Bears Ice Cream Heist: ಕ್ಯಾಲಿಫೋರ್ನಿಯಾದ ಐಸ್‌ಕ್ರೀಂ ಪಾರ್ಲರ್‌ಗೆ ಕರಡಿಯೊಂದು ನುಗ್ಗಿ ಹೊಟ್ಟೆಬಿರಿಯುವಷ್ಟು ಐಸ್‌ಕ್ರೀಂ ತಿಂದು ನಿದ್ದೆಗೆ ಜಾರಿದ ಘಟನೆ ನಡೆದಿದೆ. ನಂತರ ಅರಣ್ಯ ಇಲಾಖೆ ಸಿಬ್ಬಂದಿ ಕರಡಿಯನ್ನು ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ.
ಐಸ್‌ಕ್ರೀಂ ಅನ್ನು ಇಷ್ಟಪಡದವರಿಲ್ಲ, ಬೇಸಿಗೆಯಲ್ಲಿ ಮನಸ್ಸಿಗೆ ದೇಹಕ್ಕೆ ತಂಪು ನೀಡುವ ಈ ಐಸ್‌ಕ್ರೀಂ ಅನ್ನು ಹಲ್ಲು ಬಾರದ ಪುಟ್ಟ ಕಂದನಿಂದ ಹಿಡಿದು ಹಲ್ಲು ಉದುರಿರುವ ಅಜ್ಜಿತಾತನವರು ಕೂಡ ಇಷ್ಟಪಟ್ಟು ತಿನ್ನುತ್ತಾರೆ. ಬಾಯೊಳಗೆ ಇಟ್ಟರೆ ಕರಗುವುದು ಸಿಹಿಯಾಗಿರುವುದು ಎಲ್ಲರೂ ಐಸ್‌ಕ್ರೀಂನ್ನು ಇಷ್ಟಪಡುವುದಕ್ಕೆ ಮೊದಲ ಕಾರಣವಾಗಿದೆ. ಇಂತಹ ಐಸ್‌ಕ್ರೀಂನ್ನು ಕೇವಲ ಮನುಷ್ಯರು ಮಾತ್ರವಲ್ಲ, ಪ್ರಾಣಿಗಳು ಕೂಡ ಇಷ್ಟಪಡುತ್ತಾರೆ. ಅದೇ ರೀತಿ ಇಲ್ಲೊಂದು ಕಡೆ ಆಹಾರ ಅರಸುತ್ತಾ ಬಂದ ಕರಡಿಯೊಂದು ಐಸ್‌ಕ್ರೀಂ ಶಾಪೊಂದಕ್ಕೆ ತನಗರಿವಿಲ್ಲದೇ ಹೋಗಿದೆ. ಆದರೆ ಅಲ್ಲಿ ತೆರಳಿದ ನಂತರ ಈ ಕರಡಿ ಹೊಟ್ಟೆ ಬಿರಿಯುವಷ್ಟು ಐಸ್‌ಕ್ರೀಂ ತಿಂದು ಅಲ್ಲೇ ನಿದ್ದೆಗೆ ಜಾರಿದೆ. ನಂತರ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಬಂದು ಕರಡಿಯನ್ನು ಎತ್ತಿಕೊಂಡು ಹೋಗಿದ್ದಾರೆ.
ಐಸ್‌ಕ್ರೀಂ ಪಾರ್ಲರ್‌ಗೆ ನುಗ್ಗಿದ ಕರಡಿ
ಅಂದಹಾಗೆ ಈ ಘಟನೆ ನಡೆದಿರುವುದು ಅಮೆರಿಕಾದ ಕ್ಯಾಲಿಫೋರ್ನಿಯಾದ ಲೇಕ್ ಟಾಹೋ ದಕ್ಷಿಣ ತೀರದ ಬಳಿಯ ಐಸ್ ಕ್ರೀಮ್ ಪಾರ್ಲರೊಂದರಲ್ಲಿ. ದಿನದ ಮೊದಲ ಶಿಫ್ಟ್‌ಗೆಂದು ಕೆಲಸಕ್ಕೆ ಬಂದ ಕೆಲಸಗಾರರೊಬ್ಬರಿಗೆ ಅಲ್ಲಿ ಏನೋ ಸದ್ದು ಆಗುತ್ತಿರುವುದು ಕೇಳಿದೆ. ಮೊದಲಿಗೆ ಅವರು ಕಸದ ಬುಟ್ಟಿಯಿಂದ ಈ ಸದ್ದು ಬರುತ್ತಿದೆ ಎಂದು ಭಾವಿಸಿದರು ಆದರೆ ಅವರು ಟಾರ್ಚನ್ನು ಐಸ್‌ಕ್ರೀಂ ಕಂಟೈನರ್ ಕಡೆಗೆ ತಿರುಗಿಸಿದಾಗ ಬೇಸ್ತು ಬೀಳುವ ಸರದಿ ಅವರದಾಗಿತ್ತು. ಏಕೆಂದರೆ ಅಲ್ಲಿ ಐಸ್‌ಕ್ರೀಂ ತುಂಬಿರುತ್ತಿದ್ದ ಡಬ್ಬಿ ಖಾಲಿಯಾಗಿತ್ತು.
ಹೊಟ್ಟೆಬಿರಿಯುವಷ್ಟು ಐಸ್‌ಕ್ರೀಂ ತಿಂದು ನಿದ್ದೆಗೆ ಜಾರಿದ ಕರಡಿ
ನಂತರ ಶಬ್ಧದ ಮೂಲವನ್ನು ಹುಡುಕುತ್ತಾ ಹೊರಟ ನೌಕರನಿಗೆ ಟಾರ್ಚ್ ಲೈಟನ್ನು ಕಿಟಕಿ ಕಡೆಗೆ ಹಾಕಿದಾಗ ಒಂದು ದೊಡ್ಡ ಕಪ್ಪು ಕರಡಿ ತನ್ನನ್ನೇ ದಿಟ್ಟಿಸಿ ನೋಡುತ್ತಿರುವುದು ಕಂಡು ಬಂದಿದೆ. ಕರಡಿ ನಗದು ಕೌಂಟರ್ ಹಿಂದೆ, ಗ್ರಾಹಕನಿಗೆ ಸೇವೆ ಸಲ್ಲಿಸಲು ಕಾಯುತ್ತಿರುವ ಉದ್ಯೋಗಿಯಂತೆ ನಿಂತಿತ್ತು ಎಂದು ಉದ್ಯೋಗಿ ಹೇಳಿಕೊಂಡಿದ್ದಾರೆ. ನಂತರ ಮುಂಜಾನೆ 4 ಗಂಟೆಗೆ ಗಾರ್ಡ್ ಎಲ್ ಡೊರಾಡೊ ಕೌಂಟಿ ಶೆರಿಫ್ ಕಚೇರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ.
ಕರಡಿ ಈ ಐಸ್‌ಕ್ರೀಂನ ಮುಂಭಾಗದ ಬಾಗಿಲಿನಿಂದ ಜಾರಿಕೊಂಡು ನೇರವಾಗಿ ಐಸ್ ಕ್ರೀಮ್ ತಿನ್ನಲು ಬಂದಿದೆ ನಂತರ ಹೊಟ್ಟೆ ಬಿರಿಯುವಷ್ಟು ಐಸ್‌ಕ್ರೀಂ ತಿಂದು ನಿದ್ದೆಗೆ ಜಾರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನೆವೆಡಾದ ರೆನೋದಿಂದ ಸುಮಾರು 60 ಮೈಲುಗಳಷ್ಟು ದಕ್ಷಿಣದಲ್ಲಿರುವ ಕ್ಯಾಂಪ್ ರಿಚರ್ಡ್ಸನ್ ಐಸ್‌ಕ್ರೀಂ ಪಾರ್ಲರ್‌ನಲ್ಲಿ ಘಟನೆ ನಡೆದಿದ್ದು, ಇಲ್ಲಿ 20 ಫ್ಲೇವರ್‌ಗಳ ಐಸ್‌ಕ್ರೀಂ ಹಾಗೂ 13 ತರದ ಟಾಪಿಂಗ್‌ಗಳನ್ನು ನೀಡುತ್ತದೆ.
ಹಲವು ಐಸ್‌ಕ್ರೀಂಗಳ ರುಚಿ ನೋಡಿದ ಕರಡಿ
ಇಲ್ಲಿಗೆ ಬಂದ ಕರಡಿ ಹಲವು ಐಸ್‌ಕ್ರೀಂಗಳ ರುಚಿ ನೋಡಿದೆ. ಇಲ್ಲಿದ್ದ ಐಸ್‌ಕ್ರೀಂ ಟಬ್‌ಗಳು ತಲೆಕೆಳಗಾಗಿ ಬಿದ್ದಿದ್ದವು. ಅದರಲ್ಲಿದ್ದ ಐಸ್‌ಕ್ರೀಂನ್ನು ಅರ್ಧದಷ್ಟು ಈ ಕರಡಿ ತಿಂದಿತ್ತು. ಹಾಗೂ ಅಲ್ಲಿನ ನೆಲದ ತುಂಬಾ ಕರಡಿಯ ಹೆಜ್ಜೆ ಗುರುತುಗಳಿದ್ದವು. ಹಲವು ವಿವಿಧ ತರದ ಐಸ್‌ಕ್ರೀಂಗಳ ರುಚಿಯನ್ನು ಈ ಕರಡಿ ನೋಡಿದೆ. ಕರಡಿ ನುಸುಳಿದ್ದರಿಂದ ಅಂಗಡಿಗೆ ಸ್ವಲ್ಪ ಹಾನಿಯಾಗಿದೆ. ಆದರೆ ಆಸ್ತಿಪಾಸ್ತಿಗೆ ಯಾವುದೇ ಹಾನಿಯಾಗಿಲ್ಲ, ಆದರೆ ಕರಡಿ ಎಲ್ಲೆಡೆ ಓಡಾಡಿ ಐಸ್‌ಕ್ರೀಂಗಳನ್ನು ರುಚಿ ನೋಡಿದ್ದರಿಂದ ಅಲ್ಲಿನ ಐಸ್‌ಕ್ರೀಂ ಅನ್ನು ಬದಲಾಯಿಸಬೇಕಾಗಿ ಬಂತು ಎಂದು ಐಸ್‌ಕ್ರೀಂ ಪಾರ್ಲರ್‌ನ ಸಿಬ್ಬಂದಿ ಹೇಳಿದ್ದಾರೆ. ಕರಡಿಯನ್ನು ಹಿಡಿದು ಕಾಡಿಗೆ ಬಿಟ್ಟ ನಂತರ ಐಸ್‌ಕ್ರೀಂ ಪಾರ್ಲರ್‌ನ ನೌಕರರು ಪಾರ್ಲರ್‌ನಲ್ಲಿ ಸ್ವಚ್ಛತೆ ಆರಂಭಿಸಿ ಸಂಪೂರ್ಣವಾಗಿ ತೊಳೆದು ನಂತರ ಹೊಸದಾಗಿ ಪಾರ್ಲರನ್ನು ಗ್ರಾಹಕರಿಗಾಗಿ ತೆರೆದರು ಎಂದು ವರದಿಯಾಗಿದೆ.
ಇದನ್ನೂ ಓದಿ: ಕೇಂದ್ರ ಸರ್ಕಾರದ ವಕ್ಫ್ ತಿದ್ದುಪಡಿ ಕಾಯ್ದೆ: ಕೆಲ ನಿಯಮಗಳಿಗೆ ಸುಪ್ರೀಂಕೋರ್ಟ್ ತಡೆ
ಇದನ್ನೂ ಓದಿ: ಹಲವು ಉನ್ನತ ಹುದ್ದೆಗಳ ಅಲಂಕರಿಸಿದ್ರು LinkedInನಲ್ಲಿ 'ಹೆಂಡ್ತಿ ಸಹಾಯಕ' ಎಂದು ಬರೆದ ವ್ಯಕ್ತಿ: ಪೋಸ್ಟ್ ವೈರಲ್
