ವಿಚ್ಛೇದನವನ್ನು ದುಃಖದ ಬದಲು ಸ್ವಾತಂತ್ರ್ಯದ ಸಂಭ್ರಮವಾಗಿ ಆಚರಿಸಿದ ಯುವಕನೊಬ್ಬನ ವಿಡಿಯೋ ವೈರಲ್ ಆಗಿದೆ. ಹಾಲಿನ ಸ್ನಾನ ಮಾಡಿ, 'ಹಾಪಿ ಡೈವೋರ್ಸ್' ಎಂದು ಬರೆದ ಕೇಕ್ ಕತ್ತರಿಸಿದ ಈತನ ವಿಶಿಷ್ಟ ಆಚರಣೆಯು ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆಗಳಿಗೆ ಕಾರಣವಾಗಿದೆ.

ವೈವಾಹಿಕ ಸಂಬಂಧವು ಕೊನೆಗೊಂಡಾಗ ಸಾಮಾನ್ಯವಾಗಿ ದುಃಖ ಅಥವಾ ವಿಷಾದದ ಭಾವನೆಗಳಿರುತ್ತವೆ. ಆದರೆ, ಇಲ್ಲೊಬ್ಬ ಪತಿ ತಮ್ಮ ವಿಚ್ಛೇದನವನ್ನು ಹೊಸ ಜೀವನದ ಸ್ವಾತಂತ್ರ್ಯವೆಂದು ಪರಿಗಣಿಸಿ, ಅದನ್ನು ಅದ್ಧೂರಿಯಾಗಿ ಆಚರಿಸುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದಾರೆ. ಹಾಲಿನ ಸ್ನಾನ ಮಾಡಿ, ಕೇಕ್ ಕತ್ತರಿಸಿ ಸಂಭ್ರಮಿಸಿರುವ ಈ ಯುವಕನ ವಿಡಿಯೋಗೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ನಾನು ಸಿಂಗಲ್, ಸಂತೋಷ, ಸ್ವತಂತ್ರ:

ಬಿರಾದರ್ ಡಿಕೆ (Biradar DK) ಎಂಬ ಯುವಕ ವಿಚ್ಛೇದನ ಪಡೆದ ನಂತರ ಈ ವಿಶಿಷ್ಟ ಆಚರಣೆಯನ್ನು ಹಮ್ಮಿಕೊಂಡಿದ್ದಾರೆ. ವಿಡಿಯೋ ಆರಂಭವಾಗುವುದು ಅವರ ತಾಯಿ ಅವರಿಗೆ ಪ್ರೀತಿಯಿಂದ ಹಾಲು ಸ್ನಾನ ಮಾಡಿಸುವ ದೃಶ್ಯದಿಂದ. ನಂತರ ಹೊಸ ಬಟ್ಟೆ ಮತ್ತು ಶೂ ಧರಿಸಿ ಅಣಿಯಾಗಿ, 'ಹಾಪಿ ಡೈವೋರ್ಸ್' ಎಂದು ಬರೆದ ಕೇಕ್ ಕತ್ತರಿಸಿ ಸಂತೋಷ ವ್ಯಕ್ತಪಡಿಸುತ್ತಾರೆ. ಕೇಕ್ ಮೇಲೆ, '15 ಪವನ್ (120 ಗ್ರಾಂ) ಮತ್ತು 18 ಲಕ್ಷ ರೂ' ನೀಡಿ ವಿಚ್ಛೇದನ ಪಡೆದಿರುವುದಾಗಿ ಅವರು ಬರೆದಿದ್ದಾರೆ.

ವಿಡಿಯೋ ಜೊತೆಗೆ ಬಿರಾದರ್ ಡಿಕೆ ಅವರು ಹಂಚಿಕೊಂಡಿರುವ ಶೀರ್ಷಿಕೆ ಹೀಗಿದೆ: 'ದಯವಿಟ್ಟು ಸಂತೋಷವಾಗಿರಿ ಮತ್ತು ನಿಮ್ಮನ್ನು ನೀವೇ ಆಚರಿಸಿಕೊಳ್ಳಿ, ಖಿನ್ನತೆಗೆ ಒಳಗಾಗಬೇಡಿ. 120 ಗ್ರಾಂ ಚಿನ್ನ ಮತ್ತು ₹18 ಲಕ್ಷ ನಗದು ನಾನು ತೆಗೆದುಕೊಂಡಿದ್ದಲ್ಲ, ಕೊಟ್ಟಿದ್ದೇನೆ. ನಾನು ಸಿಂಗಲ್, ಸಂತೋಷ ಮತ್ತು ಸ್ವತಂತ್ರ. ನನ್ನ ಜೀವನ, ನನ್ನ ನಿಯಮಗಳು ಎಂದು ಬರೆದುಕೊಂಡಿದ್ದಾರೆ.

View post on Instagram

ಸಾಮಾಜಿಕ ಜಾಲತಾಣದಲ್ಲಿ ಚರ್ಚೆ

ಈ ವಿಚಿತ್ರ ಆಚರಣೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ 3.5 ಮಿಲಿಯನ್‌ಗೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ. ಈ ಅಸಾಮಾನ್ಯ ನಡೆಯು ಕಮೆಂಟ್‌ ಬಾಕ್ಸ್‌ನಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಕೆಲವರು ಬಿರಾದರ್ ಡಿಕೆ ಅವರ ನಿರ್ಧಾರವನ್ನು ಮತ್ತು ಸ್ವಾತಂತ್ರ್ಯವನ್ನು ಶ್ಲಾಘಿಸಿದ್ದಾರೆ. ವಿಷಪೂರಿತ (Toxic) ಸಂಬಂಧದಿಂದ ಹೊರಬಂದಿರುವುದು ಸರಿಯಾದ ನಿರ್ಧಾರ' ಎಂದು ಪ್ರೋತ್ಸಾಹ ನೀಡಿದ್ದಾರೆ. ಇನ್ನು ಕೆಲವರು ಅವರನ್ನು ಟೀಕಿಸಿದ್ದಾರೆ. 'ಅಮ್ಮನ ಮಗು' ಎಂದು ವ್ಯಂಗ್ಯವಾಡಿದರೆ, ಮತ್ತೆ ಕೆಲವರು 'ನೀವು ಟಾಕ್ಸಿಕ್ ಆಗಿದ್ದರಿಂದಲೇ ನಿಮ್ಮ ಪತ್ನಿ ಈ ಸಂಬಂಧದಿಂದ ಪಾರಾದರು' ಎಂದು ಅಭಿಪ್ರಾಯಪಟ್ಟಿದ್ದಾರೆ.