ಮೇಕೆದಾಟು ಯೋಜನೆಗೆ ಕೇಂದ್ರದ ಒಪ್ಪಿಗೆ ತಡೆ ಹಿಡಿಯಲು ತಮಿಳುನಾಡು ಸಲ್ಲಿಸಿದ ಅರ್ಜಿ ವಿರುದ್ಧ ಕರ್ನಾಟಕ ಸಲ್ಲಿಸಿದ ಮೇಲ್ಮನವಿಯ ವಿಚಾರಣೆಗೆ ಸುಪ್ರೀಂ ಕೋರ್ಟ್ ಸಮ್ಮತಿಸಿದೆ. ಯೋಜನೆಯ ವೆಚ್ಚ ₹9,000 ಕೋಟಿಯಿಂದ ₹14,500 ಕೋಟಿಗೆ ಏರಿಕೆಯಾಗಿದೆ.

ನವದೆಹಲಿ: ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರ ನೀಡಿರುವ ಒಪ್ಪಿಗೆ ತಡೆ ಹಿಡಿಯಬೇಕು ಎಂದು ತಮಿಳುನಾಡು ಸರ್ಕಾರ ಸಲ್ಲಿಸಿರುವ ಅರ್ಜಿಯನ್ನು ವಜಾಗೊಳಿಸುವಂತೆ ಕೋರಿ ಕರ್ನಾಟಕ ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲು ಸುಪ್ರೀಂಕೋರ್ಟ್‌ ಸಮ್ಮತಿಸಿದೆ. ಸಿಜೆಐ ಬಿ.ಆರ್.ಗವಾಯಿ ನೇತೃತ್ವದ ತ್ರಿಸದಸ್ಯ ಪೀಠದ ಮುಂದೆ ಕರ್ನಾಟಕದ ಪರವಾಗಿ ಎಎಜಿ ನಿಶಾಂತ್ ಪಾಟೀಲ್ ಅವರು ಈ ಅರ್ಜಿಯನ್ನು ಪ್ರಸ್ತಾಪಿಸಿದರು. ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಲು ಸಮ್ಮತಿಸಿದ ನ್ಯಾಯಪೀಠ, ಸೆಪ್ಟೆಂಬರ್ 23ಕ್ಕೆ ವಿಚಾರಣೆ ನಡೆಸುವ ಭರವಸೆ ನೀಡಿದೆ.

2013ರಲ್ಲಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಮೇಕೆದಾಟು ಯೋಜನೆಗೆ ರೂಪುರೇಷೆ ಸಿದ್ಧಪಡಿಸಿತ್ತು. ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಒಪ್ಪಿಗೆ ಸೂಚಿಸಿತ್ತು. ಆದರೆ, ಇದಕ್ಕೆ ತಮಿಳುನಾಡು ಸರ್ಕಾರ ಅಪಸ್ಪರ ತೆಗೆದಿತ್ತು. ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿದ್ದ ಸುಪ್ರೀಂಕೋರ್ಟ್, ಮೇಕೆದಾಟು ಯೋಜನೆಗೆ ತಡೆ ನೀಡುವುದಿಲ್ಲ. ಹಾಗೆಯೇ, ಈ ವಿಷಯದಲ್ಲಿ ತಮಿಳುನಾಡು ಸಹ ಅವಸರ ಪಡುವ ಅಗತ್ಯವಿಲ್ಲ. ಯೋಜನೆ ಸಂಬಂಧ ಕೇಂದ್ರ ಜಲ ಆಯೋಗ ಸಮಗ್ರ ಯೋಜನಾ ವರದಿ (ಡಿಪಿಆರ್) ಕೇಳಿದೆ ಅಷ್ಟೇ. ಡಿಪಿಆರ್ ನಲ್ಲಿ ದೋಷವಿದ್ದರೆ ಆಕ್ಷೇಪಿಸಬಹುದು. ಡಿಪಿಆರ್ ನಲ್ಲಿ ತಕರಾರಿದ್ದರೆ ಅರ್ಜಿ ಹಾಕಿ, ಈಗಲೇ ಭಯಪಡುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟಿತ್ತು.

ಯೋಜನೆ ವೆಚ್ಚ ಏರಿಕೆ

ರಾಜ್ಯದ ಪರ ವಕೀಲರು ನ್ಯಾಯಪೀಠಕ್ಕೆ ತಿಳಿಸಿರುವಂತೆ, 2019ರಲ್ಲಿ ಕೇಂದ್ರ ಜಲ ಆಯೋಗಕ್ಕೆ ಸಲ್ಲಿಸಿದ್ದ ವಿಸ್ತೃತ ಯೋಜನಾ ವರದಿಯಲ್ಲಿ ಯೋಜನೆಗೆ ಸುಮಾರು ₹9,000 ಕೋಟಿ ವೆಚ್ಚ ಅಂದಾಜಿಸಲಾಗಿತ್ತು. ಆದರೆ 2023-24ರ ಲೆಕ್ಕಾಚಾರದ ಪ್ರಕಾರ, ಈ ವೆಚ್ಚವು ಈಗ ₹14,500 ಕೋಟಿಗೆ ಏರಿದೆ. ಹೀಗಾಗಿ ತುರ್ತು ವಿಚಾರಣೆ ಅಗತ್ಯವಿದೆ ಎಂದು ಅವರು ಒತ್ತಾಯಿಸಿದ್ದಾರೆ.

ನ್ಯಾಯಮೂರ್ತಿಗಳ ಪೀಠದ ತೀರ್ಮಾನ

ಹೆಚ್ಚುವರಿ ಅಡ್ವಕೇಟ್ ಜನರಲ್ ನಿಶಾಂತ್ ಪಾಟೀಲ ಅವರ ಮನವಿಯನ್ನು ಪರಿಗಣಿಸಿದ ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಹಾಗೂ ನ್ಯಾಯಮೂರ್ತಿ ಕೆ. ವಿನೋದ್ ಚಂದ್ರನ್ ಅವರ ಪೀಠವು ಕರ್ನಾಟಕದ ಅರ್ಜಿಯನ್ನು ವಿಚಾರಣೆಗೆ ಪಡೆಯಲು ನಿರ್ಧರಿಸಿದೆ.

ತಮಿಳುನಾಡಿನ ತಕರಾರು

ಈ ಪ್ರಕರಣದಲ್ಲಿ ತಮಿಳುನಾಡು ಸರ್ಕಾರ ಹಲವು ಬಾರಿ ತಕರಾರು ಅರ್ಜಿಗಳನ್ನು ಸಲ್ಲಿಸಿದೆ. 2023ರ ಸೆಪ್ಟೆಂಬರ್ 21ರಂದು ವಿಚಾರಣೆ ನಡೆದಿದ್ದರೂ, ಆ ಬಳಿಕ ಮುಂದುವರಿಯದೇ ಪ್ರಕರಣ ಬಾಕಿಯಾಗಿದೆ. ಪಾಟೀಲ ಅವರು ಈ ವಿಷಯವನ್ನು ನ್ಯಾಯಪೀಠದ ಗಮನಕ್ಕೆ ತಂದು, ತ್ವರಿತ ವಿಚಾರಣೆ ಅಗತ್ಯವಿದೆ ಎಂದು ತಿಳಿಸಿದರು.

ಬೆಂಗಳೂರು ಮತ್ತು ಜನರ ಕುಡಿಯುವ ನೀರಿನ ಅವಶ್ಯಕತೆ

ರಾಜ್ಯ ವಕೀಲರು ಯೋಜನೆ ಮಹತ್ವವನ್ನು ವಿವರಿಸುತ್ತಾ, ರಾಜಧಾನಿ ಬೆಂಗಳೂರಿನ ನೀರಿನ ಸಮಸ್ಯೆ ಬಗೆಹರಿಸಲು ಹಾಗೂ ಲಕ್ಷಾಂತರ ಜನರ ಕುಡಿಯುವ ನೀರಿನ ಅಗತ್ಯಗಳನ್ನು ಪೂರೈಸಲು ಮೇಕೆದಾಟು ಯೋಜನೆ ತುರ್ತು ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ಸುಪ್ರೀಂ ಕೋರ್ಟ್ ಈಗಾಗಲೇ 4.75 ಟಿಎಂಸಿ ಅಡಿ ನೀರನ್ನು ಕುಡಿಯುವ ನೀರಿನ ಅಗತ್ಯಕ್ಕಾಗಿ ಕರ್ನಾಟಕಕ್ಕೆ ಹಂಚಿಕೆ ಮಾಡಿದ್ದು, ಈ ನೀರನ್ನು ಬಳಸಲು ಮೇಕೆದಾಟು ಯೋಜನೆ ಅನಿವಾರ್ಯ ಎಂದು ರಾಜ್ಯ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.

ಜಲವಿದ್ಯುತ್ ಉತ್ಪಾದನೆ

ಕೇವಲ ಕುಡಿಯುವ ನೀರಿನ ಸಮಸ್ಯೆಯಲ್ಲದೆ, ಯೋಜನೆಯಿಂದ ವಾರ್ಷಿಕವಾಗಿ 400 ಮೆಗಾವಾಟ್ ಜಲವಿದ್ಯುತ್ ಉತ್ಪಾದನೆ ಮಾಡುವ ಉದ್ದೇಶವೂ ಇದೆ. ಇದು ರಾಜ್ಯದ ಶಕ್ತಿ ಉತ್ಪಾದನೆಗೆ ದೊಡ್ಡ ಸಹಾಯ ಮಾಡಲಿದೆ ಎಂದು ವಕೀಲರು ಹೇಳಿದರು.

ತಮಿಳುನಾಡಿನ ವಿರೋಧ ಮತ್ತು ಕೇಂದ್ರದ ನಿರ್ಲಕ್ಷ್ಯ

ಯೋಜನೆಗೆ ತಮಿಳುನಾಡು ನಿರಂತರವಾಗಿ ವಿರೋಧ ವ್ಯಕ್ತಪಡಿಸುತ್ತಾ, ಅನೇಕ ತಕರಾರು ಅರ್ಜಿಗಳನ್ನು ಸಲ್ಲಿಸಿದೆ. ಇದರಿಂದ ಯೋಜನೆ ಮುಂದೂಡಲ್ಪಡುತ್ತಿದೆ.

ಅದೇ ವೇಳೆ, ಕೇಂದ್ರ ಪರಿಸರ ಸಚಿವಾಲಯ ಇನ್ನೂ ಅಗತ್ಯ ನಿಯಮಗಳನ್ನು ರೂಪಿಸದ ಕಾರಣದಿಂದಲೂ ಯೋಜನೆ ವಿಳಂಬವಾಗುತ್ತಿದೆ ಎಂದು ರಾಜ್ಯ ಜಲ ಸಂಪನ್ಮೂಲ ಇಲಾಖೆ ಅಧಿಕಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಅರಣ್ಯ ಭೂಮಿ ಮತ್ತು ಪರ್ಯಾಯ ಭೂಮಿ

ಮೇಕೆದಾಟು ಯೋಜನೆ ಅನುಷ್ಠಾನಗೊಳಿಸಲು ಕಾವೇರಿ ವನ್ಯಜೀವಿ ಅಭಯಾರಣ್ಯ ಹಾಗೂ ಸಂರಕ್ಷಿತ ಅರಣ್ಯದ 5,096.22 ಹೆಕ್ಟೇರ್ ಅರಣ್ಯ ಭೂಮಿ ಅಗತ್ಯವಿದೆ. ಬದಲಾಗಿ, ರಾಜ್ಯ ಸರ್ಕಾರವು ರಾಮನಗರ, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ 7,404.62 ಹೆಕ್ಟೇರ್ ಭೂಮಿಯನ್ನು ಪರ್ಯಾಯವಾಗಿ ಗುರುತಿಸಿದೆ. ಇದಕ್ಕಾಗಿ ಶೀಘ್ರದಲ್ಲೇ ಸಂಬಂಧಿತ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿ ಭೂಸ್ವಾಧೀನ ಪ್ರಕ್ರಿಯೆ ಮುಂದುವರಿಸಲು ತೀರ್ಮಾನಿಸಲಾಗಿದೆ.

ಯೋಜನೆಯ ಸ್ಥಗಿತ

ರಾಜ್ಯದ ಜಲ ಸಂಪನ್ಮೂಲ ಇಲಾಖೆಯ ಪ್ರಕಾರ, ಕೇಂದ್ರ ಜಲ ಮಂಡಳಿಯ ಕಾರ್ಯವೈಖರಿಯಿಂದಾಗಿ ಮೇಕೆದಾಟು ಯೋಜನೆ ಚರ್ಚೆಯೇ ಸ್ಥಗಿತಗೊಂಡಿದೆ. ಇದರಿಂದ ಅನುಮತಿ ಸಿಗದೆ ಯೋಜನೆ ಪ್ರಗತಿ ಕಾಣದೆ ನಿಂತಿರುವುದು ರಾಜ್ಯಕ್ಕೆ ತೀವ್ರ ಬೇಸರ ತಂದಿದೆ.