ಕರ್ನಾಟಕದ ಇಂದಿನ ಪ್ರಮುಖ 5 ಸುದ್ದಿಗಳನ್ನು ಓದಿ: ಜಿಎಸ್‌ಟಿ ಸಂಗ್ರಹದಲ್ಲಿ ಅಗ್ರಸ್ಥಾನ, ಗಣೇಶ ವಿಸರ್ಜನೆಯ ದುರಂತಗಳು, ರಾಜಕೀಯ ಬೆಳವಣಿಗೆಗಳು ಮತ್ತು ಇನ್ನಷ್ಟು. ಇಂದಿನ ಕರ್ನಾಟಕದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
1.ಜಿಎಸ್‌ಟಿ ಬೆಳವಣಿಗೆ ಕರ್ನಾಟಕ ದೇಶಕ್ಕೆ ನಂ.1
ಕಳೆದ ಆಗಸ್ಟ್ ತಿಂಗಳಲ್ಲಿ ದೇಶದಲ್ಲಿ 1.86 ಲಕ್ಷ ಕೋಟಿ ರು.ನಷ್ಟು ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಸಂಗ್ರಹವಾಗಿದೆ. ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ.6.5ರಷ್ಟು ಹೆಚ್ಚಾಗಿದೆ. ಇನ್ನು ಕಳೆದ ವರ್ಷದ ಆಗಸ್ಟ್‌ಗೆ ಹೋಲಿಸಿದರೆ ಶೇ.10ರಷ್ಟು ಏರಿಕೆ ದಾಖಲಿಸಿರುವ ಕರ್ನಾಟಕ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಕಳೆದ ವರ್ಷದ ಆಗಸ್ಟ್‌ನಲ್ಲಿ ಕರ್ನಾಟಕದಲ್ಲಿ 12344 ಕೋಟಿ ರು. ಜಿಎಸ್ಟಿ ಸಂಗ್ರಹವಾಗಿದ್ದರೆ, ಈ ವರ್ಷ ಅದು 14204 ಕೋಟಿ ರು.ಗೆ ಏರಿಕೆಯಾಗಿದೆ. ಅಂದರೆ ಶೇ.15ರಷ್ಟು ಪ್ರಗತಿ ದಾಖಲಾಗಿದೆ.
2. ಗಣೇಶ ವಿಸರ್ಜನೆ ವೇಳೆ ಕುಣಿಯುತ್ತಲೇ ಕುಸಿದುಬಿದ್ದು 3 ಜನರ ಸಾವು
ಅದ್ಧೂರಿಯಾಗಿ ಗಣೇಶ ಹಬ್ಬವನ್ನು ಮಾಡಿದ ಭಕ್ತರು ವಿಸರ್ಜನಾ ಸಂದರ್ಭದಲ್ಲಿ ಡಿಜೆ, ಸೌಂಡ್ ಸಿಸ್ಟಮ್ ಅಥವಾ ವಾದ್ಯಗಳ ಸದ್ದಿಗೆ ಕುಣಿದು ಕುಪ್ಪಳಿಸುತ್ತಾರೆ. ಡಿಜೆ ಸೌಂಡ್ ಸಿಸ್ಟಮ್ ಮುಂದೆ ತಮ್ಮ ಶಕ್ತಿ ಕುಂದಿದರೂ ಲೆಕ್ಕಿಸದೇ ಕುಣಿದ ಮೂವರು ಸ್ಥಳದಲ್ಲಿಯೇ ಕುಸಿದುಬಿದ್ದು ಸಾವನ್ನಪ್ಪಿದ ದುರಂತ ಘಟನೆಗಳು ನಡೆದಿದೆ. ಮಂಡ್ಯ, ಚಿಕ್ಕಬಳ್ಳಾಪುರ ಹಾಗೂ ರಾಯಚೂರಿನಲ್ಲಿ ಡ್ಯಾನ್ಸ್ ಮಾಡುತ್ತಲೇ ಕುಸಿದುಬಿದ್ದು ಪ್ರಾಣಬಿಟ್ಟ ಪ್ರತ್ಯೇಕ 3 ಘಟನೆಗಳು ವರದಿಯಾಗಿವೆ.
3.‘ಡು ಯು ನೋ ಕನ್ನಡ’: ಸಿಎಂ ಸಿದ್ದರಾಮಯ್ಯ ತಮಾಷೆ, ರಾಷ್ಟ್ರಪತಿಯ ಹೃದಯ ಗೆದ್ದ ಉತ್ತರ
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ನಡುವೆ ಸೋಮವಾರ ಭಾಷಾ ಜುಗಲ್ ಬಂದಿ ನಡೆಯಿತು. ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯಲ್ಲಿ ಸೋಮವಾರ ನಡೆದ ವಜ್ರ ಮಹೋತ್ಸವ ಸಮಾರಂಭದಲ್ಲಿ ಈ ಘಟನೆ ಜರುಗಿತು. ಮೊದಲಿಗೆ ಭಾಷಣ ಮಾಡಿದ ಸಿಎಂ ಸಿದ್ದರಾಮಯ್ಯ ಅವರು, ಭಾಷಣ ಪ್ರಾರಂಭಿಸುವ ಮುನ್ನ ‘ಯು ನೋ ಕನ್ನಡ? (ನಿಮಗೆ ಕನ್ನಡ ಬರುತ್ತದೆಯೇ?)’ ಎಂದು ರಾಷ್ಟ್ರಪತಿಗಳಿಗೆ ತಮಾಷೆಯಿಂದ ಕೇಳಿದರು. ಸಿಎಂ ಪ್ರಶ್ನೆಗೆ ರಾಷ್ಟ್ರಪತಿ ಹಾಗೂ ವೇದಿಕೆಯ ಆಹ್ವಾನಿತರು ನಕ್ಕರು. ಬಳಿಕ ಮಾತನಾಡಿದ ಸಿದ್ದರಾಮಯ್ಯ ಅವರು ‘ಐ ಸ್ಪೀಕ್ ಇನ್ ಕನ್ನಡ (ನಾನು ಕನ್ನಡದಲ್ಲಿ ಮಾತನಾಡುತ್ತೇನೆ)’ ಎಂದು ಭಾಷಣ ಆರಂಭಿಸಿದರು.
4.ಸರ್ಕಾರಿ ಕೆಲಸಕ್ಕೆ ಕಾಪ್ಟರ್ ಬಾಡಿಗೆ ಪಡೆಯಲು ಶೀಘ್ರ ಟೆಂಡರ್: ಡಿ.ಕೆ.ಶಿವಕುಮಾರ್
ಬೆಂಗಳೂರು (ಸೆ.02): ಸರ್ಕಾರಿ ಅಧಿಕೃತ ಕೆಲಸಗಳಿಗೆ ಹೆಲಿಕಾಪ್ಟರ್ ಮತ್ತು ವಿಮಾನಗಳ ಬಳಕೆ ಕುರಿತು ಕಟ್ಟುನಿಟ್ಟಿನ ಮಾನದಂಡ ರೂಪಿಸಿ ಟೆಂಡರ್ ಮೂಲಕವೇ ಹೆಲಿಕಾಪ್ಟರ್ ಹಾಗೂ ವಿಮಾನಗಳ ಸೇವೆ ಪಡೆಯಲು ನಿರ್ಧರಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಹೆಲಿಕಾಪ್ಟರ್ ಹಾಗೂ ವಿಮಾನ ಬಳಕೆ ಕುರಿತು ನಿರ್ದಿಷ್ಟ ಮಾನದಂಡ ರೂಪಿಸುವ ಬಗ್ಗೆ ಇಂಧನ ಸಚಿವ ಕೆ.ಜೆ.ಜಾರ್ಜ್, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಜತೆಗೂಡಿ ಸೋಮವಾರ ವಿವಿಧ ಇಲಾಖೆ ಅಧಿಕಾರಿಗಳ ಜತೆ ಶಿವಕುಮಾರ್ ಸಭೆ ನಡೆಸಿದರು.
5.ಮುಸುಕುಧಾರಿಯ ವಿರುದ್ಧವೇ ತಿರುಗಿಬಿತ್ತು ಬುರುಡೆ ಗ್ಯಾಂಗ್!
ಮಂಗಳೂರು/ಬೆಳ್ತಂಗಡಿ : ‘ಮಾಸ್ಕ್ ಮ್ಯಾನ್’ ಚಿನ್ನಯ್ಯನನ್ನು ಮುಂದಿಟ್ಟುಕೊಂಡು ಧರ್ಮಸ್ಥಳದ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದ ಬುರುಡೆ ಟೀಂ, ತಮ್ಮ ಯೋಜನೆ ವಿಫಲವಾಗುತ್ತಿದ್ದಂತೆ ಮಾಸ್ಕ್ ಮ್ಯಾನ್ ವಿರುದ್ಧವೇ ತಿರುಗಿ ಬಿದ್ದಿದೆ. ಧರ್ಮಸ್ಥಳ ಗ್ರಾಮದಲ್ಲಿ ಕೊಲೆಗೀಡಾದ, ಅತ್ಯಾಚಾರಕ್ಕೊಳಗಾದ ನೂರಾರು ಶವಗಳನ್ನು ನಾನೇ ಹೂತಿದ್ದೇನೆ ಎಂದಿದ್ದ ಚಿನ್ನಯ್ಯ, ತನಿಖೆ ವೇಳೆ ‘ಬುರುಡೆ ಗ್ಯಾಂಗ್‌ನ ಸೂತ್ರಧಾರಿಗಳು ಹಣ ನೀಡಿ ಹೀಗೆ ಹೇಳಬೇಕು ಅಂತ ನನಗೆ ಬೆದರಿಕೆ ಹಾಕಿದ್ದರು. ನಾವು ಹೇಳಿದ ಹಾಗೆ ಕೇಳಿಲ್ಲ ಅಂದರೆ ನಿನ್ನ ವಿರುದ್ಧವೇ ಕೇಸ್ ಹಾಕುತ್ತೇವೆ ಎಂದೆಲ್ಲಾ ನನ್ನನ್ನು ಹೆದರಿಸಿದ್ದರು’ ಎಂದು ಸ್ಫೋಟಕ ಹೇಳಿಕೆ ನೀಡಿದ್ದ. ಇದು ಬುರುಡೆ ಗ್ಯಾಂಗ್‌ನ ಆಕ್ರೋಶಕ್ಕೆ ಕಾರಣವಾಗಿದೆ.
