ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹಿರೇಮಠ ಹತ್ಯೆ ಪ್ರಕರಣದ ವಿಚಾರಣೆಯನ್ನು ಸೆಪ್ಟೆಂಬರ್ 12ಕ್ಕೆ ಮುಂದೂಡಲಾಗಿದೆ. ಆರೋಪಿ ಫಯಾಜ್ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದರು. ಕಾಲ್ ಡಿಟೇಲ್ಸ್‌ಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ನ್ಯಾಯಾಲಯ ತಿರಸ್ಕರಿಸಿದೆ.
ಹುಬ್ಬಳ್ಳಿ (ಸೆ.6): ಕಾಲೇಜು ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಪ್ರಕರಣದ ವಿಚಾರಣೆಯನ್ನು 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಸೆಪ್ಟೆಂಬರ್ 12ಕ್ಕೆ ಮುಂದೂಡಿದೆ. ಆರೋಪಿ ಫಯಾಜ್ ವೀಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದಾನೆ. ವಿಚಾರಣೆ ವೇಳೆ ಆರೋಪಿ ಫಯಾಜ್ ಪರ ವಕೀಲರು ಸಲ್ಲಿಸಿದ್ದ ಕಾಲ್ ಡಿಟೇಲ್ಸ್ ಲಿಸ್ಟ್‌ಗಾಗಿ ಕೋರಿದ ಅರ್ಜಿಯನ್ನು ನ್ಯಾಯಾಲಯವು ತಿರಸ್ಕರಿಸಿದೆ.
ಇದೇ ವೇಳೆ, ನೇಹಾ ತಂದೆ, ತಾಯಿ ಹಾಗೂ ನಿರಂಜನ್ ಹಿರೇಮಠರ ಕಾರು ಚಾಲಕನ ಕಾಲ್ ಡಿಟೇಲ್ಸ್ ಕೊಡುವಂತೆ ಫಯಾಜ್ ಪರ ವಕೀಲರು ಸಲ್ಲಿಸಲಾಗಿದ್ದ ಅರ್ಜಿಯನ್ನೂ ನ್ಯಾಯಾಧೀಶರು ವಿಚಾರಣೆ ನಡೆಸಿ ತಿರಸ್ಕರಿಸಿದ್ದಾರೆ. ಮುಂದಿನ ವಿಚಾರಣೆಯ ದಿನಾಂಕವಾದ ಸೆಪ್ಟೆಂಬರ್ 12 ರಂದು ಟ್ರಯಲ್‌ಗೆ ನಿಗದಿತ ದಿನಾಂಕವನ್ನು ಪ್ರಕಟಿಸಲಾಗುವುದು ಎಂದು ನ್ಯಾಯಾಲಯ ತಿಳಿಸಿದೆ.
ಘಟನೆಯ ಹಿನ್ನೆಲೆ:
2024ರ ಏಪ್ರಿಲ್ 18ರಂದು ಹುಬ್ಬಳ್ಳಿಯ ಕಾಲೇಜು ಆವರಣದಲ್ಲಿ 23 ವರ್ಷದ ವಿದ್ಯಾರ್ಥಿನಿ ನೇಹಾ ಹಿರೇಮಠಳನ್ನು ಆರೋಪಿ ಫಯಾಜ್ ಚೂರಿಯಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದ ಘಟನೆ ರಾಜ್ಯದಾದ್ಯಂತ ಸಂಚಲನ ಮೂಡಿಸಿತ್ತು. ಹತ್ಯೆ ಪ್ರಕರರಣದಿಂದ ರಾಜ್ಯಾದ್ಯಂತ ತೀವ್ರ ಪ್ರತಿಭಟನೆಗಳು ನಡೆದಿದ್ದವು.
ಸದ್ಯ ಪ್ರಕರಣದಲ್ಲಿ ಜೈಲು ಸೇರಿರುವ ಆರೋಪಿ ಬೇಲ್‌ಗೆ ಅರ್ಜಿ ಸಲ್ಲಿಸಿದ್ದು ತಿರಸ್ಕೃತವಾಗಿದೆ. ಪ್ರಕರಣದ ತನಿಖೆಯು ತೀವ್ರಗತಿಯಲ್ಲಿ ನಡೆಯುತ್ತಿದ್ದು, ಮುಂದಿನ ವಿಚಾರಣೆಯಲ್ಲಿ ಟ್ರಯಲ್‌ಗೆ ದಿನಾಂಕ ನಿಗದಿಯಾಗಲಿದೆ. ಸೆಪ್ಟೆಂಬರ್ 12ರಂದು ನಡೆಯಲಿರುವ ವಿಚಾರಣೆಯಲ್ಲಿ ಮುಂದಿನ ಹಂತದ ಕಾನೂನು ಕ್ರಮದ ಬಗ್ಗೆ ಸ್ಪಷ್ಟತೆ ದೊರೆಯುವ ನಿರೀಕ್ಷೆಯಿದೆ.
