ಕೊಡಗಿನಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಗೆ ವಿಚ್ಛೇದನ ನೀಡಿದ ಸಂಭ್ರಮವನ್ನು ವಿಶಿಷ್ಟವಾಗಿ ಆಚರಿಸಿದ್ದಾನೆ. ಟ್ರ್ಯಾಕ್ಟರ್‌ನಲ್ಲಿ ಮೆರವಣಿಗೆ ಹೋಗುತ್ತಾ, ಬ್ಯಾರೆಲ್‌ನಲ್ಲಿದ್ದ ಹಾಲನ್ನು ಸುರಿದುಕೊಂಡು ಸ್ನಾನ ಮಾಡಿದ್ದು, ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇತ್ತೀಚೆಗೆ ಗಂಡಸರು ಹೆಂಡತಿಗೆ ಅಥವಾ ಹೆಂಡತಿ ಗಂಡನಿಂದ ಡಿವೋರ್ಸ್ ಪಡೆದ ನಂತರ ವಿಚಿತ್ರವಾಗಿ ಸಂಭ್ರಮಿಸುವ ದೃಶ್ಯಗಳು ವೈರಲ್ ಆಗುತ್ತಿವೆ. ಅದೇ ರೀತಿ ಇಲ್ಲೊಬ್ಬ ವ್ಯಕ್ತಿ ಹೆಂಡತಿಗೆ ಡಿವೋರ್ಸ್ ನೀಡಿದ ಖುಷಿಗೆ ಬ್ಯಾರೆಲ್ ತುಂಬಾ ಹಾಲನ್ನು ತುಂಬಿಕೊಂಡು ಟ್ರ್ಯಾಕ್ಟರ್‌ನಲ್ಲಿ ನಿಂತುಕೊಂಡು ಹಾಲಿನ ಸ್ನಾನ ಮಾಡುತ್ತಾ ಮೆರವಣಿಗೆ ಮಾಡಿಕೊಂಡಿದ್ದಾರೆ. ಈತನ ಹಾಲಿನ ಸ್ನಾನ ಹಾಗೂ ಆತನ ಖುಷಿಯ ಡ್ಯಾನ್ಸ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ಸಾಮಾನ್ಯವಾಗಿ ಗಂಡ-ಹೆಂಡತಿ ಜಗಳ ಉಂಡು ಮಲಗೋವರೆಗೆ ಎಂದು ನಮ್ಮ ಹಿರಿಯರು ಹೇಳುತ್ತಿದ್ದರು. ಆದರೆ, ಇತ್ತೀಚಿನ ಜನತೆಯ ಗಂಡ-ಹೆಂಡತಿಯ ಸಂಸಾರ ಉಂಡು ಮಲಗುವ ವೇಳೆಗೆ ಆರಂಭವಾಗುತ್ತಿದೆ. ಹಗಲಿನಲ್ಲಿ ಕೆಲಸದಲ್ಲಿ ತೊಡಗಿಕೊಳ್ಳುವ ಜೋಡಿ, ಇಬ್ಬರೂ ಮನೆಗೆ ಬಂದು ರಾತ್ರಿ ಮಲಗುವಾಗ ಜಗಳ ಶುರು ಮಾಡುತ್ತಾರೆ. ಇಂತಹ ಅನೇಕ ಜೋಡಿಗಳ ಸಂಸಾರ ಬಹಳ ದಿನಗಳು ಮುಂದುವರೆಯದೇ ಅರ್ಧಕ್ಕೆ ಡಿವೋರ್ಸ್ ಪಡೆದು ಅಂತ್ಯವಾಗುವ ಉದಾಹರಣೆಗಳು ಸಾಕಷ್ಟು ಸಿಗುತ್ತಿವೆ. ಇನ್ನು ಈ ಹಿಂದೆ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಭಾರತೀಯ ಕುಟುಂಬ ಪದ್ದತಿಗೆ ಪೆಡಂಭೂತವಾಗಿ ಕಾಡುತ್ತಿರುವ ಡಿವೋರ್ಸ್ ಇದೀಗ ಗ್ರಾಮೀಣ ಪ್ರದೇಶಗಳಿಗೂ ಕಾಲಿಟ್ಟಿದೆ.

ಟ್ರ್ಯಾಕ್ಟರ್‌ನಲ್ಲಿ ನಿಂತು ಹಾಲಿನ ಸ್ನಾನ:

ಇನ್ನು ಹೆಂಡತಿಗೆ ವಿಚ್ಛೇದನ ಕೊಟ್ಟಿದ್ದಕ್ಕೆ ಹಾಲಿನ ಸ್ನಾನ ಮಾಡಿದ ಘಟನೆ ಕೊಡಗು (ಕೂರ್ಗ್‌) ಭಾಗದಲ್ಲಿ ನಡೆದಿದೆ. ಇಲ್ಲಿ ಒಬ್ಬ ವ್ಯಕ್ತಿ ಎರಡು ಟ್ರ್ಯಾಕ್ಟರ್‌ಗಲ್ಲಿ ಮೆರವಣಿಗೆ ಮಾಡಿಕೊಳ್ಳುತ್ತಾ ಪ್ರಮುಖ ರಸ್ತೆಗಳಲ್ಲಿ ಸಾಗಿದ್ದಾನೆ. ಒಂದು ಟ್ರ್ಯಾಕ್ಟರ್‌ನಲ್ಲಿ ಸೌಂಡ್ ಸಿಸ್ಟಂ ಇಟ್ಟುಕೊಂಡು ಹಾಡು ಹಾಕಿದ್ದಾನೆ. ಇನ್ನೊಂದು ಟ್ರ್ಯಾಕ್ಟರ್‌ನ ಟ್ರಾಲಿಗೆ ಸುತ್ತಲೂ ಪ್ಲಾಸ್ಟಿಕ್ ಹಾಕಿ ಅದರಲ್ಲಿ ಹಾಲಿನ ಬ್ಯಾರೆಲ್ ಇಟ್ಟುಕೊಂಡು ಸೌಂಡ್‌ ಸಿಸ್ಟಂನಲ್ಲಿ ಬರುವ ಹಾಡಿಗೆ ಭರ್ಜರಿಯಾಗಿ ಡ್ಯಾನ್ಸ್ ಮಾಡುತ್ತಾ, ಬ್ಯಾರೆಲ್‌ನಲ್ಲಿ ತುಂಬಿದ ಹಾಲನ್ನು ತುಂಬಿಕೊಂಡು ತನ್ನ ಮೈಮೇಲೆ ಸುರಿದುಕೊಂಡು ಸ್ನಾನ ಮಾಡುತ್ತಾ ಕುಣಿದು ಕುಪ್ಪಳಿಸಿದ್ದಾರೆ. ಜೊತೆಗೆ, ನನ್ನ ಹೆಂಡತಿಗೆ ವಿಚ್ಛೇದನ ಕೊಟ್ಟಿದ್ದಕ್ಕೆ ಸಂತಸಗೊಂಡು ಹಾಲಿನಿಂದ ಸ್ನಾನ ಮಾಡುತ್ತಿರುವುದಾಗಿ ಪೋಸ್ಟರ್ ಕೂಡ ಹಾಕಿಕೊಂಡಿದ್ದಾರೆ.

ಮಡಿಕೇರಿ ದಸರಾದಲ್ಲಿ ಭಾರೀ ವೈರಲ್:

ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಕೂರ್ಗ್ ದಿ ಹೆವೆನ್ ಆನ್ ಅರ್ತ್ (coorg_the_heaven_on_earth) ಎಂಬ ಖಾತೆಯಿಂದ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋವನ್ನು ಮೂರ್ನಾಡು ಆಯುಧ ಪೂಜಾ (ಮಡಿಕೇರಿ ದಸರಾ) ಅಂಗವಾಗಿ ಸ್ತಬ್ದ ಚಿತ್ರಗಳ ಪ್ರದರ್ಶನ ಆಯೋಜನೆ ಮಾಡಲಾಗಿತ್ತು. ಈ ಸಾಲಿನಲ್ಲಿ ಡಿವೋರ್ಸ್ ಪಡೆದ ವ್ಯಕ್ತಿ ಹಾಲಿನ ಸ್ನಾನ ಮಾಡುವುದನ್ನೂ ಒಂದು ದೃಶ್ಯವನ್ನಾಗಿ ಸೇರ್ಪಡೆ ಮಾಡಲಾಗಿದೆ. ಈ ದಸರಾದಲ್ಲಿ ರಾಮಾಯಣ, ಆರ್‌ಸಿಬಿ ಕಪ್ ಗೆದ್ದಿದ್ದು, ಹುಲಿ ಕುಣಿತ, ಯಕ್ಷಗಾನ, ಕುಂಭಮೇಳ, ಗೊಂಬೆಗಳ ಕುಣಿತ ಹಾಗೂ ಹಲವು ಮೂರ್ತಿಗಳ ಮೆರವಣಿಗೆ ಎಲ್ಲವೂ ಮಡಿಕೇರಿ ದಸರಾವನ್ನು ಕಳೆಗಟ್ಟಿತ್ತು.

View post on Instagram