ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಗಳಿಗೆ ಆಂತರಿಕ ಮೀಸಲಾತಿಯನ್ನು ಮರುವಿಂಗಡಿಸಲಾಗಿದೆ. ಹೊಸ ನಿಯಮಗಳ ಪ್ರಕಾರ, ದಲಿತ ಬಲ ಮತ್ತು ಎಡ ಗುಂಪುಗಳಿಗೆ ತಲಾ 6% ಮತ್ತು ಇತರ ಸೂಕ್ಷ್ಮ ಸಮುದಾಯಗಳಿಗೆ 5% ಮೀಸಲಾತಿ ದೊರೆಯಲಿದೆ.

ಬೆಂಗಳೂರು (ಆ.20): ಕರ್ನಾಟಕದಲ್ಲಿ ಆಂತರಿಕ ಮೀಸಲಾತಿಗಾಗಿ ಮೂರು ದಶಕಗಳಿಗೂ ಹೆಚ್ಚು ಕಾಲ ನಡೆದ ಹೋರಾಟಕ್ಕೆ ಅಂತ್ಯ ಹಾಡುವ ಐತಿಹಾಸಿಕ ನಿರ್ಧಾರವೊಂದರಲ್ಲಿ, ರಾಜ್ಯ ಸಚಿವ ಸಂಪುಟ ಮಂಗಳವಾರ ಪರಿಶಿಷ್ಟ ಜಾತಿಗಳಿಗೆ 17% ಮೀಸಲಾತಿಯನ್ನು ದಲಿತ ಬಲ (ಹೊಲೆಯರು) ಮತ್ತು ದಲಿತ ಎಡ (ಮಾದಿಗರು) ಗುಂಪುಗಳಿಗೆ ತಲಾ 6% ಮತ್ತು ಲಂಬಾಣಿ, ಕೊರಮ, ಕೊರಚ ಮತ್ತು ಭೋವಿ (ಸ್ಪರ್ಶಯೋಗ್ಯ ಜಾತಿಗಳು) ಮತ್ತು 59 ಸೂಕ್ಷ್ಮ ಸಮುದಾಯಗಳಿಗೆ 5% ರಷ್ಟು ಮೀಸಲಾತಿ ನೀಡುವ ಮೀಸಲಾತಿ ವರ್ಗೀಕರಣವನ್ನು ಅನುಮೋದಿಸಿದೆ. ಉಳಿದಂತೆ ದಿನದ ಐದು ಪ್ರಮುಖ ಸುದ್ದಿಗಳ ವಿವರ ಇಲ್ಲಿದೆ.

1. ಮೂರೇ ವರ್ಗೀಕರಣದೊಂದಿಗೆ ಒಳ ಮೀಸಲು ಫೈನಲ್‌

ಪರಿಶಿಷ್ಟ ಎಡಗೈ ಸಮುದಾಯಗಳ ದಡಕಗಳ ಬೇಡಿಕೆ ಹಾಗೂ ಹೋರಾಟ ಕಡೆಗೂ ಸಾಕಾರ ಗೊಂಡಿದ್ದು, ಒಳ ಮೀಸಲಾತಿ ಹಂಚಿಕೆಯ ಮಹತ್ತರ ತೀರ್ಮಾನವನ್ನು ರಾಜ್ಯ ಸಚಿವ ಸಂಪುಟ ಕೈಗೊಂಡಿದೆ. 101 ಜಾತಿಗಳಿಗೆ ಲಭ್ಯವಿ ರುವ ಶೇ.17 ಮೀಸಲಾತಿಯನ್ನು ಮೂರು ವರ್ಗಗಳಲ್ಲಿ ನೀಡಲು ತೀರ್ಮಾನಿಸಲಾಗಿದೆ. ಅದರಂತೆ ಬಲಗೈ ಸಮುದಾಯಗಳಿಗೆ ಶೇ. 6. ಎಡಗೈ ಸಮುದಾಯಗಳಿಗೆ ಶೇ. 6 ಹಾಗೂ ನೃತ್ಯ ಜಾತಿಗಳಿಗೆ (ಅತಿ ಹಿಂದುಳಿದ, ಅಲೆಮಾರಿ ಸೇರಿಸಿ)ಶೇ.5ರಷ್ಟು ಮೀಸಲು ನಿಗದಿಗೊಳಿಸುವ ನಿರ್ಧಾರ ಕೈಗೊಂಡಿದೆ.

2. ಗ್ಯಾರಂಟಿ ಯೋಜನೆಗಳಿಂದ ರಾಜ್ಯದಲ್ಲಿ ವಿತ್ತೀಯ ಕೊರತೆ ಸೃಷ್ಟಿ: ಸಿಎಜಿ

ರಾಜ್ಯ ಸರ್ಕಾರ ಜಾರಿಗೊಳಿಸಿರುವ 5 ಗ್ಯಾರಂಟಿ ಯೋಜನೆಗಳಿಗೆ ಹೆಚ್ಚಿನ ವೆಚ್ಚ ಮಾಡಿದ ಪರಿಣಾಮ 2023-24ನೇ ಸಾಲಿನಲ್ಲಿ 9,271 ಕೋಟಿ ರು. ರಾಜಸ್ವ ಕೊರತೆ ಉಂಟಾಗಿದೆ. ಅಲ್ಲದೆ, ವಿತ್ತೀಯ ಕೊರತೆ 65,522 ಕೋಟಿ ರು.ಗೆ ಏರಿಕೆಯಾಗುವಂತಾಗಿದೆ ಎಂದು ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರ ವರದಿ (ಸಿಎಜಿ) ವ್ಯಾಖ್ಯಾನಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ 2023-24ನೇ ಸಾಲಿಗೆ ಕೊನೆಗೊಂಡ ರಾಜ್ಯದ ಹಣಕಾಸು ವ್ಯವಹಾರಗಳ ಲೆಕ್ಕಪರಿಶೋಧನಾ ವರದಿಯಲ್ಲಿ 2023-24ರಲ್ಲಿನ ರಾಜ್ಯದ ಆರ್ಥಿಕ ಪರಿಸ್ಥಿತಿ, ಪಂಚ ಗ್ಯಾರಂಟಿಗಳಿಂದ ಎದುರಾಗುತ್ತಿರುವ ಆರ್ಥಿಕ ಪರಿಣಾಮಗಳ ಕುರಿತಂತೆ ಹಲವು ಅಂಶಗಳನ್ನು ವಿವರಿಸಲಾಗಿದೆ.

3. ಬಿಲ್ಡಿಂಗ್‌ ಲೈಸೆನ್ಸ್ ಇದ್ದರೆ ಸಣ್ಣ ಮನೆಗಳಿಗೆ ಸಿಸಿ, ಒಸಿ ಬೇಕಿಲ್ಲ: 20*30, 30*40 ಸೈಟಲ್ಲಿನ ಮನೆಗಳಿಗೆ ಲಾಭ?

ಕಟ್ಟಡ ಪರವಾನಗಿ ಪಡೆದು ನಿರ್ಮಾಣ ಮಾಡಿದ ಕಡಿಮೆ ವಿಸ್ತೀರ್ಣದ ಕಟ್ಟಡಗಳಿಗೆ ಮಾತ್ರ ನಿರ್ಮಾಣ ಕಾರ್ಯಾರಂಭ ಪತ್ರ(ಸಿಸಿ), ಸ್ವಾಧೀನಾನುಭವ ಪತ್ರ(ಒಸಿ) ವಿನಾಯಿತಿ, ಕಾನೂನುಬಾಹಿರ ಕಟ್ಟಡಗಳಿಗೆ ಶೇ.15ರಷ್ಟು ಉಲ್ಲಂಘನೆಗಳಿಗೆ ದಂಡ ವಿಧಿಸಿ ಸಕ್ರಮಗೊಳಿಸುವುದು ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಏಕರೂಪ ತೆರಿಗೆ ಜಾರಿಗೆ ಸಂಬಂಧಿಸಿದ ಕರ್ನಾಟಕ ನಗರ ಪಾಲಿಕೆಗಳ ತಿದ್ದುಪಡಿ ವಿಧೇಯಕ 2025ಕ್ಕೆ ವಿಧಾನಸಭೆಯಲ್ಲಿ ಮಂಗಳವಾರ ಅನುಮೋದನೆ ದೊರಕಿದೆ.

4. ಇನ್ನು ರೈಲುಗಳಲ್ಲೂ ವಿಮಾನದ ಮಾದರಿ ಲಗೇಜ್‌ ತೂಕಕ್ಕೆ ಮಿತಿ: ಸದ್ಯ ಪ್ರಾಯೋಗಿಕ ಅನುಷ್ಠಾನ

ಆದಾಯ ಸಂಗ್ರಹಕ್ಕೆ ನಾನಾ ಹೊಸ ಮೂಲ ಹುಡುಕುತ್ತಿರುವ ಭಾರತೀಯ ರೈಲ್ವೆ ಇದೀಗ ಪ್ರಯಾಣಿಕರ ಲಗೇಜ್‌ ಮೇಲೂ ಶುಲ್ಕ ಹೇರಲು ಮುಂದಾಗಿದೆ. ವಿಮಾನಗಳ ರೀತಿಯಲ್ಲೇ ನಿಗದಿಗಿಂತ ಹೆಚ್ಚಿನ ಲಗೇಜ್‌ ಹೊಂದಿದ್ದರೆ ಅದಕ್ಕೆ ಹೆಚ್ಚುವರಿ ಶುಲ್ಕ ವಿಧಿಸಲು ರೈಲ್ವೆ ನಿರ್ಧರಿಸಿದೆ.

5. ಅನಧಿಕೃತ ಬೆಟ್ಟಿಂಗ್‌ಗೆ 7 ವರ್ಷ ಜೈಲು: ಇಂದೇ ಸಂಸತ್ತಲ್ಲಿ ಮಸೂದೆ ಮಂಡನೆ ಸಾಧ್ಯತೆ

ಆನ್‌ಲೈನ್‌ ಗೇಮಿಂಗ್‌ ಆ್ಯಪ್‌ಗಳ ಮೇಲೆ ಮತ್ತಷ್ಟು ಕಠಿಣ ನಿರ್ಬಂಧ ಹೇರುವ, ಆನ್‌ಲೈನ್‌ ಬೆಟ್ಟಿಂಗ್‌ ಮತ್ತು ರಿಯಲ್ ಮನಿ ಗೇಮ್‌ ನಿಷೇಧಿಸಿ ಅದನ್ನು ಶಿಕ್ಷಾರ್ಹ ಅಪರಾಧ ಎಂದು ಘೋಷಿಸುವ ಮಹತ್ವದ ಕಾಯ್ದೆ ಜಾರಿಗೆ ಕೇಂದ್ರ ಸರ್ಕಾರ ಮುಂದಾಗಿದೆ. ಈ ಕುರಿತ ಕರಡು ಮಸೂದೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟ ಮಂಗಳವಾರ ಅನುಮೋದನೆ ನೀಡಿದ್ದು, ಅನಧಿಕೃತ ಬೆಟ್ಟಿಂಗ್‌ಗೆ 7 ವರ್ಷ ಜೈಲು ಶಿಕ್ಷೆ ಹಾಗೂ ವಿಧಿಸಲಾಗುತ್ತದೆ. ಇದನ್ನು ಬುಧವಾರವೇ ಸಂಸತ್ತಿನಲ್ಲಿ ಮಂಡಿಸುವ ಸಾಧ್ಯತೆ ಇದೆ.