ಬಿಗ್​ಬಾಸ್​ ಕನ್ನಡ ಸೀಸನ್​ 12 ರ ಮನೆಯು ಈ ಬಾರಿ ಮೈಸೂರು ಅರಮನೆಯ ಶೈಲಿಯಲ್ಲಿ ಅದ್ಭುತವಾಗಿ ವಿನ್ಯಾಸಗೊಂಡಿದೆ. ಕನ್ನಡದ ಸಂಸ್ಕೃತಿ, ಯಕ್ಷಗಾನ, ಹೊಯ್ಸಳ ಸಾಮ್ರಾಜ್ಯದ ಛಾಯೆಗಳನ್ನು ಹೊಂದಿರುವ ಈ ಮನೆಯ ವಿಶೇಷತೆಗಳನ್ನು ನೋಡಿ ಕುಣಿದಾಡಿದ ಜನರು. ಬಿಗ್​ಬಾಸ್​ ಮನೆಯೊಳಕ್ಕೆ ಹೋಗಿ ಬಂದೋರು ಹೇಳಿದ್ದೇನು?

ಬಿಗ್​ಬಾಸ್​ ಕನ್ನಡ ಸೀಸನ್​ 12 (Bigg Boss Kannada Season 12) ನಿನ್ನೆ ಗ್ರ್ಯಾಂಡ್​ ಓಪನಿಂಗ್​ ಆಗಿದ್ದು, ಇಂದು ಮೊದಲ ದಿನ ಮುಗಿದಿದೆ. ಇದರ ನಡುವೆಯೇ, ಹಲವಾರು ಮಂದಿಗೆ ಬಿಗ್​ಬಾಸ್​ ಮನೆಯೊಳಕ್ಕೆ ಹೋಗುವ ಅವಕಾಶವನ್ನು ಬಿಗ್​ಬಾಸ್​​ ನೀಡಿತ್ತು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುವ ಸೀರಿಯಲ್​ಗಳನ್ನು ನೋಡಿ, ಕೇಳುವ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿದ್ರೆ ಬಿಗ್​ಬಾಸ್​ ಮನೆಯೊಳಕ್ಕೆ ಹೋಗುವ ಅವಕಾಶ ಕಲ್ಪಿಸಲಾಗುವುದು ಎಂದು ಹೇಳಲಾಗಿತ್ತು. ಇದರಲ್ಲಿ ಭಾಗಿಯಾದವರು ಒಂದಿಷ್ಟು ಮಂದಿ ಹಾಗೂ ಅವರ ಜೊತೆ ಇನ್ನೊಂದಿಷ್ಟು ಮಂದಿ ಈಗ ಬಿಗ್​ಬಾಸ್​ ಮನೆಯೊಳಗೆ ಹೋಗುವ ಅವಕಾಶವನ್ನು ಪಡೆದುಕೊಂಡರು.

ಸಂತಸದಲ್ಲಿ ತೇಲಾಡಿದ ಜನರು

ಅವರಿಗೆ ಖುದ್ದು ಕಿಚ್ಚ ಸುದೀಪ್​ (Kichcha Sudeep) ಬರಮಾಡಿಕೊಂಡರು. ಬಿಗ್​ಬಾಸ್​​ ಮನೆಯೊಳಕ್ಕೆ ಹೋಗಿ ಬಂದು ಜೀವನವೇ ಸಾರ್ಥಕವಾದಂತೆ ಕಂಡುಬಂದರು ಇವರೆಲ್ಲರು. ಕೆಲವರು ತಮ್ಮ ಏಳೇಳು ಜನ್ಮಗಳ ಪಾಪ ತೊಳೆದೋಯ್ತು ಎನ್ನುವಷ್ಟು ಖುಷಿಯಾಗಿರುವುದು ಕಂಡು ಬಂದರೆ, ಮತ್ತೆ ಕೆಲವರ ಕನಸು ನನಸಾಗಿರುವುದು ಅವರ ಮಾತುಗಳಲ್ಲಿ ಕೇಳಬಹುದಾಗಿದೆ. ಈ ಬಾರಿಯ ಬಿಗ್​ಬಾಸ್​ ಮನೆ ಮೈಸೂರು ಅರಮನೆ ರೀತಿಯಲ್ಲಿ ರೂಪುಗೊಂಡಿದೆ. ಒಟ್ಟಿನಲ್ಲಿ ಈ ಬಾರಿ ಬಿಗ್‌ ಬಾಸ್‌ ಮನೆಯಲ್ಲಿ ಕನ್ನಡದ ಸೊಗಡು, ಸಂಸ್ಕೃತಿ, ಛಾಯೆ ಎದ್ದು ಕಾಣುತ್ತಿದೆ. ಇವುಗಳನ್ನೆಲ್ಲಾ ನೋಡಿದ ಜನರು ಖುಷಿಯಿಂದ ತೇಲಾಡಿದ್ದಾರೆ. ಬಿಗ್​ಬಾಸ್​ ಮನೆಯೊಳಕ್ಕೆ ತಾವು ಕಂಡದ್ದನ್ನೆಲ್ಲಾ ಕಣ್ಣಿಗೆ ಕಟ್ಟುವಂತೆ ವರ್ಣಿಸುತ್ತಿದ್ದಾರೆ.

ಮನೆಯೊಳಕ್ಕೆ ಏನೇನಿದೆ?

ಮನೆ ಎಂಟ್ರಿಯಲ್ಲಿ ಮೈಸೂರು ಅರಮನೆ ರೀತಿ ಡಿಸೈನ್‌ ಇದೆ. ಒಳಗಡೆ ಯಕ್ಷಗಾನದ ಫೋಟೋ ಹಾಕಲಾಗಿದೆ. ಇನ್ನೊಂದು ಕಡೆ ಟಿಪ್ಪು ಸುಲ್ತಾನ್‌ ಹುಲಿಯ ಜೊತೆಗೆ ಹೋರಾಡುವ ಫೋಟೋ ಇದೆ. ಅಷ್ಟೇ ಅಲ್ಲದೆ ಆನೆಯ ಫೋಟೋ ಕೂಡ ಇದೆ. ಕರ್ನಾಟಕವನ್ನು ಪ್ರತಿನಿಧಿಸುವ ಹಲವು ಚಿತ್ರಗಳು, ಮೂರ್ತಿಗಳನ್ನು ಬಿಗ್​​ಬಾಸ್ ಮನೆಯಲ್ಲಿ ಇರಿಸಲಾಗಿದೆ. ಮೈಸೂರು ಅರಮನೆ, ಹೊಯ್ಸಳ ಸಾಮ್ರಾಜ್ಯ ಸೇರಿದಂತೆ ಹಲವು ವಿಶೇಷಗಳು ಕೂಡ ಇಲ್ಲಿವೆ. ಪೌಡರ್ ರೂಂಗೂ ವಿಶೇಷ ವಿನ್ಯಾಸ ಮಾಡಲಾಗಿದ್ದು, ಇಲ್ಲಿ ಸ್ಪರ್ಧಿಗಳು ಮೇಕಪ್ ಮಾಡಿಕೊಳ್ಳುತ್ತಾರೆ. ಕನ್ನಡಿ ಪಕ್ಕದಲ್ಲಿ ದರ್ಪಣ ಸುಂದರಿಯನ್ನು ನಿಲ್ಲಿಸಲಾಗಿದೆ.

ಒಂದೊಂದು ಕೋಣೆಯಲ್ಲಿ ಒಂದೊಂದು ವಿಶೇಷ

ಕ್ಯಾಪ್ಟನ್ ಕೋಣೆಯಲ್ಲಿ ಸಿಂಹ ಮತ್ತು ಕೆಲ ಪ್ರಾಣಿಗಳ ಚಿತ್ರವನ್ನು ಹಾಕಿದ್ದಾರೆ. ಆ ಮೂಲಕ ಏನೋ ಹೇಳಹೊರಟಿದ್ದಾರೆ ಬಿಗ್​​ಬಾಸ್. ಇದೇ ವೇಳೆ ಬಿಗ್​​ಬಾಸ್ ಮನೆಯ ಕಿಚನ್ ತೋರಿಸಿದ್ದ ಸುದೀಪ್​ ಅವರು, , ಮನೆಯ ಬಲು ಪವರ್​​ಫುಲ್ ಸ್ಥಳ ಇದು. ಕಿಚನ್ ನಲ್ಲಿ ದರ್ಬಾರು ಮಾಡಿದವರು, ಮನೆಯನ್ನೇ ನಿಭಾಯಿಸುತ್ತಾರೆ. ಇಲ್ಲಿ ಅಡುಗೆ ಅಲ್ಲ, ಮನಸ್ಸು ಸೀದು ಹೋಗುತ್ತದೆ ಎಂದಿದ್ದರು. ಟಾಯ್ಲೆಟ್ ಮತ್ತು ಬಾತ್​​ರೂಂ ಬಗ್ಗೆ ತಿಳಿಸಿದ್ದ ಅವರು, ಇಲ್ಲಿ ಸಾಕಷ್ಟು ಹಸಿರು ಇಟ್ಟು ಅಂದ ಮಾಡಲಾಗಿದೆ. ಗಿಡ ಇದೆ ಎಂದು ಇಲ್ಲೇ ಸು-ಸು ಮಾಡಿಬಿಡಬೇಡಿ ಎಂದು ಹುಡುಗರಿಗೆ ಎಚ್ಚರಿಕೆ ಕೊಟ್ಟಿದ್ದರು. ಇನ್ನು ಕನ್​ಫೆಷನ್ ಕೋಣೆಯಲ್ಲಿ ಈ ಬಾರಿ ಭಿನ್ನವಾಗಿ ಹೆಡ್ ಫೋನ್ ಮಾದರಿಯಲ್ಲಿ ಸೀಟನ್ನು ಡಿಸೈನ್ ಮಾಡಲಾಗಿದೆ. ಇಲ್ಲಿಯೇ ಬಿಗ್​​ಬಾಸ್ ಸ್ಪರ್ಧಿಗಳೊಟ್ಟಿಗೆ ಪ್ರತ್ಯೇಕವಾಗಿ ಮಾತನಾಡುವ ಅವಕಾಶ ಕಲ್ಪಿಸಲಾಗಿದೆ.

View post on Instagram