ಸರ್ಕಾರಿ ಅಧಿಕೃತ ಕೆಲಸಗಳಿಗೆ ಹೆಲಿಕಾಪ್ಟರ್ ಮತ್ತು ವಿಮಾನಗಳ ಬಳಕೆ ಕುರಿತು ಕಟ್ಟುನಿಟ್ಟಿನ ಮಾನದಂಡ ರೂಪಿಸಿ ಟೆಂಡರ್ ಮೂಲಕವೇ ಹೆಲಿಕಾಪ್ಟರ್‌ ಹಾಗೂ ವಿಮಾನಗಳ ಸೇವೆ ಪಡೆಯಲು ನಿರ್ಧರಿಸಲಾಗಿದೆ ಎಂದು ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಬೆಂಗಳೂರು (ಸೆ.02): ಸರ್ಕಾರಿ ಅಧಿಕೃತ ಕೆಲಸಗಳಿಗೆ ಹೆಲಿಕಾಪ್ಟರ್ ಮತ್ತು ವಿಮಾನಗಳ ಬಳಕೆ ಕುರಿತು ಕಟ್ಟುನಿಟ್ಟಿನ ಮಾನದಂಡ ರೂಪಿಸಿ ಟೆಂಡರ್ ಮೂಲಕವೇ ಹೆಲಿಕಾಪ್ಟರ್‌ ಹಾಗೂ ವಿಮಾನಗಳ ಸೇವೆ ಪಡೆಯಲು ನಿರ್ಧರಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಹೆಲಿಕಾಪ್ಟರ್‌ ಹಾಗೂ ವಿಮಾನ ಬಳಕೆ ಕುರಿತು ನಿರ್ದಿಷ್ಟ ಮಾನದಂಡ ರೂಪಿಸುವ ಬಗ್ಗೆ ಇಂಧನ ಸಚಿವ ಕೆ.ಜೆ.ಜಾರ್ಜ್‌, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಜತೆಗೂಡಿ ಸೋಮವಾರ ವಿವಿಧ ಇಲಾಖೆ ಅಧಿಕಾರಿಗಳ ಜತೆ ಶಿವಕುಮಾರ್‌ ಸಭೆ ನಡೆಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಈ ವಿಚಾರ ಅನೇಕ ವರ್ಷದಿಂದಲೂ ಸರ್ಕಾರದ ಮುಂದೆ ಬಾಕಿ ಉಳಿದಿತ್ತು. ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಹಾಗೂ ಟೆಂಡರ್ ಕರೆಯುವ ವಿಚಾರವಾಗಿ ಮುಖ್ಯಮಂತ್ರಿಯವರು ನನಗೆ ಜವಾಬ್ದಾರಿ ನೀಡಿದ್ದರು. ಬೇರೆ ರಾಜ್ಯಗಳಲ್ಲಿನ ವ್ಯವಸ್ಥೆ ತಿಳಿದುಕೊಳ್ಳುವಂತೆ ಹಾಗೂ ಎಚ್ಎಎಲ್‌ನವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ರಾಜ್ಯದಲ್ಲಿ ಬಹುತೇಕ ರಾಜಕಾರಣಿಗಳ ಹೆಲಿಕಾಪ್ಟರ್‌ಗಳೇ ಬಳಕೆ ಆಗುತ್ತಿವೆ ಎಂಬ ಪ್ರಶ್ನೆಗೆ, ಆ ರೀತಿ ಆಗಲು ಸಾಧ್ಯವಿಲ್ಲ. ಹೀಗಾಗಿಯೇ ಎಚ್‌ಎಎಲ್‌ಗೆ ಆದ್ಯತೆ ನೀಡಿ ವಿಶ್ವಾಸಕ್ಕೆ ಪಡೆಯುವಂತೆ ಸೂಚಿಸಲಾಗಿದೆ. ಎಚ್ಎಎಲ್‌ ಬಳಿ ಉತ್ತಮ ಹೆಲಿಕಾಪ್ಟರ್‌ಗಳಿವೆ. ದೇಶಾದ್ಯಂತ ವಿವಿಧ ರಾಜ್ಯಗಳಲ್ಲಿ ಹೇಗೆ ಮಾಡಲಾಗುತ್ತಿದೆ ಎಂಬುದನ್ನು ಪರಿಶೀಲಿಸಿ ನಾವು ಮಾನದಂಡಗಳನ್ನು ರೂಪಿಸುತ್ತೇವೆ ಎಂದು ಶಿವಕುಮಾರ್‌ ತಿಳಿಸಿದರು.

ಮೆಟ್ರೋ ಯೋಜನೆ ಕೇವಲ ಕೇಂದ್ರ ಸರ್ಕಾರದ್ದಲ್ಲ: ನಮ್ಮ ಮೆಟ್ರೋ ಯೋಜನೆಯು ಕೇವಲ ಕೇಂದ್ರ ಸರ್ಕಾರದ ಯೋಜನೆಯಲ್ಲ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಪಾಲುದಾರಿಕೆಯ ಯೋಜನೆಯಾಗಿದ್ದು, ಇದರಲ್ಲಿ ಜನರ ಸೇವೆ ಮುಖ್ಯವೇ ಹೊರತು, ಕ್ರೆಡಿಟ್ ರಾಜಕಾರಣವಲ್ಲ ಎಂದು ಹೇಳಿದರು. ರಾಜ್ಯದ ಸರ್ಕಾರದ ಮನವಿ ಮೇರೆಗೆ ಪ್ರಧಾನ ಮಂತ್ರಿ ಅವರು, ಉದ್ಘಾಟನೆಗೆ ದಿನಾಂಕ ನೀಡಿದ್ದಾರೆ. ಇದು ಕೇವಲ ಕೇಂದ್ರ‌ ಸರ್ಕಾರದ ಯೋಜನೆಯಲ್ಲ. ರಾಜ್ಯ ಮತ್ತು ಕೇಂದ್ರ ಸರ್ಕಾರ ಎರಡೂ ಶೇ.50 ರಷ್ಟು ಪಾಲುದಾರಿಕೆಯ ಯೋಜನೆಯಾಗಿದೆ. ಕೇಂದ್ರ ಸರ್ಕಾರದ ಕಡೆಯಿಂದ ಅಧ್ಯಕ್ಷರಿದ್ದರೆ, ರಾಜ್ಯ ಸರ್ಕಾರದ ಕಡೆಯಿಂದ ವ್ಯವಸ್ಥಾಪಕ ನಿರ್ದೇಶಕರಿರುತ್ತಾರೆ. ಇಲ್ಲಿ ಯಾರಿಗೂ ಕಿವಿ ಮೇಲೆ ಹೂ ಇಲ್ಲ. ಜವಾಬ್ದಾರಿಯುತ ಸ್ಥಾನದಲ್ಲಿರುವ ನಾವು ಜನರ ಸೇವೆ ಮಾಡುತ್ತಿದ್ದು, ನಮ್ಮ‌ ಜವಾಬ್ದಾರಿ ನಿರ್ವಹಣೆ ಮಾಡಿದ್ದೇವೆ ಎಂದು ಹೇಳಿದರು.