ಇಬ್ಬರು ಮಕ್ಕಳ ನಡುವೆ ಎಷ್ಟು ವರ್ಷ ಗ್ಯಾಪ್ ಇದ್ದರೆ ಅಮ್ಮನಿಗೂ, ಮಗುವಿಗೂ ಆರೋಗ್ಯಕರ? ಇದಕ್ಕೆ ಕಾರಣವೇನು? ಅಂತರ ಕಾಪಾಡುವುದು ಹೇಗೆ? ವೈದ್ಯರ ಮಾತು ಇಲ್ಲಿದೆ...
ಬಹುತೇಕ ಹಿಂದೂ ಸಮುದಾಯದಲ್ಲಿ ಒಂದೇ ಮಗು ಮಾಡಿಕೊಳ್ಳುವ ಟ್ರೆಂಡ್ ಶುರುವಾಗಿ ಕೆಲವು ವರ್ಷಗಳೇ ಕಳೆದಿವೆ. ಅಪ್ಪ-ಅಮ್ಮ ಇಬ್ಬರೂ ಹೊರಗಡೆ ದುಡಿಯಲು ಹೋಗುವ ಅನಿವಾರ್ಯತೆ ಇರುವ ಕಾರಣದಿಂದಲೇ ಎಷ್ಟೋ ಮಂದಿ ಹೀಗೆ ಮಾಡುತ್ತಿದ್ದಾರೆ. ಮನೆಯಲ್ಲಿ ಮಕ್ಕಳನ್ನು ನೋಡಿಕೊಳ್ಳುವವರು ಯಾರೂ ಇರುವುದಿಲ್ಲ ಎನ್ನುವ ಚಿಂತೆ. ಆದರೆ ಇಬ್ಬರು ಅಥವಾ ಹೆಚ್ಚಿನ ಮಕ್ಕಳು ಇರುವ ಮನೆಗಳಲ್ಲಿ ಬೆಳೆದ ಮಗುವಿಗೆ ಒಂದೇ ಮಗು ಇರುವವರನ್ನು ಹೋಲಿಕೆ ಮಾಡಿದರೆ, ಅಣ್ಣ-ತಮ್ಮನೋ ಅಕ್ಕ- ತಂಗಿ ಇರುವ ಮಕ್ಕಳು ಚೆನ್ನಾಗಿ ಬೆಳೆಯುತ್ತಾರೆ, ಅವರಲ್ಲಿ ಒಂಟಿತನ ಕಾಡುವುದಿಲ್ಲ. ಬೆಳವಣಿಗೆ ಕೂಡ ಚೆನ್ನಾಗಿ ಇರುತ್ತದೆ, ಚುರುಕು ಬುದ್ಧಿಯೂ ಹೆಚ್ಚಾಗಿ ಇರುತ್ತದೆ ಎನ್ನುವ ಮಾತಿದೆ. ಆದರೆ ಒಂದೇ ಮಗುವಿದ್ದಾಗ ಆಡಲು ಯಾರೂ ಇಲ್ಲದೇ, ಅಪ್ಪ-ಅಮ್ಮನ ಮುದ್ದಿನ ಮಗುವಾಗಿ ಬೆಳೆಯುವ ಕಾರಣ, ಒಂಟಿತನ ಅದರಲ್ಲಿ ಕಾಡುತ್ತದೆ ಎನ್ನಲಾಗುತ್ತದೆ. ಆದ್ದರಿಂದ ಮನೆಯಲ್ಲಿ ಕನಿಷ್ಠ ಇಬ್ಬರು ಮಕ್ಕಳಾದರೂ ಇರಲಿ ಎನ್ನುತ್ತಾರೆ ಹಿರಿಯರು.
ಆದರೆ, ಹೆಚ್ಚಿನವರಿಗೆ, ಮಕ್ಕಳ ನಡುವೆ ಎಷ್ಟು ಅಂತರ ಇರಬೇಕು ಎನ್ನುವ ಡೌಟ್ ಬರುವುದು ಸಹಜ. ಈ ಬಗ್ಗೆ ಹಲವರು ತಮ್ಮ ವೈದ್ಯರ ಬಳಿ ಪ್ರಶ್ನೆ ಮಾಡುತ್ತಲೇ ಇರುತ್ತಾರೆ. ಮಕ್ಕಳ ನಡುವೆ ಒಂದೇ ವರ್ಷ ಅಂತರವಿದ್ದರೆ ಇಬ್ಬರೂ ಜೊತೆ ಜೊತೆಯಲ್ಲಿ ಬೆಳೆದು ಬಿಡುತ್ತಾರೆ, ಇದು ಒಳ್ಳೆಯದು ಎಂದು ಕೆಲವರು ಹೇಳುವುದನ್ನು ಕೇಳಿದ್ದೇವೆ, ಯಶ್-ರಾಧಿಕಾ ದಂಪತಿ ಕೂಡ ಎರಡು ವರ್ಷದಲ್ಲಿ ಎರಡು ಮಕ್ಕಳನ್ನು ಹೆತ್ತಿದ್ದಾರೆ. ಇಂಥ ಉದಾಹರಣೆಗಳು ಸಿಗುವ ಕಾರಣ ಹಾಗೂ ಇಬ್ಬರೂ ಮಕ್ಕಳು ಒಟ್ಟಿಗೇ ಒಂದೇ ರೀತಿ ಬೆಳೆಯುವ ಕಾರಣದಿಂದ ಇದೇ ಉತ್ತಮ ಎನ್ನುವ ಸಲಹೆಯೂ ಕೇಳಿಬರುತ್ತದೆ.
ವೈದ್ಯರು ಹೇಳುವುದೇನು?
ಆದರೆ, ಖ್ಯಾತ ಮಕ್ಕಳ ತಜ್ಞರಾಗಿರುವ ಡಾ.ಗಣೇಶ್ ಹೆಗಡೆ ಅವರು ಹೇಳುವಂತೆ ಇಬ್ಬರು ಮಕ್ಕಳ ನಡುವೆ ಕನಿಷ್ಠ ಮೂರು ವರ್ಷಗಳ ಅಂತರ ಇರಬೇಕು ಎನ್ನುತ್ತಾರೆ. ತಮ್ಮ ಬಳಿ ಹಾಗೂ ಹಲವು ವೈದ್ಯರ ಬಳಿ ಅಪ್ಪ-ಅಮ್ಮ ಇದೇ ಮಾತನ್ನು ಕೇಳುತ್ತಾರೆ, ಮಗು ಮತ್ತು ತಾಯಿ ಇಬ್ಬರೂ ಆರೋಗ್ಯವಂತರಾಗಿ ಇರಬೇಕು ಎಂದರೆ, ಮಕ್ಕಳ ನಡುವೆ ಎಷ್ಟು ಅಂತರವಿದ್ದರೆ ಒಳ್ಳೆಯದು ಎಂದು ಪ್ರಶ್ನಿಸುತ್ತಾರೆ. ಸಾಮಾನ್ಯವಾಗಿ ಮಕ್ಕಳ ನಡುವೆ 3 ವರ್ಷ ಅಂತರವಿದ್ದರೆ ತುಂಬಾ ಒಳ್ಳೆಯದು. ವೈಜ್ಞಾನಿಕವಾಗಿಯೂ ಇದು ಉತ್ತಮ. ತಮ್ಮ 30 ವರ್ಷಗಳ ಅನುಭವದಿಂದ ಇದನ್ನು ಹೇಳುತ್ತಿದ್ದೇನೆ. ಹೀಗಾದರೆ ಮಗು ಮತ್ತು ತಾಯಿ ಇಬ್ಬರ ಆರೋಗ್ಯಕ್ಕೂ ಒಳ್ಳೆಯದು ಎನ್ನುವ ವೈದ್ಯರು ಇದಕ್ಕೆ ಕಾರಣವನ್ನೂ ನೀಡಿದ್ದಾರೆ.
ಇದನ್ನೂ ಓದಿ: ಹೆರಿಗೆ ಆದ್ಮೇಲೆ ಹೊಟ್ಟೆಗೆ ಬೆಲ್ಟ್, ಬಟ್ಟೆ ಕಟ್ಟಿಕೊಳ್ಳಲೇ ಬೇಕಾ? ಇದು ಸೇಫಾ? ವೈದ್ಯೆಯ ಮಾತು ಕೇಳಿ...
ಒಂದು ಮಗು ಹುಟ್ಟಿದಾಗ ಅದರ ಆರೈಕೆ ಮಾಡಲು ತಾಯಿಯಾದವಳು ತುಂಬಾ ಸಮಯವನ್ನು ಕೊಡಬೇಕು. ಭಾವನಾತ್ಮಕವಾದ ಸಮಯ ಮುಖ್ಯವಾಗುತ್ತದೆ. ಎದೆಹಾಲನ್ನು ಕನಿಷ್ಠ ಒಂದು ವರ್ಷವಾದರೂ ಕುಡಿಸಬೇಕು. ಬೇಗ ಬೇಗನೇ ಮಗು ಧರಿಸಿದರೆ ಮಗು ಮತ್ತು ತಾಯಿಗೆ ಇರುವ ಆ ಭಾವನಾತ್ಮಕ ಸಂಬಂಧ ಕಡಿಮೆಯಾಗುತ್ತದೆ. ಬೇಗ ಬೇಗ ಮಕ್ಕಳಾದರೆ ತಾಯಿ ತುಂಬಾ ಮಾನಸಿಕವಾಗಿ ಹಿಂಸೆಗೆ ಒಳಗಾಗಬಹುದು, ಖಿನ್ನತೆಗೂ ಜಾರಬಹುದು ಎನ್ನುತ್ತಾರೆ ಇವರು. ಎದೆಹಾಲನ್ನು ಕುಡಿಸುತ್ತಿರುವ ಕಾರಣ ರಕ್ತಹೀನತೆ, malnutrition ಆಗುವ ಸಾಧ್ಯತೆಯೂ ಇದೆ ಎನ್ನುವ ವೈದ್ಯರು, ಇದರಿಂದ ಮಹಿಳೆಯ ದೇಹದ ಮೇಲೆ ಪರಿಣಾಮ ಆಗುತ್ತದೆ, ಆರೋಗ್ಯ ಕೆಡುವ ಸಾಧ್ಯತೆ ಹೆಚ್ಚು ಎನ್ನುತ್ತಾರೆ.
ಹೇಗೆ ಅಂತರ ಕಾಪಾಡುವುದು?
ಮೂರು ವರ್ಷ ಮಕ್ಕಳಾಗುವುದನ್ನು ತಡೆಯಲು temporory cotraceptive ಬಳಸಬಹುದು, ಪುರುಷರು ಕಾಂಡೋಮ್ಸ್ ಬಳಸಬಹುದು. ಇದಲ್ಲದೇ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿರುವ ವಂಕಿ ಹಾಕಿಕೊಳ್ಳುವ ಪದ್ಧತಿಯನ್ನೂ ಅನುಸರಿಸಬಹುದು. ಇದರಿಂದ ಮಹಿಳೆಗೆ ಯಾವುದೇ ಸಮಸ್ಯೆ ಇಲ್ಲ ಎಂದು ಡಾ.ಗಣೇಶ್ ಹೆಗಡೆ ಹೇಳುತ್ತಾರೆ. ಅವರ ವಿಡಿಯೋ ಇಲ್ಲಿದೆ ನೋಡಿ..
ಇದನ್ನೂ ಓದಿ: ಗರ್ಭದ ಸ್ಥಳ ಅರಿಯದೇ ಮಾತ್ರೆ ಪಡೆದರೆ ಜೀವಕ್ಕೇ ಕುತ್ತು! ಗುಳಿಗೆ ಕೊಳ್ಳುವ ಮುನ್ನ ವೈದ್ಯೆಯ ಮಾತು ಕೇಳಿ...
