'ಬ್ರಹ್ಮಗಂಟು' ಸೀರಿಯಲ್‌ನಲ್ಲಿ ವೀಕ್ಷಕರ ಕೋರಿಕೆಯಂತೆ ದೀಪಾ ಪಾತ್ರದ ರೂಪ ಬದಲಾಗಿದೆ. ಮಾಡೆಲ್ ಆಗಿ ದಿಶಾ ಎಂಬ ಹೊಸ ಅವತಾರದಲ್ಲಿ ಕಾಣಿಸಿಕೊಂಡಿರುವ ದೀಪಾಳ ಓವರ್ ಮೇಕಪ್‌ಗೆ ನೆಟ್ಟಿಗರು ಬೇಸರ ವ್ಯಕ್ತಪಡಿಸಿದ್ದು, ಹಳೆಯ ರೂಪವೇ ಚೆನ್ನಾಗಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.
ಬ್ರಹ್ಮಗಂಟು (Brahmagantu) ಸೀರಿಯಲ್‌ನಲ್ಲಿ ಇಲ್ಲಿಯವರೆಗೆ ದೀಪಾಳ ರೂಪವನ್ನು ಬದಲಾಯಿಸಿ ಎಂದು ವೀಕ್ಷಕರು ಹೇಳುತ್ತಲೇ ಬಂದಿದ್ದರು. ದೀಪಾ ಪಾತ್ರದಲ್ಲಿ ನಟಿಸ್ತಿರೋ ದಿಯಾ ಪಾಲಕ್ಕಲ್ (Diya Palakkal) ನಿಜವಾಗಿಯೂ ಸುಂದರಿಯಾಗಿದ್ದು, ಆಕೆಯ ಅಸಲಿ ಮುಖವನ್ನು ತೋರಿಸಿ ಎಂದೇ ಹೇಳುತ್ತಿದ್ದರು. ಈ ಸೀರಿಯಲ್‌ನಲ್ಲಿ ರೂಪ ಮುಖ್ಯವಲ್ಲ, ಗುಣ ಮುಖ್ಯ ಎನ್ನುವ ಉದ್ಧೇಶ ಇಟ್ಟುಕೊಂಡಿರುವ ಕಾರಣ, ದೀಪಾ ಪಾತ್ರಧಾರಿಯ ನಿಜವಾದ ಮುಖವನ್ನು ಮರೆಮಾಚಿ, ಆಕೆಗೆ ಕಪ್ಪು ಬಣ್ಣ ಬಳಿದು ತೋರಿಸಲಾಗುತ್ತಿದೆ. ಇದೇ ಕಾರಣಕ್ಕೆ ದೀಪಾ ಒಂದೊಂದು ದಿನ ಒಂದೊಂದು ರೀತಿಯಲ್ಲಿ ಕಾಣಿಸುತ್ತಾಳೆ.
ಗುಣ ಮುಖ್ಯ ಎಂದು ತೋರಿಸಿರೋ ದೀಪಾ
ಸೋಡಾಬುಡ್ಡಿ, ಹಲ್ಲಿಗೆ ಕ್ಲಿಪ್, ಎಣ್ಣೆ ಕೂದಲು, ಜಡೆಗೆ ರಿಬ್ಬನ್ ಹೀಗೆಲ್ಲಾ ಮಾಡಿ ದೀಪಾಳನ್ನು ಇಲ್ಲಿಯವರೆಗೆ ತೋರಿಸುತ್ತಲೇ ಬರಲಾಗಿದೆ. ಆದರೆ ಅದೇ ರೂಪದಿಂದಲೇ ಆಕೆ ಗಂಡ ಚಿರುನ ಮನಸ್ಸನ್ನು ಗೆದ್ದಿದ್ದಾಳೆ. ಒಳ್ಳೆಯತನದಿಂದಲೇ ಆತನ ಮನಸ್ಸನ್ನು ಕದ್ದಿದ್ದಾಳೆ. ಅತ್ತಿಗೆ ಸೌಂದರ್ಯಳಿಂದಾಗಿ ಚಿರು ಇನ್ನೂ ಆಕೆಯನ್ನು ತನ್ನ ಪತ್ನಿಯೆಂದು ಒಪ್ಪಿಕೊಳ್ಳದೇ ಹೋದರೂ, ಆಕೆಯ ಮೇಲೆ ಆತನಿಗೆ ಮನಸ್ಸಾಗಿದೆ.
ದಿಶಾ ಆಗಿ ಬದಲಾದ ದೀಪಾ
ಇದೀಗ ಸೌಂದರ್ಯಳನ್ನು ಸೆಡ್ಡು ಹೊಡೆಯುವ ಸಲುವಾಗಿ, ಅರ್ಚನಾ ದೀಪಾಳನ್ನು ಮಾಡೆಲ್ ಮಾಡುವ ಪಣ ತೊಟ್ಟಿದ್ದಳು. ಇದೇ ಕಾರಣಕ್ಕೆ ದೀಪಾಳಿಗೆ ಎಲ್ಲಾ ರೀತಿಯ ಟ್ರೇನಿಂಗ್ ಕೊಟ್ಟಿದ್ದಾಳೆ. ದೀಪಾ ದಿಶಾ ಆಗಿ ಬದಲಾಗಿದ್ದಾಳೆ. ಮಾಡೆಲ್ ರೂಪದಲ್ಲಿ ಎಲ್ಲರ ಎದುರು ಕಾಣಿಸಿಕೊಂಡಿದ್ಧಾಳೆ. ಅದ್ಯಾವ ಮಟ್ಟಿಗೆ ಎಂದರೆ ಅಲ್ಲಿ ಸೌಂದರ್ಯಗೂ ಈಕೆ ದೀಪಾ ಎನ್ನುವುದು ತಿಳಿದಿಲ್ಲ! (ಅದು ಹೇಗೆ ಸಂದೇಹವೂ ಬರಲಿಲ್ಲ ಎನ್ನೋದನ್ನು ಮಾತ್ರ ಕೇಳಬೇಡಿ, ಇದು ಸೀರಿಯಲ್ ಆಗಿದ್ದು, ಸೀರಿಯಲ್ ರೀತಿ ನೋಡಿ ಅಷ್ಟೇ).
ಓವರ್ ಮೇಕಪ್‌ಗೆ ಫ್ಯಾನ್ಸ್ ಬೇಸರ
ಇಷ್ಟು ದಿನ ದೀಪಾಳ ರೂಪ ಬದಲಾಯಿಸಿ ಎಂದು ಕೇಳಿಕೊಳ್ತಿದ್ದ ವೀಕ್ಷಕರೇ ಈಗ ಉಲ್ಟಾ ಹೊಡೆದಿದ್ದಾರೆ. ಇದಕ್ಕೆ ಕಾರಣ ದೀಪಾಳಿಗೆ ಓವರ್ ಮೇಕಪ್ ಆಗಿರೋದು. ಅಷ್ಟಕ್ಕೂ ದೀಪಾ ಪಾತ್ರಧಾರಿ ದಿಯಾ ನೋಡಲು ಸಹಜವಾಗಿ ಸುಂದರಿಯೇ. ಆದರೆ ಮಾಡೆಲ್ ಆಗಬೇಕೆಂದರೆ ಎರ್‍ರಾಬಿರ್‍ರಿಯಾಗಿ ಮೇಕಪ್ ಮಾಡಲಾಗಿದೆ. ಇರೋ ರೂಪವನ್ನೂ ಹಾಳು ಮಾಡಲಾಗಿದೆ. ಭೂತದ ರೀತಿ ಕಾಣಿಸ್ತಿದ್ದಾಳೆ ಎಂದೆಲ್ಲಾ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಮಾಡೆಲ್ ಎಂದರೆ ಇರೋ ಸೌಂದರ್ಯನೂ ಹಾಳು ಮಾಡೋದಾ ಎಂದು ಪ್ರಶ್ನಿಸುತ್ತಿದ್ದಾರೆ. ಮತ್ತೆ ಕೆಲವರು ಅತಿ ಯಾಕೋ ಸಿಕ್ಕಾಪಟ್ಟೆ ಅತಿಯಾಗಿದೆ, ಇದಕ್ಕಿಂತ ದೀಪಾಳ ರೂಪನೇ ಚೆನ್ನಾಗಿತ್ತು ಎಂದೂ ಹೇಳುತ್ತಿದ್ದಾರೆ. ಒಟ್ಟಿನಲ್ಲಿ ದೀಪಾ ದಿಶಾ ಆಗಿ ಬದಲಾಗಿದ್ದು ಹಲವರಿಗೆ ಎಷ್ಟು ಖುಷಿ ಕೊಟ್ಟಿದ್ಯೋ, ಆಕೆಯ ಮೇಕಪ್ ನೋಡಿ ಬೇಸರ ಪಟ್ಟುಕೊಳ್ಳುತ್ತಿದ್ದಾರೆ.
