Pushpa And Deepika Das:  ಪುಷ್ಪ ಅರುಣ್‌ ಕುಮಾರ್‌ ಅವರು ಕೊತ್ತಲವಾಡಿ ಸಿನಿಮಾ ಪ್ರಚಾರದ ವೇಳೆ ದೀಪಿಕಾ ದಾಸ್‌ ಯಾವ ದೊಡ್ಡ ಹೀರೋಯಿನ್‌ ಎಂದು ಹೇಳಿದ್ದರು. ಇದಕ್ಕೆ ದೀಪಿಕಾ ದಾಸ್‌ ತಿರುಗೇಟು ಕೊಟ್ಟಿದ್ದಾರೆ. 

ನನ್ನ ಬಗ್ಗೆ ಮಾತಾಡೋ ಯೋಗ್ಯತೆ ಯಾರಿಗೂ ಇಲ್ಲ ಎಂದು ದೀಪಿಕಾ ದಾಸ್ ಅವರು ಸೋಶಿಯಲ್‌ ಮೀಡಿಯಾ ಪೋಸ್ಟ್‌ ಹಂಚಿಕೊಂಡಿದ್ದಾರೆ. ಇವರ ದೊಡ್ಡಮ್ಮ ಆಗಿರೋ ಪುಷ್ಪ ಅವರು ದೀಪಿಕಾ ದಾಸ್‌ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಕ್ಕೆ ದೀಪಿಕಾ ದಾಸ್‌, ತಿರುಗೇಟು ಕೊಟ್ಟಿದ್ದಾರೆ.

ದೀಪಿಕಾ ದಾಸ್‌, ಪುಷ್ಪ ನಡುವಿನ ಮನಸ್ತಾಪ

ಸೂಪರ್ ಸ್ಟಾರ್ ಯಶ್ ಅವರಿಗೆ ಗೌರವ ಇರುತ್ತೆ ಎಂದು ದೀಪಿಕಾ ದಾಸ್ ಹೇಳಿದ್ದಾರೆ. ಪುಷ್ಪ ಅವರು ಸಂಬಂಧದಲ್ಲಿ ದೀಪಿಕಾ ದಾಸ್ ಅವರಿಗೆ ದೊಡ್ಡಮ್ಮ ಆಗಬೇಕು. ಕೊತ್ತಲವಾಡಿ ಸಿನಿಮಾ ಪ್ರಚಾರದ ವೇಳೆ ಪುಷ್ಪ ಅರುಣ್‌ ಕುಮಾರ್‌ ಅವರು ದೀಪಿಕಾ ದಾಸ್‌ ಬಗ್ಗೆ ಹೇಳಿದ್ದರು. ಅದಕ್ಕೂ ಮುನ್ನ ಇತ್ತೀಚೆಗೆ ಸಂದರ್ಶನದಲ್ಲಿ ದೀಪಿಕಾ‌ ದಾಸ್‌ಗೆ ನನ್ನ ಕಂಡರೆ ಭಯ ಎಂದು ಕೂಡ ಹೇಳಿದ್ದರು. ಇದಕ್ಕೆ ದೀಪಿಕಾ ದಾಸ್‌ ತಿರುಗೇಟು ಕೊಟ್ಟಿದ್ದಾರೆ.

ಪುಷ್ಪ ಅರುಣ್‌ ಕುಮಾರ್‌ ಹೇಳಿದ್ದೇನು?

ಅಶ್ವವೇಗ ಎನ್ನುವ ಯುಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನವೊಂದರಲ್ಲಿ “ದೀಪಿಕಾ ದಾಸ್‌ ಅವರಿಗೆ ನಿಮ್ಮ ಪ್ರೊಡಕ್ಷನ್‌ ಹೌಸ್‌ನಲ್ಲಿ ಅವಕಾಶ ಕೊಡ್ತೀರಾ?” ಎಂದು ಪ್ರಶ್ನೆ ಕೇಳಲಾಗಿತ್ತು. ಆಗ ಪುಷ್ಪ ಅವರು “ದೀಪಿಕಾ ದಾಸ್‌ಗೂ ನಮಗೂ ಆಗಿ ಬರೋದಿಲ್ಲ. ನಮ್ಮ ಸಿನಿಮಾಕ್ಕೆ ಆಯ್ಕೆ ಮಾಡಿಕೊಳ್ಳೋಕೆ ಅವಳು ಯಾವ ದೊಡ್ಡ ಹೀರೋಯಿನ್ ಅಂತ ಹಾಕಿಕೊಳ್ಳಬೇಕು? ಸಂಬಂಧ ಆದರೂ ಅವಳನ್ನು ದೂರದಲ್ಲಿ ಇಟ್ಟಿದ್ದೀವಿ. ಅವರ ಬಗ್ಗೆ ಯಾಕೆ ಕೇಳ್ತೀರಾ? ನನ್ನ ಮಗ ಬೈಯಲ್ವಾ? ಬೇರೆ ಹೀರೋಯಿನ್ಸ್‌ ಇಲ್ವಾ? ಅವರ ಬಗ್ಗೆ ಕೇಳಿ” ಎಂದು ಪುಷ್ಪಾ ಅವರು ಹೇಳಿದ್ದಾರೆ.

ದೀಪಿಕಾ ದಾಸ್‌ ಏನಂದ್ರು?

“ಹೊಸ ಕಲಾವಿದರನ್ನು ಬೆಳೆಸೋ ಜನರು ಕಲಾವಿದರಿಗೆ ಬೆಲೆ ಕೊಡೋದನ್ನು ಕಲಿತಿರಬೇಕು. ಇಲ್ಲಿಯವರೆಗೆ ಯಾರ ಹೆಸರನ್ನು ಹೇಳಿಕೊಂಡು ಬಂದಿಲ್ಲ, ಮುಂದೆಯೂ ಬರೋದಿಲ್ಲ. ಕೆಲವರಿಗೆ ಬೆಲೆ ಕೊಟ್ಟ ಮಾತ್ರಕ್ಕೆ ಯಾರನ್ನು ಕಂಡು ಯಾರಿಗೂ ಭಯ ಇಲ್ಲ. ಅದು ಅಮ್ಮ ಆದರೂ ಸರಿ, ದೊಡ್ಡಮ್ಮ ಆದರೂ ಸರಿ ಅಥವಾ ಪುಷ್ಪಮ್ಮ ಆದರೂ ಸರಿ. ವಿಥ್‌ ಡ್ಯೂ ರೆಸ್ಪೆಕ್ಟ್‌ ಟು ಸ್ಟಾರ್‌ ಆಫ್‌ ಅವರ್‌ ಇಂಡಸ್ಟ್ರಿ. ನಾನು ಯಾವ ದೊಡ್ಡ ನಟಿ ಅಲ್ಲದಿದ್ದರೂ ಏನೂ ಸಾಧನೆ ಮಾಡದಿದ್ದರೂ ನನ್ನ ಬಗ್ಗೆ ಹೀನಾಯವಾಗಿ ಮಾತನಾಡೋ ಹಕ್ಕು ಯಾರಿಗೂ ಇಲ್ಲ” ಎಂದು ಪುಷ್ಪ ಮಾತಿಗೆ ದೀಪಿಕಾ ದಾಸ್‌ ತಿರುಗೇಟು ಕೊಟ್ಟಿದ್ದರು.

ಕುಟುಂಬದಲ್ಲಿ ಮನಸ್ತಾಪ ಯಾಕೆ ಬಂತು?

ಅಂದಹಾಗೆ ಪುಷ್ಪ ಹಾಗೂ ದೀಪಿಕಾ ದಾಸ್‌ ತಾಯಿ ಒಡಹುಟ್ಟಿದವರು, ಅಕ್ಕ-ತಂಗಿ. ಆದರೆ ಯಶ್‌ ಮದುವೆಯಲ್ಲಿದ ದೀಪಿಕಾ ದಾಸ್‌ ಕುಟುಂಬ ಕಾಣಿಸಿರಲಿಲ್ಲ, ದೀಪಿಕಾ ದಾಸ್‌ ಮದುವೆಯಲ್ಲಿ ಯಶ್‌ ಕುಟುಂಬ ಭಾಗಿಯಾಗಿರಲಿಲ್ಲ. ಈ ಹಿಂದೆ ದೀಪಿಕಾ ದಾಸ್‌ ತಾಯಿಗೆ ಹಣದ ವಿಚಾರದಲ್ಲಿ ನಡೆದ ಸಮಸ್ಯೆಯಲ್ಲಿ ಯಶ್‌ ಅವರು ಮಾಧ್ಯಮದ ಮುಂದೆ ಬಂದು ಮಾತನಾಡಿದ್ದರು. “ನನ್ನ ಅಪ್ಪ-ಅಮ್ಮ ತಪ್ಪು ಮಾಡಿದರೆ ಅದು ಅವರ ತಪ್ಪು, ಅದಿಕ್ಕೆ ನಾನು ಹೊಣೆ ಅಲ್ಲ. ಇನ್ನು ಯಾವುದೇ ಈ ರೀತಿ ಘಟನೆಗೂ ನಾನು ಬಂದು ಮಾತನಾಡೋದಿಲ್ಲ” ಎಂದು ಹೇಳಿದ್ದರು. ಅದಾದ ನಂತರ ದೀಪಿಕಾ ದಾಸ್‌ ಕುಟುಂಬದ ಜೊತೆ ಬಾಂಧವ್ಯ ಚೆನ್ನಾಗಿಲ್ಲ ಎಂದು ಕಾಣುವುದು. ಇದರ ಹಿಂದಿನ ಇನ್ನೂ ಹೆಚ್ಚಿನ ಕಾರಣ ಇರಬಹುದು.