಯುವುದಕ್ಕೆ ಕಾರಣ ಏನು?

ಕೌವಾಸ್ಜೀ ಎಂಬ ಎತ್ತಿನ ಗಾಡಿಯ ಚಾಲಕನೋರ್ವ ಬ್ರಿಟಿಷ್ ಸೇನೆಯಲ್ಲಿ ಕೆಲಸ ಮಾಡುತ್ತಿದ್ದ. ಆತನನ್ನು ಮೂರನೇ ಆಂಗ್ಲೋ ಇಂಡಿಯನ್ ಯುದ್ಧದ ವೇಳೆ ಟಿಪ್ಪು ಸುಲ್ತಾನ್‌ ಸೆರೆ ಹಿಡಿದಿದ್ದ, ಸೆರೆ ಹಿಡಿದು ಆತನಿಗೆ ಶಿಕ್ಷೆಯಾಗಿ ಆತನ ಮೂಗು ಹಾಗೂ ಕೈಗಳನ್ನು ಕತ್ತರಿಸಿದ್ದ, ಮೂಗು ಕೈಗಳು ಕತ್ತರಿಸಲ್ಪಟ್ಟರೂ ಆತ ಬದುಕುಳಿದಿದ್ದ ಆದರೆ ಮೂಗು ಕತ್ತರಿಸಲ್ಪಟ್ಟಿದ್ದರಿಂದಾಗಿ ಆತ ವರ್ಷಗಳ ಕಾಲ ಅರ್ಧ ಮುಖವನ್ನು ಮುಚ್ಚಿಕೊಂಡು ಬದುಕುತ್ತಿದ್ದ. ಆತನಿಗೆ ಉಸಿರಾಡುವುದಕ್ಕೂ ಕಷ್ಟವಾಗುತ್ತಿತ್ತು. ಆದರೆ ಇದನ್ನು ನೋಡಿದ ಸಾಮಾನ್ಯ ಕುಂಬಾರನೋರ್ವ ಆತನ ಮೂಗಿಗೆ ಸರಿಯಾದ ಹೊಸ ರೂಪ ನೀಡಿದ್ದ.

ಕೌವಾಸ್ಜೀಗೆ ಅನಸ್ಥೇಸಿಯಾ ನೀಡಿ ಆತನ ಹಣೆಯ ಚರ್ಮವನ್ನು ತೆಗೆದು ಆತನಿಗೆ ಹೊಸ ಮೂಗನ್ನು ಸ್ಟಿಚ್ ಮಾಡಿದ, ಪ್ರಾಚೀನ ವಿಜ್ಞಾನ ಅದ್ಭುತವಾದ ವೈದ್ಯಕೀಯ ತಂತ್ರಗಳನ್ನು ಬಳಸಿ ಆತ ಈ ನೋಸ್ ಜಾಬ್ ಅಥವಾ ಮೂಗಿಗೆ ಮರುರೂಪವನ್ನು ನೀಡಿದ್ದ.

ಆದರೆ ಕುಂಬಾರನೋರ್ವ ಇದ್ದಕ್ಕಿದ್ದಂತೆ ಡಾಕ್ಟರ್ ಆಗಿದ್ದು ಹೇಗೆ?

ಮಡಿಕೆ ಮಾಡುವ ಕುಂಬಾರನೋರ್ವ ಇದ್ದಕ್ಕಿದ್ದಂತೆ ಮೂಗು ಸರಿಪಡಿಸುವ ಸರ್ಜನ್ ಆಗುವುದಾದರೂ ಹೇಗೆ ಎಂಬ ಕುತೂಹಲ ನಿಮ್ಮನ್ನು ಕಾಡಬಹುದು. ಆದರೆ ಇದಕ್ಕೆ ಕಾರಣ ಭಾರತೀಯ ಪ್ರಾಚೀನ ವೈದ್ಯಕೀಯ ಶಸ್ತ್ರ. ಭಾರತದಲ್ಲಿ ಹಿಂದೆ ವೈದ್ಯಕೀಯ ಚಿಕಿತ್ಸೆ ಕೇವಲ ದೊಡ್ಡವರಿಗೆ ಗಣ್ಯರಿಗೆ ಓದಿದವರಿಗೆ ಮೀಸಲಾಗಿರಲಿಲ್ಲ, ಅದು ಕಾಲಕ್ಕೆ ತಕ್ಕಂತೆ ಕೈಗಳಿಂದ ಕೈಗಳಿಗೆ, ಕುಟುಂಬದ ಹಳೇ ತಲೆಮಾರಿನಿಂದ ಹೊಸ ತಲೆಮಾರಿಗೆ ಹರಿದು ಬಂದಿತ್ತು. ಹಾಗೆಯೇ ಈ ಪ್ಲಾಸ್ಟಿಕ್ ಸರ್ಜರಿಯೂ ಭಾರತದ 2000ಕ್ಕೂ ವರ್ಷ ಹಳೆಯ ಶಸ್ತ್ರಚಿಕಿತ್ಸಕ ಗ್ರಂಥ ಶುಶ್ರುತ ಸಂಹಿತಾದಿಂದ ಹರಿದು ಬಂದಿತ್ತು. ಇದನ್ನು ಅರಿತಿದ್ದ ಕುಂಬಾರ ತನ್ನ ತಂತ್ರಗಳನ್ನು ಸೇರಿಸಿ ಅ ವ್ಯಕ್ತಿಗೆ ಮೂಗಿಗೆ ಶಸ್ತ್ರಚಿಕಿತ್ಸೆ ಮಾಡಿದ್ದ.

1974ರಲ್ಲಿ ಲಂಡನ್‌ನ ದಿ ಜಂಟಲ್‌ಮ್ಯಾನ್ ಮ್ಯಾಗಜೀನ್‌ನಲ್ಲಿ ಪ್ರಕಟವಾಗಿತ್ತು ಕೌವಾಸ್ಜೀ ಕತೆ

ಇಬ್ಬರು ಬ್ರಿಟಿಷ್ ವೈದ್ಯಕೀಯ ಸಿಬ್ಬಂದಿ ಇದನ್ನು ಗಮನಿಸಿ ತಮ್ಮ ಕಣ್ಣುಗಳನ್ನು ನಂಬದೇ ಹೋದರು ಜೊತೆಗೆ ಈ ಕತೆಯನ್ನು ಇಂಗ್ಲೆಂಡ್‌ಗೆ ಹೊತ್ತೊಯ್ದರು. ನಂತರ 1794ರಲ್ಲಿ ಲಂಡನ್‌ನ ಪತ್ರಿಕೆ 'ದಿ ಜಂಟಲ್‌ಮ್ಯಾನ್ ಮ್ಯಾಗಜೀನ್' ಕೌವಾಸ್ಜೀ ಅವರ ಈ ಮೂಗಿ ಸರ್ಜರಿಯ ಕತೆಯನ್ನು ಪ್ರಕಟಿಸಿದಾಗ ಇಡೀ ಇಂಗ್ಲೆಂಡ್ ಈ ಕತೆ ಕೇಳಿ ಅಚ್ಚರಿಪಟ್ಟಿತ್ತು. ಹೀಗಾಗಿ ಸರ್ಜನ್‌ಗಳು ಈ ನೋಸ್ ಜಾಬ್‌ನ್ನು 'ದಿ ಇಂಡಿಯನ್ ಮೆಥಡ್' ಎಂದು ಗುರುತಿಸಿದರು.

ಇದಕ್ಕೂ ಮೊದಲು, ಯುರೋಪಿಯನ್ನರು ಇಂತಹ ಸರ್ಜರಿಗಳಿಗೆ ತೋಳಿನಿಂದ ಚರ್ಮವನ್ನು ಕಸಿ ಮಾಡಿ ವಾರಗಳವರೆಗೆ ಮುಖಕ್ಕೆ ಕಟ್ಟುತ್ತಿದ್ದರು. ಇದು ಹೆಚ್ಚಾಗಿ ದೋಷಪೂರಿತವಾಗಿತ್ತು ಮತ್ತು ಸ್ಪಷ್ಟವಾಗಿರುತ್ತದೆ ಎನ್ನುವ ಯಾವುದೇ ಗ್ಯಾರಂಟಿ ಇರಲಿಲ್ಲ. ಆದರೆ ಭಾರತದ ವಿಧಾನವು ನಿಖರ, ವೇಗವಾಗಿ ಗಾಯ ಮಾಗುವುದರ ಜೊತೆಗೆ ಕ್ರಾಂತಿಕಾರಿಯಾಗಿತ್ತು.

ಆರಂಭಿಸಿದ್ದು ನಮ್ಮ ಕುಂಬಾರ ಹೆಸರು ಹೆಮ್ಮೆ ಎರಡೂ ಬ್ರಿಟಿಷರಿಗೆ:

1814 ರ ಹೊತ್ತಿಗೆ, ಬ್ರಿಟಿಷ್ ಶಸ್ತ್ರಚಿಕಿತ್ಸಕ ಡಾ. ಜೋಸೆಫ್ ಕಾರ್ಪ್ಯೂ ಲಂಡನ್‌ನಲ್ಲಿ ಭಾರತೀಯ ವಿಧಾನವನ್ನು(Indian Method) ಪುನರಾವರ್ತಿಸುವಲ್ಲಿ ಯಶಸ್ವಿಯಾದರು. ಮತ್ತು ಪಶ್ಚಿಮದಲ್ಲಿ ಆಧುನಿಕ ಪ್ಲಾಸ್ಟಿಕ್ ಸರ್ಜರಿ ಹೀಗೆ ಪ್ರಾರಂಭವಾಯ್ತು. ಇಂದು, ಜಗತ್ತು ಸರ್ ಹೆರಾಲ್ಡ್ ಡೆಲ್ಫ್ ಗಿಲ್ಲೀಸ್ (Sir Harold Delf Gillies) ಅವರನ್ನು ಆಧುನಿಕ ಪ್ಲಾಸ್ಟಿಕ್ ಸರ್ಜರಿಯ ಪಿತಾಮಹ ಎಂದು ಕರೆಯುತ್ತದೆ. ಆದರೆ ನಮ್ಮ ಕುಂಬಾರನ ಕತೆ, ಅವರು ಮರಾಠಾ ಮೂಲದ ಕುಂಬಾರನಾಗಿಯೇ ಉಳಿದರು ಅವರಿಗೆ ಯಾವುದೇ ಹೆಸರಾಗಲಿ ಕ್ರೆಡಿಟ್ ಆಗಲಿ ಸಿಗಲಿಲ್ಲ.

ಹಾಗಾಗಿ ಮುಂದಿನ ಬಾರಿ ಯಾರಾದರೂ ಪ್ಲಾಸ್ಟಿಕ್ ಸರ್ಜರಿ ಪಾಶ್ಚಿಮಾತ್ಯ ದೇಶಗಳ ವೈದ್ಯಕೀಯ ಅದ್ಭುತ ಎಂದು ಹೇಳಿದರೆ, ಶಸ್ತ್ರಚಿಕಿತ್ಸೆಯ ಇತಿಹಾಸವನ್ನೇ ಶಾಶ್ವತವಾಗಿ ಬದಲಾಯಿಸಿದ ಹೆಸರಿಲ್ಲದ ಭಾರತೀಯ ಕುಂಬಾರನ ಬಗ್ಗೆ ಹೇಳಲು ಮರೆಯದಿರಿ.