ಬಿಗ್ ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿ ಅಶ್ವಿನಿ ಗೌಡ, ಸಹ ಸ್ಪರ್ಧಿ ರಕ್ಷಿತಾ ಶೆಟ್ಟಿ ವಿರುದ್ಧ 'ಎಸ್ ಕೆಟಗರಿ' ಎಂಬ ಪದ ಬಳಸಿದ್ದಕ್ಕಾಗಿ ವಿವಾದಕ್ಕೆ ಸಿಲುಕಿದ್ದಾರೆ. ಈ ಪದಬಳಕೆ ವಿರುದ್ಧವಾಗಿ ವಕೀಲರೊಬ್ಬರು ಬಿಡದಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಇದು ಕಾರ್ಯಕ್ರಮಕ್ಕೆ ಹೊಸ ಸಂಕಷ್ಟ ತಂದಿದೆ.

ಬೆಂಗಳೂರು (ಅ.23): ಬಿಗ್ ಬಾಸ್ ಕನ್ನಡ ಸೀಸನ್ 12 ಮನೆ ಈಗಾಗಲೇ ಒಮ್ಮೆ ಮುಚ್ಚಿ ಪುನಃ ಬಾಗಿಲು ತೆರೆದಿದೆ. ಹೀಗಾಗಿ, ಸೀಸನ್ 12 ವಿವಾದಗಳ ಮೂಲಕವೇ ಜನಪ್ರಿಯವಾಗುತ್ತಿದೆ. ಇದೀಗ ಬಿಗ್ ಬಾಸ್ ಮನೆಯಲ್ಲಿ ನಟಿ ಅಶ್ವಿನಿ ಗೌಡ ಅವರು, ತಮ್ಮ ಸಹ ಸ್ಪರ್ಧಿ ರಕ್ಷಿತಾ ಶೆಟ್ಗೆ ಬಳಸಲಾದ ಪದಬಳಕೆ ವಿರುದ್ಧವಾಗಿ ಬಿಡದಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.

ವಕೀಲರಾದ ಪ್ರಶಾಂತ್ ಮಿತ್ತಲ್ ಎಂಬುವವರು ಬಿಡದಿ ಪೊಲೀಸ್ ಠಾಣೆಯಲ್ಲಿ ಈ ದೂರು ದಾಖಲಿಸಿದ್ದು, ಬಿಗ್ ಬಾಸ್ ಕನ್ನಡ ಸೀಸನ್ 12 ರ ಸ್ಪರ್ಧಿಗಳಲ್ಲಿ ಒಬ್ಬರಾದ ಅಶ್ವಿನಿ ಗೌಡ ಅವರು ಮತ್ತೊಬ್ಬ ಸ್ಪರ್ಧಿ ರಕ್ಷಿತಾ ವಿರುದ್ಧ 'ಎಸ್ ಕೆಟಗರಿ' ಎಂಬ ಪದವನ್ನು ಬಳಸಿದ್ದಾರೆ ಎಂದು ಆರೋಪಿಸಿದ್ದಾರೆ. ದೂರುದಾರ ಪ್ರಶಾಂತ್ ಮಿತ್ತಲ್ ಅವರು ಬಿಡದಿ ಬಳಿಯಿರುವ ಬಿಗ್ ಬಾಸ್ ಶೋ ನಡೆಯುವ ಸ್ಟುಡಿಯೋ ಬಳಿ ಈ ದೂರನ್ನು ದಾಖಲಿಸಿದ್ದಾರೆ. ಈ ದೂರಿನಲ್ಲಿ ಸ್ಪರ್ಧಿ ಅಶ್ವಿನಿ ಗೌಡ ಮಾತ್ರವಲ್ಲದೆ, ಬಿಗ್ ಬಾಸ್ ಕಾರ್ಯಕ್ರಮದ ಮುಖ್ಯಸ್ಥರಾದ ಪ್ರಶಾಂತ ನಾಯಕ್, ಶ್ರೀಮತಿ ಸುಷ್ಮಾ ಮತ್ತು ಪ್ರಕಾಶ್ ಅವರ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಕೋರಲಾಗಿದೆ ಎಂದು ತಿಳಿದುಬಂದಿದೆ.

ಏನಿದು 'ಎಸ್ ಕೆಟಗರಿ' ವಿವಾದ?

ರಿಯಾಲಿಟಿ ಶೋ ಅಥವಾ ಸಾರ್ವಜನಿಕ ವೇದಿಕೆಗಳಲ್ಲಿ ಪದಗಳ ಬಳಕೆಯು ತೀವ್ರ ಸಂವೇದನಾಶೀಲವಾಗಿರುವ ಇಂದಿನ ದಿನಗಳಲ್ಲಿ, ಸ್ಪರ್ಧಿ ಅಶ್ವಿನಿ ಗೌಡ ಅವರು ರಕ್ಷಿತಾ ವಿರುದ್ಧ ಆಡಿದ 'ಎಸ್ ಕೆಟಗರಿ' ಎಂಬ ಪದವು ಆಕ್ಷೇಪಾರ್ಹವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಪದವು ಒಂದು ಸಮುದಾಯ ಅಥವಾ ವ್ಯಕ್ತಿಯ ಕುರಿತು ಕೀಳಾಗಿ ಮಾತನಾಡುವ ಅಥವಾ ಅವಮಾನಿಸುವ ಉದ್ದೇಶವನ್ನು ಹೊಂದಿದೆ ಎಂದು ದೂರುದಾರರು ವಾದಿಸಿದ್ದಾರೆ. ಆದರೆ, ಈ ಪದದ ನಿಖರ ಸ್ವರೂಪ ಮತ್ತು ಹಿನ್ನೆಲೆ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ಜಾತಿ ನಿಂದನೆ ಮತ್ತು ವೈಯಕ್ತಿಕ ನಿಂದನೆ ಆರೋಪ:

ದೂರುದಾರ ವಕೀಲ ಪ್ರಶಾಂತ್ ಮಿತ್ತಲ್ ಅವರ ಪ್ರಕಾರ, ಅಶ್ವಿನಿ ಗೌಡ ಅವರು ರಕ್ಷಿತಾ ಅವರಿಗೆ ಬಳಸಿದ 'She is S' ಎಂಬ ಪದವು ವೈಯಕ್ತಿಕ ನಿಂದನೆಯಾಗಿದ್ದು, ಜೊತೆಗೆ ಜಾತಿ ನಿಂದನೆಯ ಉದ್ದೇಶವನ್ನೂ ಹೊಂದಿದೆ ಎಂದು ಆರೋಪಿಸಲಾಗಿದೆ. ಯಾವುದೇ ಸಾರ್ವಜನಿಕ ವೇದಿಕೆಯಲ್ಲಿ ಇಂತಹ ಪದಗಳನ್ನು ಬಳಸುವುದು ಕಾನೂನು ಅಪರಾಧ ಮತ್ತು ಸಾಮಾಜಿಕವಾಗಿ ಆಕ್ಷೇಪಾರ್ಹ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಬಿಡದಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ವಕೀಲರು, ಕಾರ್ಯಕ್ರಮದ ಸಂಚಾಲಕರು ಮತ್ತು ಮುಖ್ಯಸ್ಥರ ಮೇಲೆಯೂ ಕಾನೂನು ಕ್ರಮ ತೆಗೆದುಕೊಳ್ಳಲು ಒತ್ತಾಯಿಸಿದ್ದಾರೆ. ವಕೀಲ ಪ್ರಶಾಂತ್ ಮಿತ್ತಲ್ ಅವರ ದೂರಿನ ಅನ್ವಯ ಬಿಡದಿ ಪೊಲೀಸರು ಸದ್ಯಕ್ಕೆ ಎನ್.ಸಿ.ಆರ್ (Non-Cognizable Report) ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಬಿಗ್ ಬಾಸ್‌ಗೆ ವಿವಾದಗಳ ಸರಮಾಲೆ:

ಈ ಹಿಂದೆಯೂ ಬಿಗ್ ಬಾಸ್ ಕನ್ನಡ ಸೀಸನ್ 12, ಅದರ ಸ್ಟುಡಿಯೋ ಸ್ಥಳವಾದ ಜಾಲಿವುಡ್ ಸ್ಟುಡಿಯೋ ಸೀಲ್ ಡೌನ್ ಆಗಿ ಸುದ್ದಿಯಾಗಿತ್ತು. ಈ ಕಾನೂನು ತೊಡಕು ನಿವಾರಣೆಯಾದ ಬೆನ್ನಲ್ಲೇ, ಇದೀಗ ಕಾರ್ಯಕ್ರಮದೊಳಗಿನ ಸ್ಪರ್ಧಿಯೊಬ್ಬರ ಪದಬಳಕೆ ಮತ್ತೊಂದು ವಿವಾದಕ್ಕೆ ಕಾರಣವಾಗಿದೆ. ರಿಯಾಲಿಟಿ ಶೋಗಳು ಜನರಿಗೆ ಮನರಂಜನೆ ನೀಡಬೇಕಾಗಿದ್ದರೂ, ಸ್ಪರ್ಧಿಗಳ ಇಂತಹ ವೈಯಕ್ತಿಕ ಘರ್ಷಣೆಗಳು, ನಿಂದನಾತ್ಮಕ ಪದಬಳಕೆಗಳು ಸಾಮಾಜಿಕ ಮತ್ತು ಕಾನೂನು ಸಂಘರ್ಷಗಳಿಗೆ ಕಾರಣವಾಗುತ್ತಿವೆ. 'She is S' ಪದದ ಬಳಕೆಯ ಹಿಂದೆ ಇರುವ ಉದ್ದೇಶ ಮತ್ತು ಹಿನ್ನೆಲೆ ಏನು ಎಂಬುದರ ಬಗ್ಗೆ ಪೊಲೀಸರ ತನಿಖೆಯಿಂದಷ್ಟೇ ಸ್ಪಷ್ಟತೆ ದೊರೆಯಬೇಕಿದೆ. ಬಿಡದಿ ಪೊಲೀಸರು ಈ ವಿಚಾರವಾಗಿ ಕಾರ್ಯಕ್ರಮದ ಸಂಚಾಲಕರಿಂದ ವಿವರಣೆ ಕೇಳುವ ಸಾಧ್ಯತೆ ಇದೆ. ಸೀಸನ್ 12ಕ್ಕೆ ಈ ಘಟನೆ ಮತ್ತೊಮ್ಮೆ ವಿಘ್ನ ತಂದಂತಾಗಿದೆ.