ಕೊಪ್ಪಳದ ರಾಮಣ್ಣ ಮಂಗಳೂರು ಎಂಬುವವರು ರಾಜ್ಯ ಸರ್ಕಾರದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮಾನವ ಹಕ್ಕುಗಳು, ಸುಪ್ರೀಂ ನೀಡಿರುವ ವ್ಯಕ್ತಿ ಸ್ವಾತಂತ್ರ್ಯ ಉಲ್ಲಂಘಿಸುತ್ತದೆ ಎಂದು ವಾದಿಸಿ, ಸಮೀಕ್ಷೆಗೆ ಬಂದವರಿಗೆ ಲಿಖಿತ ಪತ್ರ ನೀಡಿ ವಾಪಸ್ಸು ಕಳುಹಿಸಿದ್ದಾರೆ.
ಕೊಪ್ಪಳ (ಸೆ.26): ರಾಜ್ಯ ಸರ್ಕಾರ ಕೈಗೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಕೊಪ್ಪಳ ನಗರದ 28ನೇ ವಾರ್ಡ್‌ನ ರಾಮಣ್ಣ ಮಂಗಳೂರು ಎಂಬುವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ಆಕ್ಷೇಪಣೆಯ ಕುರಿತು ಲಿಖಿತ ಪತ್ರ ನೀಡಿ, ಸಮೀಕ್ಷೆಗೆ ಬಂದವರನ್ನು ವಾಪಸ್ಸು ಕಳುಹಿಸಿದ್ದಾರೆ.
ಸಮೀಕ್ಷೆಯಲ್ಲಿ ಮಾನವಹಕ್ಕುಗಳಿಗೆ ಧಕ್ಕೆಯಾಗುತ್ತಿದೆ. ಸುಪ್ರೀಂಕೋರ್ಟ್ ನೀಡಿರುವ ವ್ಯಕ್ತಿ ಸ್ವಾತಂತ್ರ್ಯಕ್ಕೂ ಪೆಟ್ಟು ಬಿದ್ದಿದೆ. ಹೀಗಾಗಿ, ಈ ಸಮೀಕ್ಷೆ ಸರಿಯಲ್ಲ ಎಂದಿದ್ದಾರೆ. ಈ ಕುರಿತು ತಮ್ಮದೇ ಆದ ವಿವರಣೆಗಳೊಂದಿಗೆ 8 ಅಂಶಗಳ ಪಟ್ಟಿ ಮಾಡಿದ್ದಾರೆ
ಏನೇನು ಆಕ್ಷೇಪ?:
ಸುಪ್ರೀಂಕೋರ್ಟ್ ಆದೇಶದಂತೆ ಜಾತಿ ಸಮೀಕ್ಷೆ ಮಾಡುವಂತೆ ಇಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಜಾತಿ ಪದ ಬಳಕೆ ಮಾಡುವಂತೆ ಇಲ್ಲ ( ಜಾತಿ ಕೇಳುವಂತಿಲ್ಲ). ಕಾಲಂ ನಂಬರ್ 12ರಲ್ಲಿ ಜಾತಿ ಮತ್ತು ಉಪ ಜಾತಿ ನಮೂದಿಸುವಂತೆ ಕೇಳಿದ್ದು, ಇದರ ಅವಶ್ಯಕತೆ ಇಲ್ಲ. 21,22,23ನೇ ಪ್ರಶ್ನೆಗಳು ಸಂಪೂರ್ಣ ವ್ಯಕ್ತಿಯ ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿದ್ದಾಗಿರುವುದರಿಂದ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ. 36,37,38 ಮತ್ತು 39 ಕಾಲಂನಲ್ಲಿ ಒಬ್ಬ ವ್ಯಕ್ತಿಯ ವೈಯಕ್ತಿಕ ಆದಾಯ ಅವನ ಘನತೆ ಮತ್ತು ಗೌರವಕ್ಕೆ ಧಕ್ಕೆ ತರುವಂತಹದ್ದು. ಮನೆಯಲ್ಲಿ ಎಷ್ಟು ಕೊಠಡಿಗಳು ಇವೆ ಎನ್ನುವ ಪ್ರಶ್ನೆ ಅಸಂಬದ್ಧವಾಗಿದೆ. ಮನೆಯಲ್ಲಿ ಯಾರಾದರೂ ವಿಧವೆಯರು ಇದ್ದಾರೆಯೇ ಎನ್ನುವುದು ಅವರ ವೈಯಕ್ತಿಕ ವಿಷಯವಾಗಿದೆ. 59,60ನೇ ಪ್ರಶ್ನೆಯೂ ಮಾನವಹಕ್ಕುಗಳ ಉಲ್ಲಂಘನೆಯಾಗುತ್ತದೆ. ಈ ಎಲ್ಲ ಪ್ರಶ್ನೆಗಳು ಸಾರ್ವಜನಿಕರಲ್ಲಿ ಭಯ ಮತ್ತು ಆತಂಕವನ್ನುಂಟು ಮಾಡುವುದರಿಂದ ಜಾತಿ ಸಮೀಕ್ಷೆ ಮಾಡುವುದು ಉರ್ಜಿತವಲ್ಲ ಎನ್ನುವ ಒಕ್ಕಣಿಕೆಯಿರುವ ಪತ್ರ ನೀಡಿ ಸಮೀಕ್ಷೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮಾಹಿತಿ ಸೋರಿಕೆಯಾಗುವ ಅತಂಕ:
ಪಡೆಯುವ ಮಾಹಿತಿ ಸೋರಿಕೆಯಾಗುವ ಆತಂಕವಿದೆ. ಇದೆಲ್ಲವನ್ನು ದಾಖಲಿಸಿಕೊಂಡವರು ಅದನ್ನು ಸೋರಿಕೆ ಮಾಡಬಹುದು. ಅಷ್ಟೆ, ಅಲ್ಲ ಅವರ ಎದುರಿಗೆ ಮನೆಯ ಎಲ್ಲ ಮಾಹಿತಿ ಹೇಳಲು ಹೇಗೆ ಸಾಧ್ಯ?. ವೆಬ್ ಸೈಟ್ ಹ್ಯಾಕ್ ಆದಾಗಲೂ ಪ್ರತಿಯೊಬ್ಬರ ಮಾಹಿತಿ ಸೋರಿಕೆಯಾಗುವ ಆತಂಕವಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಪಿಐಎಲ್ ಹಾಕಲು ಚಿಂತನೆ ನಡೆಸಿದ್ದಾಗಿ ತಿಳಿಸಿದ್ದಾರೆ.
ಈ ರೀತಿ ಜಾತಿ ಸಮೀಕ್ಷೆ ಮತ್ತು ವೈಯಕ್ತಿಕ ಪ್ರಶ್ನೆ ಕೇಳುವುದು ವೈಯಕ್ತಿಕ ವ್ಯಕ್ತಿತ್ವಕ್ಕೆ ಧಕ್ಕೆಯಾಗುತ್ತದೆ ಹಾಗೂ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎನ್ನುವ ಕಾರಣಕ್ಕಾಗಿಯೇ ಈ ಪ್ರಶ್ನೆಗಳಿಗೆ ಆಕ್ಷೇಪ ವ್ಯಕ್ತಪಡಿಸಿದ್ದೇನೆ.
- ರಾಮಣ್ಣ ಮಂಗಳೂರು
