Stray Dog Bites Artist:ರೇಬಿಸ್ ಕಾಯಿಲೆ ಬಗ್ಗೆ ಜಾಗೃತಿ ಮೂಡಿಸುವುದಕ್ಕೆ ಆಯೋಜಿಸಿದ್ದ ಬೀದಿ ನಾಟಕದಲ್ಲೇ ಕಲಾವಿದರೊಬ್ಬರಿಗೆ ಬೀದಿ ನಾಯಿ ಕಡಿದಂತಹ ವಿಪರ್ಯಾಸದ ಘಟನೆ ಕೇರಳದ ಕಣ್ಣೂರಿನಲ್ಲಿ ನಡೆದಿದ್ದು, ಈ ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರೇಬಿಸ್ ಬಗ್ಗೆ ಬೀದಿ ನಾಟಕ ಮಾಡ್ತಿದ್ದ ಕಲಾವಿದನಿಗೆ ಕಚ್ಚಿದ ಬೀದಿನಾಯಿ
ಕಣ್ಣೂರು: ರೇಬಿಸ್ ಕಾಯಿಲೆ ಬಗ್ಗೆ ಜಾಗೃತಿ ಮೂಡಿಸುವುದಕ್ಕೆ ಆಯೋಜಿಸಿದ್ದ ಬೀದಿ ನಾಟಕದಲ್ಲೇ ಕಲಾವಿದರೊಬ್ಬರಿಗೆ ಬೀದಿ ನಾಯಿ ಕಡಿದಂತಹ ವಿಪರ್ಯಾಸದ ಘಟನೆ ಕೇರಳದ ಕಣ್ಣೂರಿನಲ್ಲಿ ನಡೆದಿದ್ದು, ಈ ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೇರಳದ ಕಂದಕ್ಕೈನಲ್ಲಿ ಭಾನುವಾರ ಸಂಜೆ ಅಂದರೆ ಅಕ್ಟೋಬರ್ 5ರಂದು ಬೀದಿ ನಾಟಕವೊಂದನ್ನು ಆಯೋಜಿಸಲಾಗಿತ್ತು. ರೇಬಿಸ್ ಕಾಯಿಲೆ ಬಗ್ಗೆ ಜಾಗೃತಿ ಮೂಡಿಸುವ ಬೀದಿ ನಾಟಕ ಇದಾಗಿತ್ತು. ಆದರೆ ಈ ವೇಳೆ ಇದ್ದಕ್ಕಿದ್ದಂತೆ ಬಂದ ಬೀದಿ ನಾಯಿಯೊಂದು ವೇದಿಕೆಯ ಮೇಲೆ ಓಡಿ ಬಂದು ನಾಟಕ ಮಾಡ್ತಿದ್ದ ಒಬ್ಬರಿಗೆ ಕಚ್ಚಿದೆ.
ರೇಬೀಸ್ ಬಗ್ಗೆ ಜಾಗೃತಿ ಮೂಡಿಸ್ತಿದ್ದ ಕಲಾವಿದ ಪಿ. ರಾಧಾಕೃಷ್ಣನ್
ಏಕಪಾತ್ರ ಅಭಿನಯದ ಬೀದಿ ನಾಟಕ ಇದಾಗಿತ್ತು. ಮಲೆಯಾಳಂನಲ್ಲಿ ಪೆಕ್ಕಾಲಮ್ ಎಂದರೆ ರೇಬಿಸ್‌ಗೆ ಸಂಬಂಧಿಸಿದ ಬೀದಿ ನಾಟಕ ಇದಾಗಿತ್ತು. ಕಂದಕೈ ಕೃಷ್ಣ ಪಿಳ್ಳೈ ಲೈಬ್ರೆರಿ ಬಳಿ ಈ ಕಾರ್ಯಕ್ರಮವನ್ನು ಸಂಜೆ 7 ಗಂಟೆಗೆ ಆಯೋಜಿಸಲಾಗಿತ್ತು. ಪ್ರದರ್ಶನದ ಸಮಯದಲ್ಲಿ, ಬೊಗಳುವ ನಾಯಿಗಳು ಮಗುವಿನ ಮೇಲೆ ದಾಳಿ ಮಾಡುವ ಧ್ವನಿ ಮುದ್ರಣವನ್ನು ಸ್ಪೀಕರ್‌ಗಳ ಮೂಲಕ ಪ್ಲೇ ಮಾಡಲಾಯಿತು. ಈ ರೆಕಾರ್ಡಿಂಗ್‌ನಿಂದ ಗಾಬರಿಗೊಂಡ ಪಕ್ಕದಲ್ಲಿದ್ದ ಬೀದಿ ನಾಯಿಯೊಂದು ವೇದಿಕೆಯ ಮೇಲೆ ಧಾವಿಸಿ ಬಂದು ಪ್ರದರ್ಶನ ನೀಡುತ್ತಿದ್ದ 57 ವರ್ಷದ ಕಲಾವಿದ ಪಿ. ರಾಧಾಕೃಷ್ಣನ್ ಅವರಿಗೆ ಕಚ್ಚಿದೆ.
ಆದರೆ ಆರಂಭದಲ್ಲಿ ಪ್ರೇಕ್ಷಕರು ಅದನ್ನು ನಾಟಕದ ಒಂದು ಭಾಗವೆಂದು ಭಾವಿಸಿದರು. ಆದರೆ ರಾಧಾಕೃಷ್ಣನ್ ಅವರು ತನಗೆ ನಾಯಿ ಕಚ್ಚಿದೆ ಎಂದು ಬಹಿರಂಗಪಡಿಸಿದ ನಂತರವೇ ಅದು ನಿಜವೆಂಬುದು ತಿಳಿದು ಬಂದಿದೆ. ಬೀದಿ ನಾಯಿಗಳಿಂದ ದಾಳಿಗೊಳಗಾದ ಮಗುವಿಗೆ ಸಹಾಯ ಮಾಡುವ ವ್ಯಕ್ತಿಯ ಪಾತ್ರದಲ್ಲಿ ನಾನು ನಟಿಸುತ್ತಿದ್ದೆ. ಆ ನಟನೆಯ ಭಾಗವಾಗಿ ನನ್ನ ಕೈಯಲ್ಲಿ ಒಂದು ಕೋಲು ಇತ್ತು. ಆದರೆ ಇದ್ದಕ್ಕಿದ್ದಂತೆ, ಹಿಂದಿನಿಂದ ಬಂದ ಬೀದಿ ನಾಯಿಯೊಂದು ನನ್ನ ಕಾಲನ್ನು ಕಚ್ಚಿತು. ನಾನು ಅದನ್ನು ಹೆದರಿಸುವಲ್ಲಿ ಯಶಸ್ವಿಯಾದೆ ಹೀಗಾಗಿ ಅದು ನನ್ನನ್ನು ಮುಂದಿನಿಂದ ಕಚ್ಚುವುದನ್ನು ತಪ್ಪಿಸಿದೆ ಎಂದು ರಾಧಾಕೃಷ್ಣನ್ ಹೇಳಿದ್ದಾರೆ.
ಇದನ್ನೂ ಓದಿ: ಹೆಂಡ್ತಿಗೆ ಸಮಯ ಕೊಡದ ಗಂಡ: ಪತ್ನಿ ಮಾಡಿದ್ದೇನು? ವೀಡಿಯೋ ವೈರಲ್
ಇದನ್ನೂ ಓದಿ: ಚೆನ್ನೈನ ಝೂನಿಂದ ತಪ್ಪಿಸಿಕೊಂಡಿದ್ದ 5 ವರ್ಷದ ಸಿಂಹ ಸುರಕ್ಷಿತವಾಗಿ ಪತ್ತೆ
ನಂತರ ರಾಧಾಕೃಷ್ಣನ್ ಅವರನ್ನು ಕಣ್ಣೂರು ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಯಿತು, ಅಲ್ಲಿ ಅವರಿಗೆ ರೇಬೀಸ್ ವಿರೋಧಿ ಲಸಿಕೆ ನೀಡಲಾಯಿತು. ಅವರಿಗೆ ಸಣ್ಣಪುಟ್ಟ ಗಾಯಗಳಷ್ಟೇ ಆದವು ಮತ್ತು ಅವರ ತ್ವರಿತ ಪ್ರತಿಕ್ರಿಯೆಯಿಂದಾಗಿ ನಾಯಿಯ ಹಲ್ಲುಗಳು ಅವರ ದೇಹಕ್ಕೆ ಚುಚ್ಚದಂತೆ ತಡೆಯಿತು. ರಾಧಾಕೃಷ್ಣನ್ ಅವರು ಈ ಹಿಂದೆಯೂ ಸಾಮಾಜಿಕ ಜಾಗೃತಿ ಮೂಡಿಸುವ ಅನೇಕ ಬೀದಿ ನಾಟಕಗಳನ್ನು ಪ್ರದರ್ಶಿಸಿದ್ದಾರೆ. ಆದರೆ ಇಷ್ಟು ವರ್ಷಗಳಲ್ಲಿ ಅವರಿಗೆ ಈ ರೀತಿಯ ಘಟನೆ ನಡೆದಿದ್ದು, ಇದೇ ಮೊದಲು.
ಅಧಿಕಾರಿಗಳು ಮತ್ತು ಸ್ಥಳೀಯ ಗುಂಪುಗಳು ಬೀದಿ ನಾಯಿಗಳ ಬಗ್ಗೆ ಜಾಗೃತಿ ಅಭಿಯಾನಗಳನ್ನು ನಡೆಸುತ್ತಲೇ ಇದ್ದರೂ, ಈ ಘಟನೆಯು ಕೇರಳದಲ್ಲಿ ಬೀದಿ ನಾಯಿಗಳ ದಾಳಿಯ ಬಗ್ಗೆ ಗಮನ ಸೆಳೆದಿದೆ. ಆದರೆ ಬೀದಿ ನಾಯಿಯ ಪ್ರತಿಕ್ರಿಯೆಯು ಆಕ್ರಮಣಶೀಲತೆಗಿಂತ ಹೆಚ್ಚಾಗಿ ಜೋರಾದ ಧ್ವನಿವರ್ಧಕದ ಪರಿಣಾಮಗಳಿಂದ ಸಂಭವಿಸಿದ ಘಟನೆಯಾಗಿದೆ ಎಂದು ಪ್ರಾಣಿಪ್ರಿಯರೊಬ್ಬರು ಹೇಳಿದ್ದಾರೆ.
