Woman Dragged by Man in Street: ಬೀದಿಯಲ್ಲಿ ಓಡಾಡ್ತಿದ್ದ ಮಹಿಳೆಯೊಬ್ಬಳನ್ನು ಯುವಕನೋರ್ವ ನೀನು ನನ್ನ ಗರ್ಲ್‌ಫ್ರೆಂಡ್ ಆಗು ಅಂತ ತಬ್ಬಿಕೊಂಡು ಎಳೆದಾಡಿದಂತಹ ಆಘಾತಕಾರಿ ಘಟನೆ ನಡೆದಿದ್ದು, ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬೀದಿಯಲ್ಲಿ ಹೋಗ್ತಿದ್ದ ಮಹಿಳೆಯ ತಬ್ಬಿಕೊಂಡ ಯುವಕ
ಬೀದಿಯಲ್ಲಿ ಓಡಾಡ್ತಿದ್ದ ಮಹಿಳೆಯೊಬ್ಬಳನ್ನು ಯುವಕನೋರ್ವ ನನ್ನ ಗರ್ಲ್‌ಫ್ರೆಂಡ್ ಆಗು ಅಂತ ತಬ್ಬಿಕೊಂಡು ಎಳೆದಾಡಿದಂತಹ ಆಘಾತಕಾರಿ ಘಟನೆ ಚೀನಾದ ಹಾಂಗ್‌ಕಾಂಗ್‌ನಲ್ಲಿ ನಡೆದಿದೆ. 41 ವರ್ಷದ ಮಹಿಳೆಯೊಬ್ಬಳನ್ನು ಯುವಕನೋರ್ವ ಬಲವಂತವಾಗಿ ತನ್ನ ಎದೆಗೆ ತಬ್ಬಿಕೊಂಡು ಸುಮಾರು 10 ಮೀಟರ್ ವರೆಗೆ ಎಳೆದುಕೊಂಡು ಹೋಗಿದ್ದಾನೆ. ಜನಜಂಗುಳಿಯಿಂದ ತುಂಬಿದ್ದ ರಸ್ತೆಯಲ್ಲೇ ಈ ಘಟನೆ ನಡೆದಿದೆ. ವರದಿಗಳ ಪ್ರಕಾರ, ಸೆಪ್ಟೆಂಬರ್ 28 ರಂದು ಕಾಸ್‌ವೇ ಕೊಲ್ಲಿಯ ಪ್ಯಾಟರ್ಸನ್ ಸ್ಟ್ರೀಟ್‌ನಲ್ಲಿ ಘಟನೆ ನಡೆದಿದೆ ಬೆಳಗ್ಗೆ 9:30 ರ ಸುಮಾರಿಗೆ, ಒಬ್ಬ ವ್ಯಕ್ತಿ ಮಹಿಳೆಯನ್ನು ತನ್ನ ಗೆಳತಿಯಾಗಲು ಒತ್ತಾಯಿಸುತ್ತಾ ತಬ್ಬಿಕೊಂಡಿದ್ದು, ನಂತರ ಅಲ್ಲಿನ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ನನ್ನ ಗರ್ಲ್‌ಫ್ರೆಂಡ್ ಆಗು ಎಂದು ತಬ್ಬಿಕೊಂಡು ಎಳೆದಾಡಿದ ಯೂಟ್ಯೂಬರ್
ತನ್ನ ಗೆಳತಿಯಾಗುವಂತೆ ಒತ್ತಾಯಿಸುತ್ತಾ ಮಹಿಳೆಯನ್ನು ವ್ಯಕ್ತಿ ಅಸಭ್ಯವಾಗಿ ತಬ್ಬಿಕೊಳ್ಳುತ್ತಾ ಸುಮಾರು 10 ಮೀಟರ್‌ವರೆಗೆ ಆಕೆಯನ್ನು ಎಳೆದೊಯ್ದ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವೈರಲ್ ಆಗಿದೆ. ಅಲ್ಲೇ ಬೀದಿಯಲ್ಲಿ ಹೋಗ್ತಿದ್ದವರು ಮಧ್ಯಪ್ರವೇಶ ಮಾಡಿ ಮಹಿಳೆಯನ್ನು ರಕ್ಷಿಸಿದ್ದಾರೆ. ನಂತರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಹೀಗೆ ನಡುಬೀದಿಯಲ್ಲಿ ಮಹಿಳೆಯನ್ನು ಎಳೆದಾಡಿದವನನ್ನು ಮೋಕ್ ಎಂದು ಗುರುತಿಸಲಾಗಿದ್ದು, ಈತ ಚೀನಾದ ಯುಟ್ಯೂಬರ್ ಕೂಡ ಆಗಿದ್ದಾನೆ. ಮಹಿಳೆಗೆ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾನುವಾರ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಆರೋಪಿ ಮಹಿಳೆಯನ್ನು ಹಿಂದಿನಿಂದ ಬಂದು ತಬ್ಬಿಕೊಂಡಿದ್ದಾನೆ. ತನ್ನ ಗರ್ಲ್‌ಫ್ರೆಂಡ್ ಆಗುವಂತೆ ಕೇಳಿಕೊಂಡಿದ್ದಾನೆ. ಹಠಾತ್ ಆಗಿ ಯಾರೋ ಹಿಂದಿನಿಂದ ತಬ್ಬಿಕೊಂಡಿದ್ದರಿಂದ ಮಹಿಳೆ ಗಾಬರಿಯಾಗಿದ್ದು, ಆತನ ಕೈಯಿಂದ ಬಿಡಿಸಿಕೊಳ್ಳಲು ಪ್ರಯತ್ನಿಸಿದ್ದಾಳೆ. ಆದರೆ ಆತ ಬಹಳ ಬಿಗಿಯಾಗಿ ಹಿಡಿದುಕೊಂಡಿದ್ದರಿಂದ ಆಕೆಗೆ ತಪ್ಪಿಸಿಕೊಳ್ಳಲಾಗಲಿಲ್ಲ, ಹೀಗಾಗಿ ಆತ ಸುಮಾರು 10 ಮೀಟರ್‌ವರೆಗೆ ಆಕೆಯನ್ನು ಎಳೆದೊಯ್ದಿದ್ದಾನೆ.
ಬೀದಿಯಲ್ಲಿದ್ದ ಸಾರ್ವಜನಿಕರಿಂದ ಮಹಿಳೆಯ ರಕ್ಷಣೆ
ಈ ಘಟನೆ ಕೂಡಲೇ ಬೀದಿಯಲ್ಲಿ ಓಡಾಡ್ತಿದ್ದವರ ಗಮನ ಸೆಳೆದಿದ್ದು, ಕೆಲವರು ಕೂಡಲೇ ಮಧ್ಯಪ್ರವೇಶಿಸಿದ್ದಾರೆ. ಆಕೆಯನ್ನು ಬಿಟ್ಟು ಬಿಡುವಂತೆ ಹೇಳಿದ್ದಾರೆ ನಂತರವಷ್ಟೇ ಮೋಕ್ ಆಕೆಯನ್ನು ಬಿಟ್ಟಿದ್ದಾನೆ. ಈ ಘಟನೆಯಿಂದ ತೀವ್ರ ಆಕ್ರೋಶಗೊಂಡ ಮಹಿಳೆ ಕೂಡಲೇ ಪೊಲೀಸರಿಗೆ ವಿಚಾರ ತಿಳಿಸಿದ್ದು, ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಮೋಕ್‌ನನ್ನು ಬಂಧಿಸಿ ಕರೆದೊಯ್ದಿದ್ದಾರೆ.
ಒಂದು ನಿಮಿಷದ ವೀಡಿಯೊದಲ್ಲಿ, ನೇರಳೆ ಬಣ್ಣದ ಟಿ-ಶರ್ಟ್ ಧರಿಸಿದ ಮೋಕ್ ಮಹಿಳೆಯನ್ನು ಬಿಗಿಯಾಗಿ ಹಿಡಿದುಕೊಳ್ಳುವುದನ್ನು ಕಾಣಬಹುದು, ಮತ್ತು ಅವನ ಕೈ ಅವಳ ಎದೆಯ ಪ್ರದೇಶವನ್ನು ಮುಟ್ಟುವಂತೆ ಕಾಣುತ್ತದೆ. ನನ್ನ ಗೆಳತಿಯಾಗಿರಿ; ನಾನು ನಿಮ್ಮನ್ನು ನಿಜವಾಗಿಯೂ ಇಷ್ಟಪಡುತ್ತೇನೆ ಎಂದು ಆ ವ್ಯಕ್ತಿ ಘಟನೆಯ ಸಮಯದಲ್ಲಿ ಹೇಳುತ್ತಿರುವುದು ಕೇಳಿಬರುತ್ತದೆ. ಆದರೆ ಆಕೆ ನನಗೆ ನಿನ್ನ ಪರಿಚಯವಿಲ್ಲ ಎಂದು ಹೇಳುತ್ತಾ ಸಹಾಯಕ್ಕಾಗಿ ಕೂಗುವುದನ್ನು ಕಾಣಬಹುದು.
ನಂತರ ಆ ಮಹಿಳೆ ಈ ವಿಚಿತ್ರ ಘಟನೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ದಾಳಿ ನಡೆದಾಗ ನಾನು ಸೂಪರ್ ಮಾರ್ಕೆಟ್‌ಗೆ ಹೋಗುತ್ತಿದ್ದೆ ಎಂದು ಹೇಳಿದ್ದಾರೆ. ಆ ವ್ಯಕ್ತಿ ಯಾರೂ ಎಂದು ನನಗೆ ತಿಳಿದಿಲ್ಲ ಎಂದು ಅವರು ಹೇಳಿದರು. ತನಗೆ ಸಹಾಯ ಮಾಡಿದ ಪಕ್ಕದಲ್ಲಿದ್ದವರಿಗೆ, ವಿಶೇಷವಾಗಿ ಪೊಲೀಸರು ಬರುವವರೆಗೂ ತನ್ನೊಂದಿಗೆ ಇದ್ದ ನಾಲ್ವರು ವಿದೇಶಿಯರಿಗೆ ಅವರು ಇದೇ ವೇಳೆ ಕೃತಜ್ಞತೆ ಸಲ್ಲಿಸಿದರು. ವರದಿಗಳ ಪ್ರಕಾರ, ಆರೋಪಿಯನ್ನು ತಕ್ಷಣವೇ ಬಂಧಿಸಲಾಗಿದ್ದು, ಈ ಘಟನೆಯು ಆ ಪ್ರದೇಶದಲ್ಲಿ ಸಾರ್ವಜನಿಕ ಸುರಕ್ಷತೆ ಮತ್ತು ಮಹಿಳೆಯರ ಸುರಕ್ಷತೆಯನ್ನು ಹೆಚ್ಚುವಂತೆ ಮಾಡಿದೆ.
ಇದನ್ನೂ ಓದಿ: ರೇಬಿಸ್ ಬಗ್ಗೆ ಬೀದಿ ನಾಟಕ ಮಾಡ್ತಿದ್ದ ಕಲಾವಿದನಿಗೆ ಕಚ್ಚಿದ ಬೀದಿನಾಯಿ
ಇದನ್ನೂ ಓದಿ: ಹೆಂಡ್ತಿಗೆ ಸಮಯ ಕೊಡದ ಗಂಡ: ಪತ್ನಿ ಮಾಡಿದ್ದೇನು? ವೀಡಿಯೋ ವೈರಲ್
