ಬೆಂಗಳೂರಿನ ರಸ್ತೆ ಗುಂಡಿಗಳ ಬಗ್ಗೆ ಮಾತ್ರ ಹೆಚ್ಚಿನ ಪ್ರಚಾರ ಸಿಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ಪ್ರಧಾನಿ ನಿವಾಸದ ರಸ್ತೆಯಲ್ಲೂ ಗುಂಡಿಗಳಿವೆ ಎಂದಿದ್ದಾರೆ.
ಬೆಂಗಳೂರು (ಸೆ.24): ದೆಹಲಿ ರಸ್ತೆಗಳಲ್ಲೂ ಗುಂಡಿಯಿದ್ದು, ಪ್ರಧಾನಿ ನಿವಾಸದ ರಸ್ತೆಯನ್ನೂ ಮಾಧ್ಯಮಗಳು ನೋಡಬೇಕು. ಅದರ ಬಗ್ಗೆ ಯಾವುದೇ ಸುದ್ದಿಯಾಗುತ್ತಿಲ್ಲ. ಆದರೆ, ಬೆಂಗಳೂರಿನ ರಸ್ತೆ ಗುಂಡಿಗಳ ಬಗ್ಗೆ ಮಾತ್ರ ಹೆಚ್ಚಿನ ಪ್ರಚಾರ ಸಿಗುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.
ಸದಾಶಿವನಗರ ತಮ್ಮ ನಿವಾಸದ ಬಳಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ನಗರದಲ್ಲಿ ಮಳೆಯ ನಡುವೆಯೂ ರಸ್ತೆ ಗುಂಡಿ ಮುಚ್ಚಲಾಗುತ್ತಿದ್ದು, ಪ್ರತಿದಿನ ಸರಾಸರಿ 1 ಸಾವಿರ ರಸ್ತೆ ಗುಂಡಿಗಳನ್ನು ಮುಚ್ಚಲಾಗುತ್ತಿದೆ. ಶೀಘ್ರ ಎಲ್ಲ ಗುಂಡಿಗಳನ್ನು ಮುಚ್ಚಲಾಗುವುದು. ಇನ್ನು ಕೆಲ ದಿನಗಳ ಹಿಂದೆ ದೆಹಲಿ ಪ್ರವಾಸದಲ್ಲಿದ್ದಾಗ ಅಲ್ಲಿನ ರಸ್ತೆಗಳ ಪರಿಸ್ಥಿತಿಯನ್ನೂ ನಾನು ಗಮನಿಸಿದೆ. ಪ್ರಧಾನಿ ನಿವಾಸದ ರಸ್ತೆಯಲ್ಲೂ ಗುಂಡಿಗಳಿವೆ. ಅದನ್ನೂ ಮಾಧ್ಯಮಗಳು ನೋಡಬೇಕು. ರಸ್ತೆ ಗುಂಡಿ ದೇಶದ ಎಲ್ಲ ನಗರಗಳಲ್ಲಿರುವ ಸಮಸ್ಯೆ. ಆದರೆ, ಬೆಂಗಳೂರಿನ ಬಗ್ಗೆ ಮಾತ್ರ ಹೆಚ್ಚಿನ ಪ್ರಚಾರ ಸಿಗುತ್ತಿದೆ ಎಂದರು.
ಇದನ್ನೂ ಓದಿ: ಬೆಂಗಳೂರಿನಲ್ಲಿ ಒಂದು ರಸ್ತೆ ಗುಂಡಿ ಮುಚ್ಚಲು 5 ಲಕ್ಷ ಖರ್ಚು ಮಾಡ್ತಿದ್ಯಾ ಸರ್ಕಾರ?
ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ರಸ್ತೆಗಳು ಗುಣಮಟ್ಟದಿಂದ ನಿರ್ಮಿಸಿದ್ದರೆ ರಸ್ತೆ ಗುಂಡಿ ಸಮಸ್ಯೆ ಉದ್ಭವಿಸುತ್ತಿರಲಿಲ್ಲ. ಆದರೆ, ಗುಣಮಟ್ಟದ ರಸ್ತೆ ನಿರ್ಮಾಣವಾಗದ ಕಾರಣ ಈಗ ಗುಂಡಿಗಳು ಕಾಣಿಸುತ್ತಿವೆ. ಅಲ್ಲದೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ 5 ಪಾಲಿಕೆಗಳ ಚುನಾವಣೆ ಹತ್ತಿರವಾಗುತ್ತಿದೆ ಎಂಬ ಕಾರಣಕ್ಕಾಗಿ ಬಿಜೆಪಿ ರಸ್ತೆ ಗುಂಡಿ ಬಗ್ಗೆ ರಾಜಕೀಯ ಮಾಡುತ್ತಿದೆ ಎಂದು ಹರಿಹಾಯ್ದರು.
