ಪ್ರಸಿದ್ಧ ಜಲಾಶಯದಲ್ಲಿ ಪ್ರವಾಸಿಗರೊಬ್ಬರು ನೀರಿನಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ನಾಗರಿಕ ಪ್ರಜ್ಞೆಯ ಕೊರತೆಯ ಬಗ್ಗೆ ಚರ್ಚೆ ಹುಟ್ಟುಹಾಕಿದೆ.
ಭಾರತದಲ್ಲಿ ಕೆಲ ಜನರಿಗೆ ನಾಗರಿಕ ಪ್ರಜ್ಞೆ ಎಂಬುದೇ ಇಲ್ಲ, ಹಕ್ಕುಗಳ ಬಗ್ಗೆ ಗಂಟಲು ಬಿರಿಯುವಂತೆ ಕೂಗುವ ನಾವುಗಳು ಸಾರ್ವಜನಿಕ ಸ್ಥಳದಲ್ಲಿ ನಾವು ಮಾಡಬೇಕಾದ ಕರ್ತವ್ಯ, ವರ್ತಿಸಬೇಕಾದ ರೀತಿಯ ಬಗ್ಗೆ ಯೋಚನೆ ಮಾಡುವುದೇ ಇಲ್ಲ. ಭಾರತದ ಪ್ರವಾಸಿಗ ಸ್ಥಳಗಳು ಕಸದ ಜೊತೆ ಕೊಳಕಿನಿಂದ ಕುಡಿರುವುದಕ್ಕೆ ನಾಗರಿಕ ಪ್ರಜ್ಞೆ ಮರೆತ ಜನಗಳೇ ಕಾರಣ ಕೆಲ ದಿನಗಳ ಹಿಂದೆ ಭಾರತದ ಪ್ರವಾಸಿ ತಾಣದಲ್ಲಿ ಭಾರತೀಯರು ಎಸೆದು ಹೋದಂತಹ ಪ್ಲಾಸ್ಟಿಕ್ ಮುಂತಾದ ಕಸಗಳನ್ನು ವಿದೇಶಿ ಪ್ರವಾಸಿಗನೋರ್ವ ಸ್ವಚ್ಛಗೊಳಿಸಿ ಹೆಕ್ಕಿತಂದು ಕಸದ ಬುಟ್ಟಿಗೆ ಹಾಕುವ ವೀಡಿಯೋ ಭಾರಿ ವೈರಲ್ ಆಗಿತ್ತು. ಆಗಲೂ ಅನೇಕರು ಈ ಭಾರತೀಯರ ಬೇಜವಾಬ್ದಾರಿ ವರ್ತನೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕಿಡಿಕಾರಿದರು. ಈಗ ಪ್ರವಾಸಿ ತಾಣವೊಂದರಲ್ಲಿ ಅಂತಹದ್ದೇ ಬೇಜವಾಬ್ದಾರಿ ವರ್ತನೆಯ ಜನರ ವೀಡಿಯೋವೊಂದು ವೈರಲ್ ಆಗಿದ್ದು, ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರವಾಸಿಗರ ಅನಾಗರಿಕ ವರ್ತನೆ: ಜಲಪಾತದಲ್ಲಿ ಮೂತ್ರ ವಿಸರ್ಜನೆ:
ವ್ಯಕ್ತಿಯೊಬ್ಬ ಪ್ರವಾಸಿ ತಾಣವೊಂದರ ಜಲಪಾತದ ಕೆಳಗಿನ ಕೊಳದಂತಹ ಪ್ರದೇಶದಲ್ಲಿ ನೀರಿನಲ್ಲಿ ಮುಳುಗೇಳುತ್ತಾ ಸ್ನಾನ ಮಾಡಿದರೆ ಮತ್ತೊರ್ವ ಮೇಲೆ ನಿಂತುಕೊಂಡು ಕೊಳಕ್ಕೆ ಹೋಗಿ ಸೇರುವಂತಹ ನೀರಿಗೆ ಮೇಲಿನಿಂದ ಮೂತ್ರ ವಿಸರ್ಜನೆ ಮಾಡುತ್ತಿದ್ದಾನೆ. ನೀರಿನಲ್ಲಿ ಸ್ನಾನ ಮಾಡುತ್ತಿದ್ದ ವ್ಯಕ್ತಿಯ ಸ್ನೇಹಿತರು ಈ ವೀಡಿಯೋವನ್ನು ರೆಕಾರ್ಡ್ ಮಾಡಿದ್ದಾರೆ. ವೀಡಿಯೋದಲ್ಲಿ ಅವರು ವ್ಯಕ್ತಿಯೋರ್ವ ನೀರಿಗೆ ಮೂತ್ರ ಮಾಡುವುದನ್ನು ನೋಡಿ ತಮ್ಮ ಸ್ನೇಹಿತನನ್ನು ಬೇಗ ಮೇಲೆ ಬರುವಂತೆ ಕರೆಯುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ.
ಲೋನಾವಾಲಾದ ಭೂಷಿ ಜಲಾಶಯ
ಅಂದಹಾಗೆ ಈ ಘಟನೆ ನಡೆದಿರುವುದು ಮಹಾರಾಷ್ಟ್ರದ ಪ್ರಸಿದ್ಧ ಪ್ರವಾಸಿ ತಾಣವಾದ ಲೋನಾವಾಲಾ ಸಮೀಪದ ಭೂಷಿ ಜಲಾಶಯದಲ್ಲಿ ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದ್ದು, ಹೀಗೆ ಪ್ರವಾಸಿ ತಾಣವನ್ನು ಗಲೀಜು ಮಾಡುತ್ತಿರುವ ನಾಗರಿಕ ಪ್ರಜ್ಞೆ ಮರೆತ ಪ್ರವಾಸಿಗರ ಬಗ್ಗೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Tarun Gautam(@TARUNspeakss)ಎಂಬುವವರು ಈ 40 ಸೆಕೆಂಡ್‌ಗಳ ವೀಡಿಯೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, 'ನಾಗರಿಕ ಪ್ರಜ್ಞೆ ಶೂನ್ಯ,
ಒಬ್ಬ ವ್ಯಕ್ತಿ ಸ್ನಾನ ಮಾಡುವುದನ್ನು ಆನಂದಿಸುತ್ತಿದ್ದರೆ, ಇನ್ನೊಬ್ಬ ವ್ಯಕ್ತಿ ಹೊಳೆಯಲ್ಲಿ ಮೂತ್ರ ಮಾಡುತ್ತಿದ್ದಾನೆ. ಇದಕ್ಕಾಗಿಯೇ ನಾನು ಈಜುಕೊಳಗಳು ಮತ್ತು ಅಂತಹ ಹೊಳೆಗಳಿಗೆ ಹೋಗುವುದನ್ನು ನಿಲ್ಲಿಸಿದ್ದೇನೆ' ಎಂದು ಅವರು ಬರೆದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ವೀಡಿಯೋವನ್ನು 7 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.
ಇಂತಹ ಜನರಿರುವವರೆಗೆ ಭಾರತ ಉದ್ಧಾರ ಆಗಲ್ಲ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಹೀಗೆ ಆನ್‌ಲೈನ್‌ನಲ್ಲಿ ವೀಡಿಯೋ ಮಾಡಿ ಹಾಕುವ ಬದಲು ಅಲ್ಲೇ ಆ ವ್ಯಕ್ತಿಯನ್ನು ಹಿಡಿದು ಆತನಿಗೆ ಬುದ್ಧಿ ಹೇಳಬೇಕಿತ್ತು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಈಜುಕೊಳಗಳಲ್ಲೂ ಕೆಲವರು ಇದೇ ರೀತಿ ಮಾಡುತ್ತಾರೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಈ ರೀತಿ ಮಾಡುವವರನ್ನು ಕೂಡಲೇ ಬಂಧಿಸಬೇಕು ಎಂದು ಒಬ್ಬರು ಆಗ್ರಹಿಸಿದ್ದಾರೆ. ಇದೇ ಕಾರಣಕ್ಕೆ ನಾನು ವಾಟರ್‌ಫಾಲ್ಸ್ ಹಾಗೂ ಸ್ವಿಮ್ಮಿಂಗ್ ಫೂಲ್‌ಗಳಿಗೆ ಹೋಗುವುದನ್ನು ನಿಲ್ಲಿಸಿದ್ದೇನೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಭಾರತದಲ್ಲಿ ನಾಗರಿಕ ಪ್ರಜ್ಞೆ ಎಂಬುದು ಇಲ್ಲವೇ ಇಲ್ಲ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಈ ವೀಡಿಯೋಗೆ ಈಗ ಭಾರಿ ಆಕ್ರೋಶ ವ್ಯಕ್ತವಾಗುತ್ತಿದ್ದು, ಪ್ರವಾಸಿ ತಾಣದಲ್ಲಿ ಹೇಗಿರಬೇಕು ಎಂಬ ಬಗ್ಗೆ ನಿಯಮಗಳನ್ನು ರೂಪಿಸಬೇಕು ಇಂತಹವರಿಗೆ ಭಾರಿ ದಂಡ ವಿಧಿಸಬೇಕು ಎಂದು ಒಬ್ಬರು ಆಗ್ರಹಿಸಿದ್ದಾರೆ.
