ಬಿಗ್ ಬಾಸ್ ಖ್ಯಾತಿಯ ರೂಪೇಶ್ ಶೆಟ್ಟಿ, ಅದ್ವಿತಿ ಶೆಟ್ಟಿ ನಟನೆಯ ‘ಜೈ’ ಸಿನಿಮಾದ ಟೀಸರ್ ರಿಲೀಸ್ ಮಾಡಿದ್ದಾರೆ. ಈ ಸಿನಿಮಾದಲ್ಲಿ ಸುನೀಲ್ ಶೆಟ್ಟಿ ಕೂಡ ನಟಿಸಿದ್ದಾರೆ.
ಗೌರಿ ಗಣೇಶ ಹಬ್ಬದ ಸಂಭ್ರಮದಲ್ಲಿ ಬಿಗ್ ಬಾಸ್ ಕನ್ನಡ ಖ್ಯಾತಿಯ ರೂಪೇಶ್ ಶೆಟ್ಟಿ ಅವರು ನಟಿಸಿ, ನಿರ್ದೇಶನ ಮಾಡಿರುವ ತುಳು, ಕನ್ನಡ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ನಟ ಶ್ರೀಮುರಳಿ ಆಗಮಿಸಿ, ಟೀಸರ್ ರಿಲೀಸ್ ಮಾಡಿದರು.
ನಟ ಶ್ರೀಮುರಳಿ ಮಾತನಾಡಿ, “ಜೈ ಚಿತ್ರದ ಟೀಸರ್ ಬಹಳ ಅದ್ಭುತವಾಗಿ ಮೂಡಿ ಬಂದಿದೆ. ಇದರಲ್ಲಿ ತಂಡದ ಶ್ರಮ ಕಾಣುತ್ತದೆ. ನಟ ರೂಪೇಶ್ ಶೆಟ್ಟಿ ಬಹಳ ಸುಂದರವಾದ ಹೀರೋ. ತುಳು ಭಾಷೆಯ ಸಂಸ್ಕೃತಿ , ಆಚಾರ ವಿಚಾರದ ಬಗ್ಗೆ ಅಪಾರ ಪ್ರೀತಿಯನ್ನು ಇಟ್ಟುಕೊಂಡು ಸಿನಿಮಾ ಮಾಡುತ್ತಿದ್ದಾರೆ. ಬಿಗ್ ಬಾಸ್ ಶೋನಿಂದ ನಾನು ನೋಡುತ್ತಿದ್ದೇನೆ. ಈ ಸಿನಿಮಾದಲ್ಲಿ ಹೀರೋ ಆಗುವುದರ ಜೊತೆಗೆ ನಿರ್ದೇಶನವನ್ನ ಮಾಡಿದ್ದಾರೆ. ಅವರಿಗೆ ಒಳ್ಳೆಯದಾಗಲಿ. ಅದರಲ್ಲೂ ವಿಶೇಷವಾಗಿ ಸುನಿಲ್ ಶೆಟ್ಟಿ ಅಣ್ಣನ ತುಳು ಸಿನಿಮಾಗೆ ಕರೆ ತಂದಿದ್ದಾರೆ. ಚಿತ್ರದ ಸಂಗೀತ , ಛಾಯಾಗ್ರಹಣ, ನಟಿ ಸೇರಿದಂತೆ ಎಲ್ಲ ಕಲಾವಿದರು, ತಂತ್ರಜ್ಞರಿಗೆ ಶುಭವಾಗಲಿ” ಎಂದು ಹಾರೈಸಿದರು.
ರೂಪೇಶ್ ಶೆಟ್ಟಿ ಮಾತನಾಡಿ, “ಇದು ನನ್ನ ನಿರ್ದೇಶನದ ಮೂರನೇ ಸಿನಿಮಾ. ಈ ಹಿಂದೆ ನಾನು ಗಿರ್ಗಿಟ್, ಸರ್ಕಸ್ ಎಂಬ ಚಿತ್ರ ಮಾಡಿದ್ದೆ, ಅದು ಬಿಡುಗಡೆಗೊಂಡು ಯಶಸ್ವಿ ಪ್ರದರ್ಶನವನ್ನು ಕಂಡಿದ್ದು , ಈಗ ಜೈ ಎನ್ನುವ ಸಿನಿಮಾವನ್ನು ನಿರ್ದೇಶನ ಮಾಡಿದ್ದೇನೆ. ಈ ಸಿನಿಮಾದಲ್ಲಿ ಹೀರೋ ಆಗಿ ನಟಿಸಿದ್ದೇನೆ. ಇದೊಂದು ಕರಾವಳಿ ಭಾಗದ ಲೋಕಲ್ ರಾಜಕೀಯ ಕಂಟೆಂಟ್ ಇರುವ ಸಿನಿಮಾ. ಇದು ತುಳು ಭಾಷೆಯಲ್ಲಿ ಸಿದ್ಧವಾಗಿದ್ದು , ಈ ಸಿನಿಮಾವನ್ನು ಕನ್ನಡಕ್ಕೆ ಡಬ್ ಮಾಡಿದ್ದೇವೆ. ಇನ್ನು ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ಸುನಿಲ್ ಶೆಟ್ಟಿ ಅಭಿನಯಿಸಿದ್ದಾರೆ. ತುಳು ಭಾಷೆಯ ಅಭಿಮಾನದಿಂದ ಒಂದು ರೂಪಾಯಿಯನ್ನು ಪಡೆಯದೆ ನಮ್ಮ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಸುಮಾರು 18 ನಿಮಿಷಗಳ ಕಾಲ ಅವರು ಈ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಾವು ಶ್ರಮಪಟ್ಟು ಕೆಲಸ ಮಾಡಿದರೆ ಯಶಸ್ಸು ಖಂಡಿತ ಸಿಗುತ್ತೆ , ಬೆಂಬಲ ಇರುತ್ತೆ ಎನ್ನುವುದಕ್ಕೆ ಸುನಿಲ್ ಶೆಟ್ಟಿ ಸರ್ ಸಾಕ್ಷಿ. ನವೆಂಬರ್ 14ರಂದು ಎರಡು ಭಾಷೆಯಲ್ಲಿ ನಮ್ಮ ಚಿತ್ರವನ್ನು ರಿಲೀಸ್ ಮಾಡುವ ಪ್ಲಾನ್ ಮಾಡಿಕೊಂಡಿದ್ದೇವೆ. ನಿಮ್ಮೆಲ್ಲರ ಪ್ರೀತಿ , ಬೆಂಬಲ ಇರಲಿ” ಎಂದು ಕೇಳಿಕೊಂಡರು.
ನಟಿ ಅದ್ವಿತಿ ಶೆಟ್ಟಿ ಮಾತನಾಡಿ, “ಇದು ನನ್ನ ಮೊದಲ ತುಳು ಸಿನಿಮಾ. ನನ್ನ ಮಾತೃಭಾಷೆ ತುಳು , ನನ್ನ ಅಪ್ಪನಿಗೆ ನಾನು ತುಳು ಸಿನಿಮಾದಲ್ಲಿ ನಡೆಸಬೇಕೆಂಬ ಆಸೆ ಇತ್ತು. ಅದರಂತೆ ನನ್ನ ಮೊದಲ ಚಿತ್ರ ಈಗ ಸಿದ್ಧವಾಗಿದೆ. ಆದರೆ ಎರಡು ವರ್ಷವಾಯಿತು ನನ್ನ ಅಪ್ಪ ನಮ್ಮನ್ನು ಅಗಲಿ. ಹಾಗೆ ಇಂದು ನನ್ನೊಂದಿಗೆ ನನ್ನ ತಾಯಿ ಈ ಕಾರ್ಯಕ್ರಮಕ್ಕೆ ಬಂದಿದ್ದಾರೆ. 13 ವರ್ಷ ಕನಸು ಈಗ ನೆರವೇರಿತಿದೆ. ನನ್ನ ಈ ತುಳು ಭಾಷೆಯ ಈ ಸಿನಿಮಾ ಕನ್ನಡದಲ್ಲಿ ಡಬ್ ಆಗುತ್ತಿದೆ. ಈ ಚಿತ್ರದಲ್ಲಿ ನನ್ನದು ಜರ್ನಲಿಸ್ಟ್ ಪಾತ್ರ ನಿರ್ವಹಿಸಿದ್ದೇನೆ. ಇಡೀ ಚಿತ್ರ ತಂಡ ಬಹಳ ಹಾರ್ಡ್ ವರ್ಕ್ ಮಾಡಿದೆ. ನಿಮ್ಮೆಲ್ಲರ ಸಪೋರ್ಟ್ ನಮ್ಮ ತಂಡಕ್ಕೆ ಬೇಕು” ಎಂದರು.
ಆರ್ ಎಸ್ ಸಿನಿಮಾಸ್, ಶೂಲಿನ್ ಫಿಲಂಸ್, ಮುಗ್ರೋಡಿ ಪ್ರೊಡಕ್ಷನ್ ಲಾಂಛನದಲ್ಲಿ ಅನಿಲ್ ಶೆಟ್ಟಿ, ಸುಧಾಕರ ಶೆಟ್ಟಿ ಮುಗ್ರೋಡಿ, ಮಂಜುನಾಥ ಅತ್ತಾವರ ಸಿನಿಮಾಕ್ಕೆ ಬಂಡವಾಳ ಹೂಡಿದ್ದು, ದೀಕ್ಷಿತ್ ಸಹ ನಿರ್ಮಾಪಕರಾಗಿದ್ದಾರೆ. ಇನ್ನು ಚಿತ್ರಕಥೆಯನ್ನು ರೂಪೇಶ್ ಶೆಟ್ಟಿ, ವೇಣು ಹಸ್ರಳ್ಳಿ ಅವರು ಬರೆದಿದ್ದಾರೆ. ಮೂರು ಹಂತದಲ್ಲಿ ಚಿತ್ರೀಕರಣ ಮುಗಿಸಿದ 'ಜೈʼ ಸಿನಿಮಾದಲ್ಲಿ ನಾಯಕನಾಗಿ ರೂಪೇಶ್ ಶೆಟ್ಟಿ, ನಾಯಕಿಯಾಗಿ ಅದ್ವಿತಿ ಶೆಟ್ಟಿ ಅಭಿನಯಿಸಿದ್ದಾರೆ. ದೇವದಾಸ್ ಕಾಪಿಕಾಡ್, ರಾಜ್ ದೀಪಕ್ ಶೆಟ್ಟಿ, ನವೀನ್ ಡಿ ಪಡೀಲ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಉಮೇಶ್ ಮಿಜಾರ್ ಮೊದಲಾದವರು ಅಭಿನಯಿಸಿದ್ದಾರೆ. ತುಳು ಚಿತ್ರರಂಗದ ಖ್ಯಾತ ಡೈಲಾಗ್ ರೈಟರ್ ಪ್ರಸನ್ನ ಶೆಟ್ಟಿ ಬೈಲೂರು ಚಿತ್ರಕ್ಕೆ ಕತೆ, ಸಂಭಾಷಣೆ ಬರೆದಿದ್ದಾರೆ. ಚಿತ್ರಕ್ಕೆ ವಿನುತ್ ಛಾಯಾಗ್ರಹಣ, ಲೊಯ್ ವೆಲೆಂಟಿನ್ ಸಲ್ದಾನ ಸಂಗೀತ, ರಾಹುಲ್ ವಸಿಷ್ಠ ಸಂಕಲನವಿದೆ. ರೂಪೇಶ್ ಶೆಟ್ಟಿ ಸಾರಥ್ಯದ ಈ ಸಿನಿಮಾ ತುಳು, ಕನ್ನಡ ಭಾಷೆಗಳಲ್ಲಿ ನವೆಂಬರ್ 14ರಂದು ತೆರೆಯ ಮೇಲೆ ಬರಲಿದೆ.
