ಪ್ರಧಾನ ಮಂತ್ರಿ ಆವಾಸ್ ವಸತಿ ಯೋಜನೆ ಅಡಿ ಬಾಣಾವರ ಗ್ರಾಮ ಪಂಚಾಯಿತಿಯಲ್ಲಿ 93 ನಕಲಿ ಫಲಾನುಭವಿಗಳ ಖಾತೆಗೆ ಹಣ ವರ್ಗಾಯಿಸಿದ ಆರೋಪದ ಮೇಲೆ ಪಿಡಿಒ ಕುಮಾರಸ್ವಾಮಿಯನ್ನು ಬಂಧಿಸಲಾಗಿದೆ. ಈ ಹಗರಣದ ಕಿಂಗ್‌ಪಿನ್ ಎನ್ನಲಾದ ರಾಜೇಶ್‌ನನ್ನು ಈ ಮೊದಲೇ ಬಂಧಿಸಲಾಗಿದ್ದು, ತನಿಖೆ ಮುಂದುವರೆದಿದೆ.
ಅರಸೀಕೆರೆ (ಸೆ.19): ತಾಲೂಕಿನ ಬಾಣಾವರ ಗ್ರಾಮ ಪಂಚಾಯಿತಿಯಲ್ಲಿ ಪ್ರಧಾನ ಮಂತ್ರಿ ಆವಾಸ್ ವಸತಿ ಯೋಜನೆ ಅಡಿ 93 ನಕಲಿ ಫಲಾನುಭವಿಗಳ ಖಾತೆಗೆ ತಲಾ 30 ಸಾವಿರ ರು. ಹಣ ಹಾಕಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟುಮಾಡಿದ ಆರೋಪದ ಮೇಲೆ ಪಿಡಿಒ ಕುಮಾರಸ್ವಾಮಿಯನ್ನು ಡಿವೈಎಸ್ಪಿ ಬಿ.ಆರ್. ಗೋಪಿ ನೇತೃತ್ವದ ತಂಡ ಬುಧವಾರ ಹಾಸನದಲ್ಲಿ ಬಂಧಿಸಿದೆ.
ಭಾರಿ ಪ್ರಮಾಣದ ಅವ್ಯವಹಾರದ ಸುಳಿಗೆ ಸಿಲುಕಿದ್ದ ಪಿಡಿಒ, ಹಲವು ದಿನಗಳಿಂದ ಪೊಲೀಸರ ಕಣ್ಣು ತಪ್ಪಿಸಿ ಜಾಮೀನು ಪಡೆಯಲು ಕಸರತ್ತು ನಡೆಸುತ್ತಿದ್ದನೆಂದು ತಿಳಿದುಬಂದಿದೆ. ಖಚಿತ ಮಾಹಿತಿಯ ಆಧಾರದ ಮೇಲೆ ಹಾಸನದಲ್ಲಿ ಸಿನಿಮೀಯ ಶೈಲಿಯಲ್ಲಿ ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ: ಕುರುಬ ಸಮುದಾಯ ಎಸ್‌ಟಿ ಸೇರ್ಪಡೆಗೆ ವಿರೋಧ, ಪಾಲಿಟಿಕಲ್ ಫೈಟ್‌ಗೆ ಸಾಕ್ಷಿಯಾದ ವಾಲ್ಮೀಕಿ ಸಮುದಾಯದ ರಾಜ್ಯ ಮಟ್ಟದ ಸಭೆ!
ಅವ್ಯವಹಾರ ಕಿಂಗ್ ರಾಜೇಶ್
ಇದಕ್ಕೂ ಮುನ್ನ, ಅವ್ಯವಹಾರದ ಕಿಂಗ್‌ಪಿನ್ ಎಂದು ಕರೆಯಲ್ಪಡುವ ರಾಜೇಶನನ್ನು ಪೊಲೀಸರು ನಗರದ ಖಾಸಗಿ ಲಾಡ್ಜ್‌ನಲ್ಲಿ ಕಳೆದೆರಡು ದಿನಗಳ ಹಿಂದೆ ಬಂಧಿಸಿದ್ದರು. ತಾಪಂ ಇಒ ಸೇರಿದಂತೆ ಉನ್ನತಾಧಿಕಾರಿಗಳ ಪಾಸ್ವರ್ಡ್‌ಗಳನ್ನು ದುರುಪಯೋಗ ಮಾಡಿಕೊಂಡು, ಬಾಣಾವರ ಗ್ರಾಮ ಪಂಚಾಯಿತಿಯ 93 ಸೇರಿದಂತೆ ಒಟ್ಟು 347 ಜನರ ಖಾತೆಗೆ ತಲಾ 30 ಸಾವಿರ ರು. ಹಣ ಜಮೆ ಮಾಡಿರುವ ಆರೋಪ ಇವರ ಮೇಲೆ ಇದೆ. ಈ ಮೂಲಕ ವಸತಿ ಹಗರಣದ ಎಲ್ಲ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಸಣ್ಣ ಮೀನುಗಳು ಬಲೆಗೆ ಬಿದ್ದಿವೆ, ಆದರೆ ತಿಮಿಂಗಿಲಗಳನ್ನು ರಕ್ಷಣೆ ಮಾಡಲಾಗಿದೆ ಎಂಬ ಆರೋಪಗಳು ಕೇಳಿಬಂದಿದ್ದು, ತನಿಖೆ ನಂತರವೇ ಸತ್ಯಾಂಶ ಬಹಿರಂಗವಾಗಲಿದೆ.
ಇದನ್ನೂ ಓಡಿ: ಸಾಮಾಜಿಕ ಆರ್ಥಿಕ ಸಮೀಕ್ಷೆ: ಸಚಿವ ಜಮೀರ್ ನೇತೃತ್ವದಲ್ಲಿ ಅಲ್ಪಸಂಖ್ಯಾತರ ಸಭೆಯಲ್ಲಿ ಮಹತ್ವದ ನಿರ್ಧಾರ!
ಇದರ ನಡುವೆ, ಪಿಡಿಒ ಕುಮಾರಸ್ವಾಮಿ ಹಾಗೂ ತಾಲೂಕು ಪಂಚಾಯಿತಿ ಇಒ ಹಣ ಪಡೆಯುವ ಸಂಬಂಧದ ಆಡಿಯೋ ಕ್ಲಿಪ್ ಎನ್.ಆರ್. ಸಂತೋಷ್ ಅವರ ಕೈ ಸೇರಿದೆ ಎನ್ನಲಾಗುತ್ತಿದ್ದು ಮತ್ತೊಂದು ರಾಜಕೀಯ ಹೋರಾಟ ಆರಂಭವಾಗುವ ಸಾಧ್ಯತೆ ಹೆಚ್ಚಿದೆ.
