20*30 ಅಥವಾ 30*40 ವಿಸ್ತೀರ್ಣದ ಮನೆಗಳಿಗೆ ಇದನ್ನು ನಿಗದಿಪಡಿಸುವ ಆಲೋಚನೆ ಇದೆ. ಕಟ್ಟಡ ಪರವಾನಗಿ ಪಡೆದು ನಿರ್ಮಾಣ ಮಾಡಿದ ಕಟ್ಟಡಗಳಿಗೆ ಮಾತ್ರ ಸಿಸಿ, ಒಸಿ ವಿನಾಯಿತಿ ಸಿಗುತ್ತದೆ ಎಂದರು.

ವಿಧಾನಸಭೆ (ಆ.20): ಕಟ್ಟಡ ಪರವಾನಗಿ ಪಡೆದು ನಿರ್ಮಾಣ ಮಾಡಿದ ಕಡಿಮೆ ವಿಸ್ತೀರ್ಣದ ಕಟ್ಟಡಗಳಿಗೆ ಮಾತ್ರ ನಿರ್ಮಾಣ ಕಾರ್ಯಾರಂಭ ಪತ್ರ(ಸಿಸಿ), ಸ್ವಾಧೀನಾನುಭವ ಪತ್ರ(ಒಸಿ) ವಿನಾಯಿತಿ, ಕಾನೂನುಬಾಹಿರ ಕಟ್ಟಡಗಳಿಗೆ ಶೇ.15ರಷ್ಟು ಉಲ್ಲಂಘನೆಗಳಿಗೆ ದಂಡ ವಿಧಿಸಿ ಸಕ್ರಮಗೊಳಿಸುವುದು ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಏಕರೂಪ ತೆರಿಗೆ ಜಾರಿಗೆ ಸಂಬಂಧಿಸಿದ ಕರ್ನಾಟಕ ನಗರ ಪಾಲಿಕೆಗಳ ತಿದ್ದುಪಡಿ ವಿಧೇಯಕ 2025ಕ್ಕೆ ವಿಧಾನಸಭೆಯಲ್ಲಿ ಮಂಗಳವಾರ ಅನುಮೋದನೆ ದೊರಕಿದೆ.

ನಗರಾಭಿವೃದ್ಧಿ ಸಚಿವ ಬಿ.ಎಸ್‌.ಸುರೇಶ್‌ ಈ ವಿಧೇಯಕವನ್ನು ಪರ್ಯಾಲೋಚನೆಗೆ ಮಂಡಿಸಿ ಸುದೀರ್ಘ ಚರ್ಚೆ, ಸದಸ್ಯರ ಸಲಹೆಗಳನ್ನು ಪಡೆದ ನಂತರ ಕೆಲ ಸ್ಪಷ್ಟನೆಗಳನ್ನು ನೀಡುವ ಮೂಲಕ ಅನುಮೋದಿಸುವಂತೆ ಕೋರಿದರು. ಸ್ಪೀಕರ್‌ ಯು.ಟಿ.ಖಾದರ್‌ ಧ್ವನಿಮತದ ಮೂಲಕ ವಿಧೇಯಕಕ್ಕೆ ಅಂಗೀಕಾರ ಪಡೆದರು. ಇದಕ್ಕೂ ಮುನ್ನ ತಿದ್ದುಪಡಿಯ ಉದ್ದೇಶ ವಿವರಿಸಿದ ಸಚಿವರು, ಬಡವರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ತಮಿಳುನಾಡು, ಮಹಾರಾಷ್ಟ್ರದಲ್ಲಿ ಇರುವಂತೆ ರಾಜ್ಯದಲ್ಲೂ ಮುಂದೆ ಮನೆ ನಿರ್ಮಾಣ ಮಾಡುವ ಕಡಿಮೆ ವಿಸ್ತೀರ್ಣದ ನಿವೇಶನಗಳಿಗೆ ಸಿಸಿ, ಒಸಿ ವಿನಾಯಿತಿ ನೀಡಲಾಗುತ್ತಿದೆ.

ಎಷ್ಟು ವಿಸ್ತೀರ್ಣ ಎನ್ನುವುದನ್ನು ನಿಯಮಾವಳಿ ರೂಪಿಸುವಾಗ ನಿರ್ಧಾರ ಮಾಡುತ್ತೇವೆ. 20*30 ಅಥವಾ 30*40 ವಿಸ್ತೀರ್ಣದ ಮನೆಗಳಿಗೆ ಇದನ್ನು ನಿಗದಿಪಡಿಸುವ ಆಲೋಚನೆ ಇದೆ. ಕಟ್ಟಡ ಪರವಾನಗಿ ಪಡೆದು ನಿರ್ಮಾಣ ಮಾಡಿದ ಕಟ್ಟಡಗಳಿಗೆ ಮಾತ್ರ ಸಿಸಿ, ಒಸಿ ವಿನಾಯಿತಿ ಸಿಗುತ್ತದೆ ಎಂದರು. ಮಹಾನಗರ ಪಾಲಿಕೆಗಳ ಜಾಗಗಳನ್ನು ಇದುವರೆಗೆ ಐದು ವರ್ಷಗಳವರೆಗೆ ಲೀಸ್‌ಗೆ ಕೊಡಲು ಇದ್ದ ಅವಕಾಶವನ್ನು 30 ವರ್ಷಗಳಿಗೆ ಹೆಚ್ಚಿಸಲಾಗುತ್ತದೆ. ಬೇರೆ ಬೇರೆ ನಗರಪಾಲಿಕೆ, ಸ್ಥಳೀಯ ಸಂಸ್ಥೆಗಳಲ್ಲಿ ಟ್ರೇಡ್‌ ಲೈಸೆನ್ಸ್‌ಗಳಿಗೆ ಬೇರೆ ಬೇರೆ ರೀತಿಯ ಶುಲ್ಕ ಇದೆ. ಅದೇ ರೀತಿ ಬೇರೆ ಬೇರೆ ರೀತಿಯ ತೆರಿಗೆ ಪದ್ಧತಿ ಇದೆ. ಹಾಗಾಗಿ ಏಕರೂಪ ಶುಲ್ಕ ನಿಗದಿ, ಏಕರೂಪ ತೆರಿಗೆ ಪದ್ಧತಿ ನಿಗದಿಪಡಿಸಲು ತಿದ್ದುಪಡಿಯಲ್ಲಿ ಅವಕಾಶ ಕಲ್ಪಿಸಲಾಗಿದೆ.

ಕನಿಷ್ಠ ತೆರಿಗೆ, ಗರಿಷ್ಠ ತೆರಿಗೆಯನ್ನು ಸರ್ಕಾರವೇ ನಿಗದಿಪಡಿಸಿ ನೀಡಲಿದೆ ಎಂದು ಸ್ಪಷ್ಟಪಡಿಸಿದರು. ಅದೇ ರೀತಿ ವಾಸ್ತುಶಿಲ್ಪಿಗಳು, ಎಂಜಿನಿಯರ್‌ಗಳು ಸೇರಿದಂತೆ ಮುಂತಾದ ವೃತ್ತಿಪರರು ಕಟ್ಟಡ ನಿರ್ಮಾಣದ ಮೊದಲು, ನಿರ್ಮಾಣದ ಸಮಯ ಮತ್ತು ನಂತರ ಪರಿಶೀಲಿಸಲು, ಅನುಮೋದಿತ ಯೋಜನೆಗಳ ಪ್ರಕಾರ ಮಾಡಿದ ನಿರ್ಮಾಣಗಳನ್ನು ಪ್ರಮಾಣೀಕರಿಸಲು ಮತ್ತು ಸ್ಥಳೀಯ ಪ್ರಾಧಿಕಾರಕ್ಕೆ ವರದಿ ಮಾಡಲು ಸ್ಥಳೀಯ ಪ್ರಾಧಿಕಾರದಿಂದ ಅಧಿಕೃತಗೊಳಿಸಿದ ವ್ಯಕ್ತಿಗಳನ್ನಾಗಿ ಪಟ್ಟಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಲೈಸೆನ್ಸ್‌ ಇರುವವರು ಕಟ್ಟಡಗಳಿಗೆ ಪ್ಲಾನ್‌ ಸ್ಯಾಂಕ್ಷನ್‌ ಕೊಡುವುದಕ್ಕೆ ಅನುಮೋದನೆ ನೀಡಲು ಪ್ರಸ್ತಾಪ ಮಾಡಿದ್ದೇವೆ. ಅವರು ತಪ್ಪು ಮಾಡಿದರೆ ಶಿಕ್ಷೆ , ದಂಡಕ್ಕೆ ಅವಕಾಶವಿದೆ ಎಂದು ತಿಳಿಸಿದರು.