ಕುತೂಹಲಕಾರಿ ವಿಷಯವೆಂದರೆ ಗಣೇಶನ ಅತಿದೊಡ್ಡ ಪ್ರತಿಮೆಯನ್ನು ಭಾರತದಲ್ಲಿ ಸ್ಥಾಪಿಸಲಾಗಿಲ್ಲ, ಮತ್ತೆಲ್ಲಿ ಅಂತೀರಾ?. ಇಲ್ಲಿದೆ ನೋಡಿ ಮಾಹಿತಿ.
Tallest Lord Ganesha Statue in the World: ಭಾರತದ ಪ್ರತಿಯೊಂದು ರಾಜ್ಯ, ಮೂಲೆ ಮೂಲೆಯಲ್ಲಿಯೂ ಹಲವಾರು ದೇವಾಲಯಗಳಿವೆ. ಅದರಲ್ಲೂ ಹಿಂದೂ ಧರ್ಮದಲ್ಲಿ ಗಣೇಶನಿಗೆ ವಿಶೇಷ ಸ್ಥಾನವಿದೆ. ಗಣಪನನ್ನು ಅಡೆತಡೆಗಳನ್ನು ನಾಶ ಮಾಡುವವನು, ಬುದ್ಧಿವಂತಿಕೆ ಮತ್ತು ಸಮೃದ್ಧಿಯ ದೇವರು ಎಂದು ಪರಿಗಣಿಸಲಾಗುತ್ತದೆ. ಗಣೇಶ ಚತುರ್ಥಿಯಂತಹ ಹಬ್ಬಗಳನ್ನು ಭಾರತದಲ್ಲಿ ಮಾತ್ರವಲ್ಲದೆ, ಪ್ರಪಂಚದ ಅನೇಕ ದೇಶಗಳಲ್ಲಿಯೂ ಭಕ್ತಿ ಮತ್ತು ಸಂತೋಷದಿಂದ ಆಚರಿಸಲಾಗುತ್ತದೆ. ಆದರೆ ವಿಶ್ವದ ಅತಿ ಎತ್ತರದ ಗಣೇಶನ ಪ್ರತಿಮೆ ಎಲ್ಲಿದೆ ಎಂದು ನಿಮ್ಮನ್ನು ಕೇಳಿದರೆ, ಸ್ವಾಭಾವಿಕವಾಗಿಯೇ ಭಾರತದ ಹೆಸರು ನಿಮ್ಮ ಮನಸ್ಸಿಗೆ ಬರುತ್ತದೆ ಅಲ್ಲವೇ, ಕುತೂಹಲಕಾರಿ ವಿಷಯವೆಂದರೆ ಗಣೇಶನ ಅತಿದೊಡ್ಡ ಪ್ರತಿಮೆಯನ್ನು ಭಾರತದಲ್ಲಿ ಸ್ಥಾಪಿಸಲಾಗಿಲ್ಲ, ಮತ್ತೆಲ್ಲಿ ಅಂತೀರಾ?. ಇಲ್ಲಿದೆ ನೋಡಿ ಮಾಹಿತಿ.
ವಿಶ್ವದ ಅತಿ ಎತ್ತರದ ಪ್ರತಿಮೆ
ಗಣೇಶನ ಅತಿದೊಡ್ಡ ಪ್ರತಿಮೆ ಎಲ್ಲಿದೆ ಎಂದು ತಿಳಿಯುವುದಕ್ಕಿಂತ ಮುನ್ನ, ಆ ಗಣೇಶ ವಿಗ್ರಹದ ವೈಶಿಷ್ಟ್ಯವನ್ನು ತಿಳಿದುಕೊಳ್ಳೋಣ. ಈ ಭವ್ಯ ಪ್ರತಿಮೆಯನ್ನು ವಿಶ್ವದ ಅತಿ ಎತ್ತರದ ಪ್ರತಿಮೆ ಎಂದು ಪರಿಗಣಿಸಲಾಗಿದ್ದು, ಸುಮಾರು 39 ಮೀಟರ್ ಅಂದರೆ 128 ಅಡಿ ಎತ್ತರವಿದೆ. ಇದು ಕಂಚಿನಿಂದ ಮಾಡಲ್ಪಟ್ಟಿದೆ ಮತ್ತು 854 ವಿಭಿನ್ನ ತುಣುಕುಗಳನ್ನು ಇದರ ನಿರ್ಮಾಣದಲ್ಲಿ ಬಳಸಲಾಗಿದೆ.
ವಿಶೇಷ ಸಾಂಕೇತಿಕ ಅರ್ಥಗಳೊಂದಿಗೆ ಕೆತ್ತನೆ
ಈ ಪ್ರತಿಮೆಯನ್ನು ಪಿತಕ್ ಚಲೆಮ್ಲಾವ್ ವಿನ್ಯಾಸಗೊಳಿಸಿದ್ದಾರೆ. ಗಣಪತಿಯ ಪ್ರತಿಮೆಯನ್ನು ವಿಶೇಷ ಸಾಂಕೇತಿಕ ಅರ್ಥಗಳೊಂದಿಗೆ ಕೆತ್ತಲಾಗಿದೆ. ಅಂದರೆ ಗಣೇಶನ ನಾಲ್ಕು ಕೈಗಳಲ್ಲಿ ಕಬ್ಬು, ಹಲಸು, ಬಾಳೆಹಣ್ಣು ಮತ್ತು ಮಾವು ಇದ್ದು, ಅವು ಸಮೃದ್ಧಿ ಮತ್ತು ಪ್ರಗತಿಯ ಸಂದೇಶವನ್ನು ನೀಡುತ್ತವೆ. ಕಾಲು ರಾಷ್ಟ್ರದ ಪ್ರಗತಿ ಮತ್ತು ಮುಂದಕ್ಕೆ ಚಲನೆಯನ್ನು ಸಂಕೇತಿಸುತ್ತದೆ. ಕಿರೀಟದ ಮೇಲಿನ ಕಮಲದ ಹೂವು ಜ್ಞಾನದ ಸಂಕೇತವಾಗಿದೆ. ಪ್ರತಿಮೆಯ ಮೇಲ್ಭಾಗದಲ್ಲಿರುವ "ಓಂ" ಚಿಹ್ನೆಯು ಅವರ ದೈವತ್ವ ಮತ್ತು ರಕ್ಷಕ ರೂಪವನ್ನು ನೆನಪಿಸುತ್ತದೆ.
ನಾಲ್ಕು ವರ್ಷ ತೆಗೆದುಕೊಂಡ ಪ್ರತಿಮೆ ನಿರ್ಮಾಣ ಕಾರ್ಯ
ಅಂದಹಾಗೆ ಗಣೇಶನ ಪ್ರತಿಮೆಯನ್ನು ಥೈಲ್ಯಾಂಡ್‌ನಲ್ಲಿ ಸ್ಥಾಪಿಸಲಾಗಿದೆ. ಥೈಲ್ಯಾಂಡ್‌ನ ಚಾಚೊಂಗ್ಸಾವೊ ಪ್ರಾಂತ್ಯದಲ್ಲಿರುವ ಈ ಪ್ರತಿಮೆ ಖ್ಲಾಂಗ್ ಖುಯೆನ್ ಗಣೇಶ್ ಇಂಟರ್‌ನ್ಯಾಷನಲ್ ಪಾರ್ಕ್‌ನಲ್ಲಿದೆ. ಬ್ಯಾಂಗ್ ಪಕಾಂಗ್ ನದಿಯ ದಡದಲ್ಲಿ ನಿರ್ಮಿಸಲಾದ ಈ ಪ್ರತಿಮೆಯು ದೂರದಿಂದಲೇ ಜನರ ಗಮನವನ್ನು ಸೆಳೆಯುತ್ತದೆ. ಇದರ ನಿರ್ಮಾಣ ಕಾರ್ಯವು 2012 ರಲ್ಲಿ ಪೂರ್ಣಗೊಂಡಿತು. ಅಂದರೆ ಇದು ಪೂರ್ಣ ನಾಲ್ಕು ವರ್ಷಗಳನ್ನು ತೆಗೆದುಕೊಂಡಿತು.
ಥಾಯ್ ಸಂಸ್ಕೃತಿಯಲ್ಲಿ ಗಣಪತಿಯ ಮಹತ್ವ
ಭಾರತದಿಂದ ಸಾವಿರಾರು ಕಿಲೋಮೀಟರ್ ದೂರದಲ್ಲಿರುವ ಥೈಲ್ಯಾಂಡ್‌ನಲ್ಲಿ ಗಣೇಶನಿಗೆ ವಿಭಿನ್ನ ಸಾಂಸ್ಕೃತಿಕ ಮಹತ್ವವಿದೆ. ಇಲ್ಲಿ ಜನರು ತಮ್ಮ ಮನೆಗಳು, ವಿಶ್ವವಿದ್ಯಾಲಯಗಳು ಮತ್ತು ಕಚೇರಿಗಳಲ್ಲಿ ಗಣೇಶನ ವಿಗ್ರಹವನ್ನು ಇಡುತ್ತಾರೆ. ಅವನನ್ನು ಯಶಸ್ಸು, ಜ್ಞಾನ ಮತ್ತು ರಕ್ಷಣೆಯ ದೇವರು ಎಂದು ಪರಿಗಣಿಸಲಾಗುತ್ತದೆ.
ಥಾಯ್ ಸಂಸ್ಕೃತಿ ಮತ್ತು ಆಧ್ಯಾತ್ಮಿಕತೆಯ ಸಂಕೇತ
ಥೈಲ್ಯಾಂಡ್‌ನಲ್ಲಿ, ಪ್ರತಿ ವರ್ಷ ಗಣೇಶನ ಗೌರವಾರ್ಥವಾಗಿ ವಿಶೇಷ ಹಬ್ಬಗಳು ಮತ್ತು ಆಚರಣೆಗಳನ್ನು ಆಯೋಜಿಸಲಾಗುತ್ತದೆ, ಇದು ಗಣೇಶನು ಅಲ್ಲಿನ ಸಂಸ್ಕೃತಿಯ ಅವಿಭಾಜ್ಯ ಅಂಗ ಎಂದು ತೋರಿಸುತ್ತದೆ. ಭಾರತದಲ್ಲಿ ಗಣೇಶನ ಆರಾಧನೆಯು ಅತ್ಯಂತ ಮಹತ್ವದ್ದಾಗಿದೆ ಮತ್ತು ಇಲ್ಲಿನ ಸಾವಿರಾರು ದೇವಾಲಯಗಳಲ್ಲಿ ಅವನ ವಿಗ್ರಹಗಳನ್ನು ಸ್ಥಾಪಿಸಲಾಗಿದ್ದರೂ, ವಿಶ್ವದ ಅತಿ ಎತ್ತರದ ಗಣೇಶನ ವಿಗ್ರಹವು ಭಾರತದಲ್ಲಿಲ್ಲ, ಆದರೆ ಥೈಲ್ಯಾಂಡ್‌ನಲ್ಲಿದೆ. ಚಾಚೊಂಗ್ಸಾವೊ ಪ್ರಾಂತ್ಯದ ಈ 39 ಮೀಟರ್ ಎತ್ತರದ ಭವ್ಯವಾದ ವಿಗ್ರಹವು ಧಾರ್ಮಿಕ ಸ್ಥಳ ಮಾತ್ರವಲ್ಲ, ಥಾಯ್ ಸಂಸ್ಕೃತಿ ಮತ್ತು ಆಧ್ಯಾತ್ಮಿಕತೆಯ ಅದ್ಭುತ ಸಂಕೇತವಾಗಿದೆ.