ಸಚಿವ ಸಂಪುಟ ಸಭೆಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಮರುಸಮೀಕ್ಷೆ ಕುರಿತು ಸೌಹಾರ್ದಯುತ ಚರ್ಚೆ ನಡೆದಿದೆಯೇ ಹೊರತು ಯಾವುದೇ ರೀತಿ ಗದ್ದಲ, ಗೊಂದಲ ಉಂಟಾಗಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ತಿಳಿಸಿದರು.
ವಿಜಯಪುರ (ಸೆ.20): ಸಚಿವ ಸಂಪುಟ ಸಭೆಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಮರುಸಮೀಕ್ಷೆ ಕುರಿತು ಸೌಹಾರ್ದಯುತ ಚರ್ಚೆ ನಡೆದಿದೆಯೇ ಹೊರತು ಯಾವುದೇ ರೀತಿ ಗದ್ದಲ, ಗೊಂದಲ ಉಂಟಾಗಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ತಿಳಿಸಿದರು. ಜಾತಿ ಸಮೀಕ್ಷೆ ಸಭೆಯಲ್ಲಿ ಎಂ.ಬಿ.ಪಾಟೀಲ ಕೆಂಡಾಮಂಡಲರಾಗಿದ್ದರು ಎಂಬ ವಿಚಾರದ ಕುರಿತು ನಗರದಲ್ಲಿ ಸ್ಪಷ್ಟನೆ ನೀಡಿರುವ ಅವರು, ನಾನು ಏರು ಧ್ವನಿಯಲ್ಲಿ ಮಾತನಾಡಿಲ್ಲ, ಕಾಗದ ಹರಿದು ಹಾಕಿಲ್ಲ, ಟೇಬಲ್ ಗುದ್ದಿಲ್ಲ ಎಂದು ತಿಳಿಸಿದರು.
ಚಿವ ಸಂಪುಟ ಸಭೆಯಲ್ಲಿ ಮೇಜು ಗುದ್ದಿ ಮಾತನಾಡಿದ್ದೇನೆ. ಪೇಪರ್ ಹರಿದು ಹಾಕಿದ್ದೇನೆ ಎಂದು ಕೆಲವು ಮಾಧ್ಯಮಗಳಲ್ಲಿ ತಪ್ಪಾಗಿ ವರದಿ ಮಾಡಲಾಗಿದೆ. ಆದರೆ, ಲಿಂಗಾಯತ ಸಮುದಾಯಕ್ಕೆ ಸಂಬಂಧಿಸಿದಂತೆ ಕೆಲವು ಗೊಂದಲಗಳ ಕುರಿತು ಮುಖ್ಯಮಂತ್ರಿಯವರ ಗಮನಕ್ಕೆ ತರಲಾಗಿದೆ. ಅದನ್ನು ಪರಿಹರಿಸುವುದಾಗಿ ಮುಖ್ಯಮಂತ್ರಿಯವರು ಭರವಸೆ ನೀಡಿದ್ದಾರೆ ಎಂದು ಹೇಳಿದರು. ಇದು ಜಾತಿ ಗಣತಿಯಲ್ಲ, ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ. ಆದರೆ, ಬಹಳಷ್ಟು ಜನ ಇದನ್ನು ಜಾತಿಗಣತಿ ಎಂದು ತಪ್ಪಾಗಿ ಭಾವಿಸಿದ್ದಾರೆ. ಕೇಂದ್ರ ಸರ್ಕಾರ ಜಾತಿಗಣತಿ ಸಮೀಕ್ಷೆ ನಡೆಸುತ್ತದೆ.
ರಾಜಕೀಯ ಮಾಡುವ ಅಗತ್ಯವಿಲ್ಲ
ಜನರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಪರಿಸ್ಥಿತಿ ಅಧ್ಯಯನ ನಡೆಸಿ ಅವರಿಗೆ ಸರ್ಕಾರಿ ಯೋಜನೆ ತಲುಪಿಸುವ ಸದುದ್ದೇಶವನ್ನು ಇದು ಹೊಂದಿದೆ. ಈ ಸಮೀಕ್ಷೆಯನ್ನು ಮುಂದೂಡುವ ಪ್ರಶ್ನೆಯಿಲ್ಲ. ಶಾಲಾ ರಜಾ ದಿನಗಳು ಇರುವುದರಿಂದ ಶಿಕ್ಷಕರು ಸಮೀಕ್ಷೆ ನಡೆಸಲು ಈ ಸಮಯ ನಿಗದಿ ಮಾಡಲಾಗಿದೆ. ಅಲ್ಲದೆ, ಬಿಬಿಎಂಪಿ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಇದರಿಂದ ಅನುಕೂಲವಾಗಲಿದೆ. ಈ ಸಮೀಕ್ಷೆ ಮೂಲಕ ರಾಜ್ಯದ ಜನತೆಗೆ ಒಳಿತನ್ನು ಮಾಡುವ ಕೆಲಸವನ್ನು ಸಿಎಂ ನೇತೃತ್ವದ ನಮ್ಮ ಸರ್ಕಾರ ಮಾಡಲಿದೆ. ಇದರಲ್ಲಿ ಯಾರೂ ರಾಜಕೀಯ ಮಾಡುವ ಅಗತ್ಯವಿಲ್ಲ ಎಂದು ಸಚಿವ ಎಂ.ಬಿ.ಪಾಟೀಲ ಹೇಳಿದರು.
