Vijayapura toll gate assault: ವಿಜಯಪುರದ ಟೋಲ್ ಗೇಟ್‌ನಲ್ಲಿ, ಟೋಲ್ ಕೇಳಿದ ಸಿಬ್ಬಂದಿ ಮೇಲೆ ಬಿಜೆಪಿ ನಾಯಕ ವಿಜು ಗೌಡ ಪಾಟೀಲ್ ಅವರ ಪುತ್ರ ಸಮರ್ಥ್‌ಗೌಡ ಪಾಟೀಲ್ ಹಲ್ಲೆ ನಡೆಸಿದ್ದಾರೆ. ಈ ಘಟನೆಯು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ನನ್ನ ಅಪ್ಪ ಯಾರು ಗೊತ್ತಾ ಎಂದು ಕೇಳಿ ಟೋಲ್ ಸಿಬ್ಬಂದಿ ಮೇಲೆ ಹಲ್ಲೆ
ವಿಜಯಪುರ: ಟೋಲ್ ಗೇಟ್‌ನಲ್ಲಿ ಟೋಲ್ ಪಾವತಿಸುವಂತೆ ಕೇಳಿದ ಟೋಲ್ ಸಿಬ್ಬಂದಿ ಮೇಲೆ ಯುವಕನೋರ್ವ ಹಲ್ಲೆ ಮಾಡಿದ ಘಟನೆ ವಿಜಯಪುರದಲ್ಲಿ ನಡೆದಿದೆ. ಟೋಲ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಯುವಕನನ್ನು ವಿಜಯಪುರದ ಬಿಜೆಪಿ ನಾಯಕ ವಿಜು ಗೌಡ ಪಾಟೀಲ್ ಅವರ ಪುತ್ರ ಸಮರ್ಥ್‌ಗೌಡ ಪಾಟೀಲ್ ಎಂದು ಗುರುತಿಸಲಾಗಿದೆ. ಘಟನೆಯ ದೃಶ್ಯಾವಳಿ ಸಿಸಿ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಜಯಪುರದಿಂದ ಸಿಂಧಗಿಯತ್ತ ಹೋಗುತ್ತಿದ್ದ ವೇಳೆ ಘಟನೆ
ವಿಜುಗೌಡ ಪಾಟೀಲ್ ಅವರ ಪುತ್ರನಾಗಿರುವ ಸಮರ್ಥ್‌ಗೌಡ ಪಾಟೀಲ್ ತನ್ನ ಕಪ್ಪು ಬಣ್ಣದ ಥಾರ್ ಗಾಡಿಯಲ್ಲಿ ವಿಜಯಪುರದಿಂದ ಸಿಂಧಗಿಯತ್ತ ಹೋಗುತ್ತಿದ್ದ ವೇಳೆ ಘಟನೆ ನಡೆದಿದೆ. ಟೋಲ್ ಬೂತ್ ಸಿಬ್ಬಂದಿ ಆತನ ಬಳಿ ಟೋಲ್ ಹಣ ಪಾವತಿ ಮಾಡುವಂತೆ ಕೇಳಿದಾಗ ಆತ ನನ್ನ ಅಪ್ಪ ಯಾರು ಗೊತ್ತಾ ಎಂದು ಹೇಳಿ ಹಲ್ಲೆ ಮಾಡಿದ್ದಾನೆ. ಬಳಿಕ ತಾನು ವಿಜುಗೌಡ ಪಾಟೀಲ್ ಮಗ ಸಮರ್ಥ್‌ಗೌಡ ಎಂದು ಹೇಳಿಕೊಂಡಿದ್ದಾನೆ.
ಈ ವೇಳೆ ಟೋಲ್ ಸಿಬ್ಬಂದಿ ತಾವು ಯಾವ ವಿಜುಗೌಡ ಬಗ್ಗೆ ಹೇಳುತ್ತಿದ್ದೀರಿ ಎಂದು ಕೇಳಿದ್ದಾರೆ. ಇದು ಸಮರ್ಥ್‌ಗೌಡನನ್ನು ಕೆರಳಿಸಿದ್ದು, ಆತ ಹಾಗೂ ಆತನ ಸ್ನೇಹಿತರು ಸೇರಿ ಟೋಲ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ.
ಘಟನೆ ಸಿಸಿಟಿವಿಯಲ್ಲಿ ಸೆರೆ
ಈ ಘಟನೆಯ ಸಂಪೂರ್ಣ ದೃಶ್ಯಾವಳಿ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದೆ. ಆದರೆ ಪೊಲೀಸರಿಗೆ ಈ ಬಗ್ಗೆ ಯಾವುದೇ ದೂರು ಬಂದಿಲ್ಲ, ದೂರು ಬಂದ ಕೂಡಲೇ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ವಿಜಯ್‌ಕುಮಾರ್ ಪಾಟೀಲ್ ಅವರು 2008ರಿಂದಲೂ ಬಬಲೇಶ್ವರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧೆ ಮಾಡುತ್ತಿದ್ದಾರೆ. ಆದರೆ ಅವರು ಒಮ್ಮೆಯೂ ಗೆದ್ದಿಲ್ಲ, ಈ ಕ್ಷೇತ್ರದಿಂದ ಎಂಬಿ ಪಾಟೀಲ್ ಅವರು ಗೆದ್ದು ಬಂದಿದ್ದು, ಸಚಿವರಾಗಿದ್ದಾರೆ. ಅವರು ರಾಜ್ಯದಲ್ಲಿ ಕೈಗಾರಿಕ ಸಚಿವರಾಗಿ ಕೆಲಸ ಮಾಡ್ತಿದ್ದಾರೆ.
ಇದನ್ನೂ ಓದಿ: ಜೆನ್ ಝಿ ಕಪಲ್ ಹನಿಮೂನ್ ರಹಸ್ಯ: ಬದಲಾದ ಯುವ ಜೋಡಿಗಳ ಆಯ್ಕೆ!
ಇದನ್ನೂ ಓದಿ: ಸರ್ಕಾರಿ ಶಾಲೆಯ ಮಕ್ಕಳ ಶಿಕ್ಷಣದ ವಿಚಾರದಲ್ಲೂ ಕೇರಳ ಸರ್ಕಾರದ ರಾಜಕೀಯ: ಪಿಎಂಶ್ರೀ ಯೋಜನೆಗೆ ಬ್ರೇಕ್
