ನಗರದಲ್ಲಿ 12 ಸಾವಿರ ರಸ್ತೆ ಗುಂಡಿಗಳಿದ್ದು, ಅದರಲ್ಲಿ 7 ಸಾವಿರಕ್ಕೂ ಹೆಚ್ಚಿನ ಗುಂಡಿಗಳನ್ನು ಮುಚ್ಚಲಾಗಿದೆ. ಉಳಿದ 5 ಸಾವಿರ ಗುಂಡಿಗಳನ್ನು ಶೀಘ್ರದಲ್ಲಿ ಮುಚ್ಚಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ಬೆಂಗಳೂರು : ನಗರದಲ್ಲಿನ ರಸ್ತೆ ಗುಂಡಿ ಸಮಸ್ಯೆ ಬಗೆಹರಿಸಲು ಸಮರೋಪಾದಿಯಾಗಿ ಕೆಲಸ ಮಾಡಲಾಗುತ್ತಿದೆ. ನಗರದಲ್ಲಿ 12 ಸಾವಿರ ರಸ್ತೆ ಗುಂಡಿಗಳಿದ್ದು, ಅದರಲ್ಲಿ 7 ಸಾವಿರಕ್ಕೂ ಹೆಚ್ಚಿನ ಗುಂಡಿಗಳನ್ನು ಮುಚ್ಚಲಾಗಿದೆ. ಉಳಿದ 5 ಸಾವಿರ ಗುಂಡಿಗಳನ್ನು ಶೀಘ್ರದಲ್ಲಿ ಮುಚ್ಚಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ಸದಾಶಿವನಗರದ ತಮ್ಮ ನಿವಾಸದ ಬಳಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ಯಾರೂ ಉದ್ದೇಶಪೂರ್ವಕವಾಗಿ ರಸ್ತೆ ಗುಂಡಿ ಸೃಷ್ಟಿಸುವುದಿಲ್ಲ. ಅತಿಯಾದ ಮಳೆಯಿಂದ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿವೆ. 7 ಸಾವಿರ ಗುಂಡಿಗಳನ್ನು ಈಗಾಗಲೇ ಮುಚ್ಚಲಾಗಿದೆ. ಉಳಿದ 5 ಸಾವಿರ ಗುಂಡಿ ಮುಚ್ಚಲು ಸಮರೋಪಾದಿಯಾಗಿ ಕೆಲಸ ಮಾಡಲಾಗುತ್ತಿದೆ. ರಸ್ತೆ ಗುಂಡಿಗಳ ಪತ್ತೆಗೆ ಸಂಬಂಧಿಸಿದಂತೆ ಪೊಲೀಸ್ ಆಯುಕ್ತರಿಂದ ವರದಿ ಕೇಳಲಾಗಿದೆ. ಸಾರ್ವಜನಿಕರೂ ಸೇರಿ ಎಲ್ಲರೂ ರಸ್ತೆ ಗುಂಡಿಗಳು ಗಮನಕ್ಕೆ ಬಂದರೆ ನಮ್ಮ ಗಮನಕ್ಕೆ ತರುವ ವ್ಯವಸ್ಥೆಯನ್ನೂ ರೂಪಿಸಲಾಗಿದೆ ಎಂದರು.
ಬಿಜೆಪಿ ನಾಯಕರಿಗೆ ಟಾಂಗ್ : ರಸ್ತೆ ಗುಂಡಿ ವಿಚಾರವಾಗಿ ಬಿಜೆಪಿ ಪ್ರತಿಭಟಿಸುವ ಕುರಿತು ಪ್ರತಿಕ್ರಿಯಿಸಿ, ಬಿಜೆಪಿ ನಾಯಕರು ರಸ್ತೆ ತಡೆಯಾದರೂ ಮಾಡಲಿ, ಬೇರೆ ಏನಾದರೂ ಮಾಡಿ. ಪ್ರತಿ ಬಿಜೆಪಿ ಶಾಸಕರಿಗೂ ಅವರ ಕ್ಷೇತ್ರದ ಅಭಿವೃದ್ಧಿಗಾಗಿ 25 ಕೋಟಿ ರು. ನೀಡಲಾಗಿದೆ. ನನ್ನ ಅನುದಾನದಲ್ಲೂ ಯಾವುದೇ ತಾರತಮ್ಯವಿಲ್ಲದೆ ಬಿಜೆಪಿ ಶಾಸಕರಿಗೆ ಅನುದಾನ ನೀಡಿದ್ದೇನೆ. ಆದರೂ, ಅವರ ಕ್ಷೇತ್ರಗಳಲ್ಲಿ ರಸ್ತೆ ಗುಂಡಿ ಮುಚ್ಚುತ್ತಿಲ್ಲ. ಅವರು ಮೊದಲು ತಮ್ಮ ಪಾಲಿನ ಕೆಲಸ ಮಾಡಲಿ. ನಾವು ರಾಜಕೀಯ ಮಾಡುವುದನ್ನು ಬಿಟ್ಟು ಜನರ ಅನುಕೂಲಕ್ಕಾಗಿ ಕೆಲಸ ಮಾಡುತ್ತಿದ್ದೇವೆ. ಅವರು ರಾಜಕೀಯ ಮಾಡುತ್ತಿರಲಿ ಎಂದು ಹೇಳಿದರು.
ಬಿಜೆಪಿ ಇದೇ ತಿಂಗಳ 24ರಂದು ರಾಜ್ಯಾದ್ಯಂತ ರಸ್ತೆತಡೆ ಮೂಲಕ ಪ್ರತಿಭಟನೆ
ಬೆಂಗಳೂರು : ರಾಜಧಾನಿ ಬೆಂಗಳೂರು ಸೇರಿ ರಾಜ್ಯದ ಬಹುತೇಕ ಭಾಗಗಳಲ್ಲಿ ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ ಎಂದು ಆರೋಪಿಸಿರುವ ಪ್ರತಿಪಕ್ಷ ಬಿಜೆಪಿ ಇದೇ ತಿಂಗಳ 24ರಂದು ರಾಜ್ಯಾದ್ಯಂತ ರಸ್ತೆತಡೆ ಮೂಲಕ ಪ್ರತಿಭಟನೆ ನಡೆಸಲು ತೀರ್ಮಾನಿಸಿದೆ. ನಗರದ ಯಲಹಂಕ ಬಳಿಯ ರೆಸಾರ್ಟ್‌ವೊಂದರಲ್ಲಿ ನಡೆದ ಪಕ್ಷದ ಹಾಲಿ ಶಾಸಕರು-ಸಂಸದರು ಹಾಗೂ ಪರಾಜಿತ ಅಭ್ಯರ್ಥಿಗಳನ್ನು ಒಳಗೊಂಡ ರಾಜಕೀಯ ಚಿಂತನಾ ಶಿಬಿರದಲ್ಲಿ ಈ ಬಗ್ಗೆ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಲಾಗಿದೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಾಹಿತಿ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ರಸ್ತೆ ಗುಂಡಿಗಳ ಬಗ್ಗೆ ಪದೇ ಪದೆ ರಾಜ್ಯ ಸರ್ಕಾರ ಚರ್ಚೆ ಮಾಡುತ್ತಿದೆ ಅಷ್ಟೆ. ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳು ಎಷ್ಟಿವೆ ಎಂಬುದನ್ನು ಕಳೆದ ಎರಡೂವರೆ ವರ್ಷಗಳಿಂದ ಎಣಿಸುತ್ತಲೇ ಇದೆ. ಗುಂಡಿಗಳಿಗೆ ಮುಕ್ತಿ ನೀಡಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಇದು ಅಭಿವೃದ್ಧಿ ಶೂನ್ಯ ಸರ್ಕಾರ ಎಂದು ಹರಿಹಾಯ್ದರು. ಹೀಗಾಗಿ, 24ರಂದು ರಾಜ್ಯದ ಎಲ್ಲ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಒಂದು ಗಂಟೆ ಕಾಲ ರಸ್ತೆತಡೆ ಮಾಡಬೇಕು ಎಂಬ ನಿರ್ಧಾರ ಕೈಗೊಳ್ಳಲಾಗಿದೆ. ಭ್ರಷ್ಟಾಚಾರದಲ್ಲಿ ನಿರತ, ಅಭಿವೃದ್ಧಿ ಮರೆತ, ರಸ್ತೆ ಗುಂಡಿ ಮುಚ್ಚದ ಕಾಂಗ್ರೆಸ್ ಸರ್ಕಾರದ ವಿರುದ್ಧ ರಸ್ತೆತಡೆ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
