ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿ ಶರಣಬಸಪ್ಪ ಅಪ್ಪಾ ಅವರ ಲಿಂಗೈಕ್ಯದ ಹಿನ್ನೆಲೆಯಲ್ಲಿ ಕಲಬುರಗಿಯಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಸಂಜೆ 5 ಗಂಟೆಗೆ ವೀರಶೈವ-ಲಿಂಗಾಯತ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನೆರವೇರಲಿದ್ದು, ರಾಜ್ಯದ ಗಣ್ಯರು ಆಗಮಿಸಲಿದ್ದಾರೆ.

ಕಲಬುರಗಿ (ಆ.15): ಶರಣಬಸವೇಶ್ವರ ಮಹಾಸಂಸ್ಥಾನದ 8ನೇ ಪೀಠಾಧಿಪತಿಯಾಗಿದ್ದ ಮಹಾದಾಸೋಹಿ ಡಾ. ಶರಣಬಸಪ್ಪ ಅಪ್ಪಾ ಅವರ ಲಿಂಗೈಕ್ಯದ ಹಿನ್ನೆಲೆಯಲ್ಲಿ, ಅವರ ಪಾರ್ಥಿವ ಶರೀರವನ್ನು ಶಿವಾನುಭವ ಮಂಟಪದಲ್ಲಿ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗಿದೆ. ದಾಸೋಹ ಮಹಾಮನೆಯ ಮುಂಭಾಗದಲ್ಲಿ ಅಂತಿಮ ದರ್ಶನಕ್ಕೆ ಸಕಲ ವ್ಯವಸ್ಥೆ ಮಾಡಲಾಗಿದ್ದು, ಮಧ್ಯಾಹ್ನ 2:30 ರವರೆಗೆ ಭಕ್ತರು ದರ್ಶನ ಪಡೆಯಬಹುದಾಗಿದೆ. ಸಾವಿರಾರು ಭಕ್ತರು ಅಂತಿಮ ದರ್ಶನ ಪಡೆಯಲು ಸರತಿ ಸಾಲಿನಲ್ಲಿ ನಿಂತಿದ್ದಾರೆ.

ವೀರಶೈವ-ಲಿಂಗಾಯತ ಸಂಪ್ರದಾಯದಂತೆ ಅಂತ್ಯಸಂಸ್ಕಾರ:

ವೀರಶೈವ-ಲಿಂಗಾಯತ ಸಂಪ್ರದಾಯದಂತೆ ಡಾ. ಅಪ್ಪಾ ಅವರ ಅಂತ್ಯಸಂಸ್ಕಾರ ಸಂಜೆ 5 ಗಂಟೆಗೆ ನಡೆಯಲಿದೆ. ದಾಸೋಹ ಮಹಾಮನೆಯಲ್ಲಿ ಪಾರ್ಥಿವ ಶರೀರಕ್ಕೆ ರುದ್ರಾಭಿಷೇಕ, ಮಂಗಲ ಸ್ನಾನ, ಅಷ್ಟೋತ್ತರ ಬಿಲ್ವಾರ್ಚನೆ, ಮಹಾಮಂಗಳಾರತಿ ಸೇರಿದಂತೆ ಎಲ್ಲ ವಿಧಿ-ವಿಧಾನಗಳು ಬೆಳಗುಂಪಿಯ ಶ್ರೀ ಪರ್ವತೇಶ್ವರ ಶಿವಾಚಾರ್ಯರು ಹಾಗೂ ಚೌದಾಪೂರಿ ಹಿರೇಮಠದ ಶ್ರೀ ರಾಜಶೇಖರ ಶಿವಾಚಾರ್ಯರ ನೇತೃತ್ವದಲ್ಲಿ ಪೂರ್ಣಗೊಂಡಿವೆ. ವಿಧಿವಿಧಾನಗಳ ನಂತರ, ಪಾರ್ಥಿವ ಶರೀರವನ್ನು ಶಿವಾನುಭವ ಮಂಟಪಕ್ಕೆ ಸ್ಥಳಾಂತರಿಸಲಾಗಿದೆ.

ಸಾರ್ವಜನಿಕ ದರ್ಶನಕ್ಕೆ ವಿಶೇಷ ವ್ಯವಸ್ಥೆ:

ಶಿವಾನುಭವ ಮಂಟಪದಲ್ಲಿ ಡಾ. ಅಪ್ಪಾ ಅವರ ಪಾರ್ಥಿವ ಶರೀರವನ್ನು ಕುರ್ಚಿಯ ಮೇಲೆ ಕುಳ್ಳಿರಿಸಿದ ಸ್ಥಿತಿಯಲ್ಲಿ ಇರಿಸಲಾಗಿದ್ದು, ತಲೆಯ ಮೇಲೆ ಪೇಠ, ಕೊರಳಲ್ಲಿ ಚಿನ್ನದ ಲಿಂಗ ಮತ್ತು ರುದ್ರಾಕ್ಷಿ ಧರಿಸಿಕೊಂಡು ವಿರಾಜಮಾನರಾಗಿದ್ದಾರೆ. ಸಾರ್ವಜನಿಕ ದರ್ಶನಕ್ಕಾಗಿ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ.

ಗಣ್ಯರ ದಂಡು ಆಗಮನ:

ಅಂತ್ಯಸಂಸ್ಕಾರಕ್ಕೆ ರಾಜ್ಯದ ಗಣ್ಯರ ದಂಡು ಆಗಮಿಸಲಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಬೆಳಿಗ್ಗೆ 11:30ಕ್ಕೆ ವಿಶೇಷ ವಿಮಾನದ ಮೂಲಕ ಕಲಬುರಗಿಗೆ ಆಗಮಿಸಲಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಧ್ಯಾಹ್ನ 12:30ಕ್ಕೆ ಆಗಮಿಸಲಿದ್ದಾರೆ. ಸಚಿವರಾದ ಡಾ. ಶರಣಪ್ರಕಾಶ ಪಾಟೀಲ್, ಈಶ್ವರ ಖಂಡ್ರೆ, ಎಂ.ಬಿ. ಪಾಟೀಲ್, ಶರಣಬಸಪ್ಪ ದರ್ಶನಾಪೂರ ಸೇರಿದಂತೆ ಇತರ ಗಣ್ಯರು ತಮ್ಮ ಜಿಲ್ಲೆಗಳಲ್ಲಿ ಧ್ವಜಾರೋಹಣ ಕಾರ್ಯಕ್ರಮ ಮುಗಿಸಿ ಕಲಬುರಗಿಗೆ ಆಗಮಿಸುವ ಸಾಧ್ಯತೆ ಇದೆ. ಜೊತೆಗೆ, ನಾಡಿನ ವಿವಿಧ ಮಠಗಳ ಸ್ವಾಮೀಜಿಗಳು ಸಹ ಆಗಮಿಸಲಿದ್ದಾರೆ.ಡಾ. ಶರಣಬಸಪ್ಪ ಅಪ್ಪಾ ಅವರ ಲಿಂಗೈಕ್ಯದಿಂದ ಶರಣಬಸವೇಶ್ವರ ಸಂಸ್ಥಾನದ ಭಕ್ತರಲ್ಲಿ ಶೋಕದ ಛಾಯೆ ಮೂಡಿದ್ದು, ಸಾವಿರಾರು ಜನರು ಅಂತಿಮ ದರ್ಶನಕ್ಕಾಗಿ ಆಗಮಿಸುತ್ತಿದ್ದಾರೆ.